ಸುದ್ದಿ ನೋಟ | ರಾಜಕೀಯ ಏಳು ಬೀಳಿನ ಹಾದಿಯಲ್ಲಿ ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಎಡರು, ತೊಡರುಗಳು

ಎಐಎಡಿಎಂಕೆಯ ಪನ್ನೀರ್‌ಸೆಲ್ವಂ ಮತ್ತು ಪಳನಿಸ್ವಾಮಿ ನಡುವಣ ಕಲಹ ಇಂದು, ನಿನ್ನೆಯದ್ದಲ್ಲ. ಇಬ್ಬರು ನಾಯಕರು ರಾಜಕೀಯ ಪ್ರವೇಶಿಸಿದಾಗಿನಿಂದ ಇದು ಮುಚ್ಚಿದ ಕೆಂಡದಂತೆಯೇ ಇದೆ. ಎಐಎಡಿಎಂಕೆ ಪಕ್ಷದೊಳಗಿನ ಅಧಿಕಾರದಿಂದ ಬೀಗುತ್ತಿದ್ದ ಪನ್ನೀರ್‌ಸೆಲ್ವಂ, ಈಗ ಪಕ್ಷದಿಂದ ಹೊರಬಂದಿದ್ದಾರೆ. ಹೊಸ ಹಾದಿ ಕಂಡುಕೊಳ್ಳುವ ಸವಾಲು ಅವರ ಮುಂದಿದೆ. ಪಳನಿಸ್ವಾಮಿ ಮುಂದೆ ಪಕ್ಷವನ್ನು ರಾಜ್ಯದಲ್ಲಿ ಮುನ್ನೆಲೆಗೆ ತರುವ ಜವಾಬ್ದಾರಿಯಿದೆ.
K.Palaniswami and O.Pannirselvam

ಕಳೆದ ಕೆಲವು ದಿನಗಳಿಂದ ತಮಿಳು ರಾಜಕೀಯ ರಂಗ ಸದ್ದು ಮಾಡುತ್ತಿದೆ. ಸ್ಥಳೀಯವಾಗಿ ಪ್ರಮುಖ ಪ್ರಭಾವಿ ಪಕ್ಷವಾದ ಎಐಡಿಎಂಕೆ ಪಕ್ಷದೊಳಗೇ ಆಂತರಿಕ ಬೇಗುದಿ ಕಟ್ಟೆಯೊಡೆದು ಸುತ್ತಲಿನ ಪ್ರದೇಶಗಳಿಗೆ ಹರಡಿದೆ. 

ಪಕ್ಷದ ನಾಯಕತ್ವಕ್ಕಾಗಿ ಕೆ ಪಳನಿಸ್ವಾಮಿ ಮತ್ತು ಒ ಪನ್ನೀರ್‌ಸೆಲ್ವಂ ನಡುವಣ ಜಗಳ ತಾರಕಕ್ಕೇರಿ ಜುಲೈ 11ರಂದು ಪಕ್ಷದ ಸಾಮಾನ್ಯ ಮಂಡಳಿ ಸಭೆಯು ಪಕ್ಷದ ದ್ವಿ ನಾಯಕತ್ವ ಪದ್ಧತಿ ರದ್ದುಗೊಳಿಸಿತು. ಅಲ್ಲದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಅರೋಪದಲ್ಲಿ ಪನ್ನೀರ್‌ಸೆಲ್ವಂ ಅವರನ್ನು ಖಚಾಂಚಿ ಸ್ಥಾನದಿಂದ ತೆರವುಗೊಳಿಸಿ ಪಕ್ಷದಿಂದ ಉಚ್ಛಾಟಿಸಲಾಯಿತು. 

