ಸುದ್ದಿ ವಿವರ | ಮೈತ್ರಿ ಮುರಿಯುವ ಮೂಲಕ ಬಿಹಾರ ಬಿಕ್ಕಟ್ಟು ಮುಕ್ತಾಯ; ಹೊಸ ಸರ್ಕಾರ ರಚನೆಗೆ ಸಿದ್ಧತೆ

ನಿತೀಶ್ ಕುಮಾರ್ ಅವರು ಇದೀಗ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆಗೆ ಬಿಹಾರದ ರಾಜ್ಯಪಾಲರನ್ನು ಭೇಟಿಯಾಗುತ್ತಿರುವುದು ಹೊಸ ಸರ್ಕಾರ ರಚನೆಗೆ ಪುಷ್ಠಿ ನೀಡಿದೆ. ಈ ಹಿನ್ನೆಲೆಯಲ್ಲಿ ಆಗಿರುವ ಬೆಳವಣಿಗೆಗಳತ್ತ ಒಂದು ಪಕ್ಷಿ ನೋಟ.

ಮಾಜಿ ಕೇಂದ್ರ ಸಚಿವ ಮತ್ತು ಜನತಾ ದಳ (ಯುನೈಟೆಡ್) ಹಿರಿಯ ನಾಯಕ ಆರ್‌ಸಿಪಿ ಸಿಂಗ್ ಅವರ ರಾಜೀನಾಮೆ ಬಳಿಕ ಇಡೀ ದೇಶವೇ ಬಿಹಾರದತ್ತ ತಿರುಗಿ ನೋಡುವಂತೆ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಇದೀಗ ಬಿಕ್ಕಟ್ಟು ಬಿಜೆಪಿ ಮತ್ತು ಜೆಡಿಯು ಮೈತ್ರಿ ಮುರಿದು ಬೀಳುವುದರೊಂದಿಗೆ ಕೊನೆಗೊಂಡಿದೆ. ನಿತೀಶ್ ಕುಮಾರ್ ಅವರು ತಮ್ಮ ಶಾಸಕರ ಬಳಿ ಬಿಜೆಪಿ ಜೊತೆಗಿನ ಮೈತ್ರಿ ಮುಗಿದಿದೆ ಎಂದು ಹೇಳಿರುವುದಾಗಿ 'ಎನ್‌ಡಿಟಿವಿ' ವರದಿ ಉಲ್ಲೇಖಿಸಿದೆ.

ನಿತೀಶ್ ಕುಮಾರ್ ಅವರು ಇದೀಗ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆಗೆ ಬಿಹಾರದ ರಾಜ್ಯಪಾಲರನ್ನು ಭೇಟಿಯಾಗಿರುವುದು ಹೊಸ ಸರ್ಕಾರ ರಚನೆಗೆ ಪುಷ್ಠಿ ನೀಡಿದೆ. ಈ ಹಿನ್ನೆಲೆಯಲ್ಲಿ ಆಗಿರುವ ಬೆಳವಣಿಗೆಗಳತ್ತ ಒಂದು ಪಕ್ಷಿ ನೋಟ.

ಹೊಸ ಮೈತ್ರಿ ಲೆಕ್ಕಾಚಾರ ಯಾವಾಗ ಆರಂಭವಾಗಿದೆ?

ಜನತಾ ದಳ (ಯುನೈಟೆಡ್‌) ಮತ್ತು ಭಾರತೀಯ ಜನತಾ ಪಕ್ಷದ ಮೈತ್ರಿ ಮುರಿದು ಹೋದ ಬಳಿಕ ಹೊಸ ಮೈತ್ರಿಯ ಲೆಕ್ಕಚಾರಗಳು ಪ್ರಾರಂಭವಾಗಿವೆ. ಬಿಜೆಪಿ ಮತ್ತು ಜೆಡಿಯು ನಡುವಿನ ಸಂಬಂಧ ಯಾವಾಗಲೋ ಹಳಸಿದೆ. ಕುಂಟುತ್ತಾ ಬಂದ ಸರ್ಕಾರ ಬಿದ್ದು ಹೋಗಿದೆ. ಮುಂದಿನ ರಾಜಕೀಯ ಬೆಳವಣಿಗೆ ಎಲ್ಲಿಗೆ ತಲುಪುವುದೋ ಎನ್ನುವುದು ಸದ್ಯದ ಕುತೂಹಲ ಎಂಬುದು ಅನೇಕ ರಾಜಕೀಯ ತಜ್ಞರ ವಿಮರ್ಶೆಯಾಗಿದೆ.

