ಸುದ್ದಿ ವಿವರ | ಗುಜರಾತ್‌ ವಿಧಾನಸಭೆ ಚುನಾವಣೆ; ಬಿಜೆಪಿ- ಕಾಂಗ್ರೆಸ್ ನಡುವೆ ಆಪ್ ಅದೃಷ್ಟ ಪರೀಕ್ಷೆ

ಗುಜರಾತ್‌ನಲ್ಲಿ ಇನ್ನೂ ಚುನಾವಣೆ ಘೋಷಣೆಯಾಗಿಲ್ಲ. ಆದರೆ, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ- ಕಾಂಗ್ರೆಸ್ ಹೊರತುಪಡಿಸಿ, ಆಮ್ ಆದ್ಮಿ ಪಕ್ಷ (ಎಎಪಿ) ಸ್ಪರ್ಧಿಸುತ್ತಿರುವುದು ಈ ಬಾರಿಯ ವಿಶೇಷ.
Amit Shah and Narendra Modi

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಗುಜರಾತ್‌ನಲ್ಲಿ ಇನ್ನೂ ಚುನಾವಣೆ ಘೋಷಣೆಯಾಗಿಲ್ಲ. ಆದರೆ, ರಾಜ್ಯದಲ್ಲಿ 27 ವರ್ಷಗಳಿಂದ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಅಧಿಕಾರ ಉಳಿಸಿಕೊಳ್ಳುವ ಆತಂಕ. ಅದಕ್ಕಾಗಿ ರಾಜ್ಯದಲ್ಲಿ ಪ್ರಚಾರದ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೇ ವಹಿಸಿಕೊಂಡಿದ್ದಾರೆ.

ಗುಜರಾತ್ ಚುನಾವಣೆಗೆ ಸಂಬಂಧಿಸಿದ ಮಹತ್ವದ ಸಭೆ

Eedina App

ಚುನಾವಣಾ ಆಯೋಗವು ಶುಕ್ರವಾರ (ಅ.14) ಹಿಮಾಚಲ ಪ್ರದೇಶ ಚುನಾವಣೆ ಘೋಷಿಸಿದ ಕೆಲವೇ ಗಂಟೆಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಸಭೆ ನಡೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ರಾಜ್ಯಾಧ್ಯಕ್ಷ ಸಿ ಆರ್ ಪಾಟೀಲ್ ಸೇರಿದಂತೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಬಿಜೆಪಿ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಸುಮಾರು 5 ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಪ್ರಧಾನಿ ಮೋದಿ ಅವರ ಹೆಸರು ಮುಂದಿಟ್ಟು ಬಿಜೆಪಿ ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಇದೇ ವೇಳೆ ಅಮಿತ್ ಶಾ, ಜೆ ಪಿ ನಡ್ಡಾ ಅವರು ಯೋಜನೆಯ ಸಂಪೂರ್ಣ ರೂಪುರೇಷೆ ಸಿದ್ಧಪಡಿಸುತ್ತಾರೆ ಎನ್ನುವುದು ತೀರ್ಮಾನವಾಗಿದೆ ಎಂದು ವರದಿಯಾಗಿದೆ.

AV Eye Hospital ad

ಚುನಾವಣೆಗೂ ಮುನ್ನ ಯೋಜನೆ ಘೋಷಣೆ

ದೀಪಾವಳಿ ನಂತರ ಗುಜರಾತ್ ಚುನಾವಣೆಯನ್ನು ಚುನಾವಣಾ ಆಯೋಗ ಪ್ರಕಟಿಸುವ ಸಾಧ್ಯತೆ ಇದೆ. ಅದಕ್ಕೂ ಮುನ್ನವೇ ಪ್ರಧಾನಿ ಮೋದಿ  ರಾಜ್ಯಕ್ಕೆ ಅನೇಕ ದೊಡ್ಡ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅಕ್ಟೋಬರ್ 18 ರಿಂದ 22 ರವರೆಗೆ ಗುಜರಾತ್‌ನ ಗಾಂಧಿನಗರದಲ್ಲಿ ಡಿಫೆನ್ಸ್ ಎಕ್ಸ್‌ಪೋ ನಡೆಯಲಿದೆ.  19 ರಂದು ಪ್ರಧಾನಿ ಮೋದಿ ಈ ಎಕ್ಸ್‌ಪೋ ಉದ್ಘಾಟಿಸಲಿದ್ದಾರೆ.

ಈ ಎಕ್ಸ್‌ಪೋದಲ್ಲಿ 1.25 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಹೂಡಿಕೆಗಾಗಿ 400 ಕ್ಕೂ ಹೆಚ್ಚು ಒಪ್ಪಂದಗಳಿಗೆ  ಸಹಿ ಹಾಕಲು ಸರ್ಕಾರ ಯೋಜಿಸಿದೆ. ಅಲ್ಲದೆ, ಗುಜರಾತ್‌ನಲ್ಲಿ ದೀಪಾವಳಿಯ ಹೊತ್ತಿಗೆ ಅನೇಕ ಯೋಜನೆಗಳು ಮತ್ತು ಶಿಲಾನ್ಯಾಸ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಮಿಕರು ಹಾಗೂ ರೈತರ ಓಲೈಕೆಗೆ ಸತತ ಯತ್ನ