ಉಭಯ ನಾಯಕರ ನಡುವಣ ಕಲಹ ಇಂದು, ನಿನ್ನೆಯದ್ದಲ್ಲ. ಇಬ್ಬರು ನಾಯಕರು ರಾಜಕೀಯ ಪ್ರವೇಶಿಸಿದಾಗಿನಿಂದ ಇದು ಮುಚ್ಚಿದ ಕೆಂಡದಂತೆಯೇ ಇದೆ. ಎಐಎಡಿಎಂಕೆ ಪಕ್ಷ ಸೇರಿ ಪ್ರತಿಷ್ಠೆಯಿಂದ ಬೀಗುತ್ತಿದ್ದ ಪನ್ನೀರ್‌ಸೆಲ್ವಂ, ಈಗ ಪಕ್ಷದಿಂದ ಹೊರಬಂದು ದಿಕ್ಕು ಕಾಣದಂತಾಗಿದ್ದಾರೆ. ಅವರ ಮುಂದಿನ ಹಾದಿ ನಿಗೂಢವಾಗಿದೆ. 

ಎಐಎಡಿಎಂಕೆ ಸಾಮಾನ್ಯ ಮಂಡಳಿಯಲ್ಲಿ  ಒ ಪನ್ನೀರ್‌ಸೆಲ್ವಂ ಮತ್ತು ಪಳನಿಸ್ವಾಮಿ ಹೊಂದಿದ್ದ ಸಂಯೋಜಕ ಮತ್ತು ಜಂಟಿ ಸಂಯೋಜಕ ಹುದ್ದೆಗಳನ್ನು ರದ್ದುಗೊಳಿಸುವಾಗ ನಿರ್ಧಾರ ತೆಗೆದುಕೊಳ್ಳುವಲ್ಲಿ ಉಂಟಾದ ತೊಂದರೆಯಿಂದಾಗಿ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ. ಉಭಯ ನಾಯಕತ್ವದಲ್ಲಿ, ಎಐಎಡಿಎಂಕೆ ಸತತ ಮೂರು ಚುನಾವಣಾ ಸೋಲುಗಳನ್ನು ಅನುಭವಿಸಿತ್ತು. ಇದೂ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. 

ಕಲಹ ಏರ್ಪಟ್ಟಿದ್ದು ಹೇಗೆ?

ಪಕ್ಷದ ಸರ್ವೋಚ್ಛ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಈ ಸಾಮಾನ್ಯ ಮಂಡಳಿ ಸಭೆಗಿತ್ತು. ಆದರೆ ಮಂಡಳಿಯಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ದ್ವಿನಾಯಕತ್ವ ಇದ್ದ ಪಕ್ಷದಲ್ಲಿ ಇಬ್ಬರೂ ನಾಯಕರ ನಡುವೆ ಸದಾ ವಿರೋಧಗಳು ಉಂಟಾಗುತ್ತಿದ್ದವು. ಈ ಹಿನ್ನೆಲೆ ಏಕನಾಯಕತ್ವದ ಕಹಳೆ ಪಕ್ಷದ ಮೊಗಸಾಲೆಯಲ್ಲಿ ಜೋರಾಗಿ ಕೇಳಿತ್ತು. 

ಇದಕ್ಕಾಗಿಯೇ ಸೋಮವಾರ ನಡೆದ ಸಾಮಾನ್ಯ ಮಂಡಳಿ ಸಭೆಯಲ್ಲಿ ಪಳನಿಸ್ವಾಮಿ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಈಗ ಪನ್ನೀರ್‌ಸೆಲ್ವಂ ಅವರು ಪಕ್ಷದಿಂದ ಹೊರಬಿದ್ದಿದ್ದಾರೆ. 

ಪನ್ನೀರ್‌ಸೆಲ್ವಂ ಆಪ್ತರಾದ ಹಿರಿಯ ನಾಯಕ ಜೆಸಿಡಿ ಪ್ರಭಾಕರ್, ಆರ್ ವೈತಿಲಿಂಗಂ ಮತ್ತು ಪಿಎಚ್ ಮನೋಜ್ ಪಾಂಡಿಯನ್ ಕೂಡ ಎಐಎಡಿಎಂಕೆಯಿಂದ ಉಚ್ಛಾಟನೆಗೊಂಡಿದ್ದಾರೆ.  
ಇದಕ್ಕೂ ಮೊದಲು ಪನ್ನೀರ್‌ಸೆಲ್ವಂ ಅವರು ಸಭೆ ನಡೆಸಲು ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಿತು. ನ್ಯಾಯಾಲಯದಲ್ಲೂ ಹಿನ್ನಡೆ ಅನುಭವಿಸಿರುವ ಪನ್ನೀರ್‌ಸೆಲ್ವಂ ಈಗ ಪಕ್ಷದ ಮೇಲೂ ಹಿಡಿತ ಕಳೆದುಕೊಂಡಿದ್ದಾರೆ. 