ಸಿಂಗ್ ರಾಜೀನಾಮೆಯಿಂದ ಶುರುವಾಯಿತೇ ಬಿಕ್ಕಟ್ಟು?

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಆರ್‌ಸಿಪಿ ಸಿಂಗ್ ಅವರು ಭಾನುವಾರ ರಾಜೀನಾಮೆ ನೀಡಿದ್ದಾರೆ.

ಆರ್‌ಸಿಪಿ ಸಿಂಗ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಮೊದಲು ಕೇಂದ್ರ ನಿತೀಶ್ ಕುಮಾರ್ ಅವರಿಗೆ ಮಾಹಿತಿ ತಿಳಿಸಿರಲಿಲ್ಲ ಹಾಗೂ ಸಿಂಗ್ ಅವರು ಯಾವುದೇ ಚರ್ಚೆ ಮಾಡಿರಲಿಲ್ಲ ಇದರಿಂದ ಆರ್‌ಸಿಪಿ ಸಿಂಗ್ ಮೇಲೆ ನಿತೀಶ್ ಅಸಮಾಧಾನಗೊಂಡಿದ್ದರು ಎನ್ನಲಾಗುತ್ತಿದೆ.

ಈ ಬಾರಿಯ ರಾಜ್ಯಸಭೆಗೆ ಪುನರಾಯ್ಕೆ ಸಮಯದಲ್ಲಿ ಆರ್‌ಸಿಪಿ ಸಿಂಗ್ ಅವರ ಪ್ರಸ್ತಾಪ ಬಂದಾಗ ನಿತೀಶ್ ಕುಮಾರ್ ಅವರು ನಿರಾಕರಿಸಿದ್ದಾರೆ. ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟ ಕೇಂದ್ರ ರಾಜ್ಯಸಭೆಯಿಂದ ಆರ್‌ಸಿಪಿ ಸಿಂಗ್ ಅವರನ್ನು ಕೈಬಿಟ್ಟಿದೆ. ಇದರಿಂದ ಕೋಪಗೊಂಡ ಸಿಂಗ್ ಜೆಡಿಯುನಿಂದ ಹೊರನಡೆದಿದ್ದಾರೆ. 

ರಾಜೀನಾಮೆ ನೀಡಿ ಕಿಡಿಕಾರಿದ ಆರ್‌ಸಿಪಿ ಸಿಂಗ್

ಪಕ್ಷದಿಂದ ರಾಜ್ಯಸಭಾ ಟಿಕೆಟ್ ನಿರಾಕರಿಸಿದ್ದರಿಂದ ಮತ್ತು ಸ್ವಂತ ಪಕ್ಷದೊಳಗೆ ಭೂ ವ್ಯವಹಾರದ ಆರೋಪಗಳನ್ನು ಎದುರಿಸುತ್ತಿರುವ ಕಾರಣ ತಮ್ಮ ಸಂಸದೀಯ ಸ್ಥಾನವನ್ನು ಕಳೆದುಕೊಂಡಿರುವ ಆರ್‌ಸಿಪಿ ಸಿಂಗ್ ಭಾನುವಾರ ಜೆಡಿಯುಗೆ ರಾಜೀನಾಮೆ ನೀಡಿದ್ದಾರೆ.

"ನಾನು ಕೇಂದ್ರ ಸಚಿವನಾಗದಂತೆ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ. ಅಸೂಯೆಗೆ ಚಿಕಿತ್ಸೆ ಇಲ್ಲ. ನಿತೀಶ್ ಕುಮಾರ್ ಅವರು ತಮ್ಮ ಏಳೇಳು ಜನ್ಮದಲ್ಲೂ ಪ್ರಧಾನಿಯಾಗುವುದಿಲ್ಲ. ಜೆಡಿಯು ಮುಳುಗುವ ಹಡಗು" ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಆರ್‌ಸಿಪಿ ಸಿಂಗ್ ಹೇಳಿದ್ದರು. 

"ಪಕ್ಷ ತೊರೆದ ಬಳಿಕ ಅಕ್ರಮ ಆಸ್ತಿ ವ್ಯವಹಾರಗಳ ಆರೋಪ ಹೊರಿಸಿ ತಮ್ಮ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ. ಇದು ನಿತೀಶ್‌ ಅವರ ಸಣ್ಣತನದ ನಡೆ" ಎಂದು ಸಿಂಗ್‌ ಟೀಕಿಸಿದ್ದರು.

