
- ಕಾಂಗ್ರೆಸ್ಸಿನಿಂದ ಅನೇಕ ಸಮಿತಿಗಳ ರಚನೆ
- ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಗೆ 27 ಸ್ಥಾನ
ಮುಂಬರುವ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಗೆ ತಯಾರಿ ನಡೆಸಿರುವ ಕಾಂಗ್ರೆಸ್, ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು 'ಸ್ಟಾರ್' ಪ್ರಚಾರಕರ ದಂಡನ್ನೇ ಪ್ರಚಾರದ ಕಣಕ್ಕಿಳಿಸಿದೆ.
ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಕನ್ಯಯ್ಯಾ ಕುಮಾರ್ ಹಾಗೂ ಸಲ್ಮಾನ್ ಖುರ್ಷಿದ್ ಸೇರಿದಂತೆ ಇತರೆ ನಾಯಕರು ದೆಹಲಿಯಲ್ಲಿ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ.
ಕಾಂಗ್ರೆಸ್ಸಿನ 'ಸ್ಟಾರ್' ಪ್ರಚಾರಕರ ಪಟ್ಟಿಯಲ್ಲಿ, ಉತ್ತರಪ್ರದೇಶದ ಶಾಸಕ ಆರಾಧನಾ ಮಿಶ್ರಾ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಮತ್ತು ಸಂದೀಪ್ ದೀಕ್ಷಿತ್ ಕೂಡ ಸೇರಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಪ್ರಸ್ತುತ ಭಾರತೀಯ ಜನತಾ ಪಕ್ಷದ (ಬಿಜೆಪಿ) ಆಡಳಿತದಲ್ಲಿದೆ. 2007ರವರೆಗೆ ಕಾಂಗ್ರೆಸ್ ಎಂಸಿಡಿಯನ್ನು ತನ್ನ ಹಿಡಿತದಲ್ಲಿ ಹಿಡಿದುಕೊಂಡಿತ್ತು. ಕಳೆದ ಎಂಸಿಡಿ ಚುನಾವಣೆಯಲ್ಲಿ ಕಾಂಗ್ರೆಸ್ 250 ವಾರ್ಡ್ಗಳ ಪೈಕಿ ಕೇವಲ 27 ವಾರ್ಡ್ಗಳನ್ನು ಗೆದ್ದುಕೊಂಡಿತ್ತು.
ಎಂಸಿಡಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಚುನಾವಣೆ ಸಮಿತಿ ರಚಿಸಿದೆ. ಪ್ರದೇಶ ಚುನಾವಣಾ ಸಮಿತಿಯು ರಾಜ್ಯ ಘಟಕದ ಮುಖ್ಯಸ್ಥ ಅನಿಲ್ ಚೌಧರಿ, ಅಜಯ್ ಮಾಕನ್, ದೀಕ್ಷಿತ್ ಹಾಗೂ ಜಗದೀಶ್ ಟೈಟ್ಲರ್ ಸೇರಿದಂತೆ ಅನೇಕರು ಸಮಿತಿಯಲ್ಲಿದ್ದಾರೆ. ಜೊತೆಗೆ ಚುನಾವಣಾ ಪ್ರಚಾರ ಸಮಿತಿ, ಸಮನ್ವಯ ಸಮಿತಿ, ಮಾಧ್ಯಮ ಸಮಿತಿ, ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳ ಸಮಿತಿಗಳನ್ನೂ ರಚಿಸಿದೆ.
ಈ ಸುದ್ದಿ ಓದಿದ್ದೀರಾ? ಎಂಸಿಡಿ ಚುನಾವಣೆ | ಟಿಕೆಟ್ ಕೈತಪ್ಪಿದ್ದಕ್ಕೆ ಮೊಬೈಲ್ ಟವರ್ ಏರಿದ ಆಪ್ ನಾಯಕ
ದೆಹಲಿ ನಾಗರಿಕ ಚುನಾವಣೆ ಡಿಸೆಂಬರ್ 4 ರಂದು ನಡೆಯಲಿದ್ದು, ಡಿಸೆಂಬರ್ 7 ರಂದು ಮತ ಎಣಿಕೆ ನಡೆಯಲಿದೆ.
ನಾಮಪತ್ರ ಸಲ್ಲಿಕೆ ತಿರಸ್ಕಾರ
ಎಂಸಿಡಿ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮನಿರ್ದೇಶನಗಳ ಪೈಕಿ ಪರಿಶೀಲನೆ ಬಳಿಕ ಸುಮಾರು 1,100 ಕ್ಕೂ ಹೆಚ್ಚು ನಾಮನಿರ್ದೇಶನಗಳನ್ನು ತಿರಸ್ಕರಿಸಲಾಗಿದೆ.
ಡಿಸೆಂಬರ್ 4ರಂದು ನಡೆಯಲಿರುವ ಚುನಾವಣೆಗೆ 250 ವಾರ್ಡ್ಗಳಿಗೆ 2,021 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ 1,405 ನಾಮನಿರ್ದೇಶನಗಳ ಮಾನ್ಯವಾದರೆ, 1,115 ನಾಮನಿರ್ದೇಶನಗಳು ತಿರಸ್ಕೃತಗೊಂಡಿವೆ.
ಕಾಂಗ್ರೆಸ್ಸಿನಿಂದ ಸಲ್ಲಿಕೆಯಾದ 405 ನಾಮಪತ್ರಗಳಲ್ಲಿ 243 ಮತ್ತು ಎಎಪಿಯ 255 (ಒಟ್ಟು 728 ನಾಮನಿರ್ದೇಶನಗಳಲ್ಲಿ) ಹಾಗೂ ಬಿಜೆಪಿಯ 252 (654 ರಲ್ಲಿ) ಮಾನ್ಯವಾಗಿವೆ.
ಅಪೂರ್ಣ ನಮೂನೆಗಳು, ಕಾಣೆಯಾದ ಅಫಿಡವಿಟ್ಗಳು, ಬಹು ನಾಮನಿರ್ದೇಶನಗಳು, ಮಾನ್ಯ ಜಾತಿ ಪ್ರಮಾಣಪತ್ರ ಸಲ್ಲಿಸದಿರುವುದು ನಾಮನಿರ್ದೇಶನಗಳ ತಿರಸ್ಕಾರಕ್ಕೆ ಕಾರಣವಾಗಿದೆ.