
- ಗೃಹಸಚಿವ ಅಮಿತ್ ಶಾ ನೇತೃತ್ವದ ಸಂಸದೀಯ ಸಮಿತಿ ಹಿಂದಿ ಹೇರಿಕೆಗೆ ಶಿಫಾರಸು
- ಹಿಂದಿ ಗೊತ್ತಿಲ್ಲದವರನ್ನು ದ್ವಿತೀಯ ದರ್ಜೆ ಪ್ರಜೆಗಳಾಗಿಸುವ ಪ್ರಯತ್ನ ಎಂದ ಸ್ಟಾಲಿನ್
ಬಲವಂತವಾಗಿ ಹಿಂದಿ ಹೇರಿಕೆ ಮಾಡಿ ಮತ್ತೊಂದು ಭಾಷಾ ಸಮರಕ್ಕೆ ಅವಕಾಶ ಮಾಡಿಕೊಡಬಾರದು. ಬದಲಿಗೆ ಏಕತೆಯ ಹಾದಿಯಲ್ಲಿ ಸಾಗಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೋಮವಾರ (ಅ. 10) ಬಿಜೆಪಿಗೆ ಸಲಹೆ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಂಸದೀಯ ಸಮಿತಿಯು ಎಲ್ಲ ಕೇಂದ್ರೀಯ ತಾಂತ್ರಿಕ ಮತ್ತು ತಾಂತ್ರಿಕೇತರ ಸಂಸ್ಥೆಗಳಲ್ಲಿ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್ ಬದಲಿಗೆ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಬೇಕೆಂಬ ಶಿಫಾರಸಿನ ಕುರಿತು ವರದಿಗಳಿಗೆ ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಬದಲಿಗೆ ಹಿಂದಿಯನ್ನು ಬೋಧನಾ ಮಾಧ್ಯಮವಾಗಿ ಬಳಸುವಂತೆ ಅಧಿಕೃತ ಭಾಷೆಯ ಕುರಿತಾದ ಸಂಸದೀಯ ಸಮಿತಿಯು ಮಾಡಿರುವ ಶಿಫಾರಸು ವಿಭಜಕ ಗುಣದಿಂದ ಕೂಡಿದೆ. ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಹೇರಿಕೆ ಮಾಡಿ, ಮತ್ತೊಂದು ಭಾಷಾ ಸಮರಕ್ಕೆ ಹಾದಿ ಮಾಡಿಕೊಡಬಾರದು ಎಂದು ಸ್ಟಾಲಿನ್ ಒತ್ತಾಯಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಶಿಫಾರಸುಗಳು ವಾಸ್ತವಿಕವಾಗಿ ಕಾರ್ಯಸಾಧುವಲ್ಲ. ಒಂದು ವೇಳೆ ದೇಶದಲ್ಲಿ ಏಕರೂಪ ಭಾಷೆಯಾಗಿ ಹಿಂದಿ ಹೇರಿದರೆ, ಹಿಂದಿ ಬಲ್ಲವರು ಮಾತ್ರ ದೇಶದ ಸತ್ಪ್ರಜೆಗಳು, ಹಿಂದಿ ಗೊತ್ತಿಲ್ಲದವರನ್ನು ದ್ವಿತೀಯ ದರ್ಜೆಯ ಪ್ರಜೆಗಳಾಗಿ ನಡೆಸಿಕೊಳ್ಳುವ ಪರಿಸ್ಥಿತಿ ಬರಲಿದೆ ಎಂದು ಸ್ಟಾಲಿನ್ ಎಚ್ಚರಿಕೆ ನೀಡಿದ್ದಾರೆ.
