ನೀತಿ ಆಯೋಗದ ಸಭೆ ಬಹಿಷ್ಕರಿಸಿ ಪ್ರಧಾನಿಗೆ ಪತ್ರ ಬರೆದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್

  • ಬಹಿಷ್ಕಾರಕ್ಕೆ ಕಾರಣಗಳನ್ನು ಪತ್ರದಲ್ಲಿ ವಿವರಿಸಿದ ಚಂದ್ರಶೇಖರ ರಾವ್
  • ರಾಜ್ಯಗಳು ಮಾತ್ರ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬಹುದು

ಕೇಂದ್ರದ ತಾರತಮ್ಯ ಧೋರಣೆ ಖಂಡಿಸಿ ಆಗಸ್ಟ್‌ 7ರಂದು ನಡೆಯಲಿರುವ ನೀತಿ ಆಯೋಗದ ಏಳನೆಯ ಆಡಳಿತ ಮಂಡಳಿಯ ಸಭೆಯನ್ನು ಬಹಿಷ್ಕರಿಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವ ಚಂದ್ರಶೇಖರ ರಾವ್, “ರಾಜ್ಯಗಳು ಅಭಿವೃದ್ಧಿ ಹೊಂದಿದರೆ ಮಾತ್ರ ಭಾರತ ಬಲಿಷ್ಠ ರಾಷ್ಟ್ರವಾಗಿ ಅಭಿವೃದ್ದಿ ಹೊಂದಲು ಸಾಧ್ಯ. ಬಲಿಷ್ಠ ಮತ್ತು ಆರ್ಥಿಕವಾಗಿ ಚೈತನ್ಯ ಹೊಂದಿದ ರಾಜ್ಯಗಳು ಮಾತ್ರ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬಹುದು” ಎಂದು ಉಲ್ಲೇಖಿಸಿದ್ದಾರೆ.

“ಕೇಂದ್ರದ ತಾರತಮ್ಯದ ಧೋರಣೆಗಳಿಂದಾಗಿ, ಆಗಸ್ಟ್‌ 7ರಂದು ನಡೆಯಲಿರುವ ನೀತಿ ಆಯೋಗದ ಏಳನೆಯ ಆಡಳಿತ ಸಭೆಯಲ್ಲಿ ನಾನು ಭಾಗವಹಿಸುತ್ತಿಲ್ಲ. ಪ್ರತಿಭಟನೆಯ ಸಂಕೇತವಾಗಿ ನಾನು ಸಭೆಯಿಂದ ದೂರವಿದ್ದೇನೆ” ಎಂದು ಪತ್ರದಲ್ಲಿ ಬರೆದಿದ್ದಾರೆ.

“ರಾಷ್ಟ್ರವನ್ನು ಬಲಿಷ್ಠ ಮತ್ತು ಅಭಿವೃದ್ಧಿಗೊಳಿಸುವ ನಮ್ಮ ಸಾಮೂಹಿಕ ಪ್ರಯತ್ನದಲ್ಲಿ ರಾಜ್ಯಗಳ ವಿರುದ್ಧ ತಾರತಮ್ಯ ಮತ್ತು ಸಮಾನ ಪಾಲುದಾರರಾಗಿ ಪರಿಗಣಿಸದ ಕೇಂದ್ರ ಸರ್ಕಾರದ ನಡೆ ಖಂಡನೀಯ” ಎಂದು ಕೆಸಿಆರ್ ಬಹಿಷ್ಕಾರಕ್ಕೆ ಕಾರಣಗಳನ್ನು ಪತ್ರದಲ್ಲಿ ವಿವರಿಸಿದ್ದಾರೆ.

"ಮಿಷನ್ ಕಾಕತೀಯಕ್ಕೆ 5,000 ಕೋಟಿ ರೂಪಾಯಿ ಅನುದಾನ ಮತ್ತು ಮಿಷನ್ ಭಗೀರಥಕ್ಕೆ 19,205 ರೂಪಾಯಿ ಕೇಂದ್ರದ ನೆರವು ನೀಡುವಂತೆ ನೀತಿ ಆಯೋಗ ಶಿಫಾರಸು ಮಾಡಿದೆ. ಆದರೂ ಎನ್‌ಡಿಎ ಸರ್ಕಾರ ಅವುಗಳನ್ನು ನಿರ್ಲಕ್ಷಿಸಿ, ಯೋಜನೆಗಳಿಗೆ ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ” ಎಂದು ಆರೋಪಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್