ಅಲ್ಪಸಂಖ್ಯಾತರ ಕಲ್ಯಾಣ ಅನುದಾನ| ಸದ್ದಿಲ್ಲದೆ ಕಡಿತಗೊಳಿಸಿದ ಕೇಂದ್ರ ಸರ್ಕಾರ!

Narendra Modi and Amit Shah
  • ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದ ಅಸ್ಸಾಂನ ಸಂಸದ ಎಂ. ಬದ್ರುದ್ದೀನ್ ಅಜ್ಮಲ್
  • ಮಾಹಿತಿ ನೀಡಿದ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರ ಸಚಿವೆ ಸ್ಮೃತಿ ಇರಾನಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಮೊತ್ತವನ್ನು ಕಡಿತಗೊಳಿಸಿದೆ. ಹೀಗೆಂದು ಸಂಸತ್ತಿನಲ್ಲಿ ಕಳೆದ ವಾರ ಮಾಹಿತಿ ಬಹಿರಂಗಪಡಿಸಿದವರು ಸ್ವತಃ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆಯಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿರುವ ಸ್ಮೃತಿ ಇರಾನಿ.

ಸಂಸತ್ತಿಗೆ ಇತ್ತೀಚೆಗೆ ನೀಡಿದ ಲಿಖಿತ ಉತ್ತರದಲ್ಲಿ, ಸ್ಮೃತಿ ಇರಾನಿ ಅವರು 2019-20 ಮತ್ತು 2021-2022ರ ನಡುವೆ ಹಲವಾರು ಅಲ್ಪಸಂಖ್ಯಾತ-ಕೇಂದ್ರಿತ ಕಾರ್ಯಕ್ರಮಗಳಿಗೆ ನಿಗದಿಪಡಿಸಿದ ಹಣವನ್ನು ಸರ್ಕಾರ ಕಡಿತ ಮಾಡಿದೆ ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಪ್ರಾರಂಭಿಸಿದ ಹೆಚ್ಚಿನ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಸಂಖ್ಯೆ ಕೂಡ 2019-20ರಿಂದ ಇಳಿಮುಖವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Image
Smriti Irani and Badruddin Ajmal

2019-20 ಮತ್ತು 2021-22ರ ನಡುವೆ, ಕೆಲವು ಯೋಜನೆಗಳು ಇತರರಿಗಿಂತ ಹೆಚ್ಚು ಹಣವನ್ನು ಪಡೆದಿವೆ. ಆದರೆ ಕಡಿಮೆ ಜನರು ಅವುಗಳಿಂದ ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಸಂಸತ್ತಿನಲ್ಲಿ ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ ಸಂಸದ ಎಂ. ಬದ್ರುದ್ದೀನ್ ಅಜ್ಮಲ್ ಅವರು, 'ಅಲ್ಪಸಂಖ್ಯಾತರ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ರಾಷ್ಟ್ರೀಯ ಕಾರ್ಯಕ್ರಮಗಳ ಅಡಿಯಲ್ಲಿ ನಿಗದಿಪಡಿಸಿದ, ಬಳಸಿದ ನಿಧಿಗಳು ಮತ್ತು ಸ್ವೀಕರಿಸುವವರ ಸಂಖ್ಯೆಯ ಬಗ್ಗೆ ಅಲ್ಪಸಂಖ್ಯಾತ ಇಲಾಖೆಯಿಂದ ಕೇಳಿದ್ದ ಚುಕ್ಕೆರಹಿತ ಪ್ರಶ್ನೆಗೆ ಸ್ಮೃತಿ ಇರಾನಿ ಉತ್ತರಿಸುತ್ತಾ ಈ ಮಾಹಿತಿ ನೀಡಿದ್ದಾರೆ ಎಂದು 'ಮುಸ್ಲಿಂ ಮಿರರ್' ವೆಬ್‌ಸೈಟ್ ವರದಿ ಮಾಡಿದೆ.

ಸ್ಮೃತಿ ಇರಾನಿಯವರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆಯಾಗಿ 2022ರ ಜುಲೈ 7ರಂದು ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳುವ ಮುನ್ನ ಮುಖ್ತಾರ್ ಅಬ್ಬಾಸ್ ನಖ್ವಿಯವರು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಬಳಿಕ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿಯೂ ಸ್ಮೃತಿ ಇರಾನಿ ಮುಂದುವರಿದಿದ್ದಾರೆ.

ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು, ಮುಸ್ಲಿಮರು, ಪಾರ್ಸಿಗಳು ಮತ್ತು ಜೈನರನ್ನು ಸರ್ಕಾರವು ಅಲ್ಪಸಂಖ್ಯಾತ ಸಮುದಾಯವನ್ನಾಗಿ ಗುರುತಿಸಿದೆ. "ವಿವಿಧ ಉಪಕ್ರಮಗಳಿಗಾಗಿ ಭೌತಿಕ ಮತ್ತು ಆರ್ಥಿಕ ಸಾಧನೆ" ಎಂಬ ಶೀರ್ಷಿಕೆಯಡಿಯಲ್ಲಿ ನೀಡಿದ ಮಾಹಿತಿಯಂತೆ ಕಳೆದ ಮೂರು ವರ್ಷಗಳಲ್ಲಿ ಫಲಾನುಭವಿಗಳು ಮತ್ತು ಹಂಚಿಕೆಗಳಲ್ಲಿ ಇಳಿಕೆ ಕಂಡಿರುವುದಾಗಿ ಲಿಖಿತವಾಗಿ ಸಂಸತ್ತಿನಲ್ಲಿ ಉತ್ತರಿಸಿದರು.

2019-20 ಮತ್ತು 2021-22ರ ದತ್ತಾಂಶವು ಅಲ್ಪಸಂಖ್ಯಾತರಿಗೆ ನಿಗದಿಪಡಿಸಿದ್ದ ಅನುದಾನ ಮತ್ತು ಫಲಾನುಭವಿಗಳು ಕಡಿಮೆಯಾಗಿರುವುದನ್ನು ಬಹಿರಂಗಪಡಿಸಿದೆ.

"2022–2023ರಲ್ಲಿ ಐದು ಉದ್ಯೋಗ ಕಾರ್ಯಕ್ರಮಗಳಾದ ಸೀಖೋ ಔರ್ ಕಾಮಾವೋ, ಉಸ್ತಾದ್, ಹಮಾರಿ ಧರೋಹರ್, ನಯೀ ರೋಶ್ನಿ ಮತ್ತು ನಯೀ ಮಂಝಿಲ್ ಅನ್ನು ಪ್ರಧಾನಮಂತ್ರಿ ವಿರಾಸತ್ ಕಾ ಸಂವರ್ಧನ್ (PM VIKAS) ಎಂದು ಕರೆಯಲಾಗುವ ಒಂದು ಕಾರ್ಯಕ್ರಮಕ್ಕೆ ಸಂಯೋಜಿಸಲಾಗುವುದು" ಎಂದು ಸ್ಮೃತಿ ಇರಾನಿ ಹೇಳಿಕೆ ನೀಡಿದ್ದಾರೆ.

'ನಯೀ ಮಂಝಿಲ್' ಯೋಜನೆಯಡಿಯಲ್ಲಿ ಫಲಾನುಭವಿಗಳ ಸಂಖ್ಯೆಯು 2019-20ರಲ್ಲಿ 22,359 ಇತ್ತು. ಆದರೆ ನಾಟಕೀಯ ಬೆಳವಣಿಗೆಯಲ್ಲಿ 2021-2022ರಲ್ಲಿ 5,312ಕ್ಕೆ ಇಳಿಕೆಯಾಗಿದೆ.

ಮೌಲಾನಾ ಆಝಾದ್ ರಾಷ್ಟ್ರೀಯ ಫೆಲೋಶಿಪ್ ಯೋಜನೆಯ ಫಲಾನುಭವಿಗಳಲ್ಲಿ ಇದೇ ರೀತಿಯ ಇಳಿಕೆ ಕಂಡುಬಂದಿದೆ. ಇದು 2019-20ರಲ್ಲಿ 1,251ರಿಂದ 2021-20ರಲ್ಲಿ 1,075 ಕ್ಕೆ ಏರಿತು. ಎರಡು ವರ್ಷಗಳ ಅವಧಿಯಲ್ಲಿ, ಈ ಯೋಜನೆಯಡಿ ಬಿಡುಗಡೆಯಾದ ಅಥವಾ ಮಂಜೂರಾದ ಹಣದ ಮೊತ್ತವು 100 ಕೋಟಿ ರೂ.ಗಳಿಂದ 74 ಕೋಟಿ ರೂ.ಗೆ ಇಳಿದಿದೆ. ಯುಜಿಸಿ-ಎನ್‌ಇಟಿ ಅಥವಾ ಜಂಟಿ ಸಿಎಸ್‌ಐಆರ್ ಯುಜಿಸಿ-ಎನ್‌ಇಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮೌಲಾನಾ ಆಝಾದ್ ರಾಷ್ಟ್ರೀಯ ಫೆಲೋಶಿಪ್‌ಗೆ ಅರ್ಹರಾಗಿರುತ್ತಾರೆ. 