ಬೆಂಕಿ ನಂದಿಸಲು ಬಿಜೆಪಿ ಏಕೆ ಪ್ರಯತ್ನಿಸಿಲ್ಲ?

ಬಿಹಾರದಲ್ಲಿ ರಾಜಕೀಯ ಹೊಗೆಯಾಡುತ್ತಿದ್ದಂತೆ, ಅನೇಕ ಊಹಾಪೋಹಗಳು ಹರಿದಾಡುತ್ತಿವೆ. ಮೈತ್ರಿಯೊಂದಿಗಿನ ಗೊಂದಲದ ಬಗೆಗೆ ಚರ್ಚಿಸಲು ಬಿಜೆಪಿ ಹೈಕಮಾಂಡ್ ರಾಯಭಾರಿಯನ್ನು ಕಳುಹಿಸದಿರಲು ನಿರ್ಧರಿಸಿ, ಶಾಸಕರ ಸಭೆಯ ಫಲಿತಾಂಶಕ್ಕಾಗಿ ಎದುರು ನೋಡುವ ತಂತ್ರ ಅನುಸರಿಸಿತು.

ಬಿಜೆಪಿಯ ಪ್ರಮುಖ ಮಿತ್ರ ಪಕ್ಷವಾದ ಜೆಡಿಯು ಮೈತ್ರಿಯಿಂದ ಹೊರನಡೆಯುವ ಸೂಚನೆ ನೀಡುತ್ತಿದ್ದಂತೆ, ಪಕ್ಷ ಕಾದು ನೋಡುವ ತಂತ್ರವನ್ನು ಅನುಸರಿಸಿದೆ. ಬಿಹಾರದ ಮುಖ್ಯಮಂತ್ರಿಯ ಅನಿರೀಕ್ಷಿತ ನಡೆ ಬಿಜೆಪಿಯನ್ನು ತುದಿಗಾಲಲ್ಲಿ ನಿಲ್ಲಿಸಿದೆ.

ಈ ಸುದ್ದಿ ಓದಿದ್ದೀರಾ? ಅಗ್ನಿಪಥ ವಿವಾದ | ಬಿಹಾರ ಹಿಂಸಾಚಾರದಲ್ಲಿ ತರಬೇತಿ ಕೇಂದ್ರಗಳ ಭಾಗಿ ಆರೋಪ; 147 ಬಂಧನ

ಬಿಹಾರದ ರಾಜಕೀಯ ಚಲನವಲನ ಬದಲಾಗಿದ್ದು ಹೇಗೆ?

ನಿತೀಶ್ ಕುಮಾರ್ ಅವರ ಈ ಭಾರಿಯ ಹಠಮಾರಿತನಕ್ಕೆ ಬಿಜೆಪಿ ಬಳಿ ಮದ್ದಿರಲಿಲ್ಲ. ಪಕ್ಷದೊಳಗೆ ಹಲವು ವಿಚಾರದಲ್ಲಿ ಜೆಡಿಯುವನ್ನು ಪಕ್ಕಕ್ಕಿಟ್ಟು ನಿರ್ಧಾರ ಕೈಗೊಂಡಿದ್ದ ಬಿಜೆಪಿಗೆ ಓಲೈಕೆಗೆ ದಾರಿಯೂ ಇರಲಿಲ್ಲ. ಲಾಲು ಪ್ರಸಾದ್ ಯಾದವ್ ಅವರ ಆಪ್ತರೊಬ್ಬರ ಬಂಧನದ ನಂತರ ಬಿಹಾರದ ರಾಜಕೀಯ ಚಲನವಲನವೇ ಬದಲಾಗಿತ್ತು ಎನ್ನಲಾಗಿದೆ.

