ಶೀಘ್ರದಲ್ಲಿ ಕೇಂದ್ರದಿಂದ ಡಿಜಿಟಲ್ ಮಾಧ್ಯಮ ನಿಯಂತ್ರಣಕ್ಕೆ ಹೊಸ ಕಾನೂನು: ಸಚಿವ ಅನುರಾಗ್‌ ಠಾಕೂರ್

Anurag Thakur
  • ಪ್ರೆಸ್, ರಿಜಿಸ್ಟ್ರೇಶನ್ ಕಾಯ್ದೆ 1867ರ ಬದಲಿಗೆ ಹೊಸ ಕಾನೂನು ಶೀಘ್ರ ಎಂದ ಅನುರಾಗ್
  • ಕೇಂದ್ರದಿಂದ ಡಿಜಿಟಲ್ ಮಾಧ್ಯಮ ಪತ್ರಕರ್ತರಿಗೆ ಮಾನ್ಯತೆ ನೀಡುವ ಬಗ್ಗೆಯೂ ಚಿಂತನೆ 

ಇನ್ನು ಮುಂದೆ ಡಿಜಿಟಲ್ ಮಾಧ್ಯಮದ ಪತ್ರಕರ್ತರಿಗೂ ಮಾನ್ಯತೆ ದೊರೆಯಲಿದೆ. ಹಾಗೆಯೇ ನವಮಾಧ್ಯಮದ ನಿಯಂತ್ರಣಕ್ಕೆ ಶೀಘ್ರ ಹೊಸ ಕಾನೂನನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಸಂಬಂಧ ಮಸೂದೆಯೊಂದರ ಮಂಡನೆಗೆ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಜೈಪುರದಲ್ಲಿ ಹೇಳಿದ್ದಾರೆ. 

"ಈಗ ಒಂದು ಗ್ರಾಮದ ಸಣ್ಣ ಸುದ್ದಿಯೂ ಡಿಜಿಟಲ್ ಮಾಧ್ಯಮದ ಮೂಲಕ ರಾಷ್ಟ್ರೀಯ ಮಟ್ಟಕ್ಕೆ ತಲುಪುತ್ತದೆ" ಎಂದು ಅವರು ಬುಧವಾರ (ನ.23) ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

“ಡಿಜಿಟಲ್ ಮಾಧ್ಯಮಕ್ಕೆ ಹೊಸ ಬದಲಾವಣೆಗಳನ್ನು ಕಾನೂನಾಗಿ ತರಬೇಕು ಎಂದು ಸರ್ಕಾರ ಚಿಂತಿಸುತ್ತಿದೆ.  ಈ ಕಾನೂನು ಜಾರಿಗೊಳಿಸಲು ನಾವು ಮಸೂದೆಯನ್ನು ಪರಿಚಯಿಸಲು ಕಾರ್ಯ ನಿರ್ವಹಿಸುತ್ತಿದ್ದೇವೆ” ಅನುರಾಗ್‌ ಠಾಕೂರ್ ಹೇಳಿದರು.

ದೇಶದಲ್ಲಿರುವ ಡಿಜಿಟಲ್ ಮಾಧ್ಯಮಗಳ ನೋಂದಣಿ, ಕಾರ್ಯನಿರ್ವಹಣೆ ಹಾಗೂ ನಿಯಂತ್ರಣದ ಬಗ್ಗೆ ಕಾನೂನು ಇರಲಿದೆ ಎಂದು ಅನುರಾಗ್‌ ತಿಳಿಸಿದ್ದಾರೆ. 

ಡಿಜಿಟಲ್ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಪತ್ರಕರ್ತರಿಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಅವರು ಹೇಳಿದರು. 

ಕೋವಿಡ್‌ನಿಂದ ಮೃತಪಟ್ಟ ಎಲ್ಲ ಪತ್ರಕರ್ತರಿಗೆ ಪರಿಹಾರ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಅನುರಾಗ್ ತಿಳಿಸಿದರು.

"ಸರ್ಕಾರವು ಹೆಚ್ಚಿನ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳನ್ನು ಸ್ವಯಂ ನಿಯಂತ್ರಣ ಕಾಯ್ದೆ ರೂಪಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಪ್ರಸ್ತುತ ದೇಶದಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಉತ್ತಮ ಭವಿಷ್ಯವಿದೆ. ಇದಕ್ಕೆ ಅನೇಕ ಸವಾಲುಗಳು ಕೂಡ ಇವೆ. ಇವೆರಡನ್ನು ಸರಿದೂಗಿಸಲು ಹೊಸ ಕಾನೂನಿನ ಅವಶ್ಯಕತೆ ಇದೆ” ಎಂದು ಅನುರಾಗ್ ಠಾಕೂರ್ ತಿಳಿಸಿದರು.  

“ಪತ್ರಿಕೆಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು. ಕೇಂದ್ರ ಸರ್ಕಾರವು ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಕಾಯ್ದೆ 1867ರ ಬದಲಿಗೆ ಹೊಸ ಕಾನೂನನ್ನು ಶೀಘ್ರದಲ್ಲೇ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಇದರಿಂದ ಒಂದು ವಾರದಲ್ಲಿ ನೋಂದಣಿಗೆ ಅವಕಾಶ ನೀಡಲಾಗುವುದು. ಈಗ ನೋಂದಣಿಗೆ ನಾಲ್ಕು ತಿಂಗಳು ಬೇಕಾಗುತ್ತದೆ. ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳನ್ನು ಒಂದೇ ಸೂರಿನಡಿ ಜಾರಿಗೆ ತರಲಾಗುವುದು” ಎಂದು ಅನುರಾಗ್ ಠಾಕೂರ್ ಹೇಳಿದರು. 

ಈ ಸುದ್ದಿ ಓದಿದ್ದೀರಾ? ಜೈಲಿನ ಸಿಸಿಟಿವಿ ದೃಶ್ಯಗಳ ಪ್ರಸಾರ ನಿರ್ಬಂಧ ಕೋರಿ ಕೋರ್ಟ್‌ ಮೊರೆ ಹೋದ ಎಎಪಿ ಸಚಿವ ಸತ್ಯೇಂದ್ರ ಜೈನ್

ಪತ್ರಿಕೆಗಳು ಸರಿಯಾದ ಸುದ್ದಿಗಳನ್ನು ಜನಸಾಮಾನ್ಯರ ಮುಂದೆ ಸರಿಯಾದ ಸಮಯದಲ್ಲಿ ತೆರೆದಿಡಬೇಕು. ಸರ್ಕಾರದ ಲೋಪದೋಷಗಳ ಜತೆಗೆ ಸರ್ಕಾರದ ಜನಕಲ್ಯಾಣ ಯೋಜನೆಗಳು, ನೀತಿಗಳು ಸಹ ಜನಸಾಮಾನ್ಯರಿಗೆ ತಲುಪುವಂತೆ ಮಾಡುವುದು ಪತ್ರಿಕೆಗಳ ಜವಾಬ್ದಾರಿಯಾಗಿದೆ ಎಂದು ಅನುರಾಗ್ ಠಾಕೂರ್ ಸಲಹೆ ನೀಡಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180