
- ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಚಂದ್ರಬಾಬು ನಾಯ್ಡು
- ಜಗನ್ ಮೋಹನ್ ರೆಡ್ಡಿಯಂತೆ ಸಾಲ ಮಾಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿ
ಮುಂಬರುವ 2024ರ ವಿಧಾನಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶದ ಜನರು ತೆಲುಗು ದೇಶಂ ಪಕ್ಷವನ್ನು(ಟಿಡಿಪಿ) ಅಧಿಕಾರಕ್ಕೆ ತರದೆ ಹೋದರೆ ತಮ್ಮ ರಾಜಕೀಯ ಜೀವನವನ್ನೇ ಕೊನೆಗಾಣಿಸುವುದಾಗಿ ಎನ್ ಚಂದ್ರಬಾಬು ನಾಯ್ಡು ಬುಧವಾರ ಹೇಳಿದ್ದಾರೆ.
ಕರ್ನೂಲ್ ಜಿಲ್ಲೆಯಲ್ಲಿ ನಡೆದ ರೋಡ್ಶೋನಲ್ಲಿ ಭಾವುಕವಾಗಿ ಮಾತನಾಡಿದ ಎನ್ ಚಂದ್ರಬಾಬು ನಾಯ್ಡು, ಟಿಡಿಪಿ ಅಧಿಕಾರಕ್ಕೆ ಬರುವವರೆಗೂ ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
"ನಾನು ವಿಧಾನಸಭೆಗೆ ಹೋಗಬೇಕಾದರೆ, ರಾಜಕೀಯದಲ್ಲಿ ಉಳಿಯಬೇಕಾದರೆ ಹಾಗೂ ಆಂಧ್ರ ಪ್ರದೇಶಕ್ಕೆ ನ್ಯಾಯ ಒದಗಿಸಬೇಕಾದರೆ ನೀವು ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಬೇಕು. ಇಲ್ಲದಿದ್ದರೆ, 2024ರ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಬಹುದು" ಎಂದು ಹೇಳಿದ್ದಾರೆ.
"ನೀವು ನನಗೆ ಆಶೀರ್ವದಿಸುತ್ತೀರಾ? ನೀವು ನನ್ನನ್ನು ನಂಬುತ್ತೀರಾ?" ಎಂದು ನೆರೆದಿದ್ದ ಜನರಿಗೆ ಕೇಳಿದರು. ಜನರು ಕೇಕೆ ಹಾಕಿ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ವೈಎಸ್ಆರ್ ಕಾಂಗ್ರೆಸ್ ತಮ್ಮ ಪತ್ನಿಯನ್ನು ಸದನದಲ್ಲಿ ಅವಮಾನಿಸಿದೆ ಎಂದು ಆರೋಪಿಸಿ, ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು 2021ರ ನವೆಂಬರ್ 19ರಂದು ಮತ್ತೆ ಅಧಿಕಾರಕ್ಕೆ ಬಂದ ನಂತರವೇ ಆಂಧ್ರಪ್ರದೇಶ ವಿಧಾನಸಭೆಗೆ ಕಾಲಿಡುವುದಾಗಿ ಪ್ರತಿಜ್ಞೆ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ?: ಆಂಧ್ರ ಪ್ರದೇಶದಲ್ಲಿ ಪ್ರಧಾನಿ ಮೋದಿ ಅದ್ದೂರಿ ಸ್ವಾಗತ; ತೆಲಂಗಾಣದಲ್ಲಿ ‘ಬಾಯ್ ಬಾಯ್ ಮೋದಿ’ ಫ್ಲೆಕ್ಸ್ ಸ್ವಾಗತ
ತಮ್ಮ ಪ್ರತಿಜ್ಞೆಯನ್ನು ರೋಡ್ ಶೋನಲ್ಲಿ ಜನರಿಗೆ ನೆನಪಿಸಿದ ನಾಯ್ಡು, ಅವರನ್ನು ಮತ್ತೆ ಅಧಿಕಾರಕ್ಕೆ ತರದಿದ್ದರೆ ಮುಂದಿನ ಚುನಾವಣೆ ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ.
"ನಾನು ಆಂಧ್ರಪ್ರದೇಶವನ್ನು ಪ್ರಗತಿಯ ಹಾದಿಗೆ ಹಿಂತಿರುಗಿಸುತ್ತೇನೆ. ನನ್ನ ಹೋರಾಟವು ಮಕ್ಕಳ ಭವಿಷ್ಯಕ್ಕಾಗಿ, ರಾಜ್ಯದ ಭವಿಷ್ಯಕ್ಕಾಗಿ. ಇದು ಗರ್ವದ ಮಾತಲ್ಲ" ಎಂದು ಹೇಳಿದ್ದಾರೆ.
"ಆಲೋಚಿಸಿ, ಸಾಧಕ ಬಾಧಕಗಳನ್ನು ಅಳೆದು ತೂಗಿ ನೋಡಿ, ನಾನು ಹೇಳುತ್ತಿರುವುದು ಸರಿಯಿದ್ದರೆ ನನಗೆ ಸಹಕರಿಸಿ'' ಎಂದು ಜನತೆಗೆ ಮನವಿ ಮಾಡಿಕೊಂಡಿದ್ದಾರೆ.
"ಕೆಲವರು ನನ್ನ ವಯಸ್ಸನ್ನು ಅಪಹಾಸ್ಯ ಮಾಡುತ್ತಿದ್ದಾರೆ. ನಾನು ಮತ್ತು ನರೇಂದ್ರ ಮೋದಿ ಅವರು ಒಂದೇ ವಯಸ್ಸಿನವರು. ಬಿಡೆನ್ ತಮ್ಮ 79ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷರಾದರು" ಎಂದು 72 ವರ್ಷದ ಚಂದ್ರಬಾಬು ನಾಯ್ಡು ತಮ್ಮ ವಯಸ್ಸಿನ ಕುರಿತು ವ್ಯಂಗ್ಯವಾಡುವವರ ಕುರಿತು ಆಕ್ರೋಶ ಹೊರಹಾಕಿದ್ದಾರೆ.
"ನಾನು ರಾಜ್ಯವನ್ನು ಅಭಿವೃದ್ಧಿಪಡಿಸುತ್ತೇನೆ ಮತ್ತು ಸಂಪತ್ತನ್ನು ಸೃಷ್ಟಿಸುತ್ತೇನೆ. ಈ ಪ್ರಕ್ರಿಯೆ ಆದಾಯ ಹೆಚ್ಚಿಸುತ್ತದೆ ಮತ್ತು ಅದರೊಂದಿಗೆ ನಾವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತೇವೆ. ನಾವು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರಂತೆ ಹೆಚ್ಚು ಸಾಲ ಮಾಡುವುದಿಲ್ಲ" ಎಂದು ಹೇಳಿದ್ದಾರೆ.
ಆಡಳಿತವು ಮನಬಂದಂತೆ ಸಾಲ ಮಾಡಿ ರಾಜ್ಯವನ್ನು ಸಾಲದ ಸುಳಿಗೆ ತಳ್ಳಿದೆ ಎಂದು ಅವರು ಈ ಸಂದರ್ಭದಲ್ಲಿ ಜಗನ್ ರೆಡ್ಡಿ ಆಡಳಿತದ ವಿರುದ್ಧ ಆರೋಪಿಸಿದ್ದಾರೆ.