ಎನ್‌ಐಎ ದಾಳಿ | ಎನ್‌ಐಎ ಅಧಿಕಾರಿಗಳ ಜತೆ ಅಮಿತ್ ಶಾ ಸಭೆ, ಭಯೋತ್ಪಾದನೆ ನಿಗ್ರಹ‌ ಕ್ರಮಗಳ ಪರಿಶೀಲನೆ

Amit Shah
  • ಎಸ್‌ಡಿಪಿಐ ಜಿಲ್ಲಾ ಕಚೇರಿ, ಮುಖಂಡರ ನಿವಾಸದ ಮೇಲೆ ಎನ್ಐಎ ದಾಳಿ
  • ಕೇಂದ್ರ ಗೃಹ ಸಚಿವ, ಭದ್ರತಾ ಸಲಹೆಗಾರರ ನೇತೃತ್ವದಲ್ಲಿ ಮಹತ್ವದ ಸಭೆ

ದೇಶದಲ್ಲಿ 10 ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ), ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಗುರುವಾರ (ಸೆ.22) ನಡೆಸಿದ ದಾಳಿ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭದ್ರತಾ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. 

ಉನ್ನತ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವೆಲ್‌, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಮತ್ತು ಎನ್‌ಐಎನ ಮಹಾ ನಿರ್ದೇಶಕ ದಿನಕರ್‍‌ ಗುಪ್ತಾ ಭಾಗವಹಿಸಿದ್ದರು. 

ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವವರನ್ನು ಎದುರಿಸಲು ರಾಷ್ಟ್ರವ್ಯಾಪಿ ಕೈಗೊಂಡ ಕ್ರಮಗಳ ಕುರಿತು ಅಮಿತ್ ಶಾ ಸಭೆಯಲ್ಲಿ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. 

ಭಯೋತ್ಪಾದನೆಗೆ ಕುಮ್ಮಕ್ಕು ಆರೋಪದಡಿ ದೇಶದ 10 ರಾಜ್ಯಗಳಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ, ಎಸ್‌ಡಿಪಿಐ ಮತ್ತು ಇತರೆ ಸಂಘಟನೆಗಳ ಮುಖಂಡರ ನಿವಾಸಗಳ ಮೇಲೆ ಎನ್‌ಐಎ ಮತ್ತು ಇ.ಡಿ ಅಧಿಕಾರಿಗಳು ಗುರುವಾರ ನಸುಕಿನ ಜಾವ ದಾಳಿ ನಡೆಸಿದ್ದರು. 

ಅಧಿಕಾರಿಗಳು ಇದುವರೆಗೂ 106ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೇರಳದಲ್ಲಿ 22 ಮತ್ತು ಕರ್ನಾಟಕದಲ್ಲಿ 20 ಮಂದಿಯನ್ನು ಬಂಧನ ಮಾಡಲಾಗಿದೆ.  

ಮಹಾರಾಷ್ಟ್ರ ಮತ್ತು ಕರ್ನಾಟಕ ತಲಾ 20, ತಮಿಳುನಾಡು 10, ಅಸ್ಸಾಂ 9, ಉತ್ತರ ಪ್ರದೇಶ 8, ಆಂಧ್ರಪ್ರದೇಶ 5, ಮಧ್ಯಪ್ರದೇಶ 4, ಪುದುಚೇರಿ ಮತ್ತು ದೆಹಲಿಯಲ್ಲಿ ತಲಾ 3 ಮತ್ತು ರಾಜಸ್ಥಾನ ಇಬ್ಬರನ್ನು ಬಂಧಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. 

ಇದುವರೆಗಿನ ಅತಿದೊಡ್ಡ ತನಿಖಾ ಪ್ರಕ್ರಿಯೆ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಮಹಾರಾಷ್ಟ್ರದ ಔರಂಗಾಬಾದ್‌ನ ಪಿಎಫ್‌ಐ ಕಚೇರಿಯನ್ನು ಭಯೋತ್ಪಾದನೆ ನಿಗ್ರಹ ದಳವು (ಎಟಿಎಸ್) ಸೀಲ್ ಮಾಡಿದೆ. 

ಈ ಸುದ್ದಿ ಓದಿದ್ದೀರಾ? ವಿಶೇ‍ಷ ಅಧಿವೇಶನ ರದ್ದು | ಸಭೆ ಬಳಿಕ, ಆಮ್ ಆದ್ಮಿ ಶಾಸಕರಿಂದ ರಾಜಭವನ ಚಲೋ

ಸಂಘಟನೆಗೆ ಸಂಬಂಧಿಸಿದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ದಾಖಲೆಗಳು, ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. 

ಆಂಧ್ರ ಪ್ರದೇಶದ ಎಸ್‌ಡಿಪಿಐ ಮುಖಂಡನ ನಿವಾಸದ ಮೇಲಿನ ದಾಳಿ ಖಂಡಿಸಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪಕ್ಷದ ಕಚೇರಿ ಹಾಗೂ ಜಿಲ್ಲಾ ಘಟಕದ ಪ್ರಮುಖರ ನಿವಾಸದ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ ಎಸ್‌ಡಿಪಿಐ ಕಾರ್ಯಕರ್ತರು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್