2017ರಲ್ಲಿ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಿಧನದ ನಂತರ ಪಕ್ಷದ ಮೇಲೆ ಹಿಡಿತ ಸಾಧಿಸಲು, ಅವರ ಉತ್ತರಾಧಿಕಾರಿ ಎಂದು ಬಿಂಬಿಸಿಕೊಳ್ಳಲು ಇ ಪಳನಿಸ್ವಾಮಿ ಮತ್ತು ಒ ಪನ್ನೀರ್‌ಸೆಲ್ವಂ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಜಯಲಲಿತಾ ಮರಣದ ನಂತರ ಪನ್ನೀರ್‌ಸೆಲ್ವಂ ಮುಖ್ಯಮಂತ್ರಿಯಾಗಿದ್ದರು, ನಂತರ ಪಳನಿಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2021ರ ಮೇನಲ್ಲಿ ನಡೆದ ಚುನಾವಣೆಯಲ್ಲಿ ಎಐಡಿಎಂಕೆ ಅಧಿಕಾರ ಕಳೆದುಕೊಂಡಿತು. ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಆಪ್ತರಾಗಿದ್ದ ಪನ್ನೀರ್‌ಸೆಲ್ವಂ ಜಯಲಲಿತಾ ಅವರು ಜೈಲಿಗೆ ಹೋಗಿದ್ದಾಗ 2001-2002, 2014-2015 ಮತ್ತು 2016-2017ರಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.

ಪಕ್ಷದೊಳಗೆ ಪಳನಿಸ್ವಾಮಿ ನಡೆದು ಬಂದ ಹಾದಿ

ಇಪಿಎಸ್ ಎಂದೂ ಕರೆಯಲ್ಪಡುವ ಎಡಪ್ಪಾಡಿ ಕೆ ಪಳನಿಸ್ವಾಮಿ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ. 2017ರಿಂದ 2021ರವರೆಗೆ ತಮಿಳುನಾಡಿನ 7ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ ಪಳನಿಸ್ವಾಮಿ ಅವರು 2022ರ ಜುಲೈ 11ರಿಂದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿ.  

ಪಳನಿಸ್ವಾಮಿ ಅವರು 2011ರಿಂದ ಎಡಪ್ಪಾಡಿ ಕ್ಷೇತ್ರದಿಂದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ 1989ರಿಂದ 1996ರವರೆಗೆ ಸೇವೆ ಸಲ್ಲಿಸಿದ್ದರು. 1998ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ತಿರುಚೆಂಗೋಡ್ ಕ್ಷೇತ್ರವನ್ನು ಪ್ರತಿನಿಧಿಸಿ ಲೋಕಸಭೆಯ ಸಂಸದರಾಗಿ ಆಯ್ಕೆಯಾದರು.

2011ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಗೆದ್ದಾಗ, ಅವರಿಗೆ ಜೆ ಜಯಲಲಿತಾ ಸಚಿವ ಸ್ಥಾನ ನೀಡಿದರು. ತಮಿಳುನಾಡು ಸರ್ಕಾರಕ್ಕಾಗಿ 2011ರ ಮೇ 11ರಂದು ಹೆದ್ದಾರಿಗಳು ಮತ್ತು ಸಣ್ಣ ಬಂದರುಗಳ ಸಚಿವರಾಗಿ ಸೇವೆ ಸಲ್ಲಿಸಿದರು. 2016ರ ತಮಿಳುನಾಡು ವಿಧಾನಸಭೆ ಚುನಾವಣೆಯ ವಿಜಯದ ನಂತರ ಜೆ ಜಯಲಲಿತಾ ಅವರು ಪಳನಿಸ್ವಾಮಿ ಅವರಿಗೆ ಲೋಕೋಪಯೋಗಿ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿ ನೀಡಿದರು.

