ಭಾರತ ಪ್ರಜಾಪ್ರಭುತ್ವದ ತಾಯಿ; ಮುಂದಿನ 25 ವರ್ಷಗಳಲ್ಲಿ ಭಾರತದ ಅಭಿವೃದ್ದಿ | ಪ್ರಧಾನಿ ಮೋದಿ

  • ಐದು ಪ್ರತಿಜ್ಞೆಗಳನ್ನು ಉಲ್ಲೇಖಿಸಿದ ಮೋದಿ
  • ಹರ್ ಘರ್ ತಿರಂಗಾವನ್ನು ಶ್ಲಾಘಿಸಿದ ಪ್ರಧಾನಿ

75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಆಗಸ್ಟ್‌ 15) ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು.

ಪ್ರಧಾನಿ ಮೋದಿ ಅವರು ಸುಮಾರು 83 ನಿಮಿಷಗಳ ಕಾಲ ಭಾಷಣ ಮಾಡಿದರು. ಈ ವೇಳೆ  ಮುಂದಿನ 25 ವರ್ಷಗಳಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಪಕ್ಷಿನೋಟ ನೀಡಿದರು. 

ಸ್ವಾತಂತ್ರ್ಯ ನಾಯಕರನ್ನು ನೆನೆದ ಮೋದಿ

ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಆರಂಭಿಸಿದರು. ರಾಣಿ ಲಕ್ಷ್ಮಿ ಬಾಯಿ, ಬೇಗಂ ಹಜರತ್ ಮಹಲ್ ಸೇರಿ ಮಹಿಳಾ ಹೋರಾಟಗಾರರ ಶಕ್ತಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿ, ರಾಷ್ಟ್ರವು ಅವರಿಗೆ ಋಣಿಯಿದೆ ಎಂದು ಹೇಳಿದರು. 

ರಾಜೇಂದ್ರ ಪ್ರಸಾದ್, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಜೊತೆ ಸಾವರ್ಕರ್ ಅವರ ಹೆಸರನ್ನೂ ಪ್ರಸ್ತಾಪಿಸಿದ ಅವರು, ಇವರೆಲ್ಲ ರಾಷ್ಟ್ರ ನಿರ್ಮಾತೃಗಳು ಎಂದು ಬಣ್ಣಿಸಿದರು.

ಸ್ವಾತಂತ್ರ್ಯದ ಹೋರಾಟದ ಹಾದಿಯಲ್ಲಿ ಪ್ರಾಣ ತ್ಯಾಗ ಮಾಡಿದ ಮಹಾತ್ಮಾ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸಾವರ್ಕರ್ ಅವರಿಗೆ ನಾಗರಿಕರು ಕೃತಜ್ಞರಾಗಿದ್ದಾರೆ ಎಂದು ಹೇಳಿದರು.

“ಬ್ರಿಟಿಷ್ ಆಳ್ವಿಕೆಯ ಅಡಿಪಾಯವನ್ನು ಅಲ್ಲಾಡಿಸಿದ ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಹಾಗೂ ಅನೇಕ ಕ್ರಾಂತಿಕಾರಿಗಳಿಗೆ ಈ ರಾಷ್ಟ್ರವು ಚಿರಋಣಿಯಾಗಿದ್ದಾರೆ “ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರ ಪಂಚಪ್ರಾಣ ಪ್ರತಿಜ್ಞೆ

ಮುಂಬರುವ ವ‍ರ್ಷಗಳಲ್ಲಿ ಭಾರತವನ್ನು ಅಭಿವೃದ್ದಿ ಮಾಡುವುದಾಗಿ ಹೇಳಿದ ಪ್ರಧಾನಿ ಮೋದಿ ಅವರು ಪಂಚಪ್ರಾಣ ಎಂದು ಕರೆಯುವ ಮೂಲಕ ಐದು ಪ್ರತಿಜ್ಞೆಗಳನ್ನು ಮಾಡಿದರು.

2047ರ ವೇಳೆಗೆ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ನಾಗರಿಕರು ಐದು ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಕರೆ ನೀಡಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ಮಿತ್ರತ್ವ ಪ್ರೇಮದಿಂದ ದೇಶದ ಆರ್ಥಿಕತೆ ಹಾಳು| ಮನೀಶ್ ಸಿಸೋಡಿಯಾ

"ಅಭಿವೃದ್ಧಿ ಹೊಂದಿದ ಭಾರತದ ದೊಡ್ಡ ಸಂಕಲ್ಪದೊಂದಿಗೆ ಮುಂದುವರಿಯುವುದು. ಗುಲಾಮಗಿರಿಯ ಸಂಕೇತವನ್ನು ಅಳಿಸಿ ಹಾಕುವುದು. ನಮ್ಮ ಪರಂಪರೆ ಬಗ್ಗೆ ಹೆಮ್ಮೆ ಹೊಂದುವುದು. ಏಕತೆಯ ಶಕ್ತಿ ಹಾಗೂ ನಮ್ಮ ಕರ್ತವ್ಯಗಳನ್ನು ನಿಭಾಯಿಸುವುದು" ಎಂಬ ಐದು ಪ್ರತಿಜ್ಞೆಗಳನ್ನು ಉಲ್ಲೇಖಿಸಿದರು.

