ಮತ್ತೆ ರಾಜಕೀಯಕ್ಕೆ ಬರುವ ಆಲೋಚನೆಯೇ ಇಲ್ಲ: ಸೂಪರ್‌ಸ್ಟಾರ್ ರಜನಿಕಾಂತ್

Rajanikanth and TN Governer
  • ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರನ್ನು ಭೇಟಿಯಾದ ನಟ 
  • ಕನ್ನಡ ನಟ ಶಿವರಾಜ್‌ಕುಮಾರ್ ಜೊತೆ ಜೈಲರ್ ಸಿನಿಮಾದ ತಯಾರಿಯಲ್ಲಿ ರಜನಿಕಾಂತ್

ಮತ್ತೆ ರಾಜಕೀಯಕ್ಕೆ ಬರುವ ಯಾವುದೇ ಆಲೋಚನೆಯೇ ಇಲ್ಲ ಎಂದಿರುವ ನಟ ರಜನಿಕಾಂತ್, ಮತ್ತೆ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಎಲ್ಲ ವದಂತಿಗಳನ್ನು ತಳ್ಳಿಹಾಕಿದ್ದಾರೆ. 

ಸೋಮವಾರ ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರನ್ನು ಭೇಟಿಯಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮತ್ತೆ ರಾಜಕೀಯದಲ್ಲಿ ಸಕ್ರಿಯವಾಗುವ ವದಂತಿಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.

ರಾಜ್ಯಪಾಲರೊಂದಿಗೆ ನಿಮ್ಮ ಭೇಟಿಯ ಉದ್ದೇಶ ಏನು? ನೀವು ರಾಜಕೀಯಕ್ಕೆ ಮರಳಲು ಯೋಚಿಸುತ್ತಿದ್ದೀರಾ ಎಂಬ ಪ್ರಶ್ನೆಗೆ, "ಇಲ್ಲ" ಎಂದು ಉತ್ತರಿಸಿದ್ದಾರೆ. 

ನೀವು ಮತ್ತು ರಾಜ್ಯಪಾಲ ಆರ್‌ಎನ್ ರವಿ ಮುಂಬರುವ ಸಂಸತ್ತಿನ ಚುನಾವಣೆಯ ಬಗ್ಗೆ ಏನಾದರೂ ಚರ್ಚಿಸಿದ್ದೀರಾ? ಎಂದು ಕೇಳಿದಾಗ ಪ್ರತಿಕ್ರಿಯಿಸಿದ ರಜನಿಕಾಂತ್, "ಭೇಟಿಯ ವೇಳೆ ರಾಜಕೀಯದ ಬಗ್ಗೆ ಸಾಕಷ್ಟು ಮಾತನಾಡಿದ್ದೇವೆ. ಆದರೆ, ಮಾಧ್ಯಮಗಳಿಗೆ ಏನನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ" ಎಂದಿದ್ದಾರೆ.

ರಾಜ್ಯಪಾಲರನ್ನು ಹೊಗಳಿದ ರಜನಿಕಾಂತ್‌, "ತಮಿಳುನಾಡಿನ ಆಧ್ಯಾತ್ಮಿಕತೆ ಮತ್ತು ನಂಬಿಕೆಗಳನ್ನು ಅವರು ಪ್ರೀತಿಸುತ್ತಾರೆ. ಅವರು ತಮಿಳುನಾಡಿನ ಜನರ ಅನುಕೂಲಕ್ಕಾಗಿ ತಮ್ಮ ಶಕ್ತಿಮೀರಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.

ಹಾಲು ಮತ್ತು ಮೊಸರಿನಂತಹ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ರಜನಿಕಾಂತ್ ಪ್ರತಿಕ್ರಿಯಿಸಲು ನಿರಾಕರಿಸಿದರು.

"ತಮ್ಮ ಮುಂದಿನ ಚಿತ್ರದ ಶೂಟಿಂಗ್ ಇದೇ ತಿಂಗಳ 15 ಅಥವಾ 22 ರಂದು ಚಿತ್ರೀಕರಣ ಪ್ರಾರಂಭವಾಗಬಹುದು" ಎಂದು ರಜನಿಕಾಂತ್ ಹೇಳಿದ್ದಾರೆ.

'ಜೈಲರ್' ಎಂಬ ಹೊಸ ಸಿನಿಮಾದಲ್ಲಿ ರಜನಿಕಾಂತ್ ಅವರು ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್