ಈ ಬಾರಿ ಜೆಡಿಯು ಬೆದರಿಕೆ ಗಂಭೀರವಾಗಿತ್ತು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. "ನಿತೀಶ್ ಕುಮಾರ್ ಅವರನ್ನು ಊಹಿಸಲು ಸಾಧ್ಯವಿಲ್ಲ. ಅವರು ಯಾವ ಹಂತಕ್ಕೆ ಬೇಕಾದರು ಹೋಗಬಹುದು ಎನ್ನುವುದನ್ನು ಅನೇಕ ಬಾರಿ ಸಾಬೀತುಪಡಿಸಿದ್ದಾರೆ" ಎಂದು ಬಿಹಾರದ ಮತ್ತೊಬ್ಬ ನಾಯಕ ಹೇಳಿರುವುದಾಗಿ 'ಇಂಡಿಯನ್ ಎಕ್ಸ್‌ಪ್ರೆಸ್‌' ವರದಿ ಮಾಡಿದೆ. 

ಏಕಕಾಲಕ್ಕೆ ಸಭೆ ಕರೆದ ಪಕ್ಷಗಳು ಮೈತ್ರಿ ಲೆಕ್ಕಚಾರವೇ? 

ಆಡಳಿತಾರೂಢ ಜೆಡಿಯು- ಬಿಜೆಪಿ ಮೈತ್ರಿಯಲ್ಲಿನ ಗೊಂದಲದ ನಡುವೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಪ್ರತಿಪಕ್ಷ ಆರ್‌ಜೆಡಿ ಮಂಗಳವಾರ ಪಾಟ್ನಾದಲ್ಲಿ ತಮ್ಮ ಶಾಸಕರ ಪ್ರತ್ಯೇಕ ಸಭೆಗಳನ್ನು ಕರೆದಿವೆ. ಎನ್‌ಡಿಎಯ ಅಂಗವಾಗಿರುವ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮತ್ತು ಕಾಂಗ್ರೆಸ್ ಮಂಗಳವಾರ ತಮ್ಮ ಶಾಸಕರ ಸಭೆಗಳನ್ನು ನಡೆಸುತ್ತಿವೆ.

ನಿತೀಶ್ ಅವರು ಕಾಂಗ್ರೆಸ್ ಅಧ್ಯಕ್ಷೆ  ಸೋನಿಯಾ ಗಾಂಧಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಹಿನ್ನೆಲೆಯಲ್ಲಿ ಸಭೆಗಳನ್ನು ಕರೆಯಲಾಗಿದೆ. ಈ ಹಿಂದೆ ಜೆಡಿಯು ನಾಯಕರು ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅವರೊಂದಿಗೆ ಮಾತನಾಡಿದ್ದರು ಎಂದು ಹೇಳಲಾಗುತ್ತಿದೆ.

ಆರ್‌ಜೆಡಿ ಸರ್ಕಾರ ರಚಿಸಲು ಮೈತ್ರಿಗೆ ಸಿದ್ಧವಿದೆಯೆ?

ನಿತೀಶ್ ಕುಮಾರ್ ನೇತೃತ್ವದ ಜನತಾ ದಳವು (ಯುನೈಟೆಡ್) ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡರೆ ಬಿಹಾರದಲ್ಲಿ ಜಂಟಿಯಾಗಿ ಸರ್ಕಾರ ರಚಿಸಲು ಸಿದ್ಧ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸೋಮವಾರ ಹೇಳಿದೆ.

“ಒಂದು ವೇಳೆ ನಿತೀಶ್ ಕುಮಾರ್ ಅವರು ಎನ್‌ಡಿಎ ಮೈತ್ರಿ ಬಿಟ್ಟು ಹೊರಬರಲು ನಿರ್ಧರಿಸಿದರೆ, ಜನತಾ ದಳವನ್ನು ಅಪ್ಪಿಕೊಳ್ಳದೆ ನಮಗೆ ಬೇರೆ ದಾರಿ ಇಲ್ಲ. ಬಿಜೆಪಿ ವಿರುದ್ಧ ಹೋರಾಡಲು ಆರ್‌ಜೆಡಿ ಬದ್ಧವಾಗಿದೆ. ಮುಖ್ಯಮಂತ್ರಿಗಳು ಈ ಹೋರಾಟದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರೆ, ನಾವು ಮುಂದುವರೆಯಲು ಸಿದ್ಧ” ಎಂದು ಆರ್‌ಜೆಡಿ ಉಪಾಧ್ಯಕ್ಷ  ಶಿವಾನಂದ್‌ ತಿವಾರಿ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ ? ಬಿಹಾರ | 'ರಾಜ್ಯಕ್ಕೆ ಮತಾಂತರ ನಿಷೇಧ ಕಾನೂನಿನ ಅಗತ್ಯವಿಲ್ಲ' - ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಹೇಳಿಕೆ

ಬಿಹಾರದ ಮುಖ್ಯಮಂತ್ರಿ ಆಸೆ ಕೈಬಿಡುವುದೇ ಆರ್‌ಜೆಡಿ?