ಕರುಪ್ಪ ಗೌಂಡರ್ ಮತ್ತು ತವಸಿಯಮ್ಮಾಳ್ ಪಳನಿಸ್ವಾಮಿ ಅವರ ತಂದೆ-ತಾಯಿ. ಅವರು ಮದ್ರಾಸ್ ರಾಜ್ಯದ ಸೇಲಂನ ಸಿಲುವಾಂಪಾಲಯದಲ್ಲಿ ಜನಿಸಿದರು (ತಮಿಳುನಾಡು). ಅವರದು ಕೃಷಿಕ ಕುಟುಂಬ. ಶಾಲೆ ಮುಗಿದ ನಂತರ ಬಿಎಸ್‌ಸಿಗೆ ಸೇರಿದರು. ಶ್ರೀ ವಾಸವಿ ಕಾಲೇಜಿನಲ್ಲಿ ಪದವಿ ಪಡೆದರು. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ನಾಯಕರಾಗಿದ್ದರು. 

ರಾಜಕೀಯ ಪ್ರವೇಶ

ಪಳನಿಸ್ವಾಮಿ ಅವರು 1974ರಲ್ಲಿ ಎಐಎಡಿಎಂಕೆಯ ಸ್ವಯಂಸೇವಕರಾಗಿ ರಾಜಕೀಯ ಪ್ರವೇಶಿಸಿದರು. ನಂತರ  ಸೇಲಂ ಜಿಲ್ಲೆಯಲ್ಲಿ ಪಕ್ಷದ ಪ್ರಮುಖ ಸದಸ್ಯರಾದರು. ಅವರು ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆಗೆ 1989ರಲ್ಲಿ ಎಡಪ್ಪಾಡಿ ಕ್ಷೇತ್ರವನ್ನು ಪ್ರತಿನಿಧಿಸಿ ಚುನಾಯಿತರಾದರು. 1999ರ ಮರುಚುನಾವಣೆಯಲ್ಲಿಯೂ ಗೆದ್ದರು. 12ನೇ ಲೋಕಸಭೆಯಲ್ಲಿ ತಿರುಚೆಂಗೋಡು ಕ್ಷೇತ್ರ ಪ್ರತಿನಿಧಿಸುವ ಸಂಸದರಾಗಿ ಆಯ್ಕೆಯಾದರು. 1990ರ ದಶಕದ ಉತ್ತರಾರ್ಧದಲ್ಲಿ ಪಶ್ಚಿಮ ಬೆಲ್ಟ್‌ನಲ್ಲಿ ಎಐಎಡಿಎಂಕೆಯಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಿದರು. 2006ರ ಜುಲೈನಲ್ಲಿ ಪ್ರಚಾರ ಕಾರ್ಯದರ್ಶಿಯಾಗಿ ಮತ್ತು 2007ರಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡರು. ಎಐಎಡಿಎಂಕೆ ಆಡಳಿತ ಪಕ್ಷವಾದಾಗ ಅವರು 2011 ಮತ್ತು 2016ರಲ್ಲಿ ಎಡಪ್ಪಾಡಿ ಕ್ಷೇತ್ರದಿಂದ ಆಯ್ಕೆಯಾದರು. ಒ ಪನ್ನೀರ್‌ಸೆಲ್ವಂ ಮತ್ತು ದಿಂಡಿಗಲ್ ಸಿಶ್ರೀನಿವಾಸನ್ ಅವರೊಂದಿಗೆ ಜೆಜಯಲಲಿತಾ ಅವರ ಪ್ರಬಲ ವಿಶ್ವಾಸಿಗಳಲ್ಲಿ ಒಬ್ಬರಾಗಿದ್ದರು. 