ಹಿಂದಿ ಹೇರಿಕೆ ಮಾಡುವ ಪ್ರಯತ್ನಗಳನ್ನು ಕೈಬಿಟ್ಟು ಭಾರತದ ಏಕತೆಯನ್ನು ಎತ್ತಿ ಹಿಡಿಯುವಂತೆ ಪ್ರಧಾನಿ ಮೋದಿ ಮತ್ತು ಕೇಂದ್ರಕ್ಕೆ ಸ್ಟಾಲಿನ್ ಮನವಿ ಮಾಡಿದ್ದಾರೆ.
ಕೇಂದ್ರೀಯ ತಾಂತ್ರಿಕ ಮತ್ತು ತಾಂತ್ರಿಕೇತರ ಸಂಸ್ಥೆಗಳು ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಐಐಟಿಗಳು, ಐಐಎಂಗಳು, ಎಐಐಎಂಎಸ್ ಮತ್ತು ಕೇಂದ್ರೀಯ ವಿದ್ಯಾಲಯಗಳು ಸೇರಿವೆ. ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಹೇರುವ ಮೂಲಕ ದೇಶದ ಏಕತೆಗೆ ಇದು ಅಡ್ಡಿಯನ್ನುಂಟು ಮಾಡುತ್ತದೆ. ಸಮಿತಿಯು ಭಾರತಾದ್ಯಂತ ಹಿಂದಿಯನ್ನು ಸಾಮಾನ್ಯ ಭಾಷೆಯನ್ನಾಗಿ ಮಾಡಬೇಕೆಂದು ಶಿಫಾರಸು ಮಾಡಿದೆ ಎಂದು ಹೇಳಿದರು.
“ಸಂವಿಧಾನದ 8ನೇ ಪರಿಚ್ಛೇದದಲ್ಲಿ ತಮಿಳು ಸೇರಿದಂತೆ 22 ಭಾಷೆಗಳನ್ನು ಸಮಾನವಾಗಿ ಪರಿಗಣಿಸುವ ಅರ್ಹತೆ ಎಂದು ಪಟ್ಟಿ ಮಾಡಿದೆ. ಸಮಿತಿಯು ಹಿಂದಿಯನ್ನು ಭಾರತದ ಸಾಮಾನ್ಯ ಭಾಷೆಯಾಗಿ ಶಿಫಾರಸು ಮಾಡುವ ಅವಶ್ಯಕತೆ ಎಲ್ಲಿಂದ ಉದ್ಭವಿಸಿತು? ಹಿಂದಿಗೆ ಆದ್ಯತೆ ನೀಡಲು ಕೇಂದ್ರ ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಏಕೆ ಶಿಫಾರಸು ಮಾಡಲಾಗಿದೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಅತ್ಯಾಚಾರ ಆರೋಪ | ಹೈದರಾಬಾದ್ ಪೊಲೀಸ್ ಇನ್ಸ್ಟೆಕ್ಟರ್ ನಾಗೇಶ್ವರ ರಾವ್ ಸೇವೆಯಿಂದ ವಜಾ
ಇಡೀ ದೇಶಕ್ಕೆ ಒಂದು ಭಾಷೆಯನ್ನು ಸಾಮಾನ್ಯವಾಗಿಸುವುದು ಪ್ರಾಯೋಗಿಕವಾಗಿ ಅಸಾಧ್ಯ. ಅದನ್ನು ಕಡ್ಡಾಯಗೊಳಿಸುವ ಮೂಲಕ ಕೇವಲ ಹಿಂದಿ ಭಾಷಿಕರು ಮಾತ್ರ ಭಾರತದ ನಿಜವಾದ ನಾಗರಿಕರು ಎಂದು ಹೇಳುವುದು, ಇತರ ಭಾಷೆಗಳನ್ನು ಮಾತನಾಡುವವರು ಎರಡನೇ ದರ್ಜೆಯ ನಾಗರಿಕರು ಎಂದು ಹೇಳುವುದು ಸರಿಯಲ್ಲ ಎಂದು ಸ್ಟಾಲಿನ್ ಕೇಂದ್ರದ ನಡೆಯನ್ನು ಟೀಕಿಸಿದರು.