ಬಿಹಾರದ ಹಿರಿಯ ಬಿಜೆಪಿ ನಾಯಕರ ಪ್ರಕಾರ, ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಲಾಲು ಪ್ರಸಾದ್ ಅವರ ವಿಶೇಷ ಕರ್ತವ್ಯದ ಅಧಿಕಾರಿಯಾಗಿದ್ದ ಭೋಲಾ ಯಾದವ್ ಅವರನ್ನು ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ಬಂಧಿಸಿತ್ತು. ಆ ಬಳಿಕ ಜೆಡಿಯು ಮೇಲಿನ ಒಲವನ್ನು ಆರ್‌ಜೆಡಿ ಕಳೆದುಕೊಂಡಿತ್ತು. ಆದರೆ ಇದೀಗ ಮೈತ್ರಿಗೆ ಸಿದ್ಧ ಎಂದು ಹೇಳಿದೆ.

“ಆರ್‌ಜೆಡಿ ಮುಖ್ಯಮಂತ್ರಿ ಹುದ್ದೆಯಂತಹ ಬೇಡಿಕೆಗಳನ್ನು ಕೈಬಿಟ್ಟಿದೆ ಮತ್ತು ಸರ್ಕಾರ ರಚಿಸಲು ನಿತೀಶ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಾಗಿದೆ. ಈ ಬೆಳವಣಿಗೆ ನಿತೀಶ್ ಕುಮಾರ್‌ ಅವರಿಗೆ ಬಿಜೆಪಿ ಜೊತೆ ಸ್ಥಾನಗಳ ಬಗೆಗೆ ಚೌಕಾಸಿ ಮಾಡಲು ಮತ್ತಷ್ಟು ಪುಷ್ಠಿ ನೀಡಿತ್ತು. ಹಾಗಾಗಿ ಜೆಡಿಯು ಕೇಂದ್ರ ಸರ್ಕಾರದಲ್ಲಿ ದೊಡ್ಡ ಸ್ಥಾನಕ್ಕಾಗಿ ಒತ್ತಾಯಿಸುತ್ತಿದೆ” ಎಂದು ಬಿಜೆಪಿ ನಾಯಕರೊಬ್ಬರು ಹೇಳಿರುವುದಾಗಿ 'ಇಂಡಿಯನ್ ಎಕ್ಸ್‌ಪ್ರೆಸ್‌' ವರದಿ ಉಲ್ಲೇಖಿಸಿದೆ.

ಕೆಲ ದಿನಗಳಿಂದ ನಿತೀಶ್‌ ಕುಮಾರ್ ಪರ ಒಲವು ತೋರಿರುವ ಆರ್‌ಜೆಡಿ, ಇದೀಗ ಮುಖ್ಯಮಂತ್ರಿ ಸ್ಥಾನದ ಬದಲು ಕೆಲವು ಪ್ರಮುಖ ಸಚಿವ ಸ್ಥಾನಗಳನ್ನು ಅಲಂಕರಿಸಲು ಸಿದ್ಧವಾಗಿದೆ ಎನ್ನಲಾಗುತ್ತಿದೆ.

ನಿತೀಶ್ ಮತ್ತು ಬಿಜೆಪಿ ಅಸಮಾಧಾನಕ್ಕೆ ಕಾರಣವೇನು ?

ಬಿಹಾರ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಗಾದಿಗೆ ಹಿಡಿದಿರುವ ನಿತೀಶ್ ಕುಮಾರ್ ಅವರಿಗೆ ಸುಗಮವಾಗಿ ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನದ ಹೊಗೆ ಎದ್ದಿದೆ. ಸಂಪುಟ ಸಚಿವರ ಆಯ್ಕೆ, ಮಿತ್ರ ಪಕ್ಷ ಬಿಜೆಪಿಯು ತನ್ನ ಕಡೆಯಿಂದ ಆಯ್ಕೆ ಮಾಡಿ ಕಳಿಸುತ್ತಿರುವ ಸಚಿವರ ಕಾರ್ಯವೈಖರಿ ನಿತೀಶ್ ಕುಮಾರ್ ಅವರಿಗೆ ಇಷ್ಟ ಆಗುತ್ತಿಲ್ಲ ಎನ್ನಲಾಗುತ್ತಿದೆ.