2014 ರಲ್ಲಿ ಕೆ ಎ ಸೆಂಗೋಟ್ಟಯ್ಯನ್ ಅವರ ನಂತರ ಎಐಡಿಎಂಕೆನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 2016ರ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಿಧನದ ನಂತರ ಮುಖ್ಯಮಂತ್ರಿಯಾದ ಒ ಪನ್ನೀರ್‌ಸೆಲ್ವಂ ರಾಜೀನಾಮೆ ನೀಡಿದ ನಂತರ ಪಳನಿಸ್ವಾಮಿ 2017ರ ಫೆಬ್ರವರಿಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾದರು.   

2021ರ ಮೇ 3ರಂದು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಸೋಲಿನ ನಂತರ ಪಳನಿಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2021ರ ಮೇನಲ್ಲಿ ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ಸೋತಿತು. ಆದರೆ ಪಳನಿಸ್ವಾಮಿ ಅವರು ಎಡಪ್ಪಾಡಿ ಕ್ಷೇತ್ರದಲ್ಲಿ ಗೆದ್ದರು. ಬಳಿಕ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು.  

ಒ. ಪನ್ನೀರ್‌ಸೆಲ್ವಂ ಜೊತೆ ನಾಯಕತ್ವದ ಜಗಳ 

2022ರ ಜೂನ್‌ 14ರಂದು ಚುನಾವಣೆಯಲ್ಲಿ ಪಕ್ಷದ ವೈಫಲ್ಯಗಳನ್ನು ಉಲ್ಲೇಖಿಸಿ, ಎಐಎಡಿಎಂಕೆ ಜಿಲ್ಲಾ ಕಾರ್ಯದರ್ಶಿಗಳು ಮತ್ತು ಪಕ್ಷದ ಇತರ ಹಿರಿಯ ಸದಸ್ಯರು ದ್ವಿ ನಾಯಕತ್ವ ವ್ಯವಸ್ಥೆಯನ್ನು ದೂರವಿಡಲು ಒತ್ತಾಯಿಸಿದರು.  

ಪಕ್ಷದೊಳಗೆ ಬಲಹೀನರಾಗಿದ್ದ ಎಐಎಡಿಎಂಕೆ ಸಂಯೋಜಕ ಒ. ಪನ್ನೀರ್‌ಸೆಲ್ವಂ ವಿರುದ್ಧ ಎಡಪ್ಪಾಡಿ ಕೆ ಪಳನಿಸ್ವಾಮಿ ಬೆಂಬಲಿಗರು ರಾಜಕೀಯ ದಂಗೆ ನಡೆಸುವ ಮೂಲಕ ಪಕ್ಷದ ನಾಯಕತ್ವ ರಚನೆಯಲ್ಲಿ ಬದಲಾವಣೆಗೆ ಒತ್ತಾಯಿಸಿದರು. ಮೂಲಗಳ ಪ್ರಕಾರ ಎಐಎಡಿಎಂಕೆಯ 75 ಜಿಲ್ಲಾ ಕಾರ್ಯದರ್ಶಿಗಳಲ್ಲಿ 10 ಮಂದಿ ಮಾತ್ರ ಪಳನಿಸ್ವಾಮಿರನ್ನು ಬೆಂಬಲಿಸಲಿಲ್ಲ. ಪಕ್ಷದ 66 ಶಾಸಕರ ಪೈಕಿ ಕೇವಲ ಐವರು ಶಾಸಕರು ಒ ಪನ್ನೀರ್‌ಸೆಲ್ವಂ ಪರವಾಗಿದ್ದರು.  

2022ರ ಜೂನ್‌ 23ರಂದು ಪಕ್ಷದ ನಿರ್ಣಾಯಕ ಸಾಮಾನ್ಯ ಮಂಡಳಿ ಸಭೆಯಲ್ಲಿ ದ್ವಿ ನಾಯಕತ್ವ ರದ್ದುಗೊಳಿಸಿ ಪಳನಿಸ್ವಾಮಿ ಅವರನ್ನು ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆರಿಸಲಾಗಿದೆ.

ಪನ್ನೀರ್‌ಸೆಲ್ವಂ ಅವರು ನಡೆದು ಬಂದ ಹಾದಿ

ಒಟ್ಟಕಾರತೇವರ್ ಪನ್ನೀರ್‌ಸೆಲ್ವಂ 2001-2002, 2014-2015 ಮತ್ತು 2016-2017 ಅವಧಿಯಲ್ಲಿ ತಮಿಳುನಾಡಿನ 6ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 2017ರ ಆಗಸ್ಟ್‌ 21ರಿಂದ 2021ರ ಮೇ 6ರವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಪನ್ನೀರ್‌ಸೆಲ್ವಂ ಎಐಎಡಿಎಂಕೆ ರಾಜಕೀಯ ಪಕ್ಷದ ಹಿರಿಯ ನಾಯಕ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಜೆ ಜಯಲಲಿತಾ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಜಯಲಲಿತಾ ಅವರು ರಾಜೀನಾಮೆ ನೀಡಿದ ನಂತರ ಸೆಲ್ವಂ ಅವರು ಎರಡು ಅವಧಿಗೆ ಮುಖ್ಯಮಂತ್ರಿಯಾದರು. ಜಯಲಲಿತಾ ಅವರ ಮರಣದ ನಂತರ ಮೂರನೇ ಅವಧಿಗೆ ಮುಖ್ಯಮಂತ್ರಿಯಾದರು. ಎರಡು ತಿಂಗಳ ನಂತರ ಅದು ಕೊನೆಗೊಂಡಿತು. ಬಳಿಕ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಆರಿಸಲಾಯಿತು. ಸೆಲ್ವಂ ಅವರು 2017ರ ಆಗಸ್ಟ್ 21ರಿಂದ ತಮಿಳುನಾಡಿನ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.   

2022ರ ಜುಲೈ 11ರಂದು ಎಐಎಡಿಎಂಕೆ ಸಾಮಾನ್ಯ ಮಂಡಳಿಯು ಒ. ಪನ್ನೀರ್‌ಸೆಲ್ವಂ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಪಕ್ಷದ ಖಜಾಂಚಿ ಮತ್ತು ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದ ಉಚ್ಚಾಟಿಸಿತು. ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಒ ಪನ್ನೀರ್‌ಸೆಲ್ವಂ ಅವರ ಉತ್ತರಾಧಿಕಾರಿಯಾಗಿ ದಿಂಡಿಗಲ್ ಶ್ರೀನಿವಾಸನ್ ಅವರನ್ನು ಪಕ್ಷದ ಖಜಾಂಚಿಯಾಗಿ ನೇಮಿಸಿದ್ದಾರೆ.

ಪನ್ನೀರ್‌ಸೆಲ್ವಂ ಅವರು ಪ್ರಸ್ತುತ ತೇಣಿ ಜಿಲ್ಲೆಯ ಬೋಡಿನಾಯಕನೂರ್ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ.  ಪತ್ನಿ 2021ರ ಸೆಪ್ಟೆಂಬರ್‌ 1ರಂದು ಹೃದಯಾಘಾತದಿಂದ ನಿಧನರಾದರು.

ರಾಜಕೀಯ ವೃತ್ತಿಜೀವನ

1973ರಲ್ಲಿ ಎಐಎಡಿಎಂಕೆಯ ಕಾರ್ಯಕರ್ತನಾಗಿ ಪನ್ನೀರ್‌ಸೆಲ್ವಂ ಅವರು ತಮ್ಮ ರಾಜಕೀಯ ಜೀವನವನ್ನು ಪೆರಿಯಾಕುಲಂನಿಂದ ಆರಂಭಿಸಿದರು. 1996 ರಿಂದ 2001ರವರೆಗೆ ಪೆರಿಯಾಕುಲಂ ಪುರಸಭೆಯ ಅಧ್ಯಕ್ಷರಾಗಿದ್ದರು.

