ಭಾರತ-ಪಾಕಿಸ್ತಾನ ಪಂದ್ಯ| ತ್ರಿವರ್ಣ ಧ್ವಜ ಹಿಡಿಯಲು ಅಮಿತ್‌ ಶಾ ಪುತ್ರ ನಿರಾಕರಣೆ, ವಿಡಿಯೋ ವೈರಲ್‌, ವ್ಯಾಪಕ ಟೀಕೆ

Jay Shah
  • ಭಾರತ ತಂಡಕ್ಕೆ ಬೆಂಬಲವಾಗಿ ರಾಷ್ಟ್ರಧ್ವಜ ಹಿಡಿದುಕೊಳ್ಳುವಂತೆ ಜಯ್ ಶಾಗೆ ಕೋರಿಕೆ
  • ಜೇ ಶಾ ತಮ್ಮ ಆರ್‌ಎಸ್‌ಎಸ್ ಪೂರ್ವಜರ ಪ್ರಭಾವ ತೋರುತ್ತಿದ್ದಾರೆ ಎಂದು ಟೀಕೆ

ಭಾರತ ಮತ್ತು ಪಾಕಿಸ್ತಾನದ ನಡುವೆ ಭಾನುವಾರ(ಆಗಸ್ಟ್‌ 28) ರಾತ್ರಿ ನಡೆದ ಏಷ್ಯಾಕಪ್ 2022 ಪಂದ್ಯಾವಳಿ ವೇಳೆ ಭಾರತ ತಂಡಕ್ಕೆ ಬೆಂಬಲ ಸೂಚಕವಾಗಿ ಭಾರತದ ರಾಷ್ಟ್ರಧ್ವಜವನ್ನು ಹಿಡಿದುಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪುತ್ರ ಜಯ್‌ ಶಾ ನಿರಾಕರಿಸುತ್ತಿರುವ ವಿಡಿಯೋವೊಂದು ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

ಭಾರತದ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿಯೂ ಆಗಿರುವ ಜಯ್‌ ಶಾ ಅವರು ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದುಕೊಳ್ಳಲು ನಿರಾಕರಿಸಿರುವುದನ್ನು ಹಲವು ರಾಜಕಾರಣಿಗಳು ಪ್ರಶ್ನಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ ರಾಜಭವನದಲ್ಲಿ ‘ರಾಮ ಕಥಾ’ ಕಾರ್ಯಕ್ರಮ | ರಾಜ್ಯಪಾಲರ ನಡೆಗೆ ಹಲವರ ವಿರೋಧ

ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ ವಿರೋಧದ ಚರ್ಚೆಗಳಿಗೆ ಕಾರಣವಾಗಿದೆ.  

ಪಂದ್ಯದ ವೇಳೆ ಆಗಿದ್ದೇನು?  

ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾ ಕಪ್ 2022 ರ ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಮಣಿಸಿದ ರೋಚಕ ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸಲು ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ನಿರ್ಣಾಯಕ ಜೊತೆಯಾಟದ ನಂತರ ವ್ಯಕ್ತಿಯೊಬ್ಬರು ಭಾರತ ತಂಡಕ್ಕೆ ಬೆಂಬಲವಾಗಿ ತ್ರಿವರ್ಣ ಧ್ವಜವನ್ನು ತೋರಿಸಿದರು.  

ಈ ವೇಳೆ ವ್ಯಕ್ತಿಯು ಭಾರತಕ್ಕೆ ಬೆಂಬಲ ಸೂಚಿಸಲು ರಾಷ್ಟ್ರಧ್ವಜವನ್ನು ಹಿಡಿದುಕೊಳ್ಳಲು ಹೇಳಿದಾಗ ಜಯ್‌ ಶಾ ಅವರು ನಿರಾಕರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕಂಡುಬಂದಿದೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಜಯ್ ಶಾ ವಿರುದ್ಧ ರಾಜಕೀಯ ನಾಯಕರು ಟೀಕಾ ಪ್ರಹಾರ ನಡೆಸಿದ್ದಾರೆ. 

ವಿಡಿಯೋಗೆ ಪ್ರತಿಕ್ರಿಯಿಸಿರುವ ಟಿಆರ್‌ಎಸ್ ಸಾಮಾಜಿಕ ಮಾಧ್ಯಮ ಸಂಚಾಲಕ ವೈ. ಸತೀಶ್ ರೆಡ್ಡಿ ಅವರು ಜಯ್‌ ಶಾ ಅವರ ವಿರುದ್ಧ ಕಿಡಿಕಾರಿದ್ದಾರೆ. 

“ಜಯ್ ಶಾ ಅವರು ತಮ್ಮ ಮೇಲೆ ಆರ್‌ಎಸ್‌ಎಸ್ ಪೂರ್ವಜರ ಪ್ರಭಾವ ಎಷ್ಟಿದೆ ಎಂದು ತೋರುತ್ತಿದ್ದಾರೆ” ಎಂದು ಟ್ವೀಟ್‌ನಲ್ಲಿ ಕುಟುಕಿದ್ದಾರೆ.

ಟಿಆರ್‌ಎಸ್‌ನ ಮತ್ತೊಬ್ಬ ಸಾಮಾಜಿಕ ಮಾಧ್ಯಮ ಸಂಚಾಲಕ ಕ್ರಿಶಾಂಕ್ ಕೂಡ ಈ ವಿಡಿಯೋವನ್ನು ಶೇರ್ ಮಾಡಿ ಜಯ್‌ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

“ಭಾರತದ ಧ್ವಜವನ್ನು ಹಿಡಿಯಲು ಬಿಜೆಪಿಯೇತರ ನಾಯಕರು ನಿರಾಕರಿಸಿದ್ದರೆ ಇಡೀ ಬಿಜೆಪಿ ಐಟಿ ವಿಭಾಗವು ಅವರನ್ನು ರಾಷ್ಟ್ರೀಯ ವಿರೋಧಿ ಎಂದು ಕರೆಯುತ್ತಿದ್ದವು. ಮಾಧ್ಯಮಗಳು ಅದರ ಬಗ್ಗೆ ದಿನವಿಡೀ ಚರ್ಚೆ ನಡೆಸುತ್ತಿದ್ದವು. ಆದರೆ ಅದೃಷ್ಟವೆಂಬಂತೆ ಅಮಿತ್‌ ಶಾ ಅವರ ಮಗ ಜಯ್‌ ಶಾ ಮಾಡಿರುವುದರಿಂದ ಹಾಗೇನೂ ಆಗಿಲ್ಲ” ಎಂದು ಟ್ವೀಟ್‌ನಲ್ಲಿ ವ್ಯಂಗ್ಯವಾಡಿದ್ದಾರೆ.  

“ಜಯ್ ಶಾ ಅವರು ತ್ರಿವರ್ಣ ಧ್ವಜವನ್ನು ಹಿಡಿಯಲು ಏಕೆ ನಿರಾಕರಿಸಿದ್ದಾರೆ. ಭಾರತದ ಧ್ವಜದ ಬಗ್ಗೆ ಅವರಿಗೆ ಏಕೆ ಇಂತಹ ತಿರಸ್ಕಾರ?” ಎಂದು ಗೌರವ್ ಪಾಂಡಿ ಎಂಬುವವರು ಪ್ರಶ್ನಿಸಿದ್ದಾರೆ. 

ರಾಜಕೀಯ ನಾಯಕರು ಮಾತ್ರವಲ್ಲದೆ ಅನೇಕ ನೆಟ್ಟಿಗರು ಕೂಡ ಜಯ್ ಶಾ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್
Image
av 930X180