
- ಹರಿಯಾಣದ ರಾಜ್ಯ ಗೃಹ ಸಚಿವರ ಚಿಂತನ ಶಿಬಿರದಲ್ಲಿ ಪ್ರಧಾನಿ ಮೋದಿ ಪ್ರಸ್ತಾಪ
- ದೇಶದಲ್ಲಿ ಪೊಲೀಸರ ಗುರುತು ಒಂದೇ ಆಗಿರಬೇಕೆಂಬ ಬಯಕೆ ಎಂದ ಮೋದಿ
ಪ್ರಧಾನಿ ನರೇಂದ್ರ ಮೊದಿ ಶುಕ್ರವಾರ (ಅ.28) ‘ಒಂದು ರಾಷ್ಟ್ರ, ಒಂದು ಸಮವಸ್ತ್ರ’ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದಾರೆ. ದೇಶದಲ್ಲಿನ ನಾನಾ ಪಡೆಗಳ ನಡುವೆ ಏಕರೂಪತೆ ತರಲು ಇದೊಂದು ಕಲ್ಪನೆಯಷ್ಟೆ. ಇದು ಯಾರ ಮೇಲೂ ಹೇರಿಕೆಯಲ್ಲ. ರಾಜ್ಯಗಳು ಇದನ್ನು ಸಲಹೆಯಾಗಿ ಪರಿಗಣಿಸಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಪೊಲೀಸರಿಗಾಗಿ ‘ಒಂದು ದೇಶ, ಒಂದು ಸಮವಸ್ತ್ರ’ ಕೇವಲ ಕಲ್ಪನೆ. ಇದನ್ನು ನಿಮ್ಮ ಮೇಲೆ ಹೇರಲು ಪ್ರಯತ್ನಿಸುವುದಿಲ್ಲ. ಇದು 50 ಅಥವಾ 100 ವರ್ಷಗಳಲ್ಲಿ ಆದರೂ ಸರಿ. ಈ ಬಗ್ಗೆ ಸ್ವಲ್ಪ ಯೋಚಿಸಿ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಹರಿಯಾಣದಲ್ಲಿ ನಡೆಯುತ್ತಿರುವ ರಾಜ್ಯ ಗೃಹ ಸಚಿವರ ಚಿಂತನ ಶಿಬಿರದಲ್ಲಿ ಅವರು ಮಾತನಾಡಿದರು. ಅಲ್ಲದೆ, ಅಪರಾಧಗಳು ಮತ್ತು ಅಪರಾಧಿಗಳನ್ನು ನಿಭಾಯಿಸಲು ರಾಜ್ಯಗಳ ನಡುವೆ ನಿಕಟ ಸಹಕಾರದ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
“ಸಹಕಾರ ಒಕ್ಕೂಟವು ಸಂವಿಧಾನದ ಆಶಯ ಮಾತ್ರವಲ್ಲದೆ, ರಾಜ್ಯಗಳು ಮತ್ತು ಕೇಂದ್ರದ ಜವಾಬ್ದಾರಿ. ಸಂವಿಧಾನದ ಪ್ರಕಾರ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದ್ದರೂ, ಅವು ದೇಶದ ಏಕತೆ ಮತ್ತು ಸಮಗ್ರತೆಯೊಂದಿಗೆ ಬೆಸೆದುಕೊಂಡಿವೆ” ಎಂದು ಪ್ರಧಾನಿ ಹೇಳಿದರು.
“ಆಂತರಿಕ ಭದ್ರತೆಗಾಗಿ ರಾಜ್ಯಗಳು ಒಟ್ಟಾಗಿ ಕೆಲಸ ಮಾಡುವುದು ಸಾಂವಿಧಾನಿಕ ಆಶಯ ಮತ್ತು ರಾಷ್ಟ್ರದ ಬಗೆಗಿನ ಜವಾಬ್ದಾರಿ” ಎಂದು ಅವರು ಹೇಳಿದರು.
ಸಾರ್ವಜನಿಕ ಸುರಕ್ಷತೆ ಮತ್ತು ಭದ್ರತೆಯ ಸವಾಲನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತನಿಖಾ ಸಂಸ್ಥೆಗಳು ಸಂಘಟಿತ ಪ್ರಯತ್ನ ನಡೆಸಬೇಕು. ಪರಸ್ಪರ ಸಹಕರಿಸಬೇಕು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕುಲಾಂತರಿ ಸಾಸಿವೆಗೆ ಕೇಂದ್ರದ ಹಸಿರು ನಿಶಾನೆ; ಸರ್ಕಾರದ ನಿರ್ಧಾರಕ್ಕೆ ರೈತರ, ಹೋರಾಟಗಾರರ ವಿರೋಧ
ತನಿಖಾ ಸಂಸ್ಥೆಗಳು ಭದ್ರತೆ ಖಚಿತಪಡಿಸಿಕೊಳ್ಳಲು ಹಳೆಯ ಕಾನೂನುಗಳನ್ನು ಪರಿಶೀಲಿಸಬೇಕು. ಅವುಗಳನ್ನು ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ತಿದ್ದುಪಡಿ ಮಾಡಬೇಕು ಎಂದು ಪ್ರಧಾನಿ ಮೋದಿ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.
ಪೊಲೀಸರು ದಕ್ಷತೆ ಮತ್ತು ಜನಸಾಮಾನ್ಯರಿಗೆ ರಕ್ಷಣೆ ಖಚಿತಪಡಿಸಿಕೊಳ್ಳಲು ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಪರಸ್ಪರ ಸಹಕರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.