2001ರಲ್ಲಿ ತಮಿಳುನಾಡಿನ 6ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸೆಲ್ವಂ ಅವರು ಮುಖ್ಯಮಂತ್ರಿಯಾಗಿದ್ದಾಗ ಜಯಲಲಿತಾ ನಿರ್ವಹಿಸುತ್ತಿದ್ದ ಕೈಗೊಂಬೆ ಎಂದು ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಅವರ ಅಧಿಕಾರಾವಧಿಯು 2002ರ ಮಾರ್ಚ್‌ 1ರವರೆಗೆ ಮಾತ್ರ ನಡೆಯಿತು. ಅಂದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜಯಲಲಿತಾ ಅವರು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಸೆಲ್ವಂ ಅವರು ಆಂಡಿಪಟ್ಟಿ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಜಯಿಸಿದರು. 2002ರ ಮಾರ್ಚ್‌ 2ರಿಂದ 2003ರ ಡಿಸೆಂಬರ್‌ 13ರವರೆಗೆ ಲೋಕೋಪಯೋಗಿ ಸಚಿವರಾಗಿದ್ದರು.  

ವಿರೋಧ ಪಕ್ಷದ ನಾಯಕ  

2006ರ ಮೇನಲ್ಲಿ  ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ, ಪನ್ನೀರ್‌ಸೆಲ್ವಂ ಅವರು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ತಮಿಳುನಾಡು ವಿಧಾನಸಭೆಯಲ್ಲಿ ಸುಮಾರು ಒಂಭತ್ತು ದಿನಗಳ ಕಾಲ ವಿರೋಧ ಪಕ್ಷದ ನಾಯಕರಾಗಿದ್ದರು. ಆ ಚುನಾವಣೆಯಲ್ಲಿ ಪೆರಿಯಾಕುಲಂನಿಂದ ತಮಿಳುನಾಡು ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು.

2014- 2015ರವರೆಗೆ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. 2015ರ ಮೇ 22ರಂದು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.  

ರಾಜೀನಾಮೆ ನೀಡಿದ ಒಂದು ವರ್ಷದ ನಂತರ 2016ರ ಮೇ 23ರಂದು ಅವರು ಜಯಲಲಿತಾ ಅವರ ಸರ್ಕಾರದಲ್ಲಿ ಹಣಕಾಸು ಮತ್ತು ಲೋಕೋಪಯೋಗಿ ಇಲಾಖೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

2016ರ ಡಿಸೆಂಬರ್‌ 6ರಂದು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಿಧನದ ನಂತರ ಪನ್ನೀರ್‌ಸೆಲ್ವಂ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಡಿಸೆಂಬರ್ 10ರಂದು ಅವರು ಪೂರ್ಣಾವಧಿಯ ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಸಚಿವ ಸಂಪುಟ ಸಭೆ ನಡೆಸಿದರು. 2017ರ ಫೆಬ್ರವರಿ 6ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.  
2017ರ ಫೆಬ್ರವರಿ 14ರಂದು ಪಕ್ಷದ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ಅವರು ಎಐಎಡಿಎಂಕೆಯಿಂದ ಸೆಲ್ವಂ ಅವರನ್ನು ಹೊರಹಾಕಿದರು.

2017ರ ಆಗಸ್ಟ್‌ 21ರಂದು ಅಂದಿನ ಮುಖ್ಯಮಂತ್ರಿ ಇಪಿಎಸ್ ಬಣದೊಂದಿಗೆ ಪಕ್ಷವನ್ನು ವಿಲೀನಗೊಳಿಸಿ ತಮಿಳುನಾಡಿನ ಉಪಮುಖ್ಯಮಂತ್ರಿಯಾಗಿ ಪನ್ನೀರ್‌ಸೆಲ್ವಂ ಪ್ರಮಾಣವಚನ ಸ್ವೀಕರಿಸಿದರು.

2021ರ ಮೇನಲ್ಲಿ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ, ಪನ್ನೀರ್‌ಸೆಲ್ವಂ ಅವರು ಬೋಡಿನಾಯಕನೂರ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. 2021ರ ಜೂನ್‌ 14 ರಂದು  ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿ ಆಯ್ಕೆಯಾದರು.

ನಿಮಗೆ ಏನು ಅನ್ನಿಸ್ತು?
0 ವೋಟ್