
- ಐವರು ಬಿಜೆಪಿ ಶಾಸಕರು ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಎಸಿಬಿ ತನಿಖೆಯಿಂದ ದೃಢ
- ಶಾಸಕರ ವಿರುದ್ಧ ವಿಚಾರಣೆ ಮಾಡಬೇಕೇ ಎಂದು ನಿರ್ಧರಿಸುವುದು ಪ್ರಾಥಮಿಕ ತನಿಖೆಯ ಉದ್ದೇಶ
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ಐವರು ಬಿಜೆಪಿ ನಾಯಕರ ವಿರುದ್ಧ ಪ್ರಾಥಮಿಕ ವಿಚಾರಣೆ ಕೈಗೊಳ್ಳಲು ಸೋಮವಾರ (ನ. 14) ಆದೇಶಿಸಿದ್ದಾರೆ.
ಐವರು ಬಿಜೆಪಿ ಶಾಸಕರಲ್ಲಿ ನಾಲ್ವರು ಹಾಲಿ ಶಾಸಕರು ಮತ್ತು ಹಿಂದಿನ ಸರ್ಕಾರದಲ್ಲಿ ಸಚಿವ ಸಂಪುಟ ಹುದ್ದೆಗಳನ್ನು ಹೊಂದಿದ್ದರು. ಈ ಶಾಸಕರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಇವರಲ್ಲಿ ಪ್ರಸ್ತುತ ಬಿಜೆಪಿ ಶಾಸಕರಾದ ಚಂದಂಕ್ಯಾರಿ ಕ್ಷೇತ್ರದ ಅಮರ್ ಕುಮಾರ್ ಬೌರಿ, ಸರತ್ ಕ್ಷೇತ್ರದ ರಣಧೀರ್ ಸಿಂಗ್, ಕೊಡೆರ್ಮಾ ಕ್ಷೇತ್ರದ ನೀರಾ ಯಾದವ್ ಮತ್ತು ಖುಂಟಿ ಕ್ಷೇತ್ರದ ನೀಲಕಂಠ ಸಿಂಗ್ ಮುಂಡಾ ಸೇರಿದ್ದಾರೆ. ಲೂಯಿಸ್ ಮರಾಂಡಿ ದುಮ್ಕಾದ ಮಾಜಿ ಶಾಸಕರಾಗಿದ್ದಾರೆ.
ಈ ವರ್ಷದ ಆರಂಭದಲ್ಲಿ ಸಚಿವರಾಗಿದ್ದ ಬೌರಿ, ಯಾದವ್, ಮುಂಡಾ, ಸಿಂಗ್ ಮತ್ತು ಮರಾಂಡಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆಗೆ ಹೇಮಂತ್ ಸೋರೆನ್ ಆದೇಶಿಸಿದ್ದರು.
ಈ ಶಾಸಕರ 2020ರಲ್ಲಿ ಜಾರ್ಖಂಡ್ ಹೈಕೋರ್ಟ್ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಸಂಬಂಧಿಸಿ ಆದೇಶ ನೀಡಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರಡಿಸಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.
“ಭ್ರಷ್ಟಾಚಾರ ನಿಗ್ರಹ ದಳವು ಎಲ್ಲ ಐವರು ಮಾಜಿ ಸಚಿವರು (ಬಿಜೆಪಿ) ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಖಚಿತಪಡಿಸಿದೆ” ಎಂದು ಪ್ರಕಟಣೆ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಸಂತ್ರಸ್ತೆಯೊಂದಿಗೆ ವಿವಾಹ | 2 ವಾರಗಳ ಜಾಮೀನು ಮಂಜೂರು; ಅತ್ಯಾಚಾರದ ಸರಳ ಪ್ರಕರಣವಲ್ಲ ಎಂದ ಹೈಕೋರ್ಟ್
“ನ್ಯಾಯದ ಹಿತಾಸಕ್ತಿಯ ಮಾರ್ಗದಲ್ಲಿ ಈ ವಿಷಯ ವಿಚಾರಣೆ ಮಾಡಬೇಕೇ ಎಂಬುದನ್ನು ನಿರ್ಧರಿಸುವುದು ಪ್ರಾಥಮಿಕ ವಿಚಾರಣೆಯ ಉದ್ದೇಶ” ಎಂದು ಪ್ರಕಟಣೆ ತಿಳಿಸಿದೆ.
“ಬಿಜೆಪಿ ನಾಯಕರು ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ನಂತರ ಅದನ್ನು ಎಸಿಬಿ ಗೌಪ್ಯವಾಗಿ ಪರಿಶೀಲಿಸಿದೆ. ಅವರ ವಿರುದ್ಧ ಪ್ರಾಥಮಿಕ ವಿಚಾರಣೆಗೆ ಅನುಮತಿ ಕೇಳಲಾಗಿದೆ” ಎಂದು ಪ್ರಕಟಣೆ ತಿಳಿಸಿದೆ.