ಗುಜರಾತ್‌ನಲ್ಲಿ ಶಿಕ್ಷಕರು, ಸರ್ಕಾರಿ ನೌಕರರು, ಆರೋಗ್ಯ ಕಾರ್ಯಕರ್ತರು, ರೈತರು, ಅರಣ್ಯ ಸಿಬ್ಬಂದಿ ಮತ್ತು ಇತರ ಸಂಘಟನೆಗಳು ಸರ್ಕಾರದ ವಿರುದ್ಧ ಅಸಮಾಧಾನ ಪ್ರಕಟಿಸಿದ್ದಾರೆ. ಈ ವರ್ಗಗಳು ಸತತ ಪ್ರತಿಭಟನೆಗಳನ್ನೂ ಇತ್ತೀಚೆಗಿನ ತಿಂಗಳುಗಳಲ್ಲಿ ನಡೆಸಿದ್ದಾರೆ. ವೇತನ ಹೆಚ್ಚಳ ಮತ್ತು ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಒತ್ತಾಯಿಸಿದ್ದಾರೆ. ಇದೀಗ ಈ ವರ್ಗವನ್ನು ಒಲಿಸಿಕೊಳ್ಳುವುದು ಬಿಜೆಪಿಗೆ ದೊಡ್ಡ ಸವಾಲೆನಿಸಿದೆ. 

ಕೇಂದ್ರ ಮತ್ತು ರಾಜ್ಯ ಮಟ್ಟದ ನಾಯಕರನ್ನು ಸಾರ್ವಜನಿಕರ ಬಳಿಗೆ ಹೋಗಿ ರಾಜ್ಯದಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿಕೊಳ್ಳುವಂತೆ ಬಿಜೆಪಿ ಸೂಚಿಸಿದೆ. ಇದರ ಭಾಗವಾಗಿ ಗುಜರಾತ್‌ನಲ್ಲಿ ಬಿಜೆಪಿ ಗೌರವ ಯಾತ್ರೆ ಆರಂಭಿಸಿದೆ.

ಎಎಪಿ ಭರವಸೆಗಳು ಮತ್ತು ಕಾಂಗ್ರೆಸ್‌ ಮೌನ ಕಾರ್ಯಸೂಚಿ

ಗುಜರಾತ್ ವಿಧಾನಸಭೆ ಚುನಾವಣೆ ಈ ಬಾರಿ ತ್ರಿಕೋನ ಸ್ಪರ್ಧೆ ಎಂದು ಮಾಧ್ಯಮಗಳು ವಿಶ್ಲೇಷಿಸಿವೆ. ಆಪ್ ಮತ್ತು ಗುಜರಾತ್ ಬಿಜೆಪಿ ನಡುವೆ ಅಬ್ಬರದ ಪ್ರಚಾರ ಮತ್ತು ವಾಗ್ವಾದಗಳು ನಿತ್ಯವೂ ಸುದ್ದಿಯಾಗುತ್ತಿವೆ. ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಉಚಿತ ನೀರು, ವಿದ್ಯುತ್ ಹಾಗೂ ನೌಕರರ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದಾಗಿ ಜನಪರ ಭರವಸೆಗಳನ್ನು ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶಾದಿ ಭಾಗ್ಯ ನಕಲು ಮಾಡಿದ ಉತ್ತರ ಪ್ರದೇಶ; ರಾಜ್ಯ ಬಿಜೆಪಿ ರದ್ದುಗೊಳಿಸಿದ ಯೋಜನೆಗೆ ಯೋಗಿ ಸರ್ಕಾರದಿಂದ ಮಾನ್ಯತೆ

ಮೌನವಾಗಿ ಮತದಾರರನ್ನು ಒಲಿಸಿಕೊಳ್ಳುತ್ತಿದೆಯೇ ಕಾಂಗ್ರೆಸ್

ಇದೇ ವೇಳೆ ಕಾಂಗ್ರೆಸ್ಸಿನ ಮೌನ ಕಾರ್ಯಸೂಚಿಯು ಬಿಜೆಪಿಗೆ ಕಳವಳದ ವಿಷಯವಾಗಿ ಮಾರ್ಪಟ್ಟಿದೆ. ಇತ್ತೀಚೆಗಷ್ಟೇ ಸಮಾವೇಶವೊಂದರಲ್ಲಿ ಮೋದಿ ಅವರು ಕಾಂಗ್ರೆಸ್‌ನ ಮೌನ ಪ್ರಚಾರದ ಬಗ್ಗೆ ತಮ್ಮ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದರು. "ಕಾಂಗ್ರೆಸ್ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಹೋಗಿ ಪ್ರಚಾರ ನಡೆಸುತ್ತಿದೆ. ಈ ಕಾರ್ಯಸೂಚಿ ಎದುರಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧರಿರಬೇಕು. ಕಾಂಗ್ರೆಸ್ ಮೌನವಾಗಿದೆ ಎಂದು ಸುಮ್ಮನಿರಬಾರದು. ಎಲ್ಲಾ ಬಿಜೆಪಿ ನಾಯಕರು ನೆಲಮಟ್ಟದಲ್ಲಿ ಜನಸಂಪರ್ಕ ಮಾಡಬೇಕು" ಎಂದು ನರೇಂದ್ರ ಮೋದಿ ಇತ್ತೀಚೆಗೆ ಭಾಷಣದಲ್ಲಿ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app