ನನ್ನ ವಿರುದ್ಧ ಮಹಿಳೆಯೊಬ್ಬರನ್ನು ಬಳಸುವುದು ಹೇಡಿತನ: ಜಿಗ್ನೇಶ್ ಮೇವಾನಿ

  • ಮಹಿಳಾ ಪೊಲೀಸ್‌ ಅಧಿಕಾರಿ ಮೇಲೆ ಹಲ್ಲೆ ಆರೋಪದಲ್ಲಿ ಜಿಗ್ನೇಶ್ ಮೇವಾನಿ ಬಂಧನ
  • ವೇಮುಲ ಹಾಗೂ ಆಜಾದ್‌ಗೂ ಇದೇ ರೀತಿ ಕಿರುಕುಳ ಕೊಡಲಾಗಿದೆ ಎಂದ ಜಿಗ್ನೇಶ್‌

ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಬಂಧಿಯಾಗಿದ್ದ ದಲಿತ ಮುಖಂಡ ಹಾಗೂ ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ ಅಸ್ಸಾಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

"ನನ್ನ ವಿರುದ್ಧ ಮಹಿಳೆಯೊಬ್ಬರನ್ನು ಬಳಸುವುದು ಹೇಡಿತನ. ಇಂತಹ ಪ್ರಯತ್ನಗಳಿಗೆ ನಾನು ಬಗ್ಗುವುದಿಲ್ಲ" ಎಂದು ಜಿಗ್ನೇಶ್ 'ಪುಷ್ಪಾ' ಸಿನಿಮಾದ ನಾಯಕನ ಶೈಲಿ ನಕಲಿಸಿ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ಜಾಮೀನಿನಲ್ಲಿ ಬಿಡುಗಡೆಯಾಗಿರುವ 41 ವರ್ಷದ ಸಾಮಾಜಿಕ ಹೋರಾಟಗಾರ, ಶಾಸಕ ಜಿಗ್ನೇಶ್ ಮೇವಾನಿ, “ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನನ್ನ ವರ್ಚಸ್ಸು ಹಾಳುಮಾಡಲು ಮಾಡಿದ ಪಿತೂರಿ. ಹಿಂದೆ ರೋಹಿತ್‌ ವೇಮುಲ ಹಾಗೂ ಚಂದ್ರಶೇಖರ್‌ ಆಜಾದ್‌ ಅವರಿಗೂ ಇದೇ ರೀತಿಯ ಕಿರುಕುಳ ನೀಡಿದ್ದರು. ಈಗ ನನ್ನನ್ನು ಗುರಿಯಾಗಿಸಿದ್ದಾರೆ” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದೇ ಏಪ್ರಿಲ್ 25ರಂದು ಜಿಗ್ನೇಶ್ ಅವರನ್ನು ಬಂಧಿಸಿದ ಪೊಲೀಸರು ಗುವಾಹಟಿಯಿಂದ ಕೊಕ್ರಜಹರ್‌ಗೆ ಕರೆತರುತ್ತಿದ್ದಾಗ ಮಹಿಳಾ ಪೋಲೀಸ್‌ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ಮೊದಲ ಆರೋಪದಲ್ಲಿ ಜಾಮೀನು ದೊರೆತ ತಕ್ಷಣ ಈ ಆರೋಪದಲ್ಲಿ ಮೇವಾನಿಯವರನ್ನು ಬಂಧಿಸಲಾಗಿತ್ತು. ಎರಡನೇ ಆರೋಪದಲ್ಲಿ ಮೇವಾನಿಯವರ ಜಾಮೀನು ಅರ್ಜಿಯನ್ನು ಅಸ್ಸಾಂನ ಬರ್ಪೆಟಾ ಜಿಲ್ಲಾ ನ್ಯಾಯಾಲಯ ಶುಕ್ರವಾರದವರೆಗೆ ಕಾಯ್ದಿರಿಸಿತ್ತು.

ಗುರುವಾರ (ಏಪ್ರಿಲ್ 28) ಮೇವಾನಿ ಪರ ವಕೀಲ ಅಂಗ್‌ಶುಮನ್ ಬೋರಾ, "ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಮೇವಾನಿಯವರ ಜಾಮೀನು ಅರ್ಜಿಯನ್ನು ಶುಕ್ರವಾರದವರೆಗೆ ಕಾಯ್ದಿರಿಸಿದೆ. ನಮ್ಮ ವಾದವನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದೇವೆ. ವಾದ ಮುಂದುವರಿಸಲು ಯತ್ನಿಸಿದ ಸರ್ಕಾರಿ ವಕೀಲರಿಗೆ ನ್ಯಾಯಾಲಯ ಅವಕಾಶ ನಿರಾಕರಿಸಿದೆ" ಎಂದು ತಿಳಿಸಿದ್ದರು.

ಕಳೆದ ವಾರ ಪ್ರಧಾನ ಮಂತ್ರಿಯವರ ವಿರುದ್ಧ ಟ್ವೀಟ್ ಮಾಡಿದ ಕಾರಣಕ್ಕೆ ಅಸ್ಸಾಂ ಪೋಲೀಸರು ಜಿಗ್ನೇಶ್ ಮೇವಾನಿಯವರನ್ನು ಗುಜರಾತ್‌ನಲ್ಲಿ ಬಂಧಿಸಿದ್ದರು. ಜಿಗ್ನೇಶ್ ಬಂಧನದ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್‌ ಅನ್ನು ಮುಕ್ತವಾಗಿ ಬೆಂಬಲಿಸುತ್ತಿದ್ದ ಮೇವಾನಿ ಬಂಧನದ ವಿಷಯ ತಿಳಿದು ಅಸ್ಸಾಂ ಪ್ರದೇಶ ಕಾಂಗ್ರೆಸ್‌ ಸಮಿತಿ ತೀವ್ರ ಪ್ರತಿಭಟನೆ ನಡೆಸಿತ್ತು. ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನೂ ಬಂಧಿಸಲಾಗಿತ್ತು.

ವೇವಾನಿ ಬಂಧನ ವಿರುದ್ಧ ಪ್ರತಿಭಟನೆ ಮಾಡಬಾರದು ಎಂದು ಜಿಲ್ಲಾದ್ಯಂತ ನಿಷೇದಾಜ್ಞೆ ಹಾಕಲಾಗಿದೆ. ಒಪ್ಪಿಗೆ ಇಲ್ಲದೆ ಯಾವುದೇ ಹೋರಾಟ ಮಾಡಬಾರದು ಎಂಬ ಕಠಿಣ ಕ್ರಮವನ್ನು ಅಸ್ಸಾಂ ಸರ್ಕಾರ ಕೈಗೊಂಡಿದೆ.

ಈದಿನ ಡೆಸ್ಕ್
ನಿಮಗೆ ಏನು ಅನ್ನಿಸ್ತು?
0 ವೋಟ್