ಮಧ್ಯಪ್ರದೇಶ | ಭಾರತ್ ಜೋಡೋಗೆ ಪ್ರತಿಯಾತ್ರೆ ಪ್ರಾರಂಭಿಸಿದ ಬಿಜೆಪಿ

Madhyapradesh Janjatiya yatra
  • ಭಾರತ್ ಜೋಡೋಗೆ ಪ್ರತಿಯಾತ್ರೆ ಅಲ್ಲವೆಂದ ಬಿಜೆಪಿ
  • ರಾಜಸ್ಥಾನ ಬಿಜೆಪಿಯಿಂದ ಬೃಹತ್ ರ್‍ಯಾಲಿ ಘೋಷಣೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶ ಪ್ರವೇಶಿಸುವ ಕೆಲವೇ ಗಂಟೆಗಳ ಮೊದಲು ರಾಜ್ಯ ಬಿಜೆಪಿ ತನ್ನದೇ ಯಾತ್ರೆ ಆರಂಭಿಸಿದೆ.

ಭಾರತ್ ಜೋಡೋ ಯಾತ್ರೆಗೆ ಪ್ರತಿಯಾಗಿ ಕರ್ನಾಟಕ ಬಿಜೆಪಿ 'ಜನಸಂಕಲ್ಪ ಯಾತ್ರೆ' ಕೈಗೊಂಡಿತ್ತು. ಅದೇ ಮಾದರಿಯಲ್ಲಿ ರಾಜಸ್ಥಾನಕ್ಕೆ ಭಾರತ್ ಜೋಡೋ ಪ್ರವೇಶಿಸುತ್ತಿದ್ದಂತೆ ಪ್ರತಿಯಾತ್ರೆ ಮಾಡುವುದಾಗಿ ರಾಜಸ್ಥಾನ ಬಿಜೆಪಿ ಘೋಷಿಸಿದೆ.

ಮಧ್ಯಪ್ರದೇಶ ಸರ್ಕಾರ ಬುಡಕಟ್ಟು ಜನಾಂಗದ 'ಐಕಾನ್' ತಾಂತ್ಯ ಭೀಲ್ ಅವರ ಜನ್ಮಸ್ಥಳವಾದ ಖಾಂಡ್ವಾದಿಂದ ಬಿಜೆಪಿ 'ಜನ್‌ಜಾತಿ ಗೌರವ್ ಯಾತ್ರೆ' ಆರಂಭಿಸಿದೆ. ಬಿಜೆಪಿಯ 'ಜನ್‌ಜಾತಿ ಗೌರವ್ ಯಾತ್ರೆ'ಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ನಾಲ್ವರು ರಾಜ್ಯ ಸಚಿವರು ಭಾಗವಹಿಸಿದ್ದರು.

ಬಿಜೆಪಿ ಯಾತ್ರೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ರಾಮ್ ಡಾಂಗೋರೆ, ರಾಹುಲ್ ಗಾಂಧಿ ಅವರ ಯಾತ್ರೆಗೆ ಪ್ರತಿಯಾತ್ರೆ ಕೈಗೊಂಡಿದ್ದಾರೆ ಎಂಬುವುದನ್ನು ನಿರಾಕರಿಸಿದ್ದಾರೆ.

"ಕಾಂಗ್ರೆಸ್ಸಿನಂತೆ ನಾವು ಚುನಾವಣಾ ಹೊಸ್ತಿಲಲ್ಲಿ ಯಾತ್ರೆ ಪ್ರಾರಂಭಿಸುವುದಿಲ್ಲ. ಈ ಯಾತ್ರೆಯನ್ನು ಸಾಕಷ್ಟು ಮುಂಚಿತವಾಗಿ ಯೋಜಿಸಲಾಗಿತ್ತು" ಎಂದು ಹೇಳಿದ್ದಾರೆ.

ಬಿಜೆಪಿಯ ಯಾತ್ರೆಯು ಡಿಸೆಂಬರ್ 4ರಂದು ಇಂದೋರ್‌ನ ಪಾತಾಳಪಾನಿಯಲ್ಲಿ ಕೊನೆಗೊಳ್ಳಲಿದೆ. ಪಾತಾಳಪಾನಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡುವಾಗ ತಾಂತ್ಯ ಭೀಲ್ ಕೊಲ್ಲಲ್ಪಟ್ಟ ಇಂದೋರ್‌ನ ಪಾತಾಳಪಾನಿಯಲ್ಲಿ ಬಿಜೆಪಿಯ ಯಾತ್ರೆ ಕೊನೆಗೊಳ್ಳಲಿದೆ. ಡಿ.4ರಂದೆ ಬಿಜೆಪಿ ಯಾತ್ರೆ ಅಂತ್ಯ ಕಾಣಲಿದ್ದು, ಇದೇ ದಿನ ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದ ತನ್ನ ಪ್ರಯಾಣ ಮುಗಿಸಿ ರಾಜಸ್ಥಾನ ಪ್ರವೇಶಿಸಲಿದೆ.

