ಬಿಹಾರ | ಬಿಜೆಪಿ ವಿರುದ್ಧ ಅಸಮಾಧಾನದ ಹೊಗೆ; ಮಂಗಳವಾರ ಜೆಡಿಯು ಸಭೆ ಕರೆದ ಸಿಎಂ ನಿತೀಶ್ ಕುಮಾರ್

Modi and Nitish Kumar
  • ಅನಾರೋಗ್ಯ ನೆಪದಲ್ಲಿ ನೀತಿ ಆಯೋಗದ ಸಭೆಯಿಂದ ದೂರ ಉಳಿದಿದ್ದ ಬಿಹಾರ ಸಿಎಂ
  • ಜೆಡಿಯು ಮತ್ತು ಬಿಜೆಪಿ ನಡುವೆ ಬಿರುಕುಂಟಾಗಿರುವ ಊಹಾಪೋಹ ಹರಡಿದೆ

ಆರ್‌ಸಿಪಿ ಸಿಂಗ್‌ ರಾಜೀನಾಮೆ ಹಿನ್ನೆಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗಸ್ಟ್‌ 9ರಂದು ಜನತಾ ದಳ (ಯುನೈಟೆಡ್)ನ ಎಲ್ಲ ಶಾಸಕರು ಮತ್ತು ಸಂಸದರ ಸಭೆ ಕರೆದಿದ್ದಾರೆ.

ಸರ್ಕಾರದ ಪ್ರಮುಖ ಸಭೆಗಳಿಂದ ದೂರ ಉಳಿಯುತ್ತಿರುವ ನಿತೀಶ್‌ ಕುಮಾರ್‌,  ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಿತ್ರಪಕ್ಷಗಳಿಗೆ ಸರಿಯಾದ ಪ್ರಾತಿನಿಧ್ಯ ನೀಡದೆ ಕಡೆಗಣಿಸುತ್ತಿರುವುದು ಅಸಮಾಧಾನಕ್ಕೆ ಪ್ರಮುಖ ಕಾರಣ ಎಂದು  'ಎನ್‌ಡಿಟಿವಿ' ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕಳೆದ ಅವರ ಮಾಜಿ ಜೆಡಿಯು ಸಹೋದ್ಯೋಗಿಯಾಗಿರುವ ಆರ್‌ಸಿಪಿ ಸಿಂಗ್‌ ಅವರಿಗೆ ರಾಜ್ಯಸಭಾ ಸ್ಥಾನ ನೀಡಲು ನಿರಾಕರಿಸಿತ್ತು. ಕಳೆದ ವರ್ಷ ನಿತೀಶ್ ಕುಮಾರ್ ಅವರನ್ನು ಸಮಾಲೋಚಿಸದೆ ಆರ್‌ಸಿಪಿ ಸಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

"ನಾನು ಕೇಂದ್ರ ಸಚಿವನಾಗದಂತೆ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ" ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಆರ್‌ಸಿಪಿ ಸಿಂಗ್ ಹೇಳಿದ್ದರು. 

ಜೆಡಿ(ಯು) ತೊರೆದ ಬಳಿಕ ಮಾತನಾಡಿದ್ದ ಆರ್‌ಸಿಪಿ ಸಿಂಗ್‌, "ಅಸೂಯೆಗೆ ಚಿಕಿತ್ಸೆ ಇಲ್ಲ. ನಿತೀಶ್ ಕುಮಾರ್ ಅವರು ತಮ್ಮ ಏಳೇಳು ಜನ್ಮದಲ್ಲೂ ಪ್ರಧಾನಿಯಾಗುವುದಿಲ್ಲ. ಜೆಡಿಯು ಮುಳುಗುವ ಹಡಗು" ಎಂದು ಟೀಕಿಸಿದ್ದರು.

"ಪಕ್ಷ ತೊರೆದ ಬಳಿಕ ಅಕ್ರಮ ಆಸ್ತಿ ವ್ಯವಹಾರಗಳ ಆರೋಪ ಹೊರಿಸಿ ತಮ್ಮ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ. ಇದು ನಿತೀಶ್‌ ಅವರ ಸಣ್ಣತನದ ನಡೆ" ಎಂದು ಸಿಂಗ್‌ ಹೇಳಿದ್ದಾರೆ.

"ಆರ್‌ಸಿಪಿ ಸಿಂಗ್ ರಾಜೀನಾಮೆ ನೀಡಿದ ನಂತರ ಯಾವುದೇ ಪ್ರಾತಿನಿಧ್ಯವಿಲ್ಲದೆ ಉಳಿದಿರುವ ಕೇಂದ್ರ ಸಚಿವ ಸಂಪುಟವನ್ನು ಸೇರುವುದಿಲ್ಲ" ಎಂದು ಜೆಡಿ(ಯು) ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ (ಲಲ್ಲನ್) ಭಾನುವಾರ ಸ್ಪಷ್ಟಪಡಿಸಿದ್ದಾರೆ.

"ಆರ್‌ಸಿಪಿ ಸಿಂಗ್ ಅವರ ದೇಹ ಮಾತ್ರ ಜೆಡಿಯುನಲ್ಲಿತ್ತು. ಆದರೆ ಅವರ ಆತ್ಮ ಬೇರೆಲ್ಲೋ ಇತ್ತು. ಆದ್ದರಿಂದ ಅವರು ಪಕ್ಷದಿಂದ ನಿರ್ಗಮಿಸುವುದು ನಿರೀಕ್ಷಿತವಾಗಿತ್ತು. 2019ರ ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿಯ ಒಕ್ಕೂಟ ಸೇರದಿರಲು ನಿರ್ಧರಿಸಿದ್ದೆವು. ನಾವು ನಮ್ಮ ನಿಲುವಿಗೆ ಬದ್ಧರಾಗಿರುತ್ತೇವೆ" ಎಂದು ಲಲ್ಲನ್‌ ಹೇಳಿದ್ದಾರೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಗೈರು ಹಾಜರಾಗಿರುವುದರಿಂದ ಬಿಜೆಪಿ ಜತೆಗಿನ ಸಂಬಂಧ ಹಳಸಿದೆ ಎಂಬ ವದಂತಿಗಳನ್ನು ಅಲ್ಲಗಳೆದ ಅವರು, ಜೆಡಿಯು ಮತ್ತು ಬಿಜೆಪಿ ನಡುವೆ "ಎಲ್ಲವೂ ಚೆನ್ನಾಗಿದೆ" ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ, ರವಿವಾರ ದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಯಿಂದ ದೂರ ಉಳಿದಿದ್ದರು. ಸಭೆಯಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸೇರಿದಂತೆ 23 ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಆದರೆ ಮಂಗಳವಾರದ ಸಭೆಯ ನಂತರ ಜೆಡಿಯು ಮತ್ತು ಬಿಜೆಪಿ ಸಂಬಂಧದ ಸ್ಪಷ್ಟ ಚಿತ್ರಣ ಹೊರಬೀಳಬಹುದು ಎಂಬ ಚರ್ಚೆ ಶುರುವಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್