ಬಿಹಾರ ವಿಧಾನಸಭೆಯ ಸಭಾಪತಿ ವಿಜಯ್ ಕುಮಾರ್ ಸಿನ್ಹಾ ಅವರೊಂದಿಗೆ ನಿತೀಶ್ ಕುಮಾರ್ ಅಸಮಾಧಾನ ಹೊಂದಿದ್ದು, ಅವರ ಬದಲಾವಣೆಗೆ ಬಿಜೆಪಿ ಒಪ್ಪುತ್ತಿಲ್ಲ. ಸಭಾಪತಿ ಸರ್ಕಾರದ ವಿರುದ್ಧ ಮಾತನಾಡುತ್ತಾರೆ ಎನ್ನುವುದು ಮುಖ್ಯಮಂತ್ರಿ ಆರೋಪ.  

ಬಿಜೆಪಿ ಹೈಕಮಾಂಡ್ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಮತ್ತು ಗುಜರಾತ್, ಮಹಾರಾಷ್ಟ್ರಕ್ಕೆ ಹೋಲಿಸಿದರೆ ಬಿಹಾರವನ್ನು ಬಿಜೆಪಿ ಹೈಕಮಾಂಡ್ ಕಡೆಗಣಿಸಿದೆ ಎನ್ನುವುದು ನಿತೀಶ್ ಅವರ ಬಿಜೆಪಿ ಜೊತೆಗಿನ ಬಿರುಕಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಈ ಸುದ್ದಿ ಓದಿದ್ದೀರಾ? ಬಿಹಾರ ರಾಜ್ಯಾದ್ಯಂತ ಚುನಾವಣೆ ನಿಪುಣ ಪ್ರಶಾಂತ್‌ ಕಿಶೋರ್‌ ಪಾದಯಾತ್ರೆ

ಬಿಜೆಪಿಯ ಸಭೆಗಳಲ್ಲಿ ನಿತೀಶ್‌ ಕುಮಾರ್ ಏಕೆ ಭಾಗವಹಿಸಿಲ್ಲ?

ಮೈತ್ರಿ ಮಾಡಿಕೊಂಡಾಗಿನಿಂದ ಬಿಜೆಪಿ ನೇತೃತ್ವದ ಅನೇಕ ಸಭೆಗಳಿಗೆ ಗೈರಾಗುವ ಮೂಲಕ ನಿತೀಶ್‌ ಕುಮಾರ್ ಅವರು ಮೈತ್ರಿ ಸಂಬಂಧ ಉತ್ತಮವಾಗಿಲ್ಲ ಎಂಬುವುದನ್ನು  ತೋರಿಸಿಕೊಂಡಿದ್ದಾರೆ.

ಪ್ರಧಾನಿ ಅಧ್ಯಕ್ಷತೆಯಲ್ಲಿ ಆಗಸ್ಟ್‌ 7ರಂದು ನಡೆದ ನೀತಿ ಆಯೋಗ ಸಭೆಗೆ ನಿತೀಶ್‌ ಕುಮಾರ್ ಗೈರಾಗಿದ್ದರು. ಇದಕ್ಕೂ ಮುನ್ನ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಬೀಳ್ಕೊಡುಗೆ ಮತ್ತು ದ್ರೌಪದಿ ಮುರ್ಮು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗೈರುಹಾಜರಾಗಿದ್ದರು. ಇಂದರಿಂದಲೇ ಬಿಜಪಿ ಮತ್ತು ಜೆಡಿಯು ನಡುವೆ ವ್ಯಾಪಕವಾದ ಬಿರುಕು ಬಿಡುವ ಲಕ್ಷಣಗಳು ಕಂಡುಬಂದಿದ್ದವು.

2020ರಲ್ಲಿ ಸ್ಷಷ್ಟ ಬಹುಮತ ಇಲ್ಲದೆ ಮೈತ್ರಿ ಹೇಗಾಯಿತು?

2020ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ 75 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಮುಜಾಫರ್‌ಪುರ ಜಿಲ್ಲೆಯ ಬೋಚಹಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆದ್ದ ನಂತರ ಅದರ ಸಂಖ್ಯೆ 76ಕ್ಕೆ ಏರಿತು.