'ನಯಾ ಸವೇರಾ' ಫೆಲೋಶಿಪ್ ಕಾರ್ಯಕ್ರಮದಲ್ಲಿಯೂ ಇಳಿಕೆ ಕಂಡುಬಂದಿದ್ದು, 2019–20ರಲ್ಲಿ 9,580ರಿಂದ 2021–2022 ರಲ್ಲಿ 5,140ಕ್ಕೆ ಇಳಿಸಲಾಗಿದೆ. ವಾರ್ಷಿಕವಾಗಿ ₹6 ಲಕ್ಷಕ್ಕಿಂತ ಹೆಚ್ಚು ಆದಾಯವಿಲ್ಲದ ಕುಟುಂಬಗಳಿಂದ ಬರುವ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಅಡಿಯಲ್ಲಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ಉಚಿತ ತರಬೇತಿಗೆ ಅರ್ಹರಾಗಿರುತ್ತಾರೆ.

9ನೇ ತರಗತಿಯಿಂದ 12 ನೇ ತರಗತಿಗಳಲ್ಲಿ ಕಲಿಯುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ ನೀಡಲಾಗುವ ಬೇಗಂ ಹಝರತ್ ಮಹಲ್ ರಾಷ್ಟ್ರೀಯ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಮೀಸಲಿಟ್ಟ ಹಣದ ಮೊತ್ತದಲ್ಲೂ ಕಡಿಮೆ ಮಾಡಿರುವುದು ಅಂಕಿ-ಅಂಶದಿಂದ ತಿಳಿದು ಬಂದಿದೆ. ಕಳೆದ ಎರಡು ವರ್ಷಗಳಲ್ಲಿ 165.20 ಕೋಟಿ ರೂಪಾಯಿಗಳಿಂದ 91.60 ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ. 2019–20ರಲ್ಲಿ 2.95 ಲಕ್ಷದಷ್ಟಿದ್ದ ಫಲಾನುಭವಿಗಳ ಸಂಖ್ಯೆಯು 2021–2022ರಲ್ಲಿ 1.65 ಲಕ್ಷಕ್ಕೆ ಗಮನಾರ್ಹವಾಗಿ ಕಡಿಮೆಯಾಗಿದೆ.

ಏರಿಕೆ ಕಂಡ ಫಲಾನುಭವಿಗಳ ಸಂಖ್ಯೆ; ಆದರೂ ಅನುದಾನ ಕಡಿತ

ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟಿರುವ ಕೆಲವು ಯೋಜನೆಗಳಲ್ಲಿ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿರುವುದು ಅಂಕಿ ಅಂಶದಿಂದ ತಿಳಿದು ಬಂದಿದೆ. ಆದರೆ 2019-20 ಮತ್ತು 2021-22 ರ ನಡುವೆ ಬಿಡುಗಡೆಯಾದ ಅಥವಾ ಮಂಜೂರಾದ ಅನುದಾನ ಕಡಿಮೆಯಾಗಿದೆ ಎಂದು ಸಚಿವರು ನೀಡಿರುವ ಅಂಕಿ-ಸಂಖ್ಯೆಯಿಂದ ತಿಳಿದು ಬಂದಿದೆ.

ಉದಾಹರಣೆಗೆ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿದ್ಯಾರ್ಥಿವೇತನ ಕಾರ್ಯಕ್ರಮವು ರೂ. 2019–20ರಲ್ಲಿ 1,424.56 ಕೋಟಿ ರೂ. ಇದ್ದರೆ, 2021–22ರಲ್ಲಿ 1,329.17 ಕೋಟಿ ರೂ.ಗೆ ಇಳಿಸಲಾಗಿದೆ. ಆದಾಗ್ಯೂ, ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಂಖ್ಯೆಯು 2019–20ರಲ್ಲಿ 55.68 ಲಕ್ಷದಿಂದ 2021–2022ರಲ್ಲಿ 57.10 ಲಕ್ಷಕ್ಕೆ ಏರಿಕೆಯಾಗಿದೆ.

ಅದೇ ರೀತಿ, ಯುಪಿಎಸ್‌ಸಿ, ಎಸ್‌ಎಸ್‌ಸಿ ಮತ್ತು ಪಿಎಸ್‌ಸಿ ಪರೀಕ್ಷೆಗೆ ಹಾಜರಾಗುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಬೆಂಬಲಿಸುವ 'ನಯೀ ಉಡಾನ್' ಯೋಜನೆಯಲ್ಲಿ, ಬಿಡುಗಡೆಯಾದ ಅಥವಾ ಮಂಜೂರಾದ ಹಣವು 2019-20ರಲ್ಲಿ 8.01 ಕೋಟಿಯಿಂದ 2021-22ರಲ್ಲಿ 7.97 ಕೋಟಿಗೆ ಇಳಿದಿದೆ. ಅದೇ ಅವಧಿಯಲ್ಲಿ ಫಲಾನುಭವಿಗಳ ಸಂಖ್ಯೆ 1,539ರಿಂದ 1,641ಕ್ಕೆ ಏರಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್