ಜಹಾಂಗೀರ್‌ಪುರಿ ಹಿಂಸಾಚಾರ| ದೆಹಲಿ ಪೊಲೀಸರಿಂದ 23 ಮಂದಿಯ ಬಂಧನ

  • ಏಪ್ರಿಲ್ 16ರಂದು ಹನುಮ ಜಯಂತಿ ಮೆರವಣಿಗೆ ವೇಳೆ ಹಿಂಸಾಚಾರ
  • ಒಂದೇ ಕುಟುಂಬದ ಐವರ ಬಂಧಿಸಿದ ದೆಹಲಿ ಪೊಲೀಸರು

ಜಹಾಂಗೀರ್‌ಪುರಿ ಕೋಮು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬವೊಂದರ ಇಬ್ಬರು ಅಪ್ರಾಪ್ತರು ಸೇರಿದಂತೆ 23 ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಟುಂಬವೊಂದರ ಐವರು ಪುರುಷರನ್ನು ಬಂಧಿಸಿದ್ದಾರೆ. ಸುಕೇನ್, ಸುರೇಶ್ ಸರ್ಕಾರ್ ಸಹೋದರರು, ಸುಕೇನ್ ಅವರ ಪುತ್ರರಾದ ನೀರಜ್-ಸೂರಜ್, ಸಂಬಂಧಿ ಸುಜಿತ್ ಬಂಧಿತರು. ಮಕ್ಕಳು ಅಪ್ರಾಪ್ತರೆನ್ನಲಾಗಿದೆ. 

ಬಂಧಿತ ಸುಕೇನ್ ಅವರ ಪತ್ನಿ ದುರ್ಗಾ ಸರ್ಕಾರ್, "ನನ್ನ ಪತಿ, ಸೋದರ ಮಾವ, ಇಬ್ಬರು ಪುತ್ರರು, ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಅವರೆಲ್ಲರೂ ಅಮಾಯಕರು. ಮೆರವಣಿಗೆಯಲ್ಲಿ ರಥದ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದ ವೇಳೆ ನನ್ನ ಗಂಡನ ಮೇಲೂ ಬಿದ್ದಿದೆ. ಸಹೋದರನ ತಲೆಗೆ ಏಟಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾನೆ. ಇಷ್ಟಾದರೂ ಅವರು ಹನುಮಾನ್ ವಿಗ್ರಹವನ್ನು ಉಳಿಸಿದ್ದಾರೆ” ಎಂದು ಸುದ್ದಿ ಸಂಸ್ಥೆ 'ಎಎನ್ಐ'ಗೆ ತಿಳಿಸಿದ್ದಾರೆ. 

ಇದನ್ನೂ ಓದಿದ್ದೀರಾ?: ಕಾಂಗ್ರೆಸ್‌ನಲ್ಲಿ ಪ್ರಶಾಂತ್ ಕಿಶೋರ್ ಸ್ಥಾನವೇನು? | ಹೈಕಮಾಂಡ್‌ ತೀರ್ಮಾನವೇ ಅಂತಿಮ

 “ತನ್ನ ಪತಿ ಮನೆಗೆ ಬಂದ ವೇಳೆ ಇವರೊಂದಿಗೆ ಇತರ ಸಮುದಾಯಕ್ಕೆ ಸೇರಿದವರು ಜಗಳ ಪ್ರಾರಂಭಿಸಿದರು. ಕಲ್ಲು ಎಸೆಯಲು ಪ್ರಾರಂಭಿಸಿದರು. ಪ್ರಾಣ ಉಳಿಸಿಕೊಳ್ಳಲು ಆ ಸ್ಥಳದಿಂದ ನನ್ನ ಪತಿ ಓಡಿ ಹೋದರು. 12ನೇ ತರಗತಿ ಓದುತ್ತಿರುವ ನನ್ನ ಮಗನನ್ನೂ ಬಂಧಿಸಿದ್ದಾರೆ. ಅವನಿಗೆ ಬೋರ್ಡ್ ಪರೀಕ್ಷೆಗಳಿವೆ. ಅವನನ್ನು ಬಿಡುಗಡೆ ಮಾಡದಿದ್ದರೆ ಅವನ ಜೀವನ ನಾಶವಾಗುತ್ತದೆ" ಎಂದು ಹೇಳಿದರು.

 

"ಘಟನೆ ವೇಳೆ ಎರಡೂ ಸಮುದಾಯಗಳ ಜನರಿದ್ದರು. ಇತರರು ಈ ವೇಳೆ ಇದ್ದರೂ ಕೇವಲ ನನ್ನ ಕುಟುಂಬದ ಎಲ್ಲ ಸದಸ್ಯರನ್ನು ಏಕೆ ಬಂಧಿಸಿದ್ದಾರೆ? ಇದು ಪಿತೂರಿ. ನನ್ನ ಕುಟುಂಬ ಸದಸ್ಯರನ್ನು ತಕ್ಷಣ ಬಿಡುಗಡೆ ಮಾಡಬೇಕು” ಎಂದು ದುರ್ಗಾ ಸರ್ಕಾರ್ ಆಗ್ರಹಿಸಿದರು. 

ಏಪ್ರಿಲ್ 16ರಂದು ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರದಲ್ಲಿ ಎಂಟು ಪೊಲೀಸ್ ಸಿಬ್ಬಂದಿ ಸೇರಿದಂತೆ 9 ಮಂದಿ ಗಾಯಗೊಂಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app