ಬಿಜೆಪಿ 74 ಸ್ಥಾನಗಳನ್ನು ಗೆದ್ದರೆ, ವಿಕಾಸಶೀಲ ಇನ್ಸಾನ್ ಪಕ್ಷದ ಮೂವರು ಶಾಸಕರು ಮಾರ್ಚ್‌ನಲ್ಲಿ ಪಕ್ಷಾಂತರವಾದ ಬಳಿಕ ಅದರ ಸಂಖ್ಯೆ 77ಕ್ಕೆ ಏರಿತು. ಬಿಜೆಪಿಯು, 43 ಸ್ಥಾನಗಳನ್ನು ಗೆದ್ದ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ಸರ್ಕಾರ ರಚಿಸಿತು.

ರಾಷ್ಟ್ರೀಯ ರಾಜಕಾರಣದ ಕಡೆ ಹೊರಳುವ ಸೂಚನೆಯೇ?

2024ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ನಿತೀಶ್ ಕುಮಾರ್ ಮತ್ತೆ ರಾಷ್ಟ್ರೀಯ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಬಿಹಾರ ಮುಖ್ಯಮಂತ್ರಿಯ ಮಹತ್ವಾಕಾಂಕ್ಷೆಗಳ ಕುರಿತು, ಆರ್‌ಸಿಪಿ ಸಿಂಗ್ ಅವರು, “ನಿತೀಶ್ ಕುಮಾರ್ ಅವರು 2005 ಮತ್ತು 2010 ರ ನಡುವೆ ಬಿಹಾರಕ್ಕಾಗಿ ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು. ಏಕೆಂದರೆ ಅವರು ರಾಜ್ಯದ ಮೇಲೆ ಗಮನ ಕೇಂದ್ರೀಕರಿಸಿದರು. ಆದರೆ ಅದಾದ ಬಳಿಕ ದೊಡ್ಡ ಆಸೆಗಳನ್ನು ಕಾಣಲು ಪ್ರಾರಂಭಿಸಿದರು” ಎಂದು ಹೇಳಿದ್ದಾರೆ.

2017ರಲ್ಲಿ ಎನ್‌ಡಿಎಗೆ ಮರಳಲು ನಿತೀಶ್ ನಿರ್ಧರಿಸುವ ಮೊದಲು, ಕಾಂಗ್ರೆಸ್ ಮತ್ತು ಆರ್‌ಜೆಡಿಯೊಂದಿಗೆ ಮಹಾಘಟಬಂಧನ್ ಪ್ರಯೋಗದ ನಂತರ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದರು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಆ ಹೊತ್ತಿಗೆ, ಯುಪಿಎಯ ರಾಷ್ಟ್ರೀಯ ಸಂಚಾಲಕರಾಗಿ ಹೊರಹೊಮ್ಮುವ ಮತ್ತು 2019ರ ಪ್ರಧಾನಿ ಸ್ಪರ್ಧಿಯಾಗಿ ಹೊರಹೊಮ್ಮುವ ನಿತೀಶ್ ಅವರ ಭರವಸೆ ಸಾಯಲಾರಂಭಿಸಿತ್ತು. ಆ ಸಮಯದಲ್ಲಿ ಬಿಹಾರ ಮುಖ್ಯಮಂತ್ರಿ ಸ್ಥಾನದ ಕಡೆ ಗಮನ ಹರಿಸಿದರು ಎನ್ನಲಾಗುತ್ತಿದೆ.

ಜೆಡಿಯು ನಾಯಕರೊಬ್ಬರು ಇದನ್ನು ಸಂಕ್ಷಿಪ್ತಗೊಳಿಸುತ್ತಾ “ನಿತೀಶ್ ಕುಮಾರ್ ಕೇಂದ್ರ ಸಚಿವರಾಗಿದ್ದಾರೆ ಮತ್ತು ಈಗ ಬಿಹಾರದ ಮುಖ್ಯಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಇನ್ನೇನು ಸಾಧಿಸಬೇಕು? ಕೆ ಗುಜ್ರಾಲ್ ಮತ್ತು ಎಚ್‌ಡಿ ದೇವೇಗೌಡರು ಪ್ರಧಾನಿಯಾಗಲು ಸಾಧ್ಯವಾದರೆ, ನಿತೀಶ್ ಕುಮಾರ್ ಏಕೆ ಪ್ರಧಾನಿಯಾಗಬಾರದು?” ಎಂದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್