ಈ ಸುದ್ದಿ ಓದಿದ್ದೀರಾ?: ಭಾರತ್ ಜೋಡೋ ಯಾತ್ರೆ ರಾಜಸ್ಥಾನ ಪ್ರವೇಶಿಸುತ್ತಿರುವ ಸಮಯಕ್ಕೆ ಬೃಹತ್ ರ್‍ಯಾಲಿ ಆಯೋಜಿಸಿದ ಬಿಜೆಪಿ

ರಾಜಸ್ಥಾನ ಬಿಜೆಪಿಯಿಂದ ಬೃಹತ್ ರ್‍ಯಾಲಿ ಘೋಷಣೆ

ಭಾರತ್ ಜೋಡೋ ಯಾತ್ರೆ ರಾಜಸ್ಥಾನಕ್ಕೆ ಪ್ರವೇಶಿಸುತ್ತಿದಂತೆ ಭಾರತೀಯ ಜನತಾ ಪಕ್ಷವು ಬೂತ್‌ಗಳಿಂದ ಜಿಲ್ಲಾ ಮಟ್ಟದವರೆಗೆ ಆಂದೋಲನ ಮತ್ತು ಬೃಹತ್ ರ್‍ಯಾಲಿ ಹಮ್ಮಿಕೊಂಡಿದೆ.

ಕಾಂಗ್ರೆಸ್ಸಿನ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆ ಡಿಸೆಂಬರ್ ಮೊದಲ ವಾರದಲ್ಲಿ ರಾಜಸ್ಥಾನ ಪ್ರವೇಶಿಸಲಿದೆ ಹಾಗೂ ಅದೇ ಸಂದರ್ಭದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸರ್ಕಾರ ನಾಲ್ಕು ವರ್ಷ ಪೂರೈಸಲಿದೆ. ಹೀಗಾಗಿ, ಬಿಜೆಪಿಯು 'ಜೈಪುರ ಚಲೋ ಮೆರವಣಿಗೆ' ಎಂಬ ಸಾರ್ವಜನಿಕ ರ್‍ಯಾಲಿ ಹಮ್ಮಿಕೊಳ್ಳುವ ಮೂಲಕ ಕಾಂಗ್ರೆಸ್ಸಿಗೆ ಪೈಪೋಟಿ ಕೊಡಲು ಸಜ್ಜಾಗಿದೆ.

ಸುಮಾರು 200 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸುವ ಯೋಜನೆ ಹೊಂದಿರುವ ಬಿಜೆಪಿ ನಾಯಕರು 'ಜನ ಆಕ್ರೋಶ' ಎಂಬ ಹೆಸರಿನಡಿ ಹತ್ತು ದಿನಗಳ ಕಾಲ ಯಾತ್ರೆ ನಡೆಸಲಿದ್ದಾರೆ. ಪ್ರತಿ ಜಿಲ್ಲೆಗಳಲ್ಲೂ ಸಾರ್ವಜನಿಕ ಸಭೆ ನಡೆಸಿ, ಕುಂದು ಕೊರತೆ ದಾಖಲಿಸಿಕೊಳ್ಳುವ ಬಿಜೆಪಿ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರಪತ್ರ ಹಂಚಲಿದೆ.

ಕರ್ನಾಟಕದಲ್ಲಿ ಜನಸಂಕಲ್ಪ ಯಾತ್ರೆ

ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಸಾಗುತ್ತಿದ್ದ ಬೆನ್ನಲ್ಲೇ ಬಿಜೆಪಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು 'ಜನಸಂಕಲ್ಪ ಯಾತ್ರೆ' ಕೈಗೊಂಡಿದ್ದರು. ಕರ್ನಾಟಕ ಬಿಜೆಪಿ ಭಾರತ್ ಜೋಡೋ ಯಾತ್ರೆಗೆ ಸವಾಲು ಎಂಬಂತೆ ರ್‍ಯಾಲಿ ಯೋಜಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app