ನೀತಿ ಆಯೋಗ | ಮೋದಿ ನೇತೃತ್ವದಲ್ಲಿ ಸಭೆ, ಗೈರಾದ ಕೆಸಿಆರ್, ನಿತೀಶ್ ಕುಮಾರ್

  • ಸಂಜೆ 4 ಗಂಟೆಗೆ ಮುಕ್ತಾಯವಾಗಲಿರುವ ಸಭೆ
  • ಸಭೆ ಬಹಿಷ್ಕರಿಸಿದ ತೆಲಂಗಾಣ ಮುಖ್ಯಮಂತ್ರಿ

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನೀತಿ ಆಯೋಗದ ಏಳನೆಯ ಆಡಳಿತ ಮಂಡಳಿಯ ಸಭೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ.

2019ರ ಜುಲೈ ಬಳಿಕ ನಡೆಯುತ್ತಿರುವ ಆಡಳಿತ ಮಂಡಳಿಯ ಮೊದಲ ಸಭೆ ಇದಾಗಿದೆ. ಇಂದಿನ (ಆಗಸ್ಟ್‌ 7) ನೀತಿ ಆಯೋಗದ ಸಭೆಯು ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು, ಕೃಷಿ ಸಮುದಾಯದಲ್ಲಿ ಸ್ವಾವಲಂಬನೆ, ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಬೆಳೆ ವೈವಿಧ್ಯೀಕರಣ ವಿಷಯಗಳ ಕಾರ್ಯಸೂಚಿ ಒಳಗೊಂಡಿದೆ.

ಆಡಳಿತ ಮಂಡಳಿಯ ಸಭೆಯು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಹಾಗೂ ಕೇಂದ್ರದ ಮಂತ್ರಿಗಳನ್ನು ಒಳಗೊಂಡಿರುತ್ತದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಸಹಯೋಗ ಸಾಧಿಸುವ ಪ್ರಯತ್ನವಾಗಿ ನೀತಿ ಆಯೋಗದ ಸಭೆ ನಡೆಸಲಾಗುವುದು ಎಂದು ಈ ಹಿಂದೆ ಪ್ರಧಾನಿ ಕಚೇರಿ ಹೇಳಿತ್ತು.

ಭಾರತವು ಮುಂದಿನ ವರ್ಷ ಜಿ20 ಪ್ರೆಸಿಡೆನ್ಸಿ ಮತ್ತು ಶೃಂಗಸಭೆಯನ್ನು ಆಯೋಜಿಸುವುದರಿಂದ, ಭಾನುವಾರದ ಸಭೆಯು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂದು ನೀತಿ ಆಯೋಗ ಹೇಳಿದೆ.

ಸಭೆಗೆ ಗೈರಾದ ಕೆಸಿಆರ್, ನಿತೀಶ್ ಕುಮಾರ್

ನೀತಿ ಆಯೋಗದ ಆಡಳಿತ ಮಂಡಳಿಯ ಸಭೆಯನ್ನು ಬಹಿಷ್ಕರಿಸಿರುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಶನಿವಾರ ಘೋಷಿಸಿದ್ದಾರೆ.

“ನೀತಿ ಆಯೋಗ ಯಾವುದೇ ರಚನಾತ್ಮಕ ಉದ್ದೇಶ ಹೊಂದಿಲ್ಲ, ರಾಜ್ಯದ ಮುಖ್ಯಮಂತ್ರಿಗಳಿಗೆ ಅಭಿಪ್ರಾಯ ಹಂಚಿಕೊಳ್ಳಲು ಕೆಲವು ನಿಮಿಷಗಳಷ್ಟೇ ಸಮಯವಕಾಶ ನೀಡುತ್ತಾರೆ” ಎಂದು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಕೆಸಿಆರ್ ಪತ್ರ ಬರೆದಿದ್ದು, ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ರಾಷ್ಟ್ರ ಅಭಿವೃದ್ಧಿ ಸಾಧ್ಯ. ಆದರೆ ಕೇಂದ್ರ ಸರ್ಕಾರ ಬಿಜೆಪಿಯೇತರ ರಾಜ್ಯಸರ್ಕಾರಗಳ ಕಡೆಗೆ ತಾರತಮ್ಯ ಧೋರಣೆ ತೋರುತ್ತಿದೆ ಎಂದು ಆರೋಪಿಸಿ ಬಹಿಷ್ಕಾರಕ್ಕೆ ಕಾರಣ ನೀಡಿದ್ದಾರೆ.

ಕೆಸಿಆರ್ ಆರೋಪ ತಳ್ಳಿಹಾಕಿರುವ ನೀತಿ ಆಯೋಗ, ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಸಂಸ್ಥೆಯು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕೇಂದ್ರವು ತೆಲಂಗಾಣ ರಾಜ್ಯಕ್ಕೆ ಹಲವು ಆರ್ಥಿಕ ನೆರವು ನೀಡಿದೆ ಎಂದು ಹೇಳಿದೆ.

ಈ ಸುದ್ದಿ ಓದಿದ್ದೀರಾ? ಸಂಚಲನ ಸೃಷ್ಟಿಸಿದ ಮೋದಿ- ದೀದಿ ಭೇಟಿ| 45 ನಿಮಿಷ ಮೋದಿಯೊಂದಿಗೆ ಸಭೆ, ಬಾಕಿ ಅನುದಾನ ಕೋರಿದೆ ಎಂದ ಮಮತಾ!

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಇತ್ತೀಚೆಗೆ ಕೋವಿಡ್‌ನಿಂದ ಚೇತರಿಸಿಕೊಂಡಿರುವ ಕಾರಣ ಸಭೆಗೆ ಹಾಜರಾಗುತ್ತಿಲ್ಲ. 

ನೀತಿ ಆಯೋಗದ ಸಭೆಗೆ ಹಾಜರಾದ ಮುಖ್ಯಮಂತ್ರಿಗಳು

ಏತನ್ಮಧ್ಯೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಭೆಯಲ್ಲಿ ಹಾಜರಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಭೆಯಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪಂಜಾಬ್‌ನ ಯಾವೊಬ್ಬ ಪ್ರತಿನಿಧಿಯು, ನೀತಿ ಆಯೋಗ ಸಭೆಯಲ್ಲಿ ಭಾಗವಹಿಸಿಲ್ಲ. ಫೆಬ್ರವರಿ 2021ರಲ್ಲಿ ನಡೆದ ಹಿಂದಿನ ಆಡಳಿತ ಮಂಡಳಿಯ ಸಭೆಯಲ್ಲಿ ಗೈರಾಗಿದ್ದ ನಾಲ್ಕು ರಾಜ್ಯಗಳಲ್ಲಿ ಪಂಜಾಬ್ ರಾಜ್ಯವು ಸೇರಿದೆ.

4 ಗಂಟೆಗೆ ಸಭೆ ಮುಕ್ತಾಯಗೊಳ್ಳಲಿದ್ದು, ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಉಪಾಧ್ಯಕ್ಷರು ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ನಡೆಸುತ್ತಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್