ಮುಂದಿನ ಚುನಾವಣೆಯ ವೇಳೆಗೆ ನಿತೀಶ್ ರಾಜಕೀಯದಿಂದ ದೂರ: ಸುಶೀಲ್ ಕುಮಾರ್ ಮೋದಿ

  • ಸಣ್ಣ ಪಕ್ಷಗಳನ್ನು ಒಗ್ಗೂಡಿಸುವಂತೆ ಅಮಿತ್ ಶಾ ಸೂಚನೆ
  • ಮಹಾರಾಷ್ಟ್ರ ಸರ್ಕಾರ ಬೀಳಿಸುವಲ್ಲಿ ತಮ್ಮ ಪಾಲಿಲ್ಲ: ಸ್ಪಷ್ಟನೆ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2025ರ ಚುನಾವಣೆಯ ವೇಳೆಗೆ ರಾಜಕೀಯದಿಂದ ದೂರ ಉಳಿಯುತ್ತಾರೆ ಎಂದು ಬಿಜೆಪಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮಂಗಳವಾರ ಹೇಳಿದ್ದಾರೆ.

“2025ರ ವೇಳೆಗೆ ನಿತೀಶ್ ಕುಮಾರ್ ಅವರಿಗೆ 75 ವರ್ಷ ವಯಸ್ಸಾಗಿರುತ್ತದೆ. ಹೀಗಾಗಿ ಅವರು ರಾಜಕೀಯದಿಂದ ದೂರ ಉಳಿಯುತ್ತಾರೆ. ವಿರೋಧ ಪಕ್ಷಗಳಲ್ಲಿ ಭವಿಷ್ಯ ಕಂಡುಕೊಳ್ಳಲು ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಳ್ಳುತ್ತಾರೆಂದು ಭಾವಿಸಿರಲಿಲ್ಲ” ಎಂದು ಹೇಳಿರುವುದಾಗಿ ʼನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ʼ ವರದಿ ಮಾಡಿದೆ.

ಈ ಹಿಂದೆ ನಿತೀಶ್ ಕುಮಾರ್ ಅವರು ಬಿಜೆಪಿಯು ಮಹಾರಾಷ್ಟ್ರದಂತೆಯೆ ಬಿಹಾರದಲ್ಲೂ ಸರ್ಕಾರ ಬೀಳಿಸಲು ಜೆಡಿಯು ಮಾಜಿ ನಾಯಕ ಆರ್‌ಸಿಪಿ ಸಿಂಗ್ ಅವರನ್ನು ಬಳಸಿಕೊಂಡಿದೆ ಎಂದು ಆರೋಪಿಸಿದ್ದರು. ಆರೋಪವನ್ನು ಸುಶೀಲ್ ಕುಮಾರ್ ಮೋದಿ ತಳ್ಳಿಹಾಕಿದ್ದಾರೆ.

“ಎರಡೂ ರಾಜ್ಯಗಳ ಹೋಲಿಕೆ ಅಸಮಂಜಸವಾದದ್ದು. ಮಹಾರಾಷ್ಟ್ರದಲ್ಲಿ ಉಸಿರುಗಟ್ಟುವ ಪರಿಸ್ಥಿತಿಯಿಂದ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಶಾಸಕರು ಹೊರಬಂದರು. ಅದರಲ್ಲಿ ನಮ್ಮ ಪಾತ್ರವೇನೂ ಇಲ್ಲ. ನಾವು ಬಿಹಾರದಲ್ಲಿ ಜೆಡಿಯು ಜತೆಗಿನ ಮೈತ್ರಿ ಧರ್ಮಕ್ಕೆ ಬದ್ದರಾಗಿದ್ದೆವು” ಎಂದು ಹೇಳಿದ್ದಾರೆ.

ರಾಷ್ಟ್ರೀಯ ಜನತಾ ದಳ ಮತ್ತು ಜನತಾ ದಳ (ಯುನೈಟೆಡ್) ನಡುವೆ ನಂಬಿಕೆಯ ಕೊರತೆ ಇರುವುದರಿಂದ 2024ರ ಬಿಹಾರದಲ್ಲಿ ಮೈತ್ರಿ ಉಳಿಯುವುದಿಲ್ಲ ಎಂದು ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಾವರ್ಕರ್ ದ್ವಿರಾಷ್ಟ್ರದ ಸಿದ್ಧಾಂತ ಹುಟ್ಟುಹಾಕಿದರು, ಜಿನ್ನಾ ಪರಿಪೂರ್ಣಗೊಳಿಸಿದರು| ಬಿಜೆಪಿ ವಿಡಿಯೊಗೆ ಜೈರಾಮ್ ತಿರುಗೇಟು

ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಳ್ಳುವುದಕ್ಕೆ ನಿತೀಶ್ ಕುಮಾರ್ ಅವರ ರಾಷ್ಟ್ರ ರಾಜಕಾರಣದ ಮಹಾತ್ವಾಕಾಂಕ್ಷೆಗಳೇ ಕಾರಣ ಎಂದು ಹೇಳಿದ್ದಾರೆ.

ಬಿಜೆಪಿಯ ಟಾರ್ಗೆಟ್‌ 2024ರ ಚುನಾವಣೆ

ಬಿಹಾರದಲ್ಲಿ ಮಹಾಘಟಬಂಧನ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಮತ್ತೊಂದೆಡೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರೊಂದಿಗೆ ಸಭೆ ನಡೆಸಿತು.

ಮುಂಬರುವ 2024 ರ ಚುನಾವಣೆಗಳ ಭವಿಷ್ಯದ ಕ್ರಮಗಳು ಮತ್ತು ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಬಿಜೆಪಿ ಚರ್ಚಿಸಿದೆ. ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ ಸರ್ಕಾರದ ವಿರುದ್ಧ ಆಕ್ರಮಣಕಾರಿ ಮತ್ತು ದಿಟ್ಟ ನಿಲುವು ತೆಗದುಕೊಳ್ಳಲು ಪಕ್ಷ ನಿರ್ಧರಿಸಿದೆ. 

ಬಿಹಾರದಲ್ಲಿ ಬಿಜೆಪಿಯಂತೆ ಯೋಚಿಸುವ ಸಮಾನ ಮನಸ್ಕ ಸಣ್ಣ ಪಕ್ಷಗಳನ್ನು ಎನ್‌ಡಿಎ ಜೊತೆಗೆ ಒಗ್ಗೂಡಿಸುವಂತೆ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ 40 ಲೋಕಸಭಾ ಸ್ಥಾನಗಳಿವೆ. ಆ ಪೈಕಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ತೆಗೆದುಕೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್