ಆರೋಗ್ಯ ಮತ್ತು ಶಿಕ್ಷಣ ಉಚಿತ ಕೊಡುಗೆಯಲ್ಲ| ಸ್ಟಾಲಿನ್

MK stalin
  • ಹೆಚ್ಚು ಮಾತನಾಡಿದರೆ ರಾಜಕೀಯವಾಗುತ್ತದೆ: ಸ್ಟಾಲಿನ್
  • ಪ್ರಧಾನಿ ಮೋದಿ ಹೇಳಿಕೆಗೆ ವಿಪಕ್ಷಗಳಿಂದ ತೀವ್ರ ವಿರೋಧ

ಸರ್ಕಾರ ಶಿಕ್ಷಣ ಮತ್ತು ಆರೋಗ್ಯದ ಸಲುವಾಗಿ ಮಾಡುವ ವೆಚ್ಚವನ್ನು ಉಚಿತ ಎಂದು ಅರ್ಥೈಸಲು ಸಾಧ್ಯವಿಲ್ಲ, ಅಂತಹ ಉಚಿತ ಯೋಜನೆಗಳನ್ನು ಬಡವರು ಮತ್ತು ದುರ್ಬಲ ವರ್ಗದವರಿಗೆ ತಲುಪಿಸಲಾಗುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.

ಕೊಲತೂರ್‌ ವಿಧಾನಸಭಾ ಕ್ಷೇತ್ರದ ಆರುಮಿಗು ಕಪಲೀಶ್ವರರ್‌ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಾತನಾಡಿದ ಸ್ಟಾಲಿನ್‌ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

“ಉಚಿತ ಕೊಡುಗೆಗಳ ವಿಚಾರ ಮಾತನಾಡಿದರೆ ರಾಜಕೀಯ ರೂಪ ಪಡೆಯುತ್ತದೆ. ಹಾಗಾಗಿ ಹೆಚ್ಚು ಮಾತನಾಡುವುದಿಲ್ಲ” ಎಂದರು.

“ಉಚಿತ ಕೊಡುಗೆಗಳು ಬೇರೆ, ಕಲ್ಯಾಣ ಕಾರ್ಯಕ್ರಮಗಳು ಬೇರೆ ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ. ಶಿಕ್ಷಣ ಮತ್ತು ಆರೋಗ್ಯದ ಮೇಲಿನ ವೆಚ್ಚ ಉಚಿತ ಅಲ್ಲ. ಕಾರಣ ಶಿಕ್ಷಣ ಎಂದರೆ ಜ್ಞಾನ, ವೈದ್ಯಕೀಯ ಕ್ಷೇತ್ರ ಆರೋಗ್ಯಕ್ಕೆ ಸಂಬಂಧಿಸಿದ್ದು. ಈ ಎರಡೂ ಕ್ಷೇತ್ರಗಳಲ್ಲಿ ಸಾಕಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಬಯಸುತ್ತದೆ" ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ಮಿತ್ರತ್ವ ಪ್ರೇಮದಿಂದ ದೇಶದ ಆರ್ಥಿಕತೆ ಹಾಳು| ಮನೀಶ್ ಸಿಸೋಡಿಯಾ

"ಆರೋಗ್ಯ ಮತ್ತು ಶಿಕ್ಷಣ ಕಾರ್ಯಕ್ರಮಗಳು ಉಚಿತವಲ್ಲ, ಸಮಾಜ ಕಲ್ಯಾಣ ಯೋಜನೆಗಳು. ಇವು ಬಡವರಿಗೆ ಮತ್ತು ದುರ್ಬಲ ವರ್ಗದವರಿಗೆ ಅನುಕೂಲವಾಗುವಂತೆ ಜಾರಿಗೆ ತರಲಾಗಿದೆ” ಎಂದು ಹೇಳಿದ್ದಾರೆ.

ಪ್ರಧಾನಿ  ಮೋದಿ ಹೇಳಿಕೆ ಉಲ್ಲೇಖಿಸಿದ ಎಂಕೆ ಸ್ಟಾಲಿನ್ ಅವರು, “ಕೆಲವರು ಯಾವುದೇ ಉಚಿತ ಕೊಡುಗೆಗಳು ಇರಬಾರದು ಎನ್ನುತ್ತಿದ್ದಾರೆ. ನಾವು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ಹೆಚ್ಚು ಮಾತನಾಡಿದರೆ ಮಾತು ರಾಜಕೀಯ ರೂಪ ತಾಳುತ್ತದೆ. ಹಾಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ” ಎಂದು ಹೇಳಿದ್ದಾರೆ. 

ಸ್ವಾವಲಂಬಿಯಾಗುವ ಭಾರತದ ಪ್ರಯತ್ನಕ್ಕೆ ಉಚಿತ ಕೊಡುಗೆ ಹೊರೆಯಾಗಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದರು. ಕೆಲವು ವಿರೋಧ ಪಕ್ಷಗಳು ಮೋದಿ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್