"ಮುಂದಿನ 25 ವರ್ಷಗಳನ್ನು ದೇಶದ ಅಭಿವೃದ್ಧಿಗಾಗಿ ಮುಡಿಪಾಗಿಡಲು ನಾನು ಯುವಕರನ್ನು ಒತ್ತಾಯಿಸುತ್ತೇನೆ. ನಾವು ಸಂಪೂರ್ಣ ಮಾನವೀಯತೆಯ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ" ಎಂದು ಹೇಳಿದರು.

ಭಾರತವು ಪ್ರಜಾಪ್ರಭುತ್ವದ ತಾಯಿ

"ಸ್ವಾತಂತ್ರ್ಯದ ನಂತರ ಎದುರಿಸಿದ ಸವಾಲುಗಳ ಹೊರತಾಗಿಯೂ, ಭಾರತೀಯ ನಾಗರಿಕರ ಉತ್ಸಾಹವನ್ನು ಅಡ್ಡಿಪಡಿಸಲು ಯಾವುದರಿಂದಲೂ ಸಾಧ್ಯವಿಲ್ಲ. ಅನೇಕ ಸವಾಲುಗಳ ನಡುವೆಯೂ ಭಾರತ ಎಲ್ಲಯೂ ನಿಲ್ಲದೆ  ಮುಂದೆ ಸಾಗುತ್ತಿದೆ. ನಮ್ಮ ವೈವಿಧ್ಯತೆಯಿಂದಾಗಿ ನಮ್ಮಲ್ಲಿ ನಮಗೆ ಅಂತರ್ಗತ ಶಕ್ತಿ ಒಲಿದಿದೆ ಎಂಬುವುದನ್ನು ನಮ್ಮ ರಾಷ್ಟ್ರವು ಸಾಬೀತುಪಡಿಸಿದೆ.” ಎಂದು ಹೇಳಿದರು.

“ಸರದಿಯ ಕೊನೆಯ ಮನುಷ್ಯನಿಗೆ ಅಧಿಕಾರ ನೀಡುವ ಮಹಾತ್ಮ ಗಾಂಧಿಯವರ ದೃಷ್ಟಿಕೋನ ಪೂರೈಸಲು ನಾನು ನನ್ನನ್ನು ಅರ್ಪಿಸಿಕೊಂಡಿದ್ದೇನೆ” ಎಂದು ಮೋದಿ ಅವರು ಹೇಳಿದರು.

ಪ್ರಧಾನಿ ಮೋದಿ ಭ್ರಷ್ಟಾಚಾರ ಮತ್ತು ಪರಿವಾರ ಮೇಲೆ ದಾಳಿ

"ಭಾರತವು ಭ್ರಷ್ಟಾಷರ ಮತ್ತು ಪರಿವಾರದಂತಹ (ಸ್ವಜನಪಕ್ಷಪಾತ) ಎರಡು ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ನಾಗರಿಕರು ಬೆಂಬಲ ನೀಡುಬೇಕು" ಎಂದು ಮನವಿ ಮಾಡಿದರು.

"ಹಿಂದೆ ಭಾರತವನ್ನು ಲೂಟಿ ಮಾಡಿದವರು, ಈಗ ತಮ್ಮ ಪಾಪಗಳ ಪರಿಣಾಮ ಅನುಭವಿಸುತ್ತಿದ್ದಾರೆ. ನಾವು ಅವರ ಅಕ್ರಮ ಸಂಪಾದನೆಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದೇವೆ. ಜನರು ಬಡತನದ ವಿರುದ್ಧ ಹೋರಾಡುತ್ತಿರುವ ಭಾರತದಲ್ಲಿ, ಭ್ರಷ್ಟಾಚಾರದ ವಿರುದ್ಧ ನಾವು ಹೋರಾಡಬೇಕಾಗಿದೆ” ಎಂದು ಹೇಳಿದರು.

'ಹರ್ ಘರ್ ತಿರಂಗ' ಅಭಿಯಾನ ಶ್ಲಾಘಿಸಿದ ಮೋದಿ

'ಹರ್ ಘರ್ ತಿರಂಗ' ಅಭಿಯಾನದ ಕುರಿತು ಮಾತನಾಡಿದ ಮೋದಿ, ಕಳೆದ ಮೂರು ದಿನಗಳಲ್ಲಿ ಕಂಡು ಬಂದಿರುವ ಪ್ರತಿಕ್ರಿಯೆ ಮತ್ತು ರಾಷ್ಟ್ರದ ಉತ್ಸಾಹವನ್ನು ಯಾವ ತಜ್ಞರು ಊಹಿಸಲು ಸಾಧ್ಯವಿಲ್ಲ. ಇದು ರಾಷ್ಟ್ರದ ಪುನರುಜ್ಜೀವನವನ್ನು ಸೂಚಿಸುತ್ತದೆ" ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್