
- ಕೇಂದ್ರದಲ್ಲಿ ಸಾಮಾಜಿಕ ನ್ಯಾಯ, ಒಕ್ಕೂಟ ತತ್ವಗಳ ಸರ್ಕಾರ ರಚನೆ ಗುರಿ
- ರಾಜ್ಯಪಾಲರ ಮೂಲಕ ಸಮಾನಾಂತರ ಆಡಳಿತಕ್ಕೆ ಪ್ರಯತ್ನದ ಆರೋಪ
2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲ 39 ಲೋಕಸಭಾ ಸ್ಥಾನಗಳನ್ನು ಮತ್ತು ಪುದುಚೇರಿಯ ಒಂದು ಸ್ಥಾನ ಗೆಲ್ಲುವ ಮೂಲಕ ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಗೆ ಸಹಕರಿಸುವುದೇ ಡಿಎಂಕೆ ಗುರಿ ಎಂದು ಪಕ್ಷದ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಭಾನುವಾರ (ಅ.17) ಹೇಳಿದ್ದಾರೆ.
ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ಮತ್ತು ಒಕ್ಕೂಟ ತತ್ವಗಳಿಗೆ ಬದ್ಧವಾಗಿರುವ ಹೊಸ ಸರ್ಕಾರ ರಚನೆಗೆ ಅನುಕೂಲ ಮಾಡಿಕೊಡುವುದು ನಮ್ಮ ಮುಂದಿನ ಗುರಿ ಎಂದು ಪ್ರತಿಪಾದಿಸಿದ್ದಾರೆ.
“2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನಾವು ಇದನ್ನು ಗುರಿಯಾಗಿಟ್ಟು ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದು ಸ್ಟಾಲಿನ್ ವಿಡಿಯೋ ಸಂದೇಶವೊಂದರಲ್ಲಿ ತಿಳಿಸಿದ್ದಾರೆ.
‘ನರ್ಪತುಂ ನಮತೇ, ನಾಡುಂ ನಮತೇ’ ಎಂಬ ತಮಿಳು ರಾಜಕೀಯ ಘೋಷಣೆಯೊಂದಿಗೆ ಡಿಎಂಕೆ ಅಧಿಕಾರಕ್ಕೆ ಬಂದಿದೆ. ಇದನ್ನು ಹೀಗೆ ಅನುವಾದಿಸಬಹುದು, “ಎಲ್ಲ 40 ಲೋಕಸಭಾ ಕ್ಷೇತ್ರಗಳು ನಮ್ಮದೇ, ಈ ದೇಶವೂ ನಮ್ಮದೇ” ಎಂದು ಸ್ಟಾಲಿನ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಪಕ್ಷದ ಚಿಹ್ನೆಗೆ ಸಿಖ್ ಸಮುದಾಯ ಆಕ್ಷೇಪ
“ರಾಜ್ಯದಲ್ಲಿ ಬಿಜೆಪಿಯು ತನ್ನ ರಾಜ್ಯಪಾಲರ ಮೂಲಕ ಸಮಾನಾಂತರ ಸರ್ಕಾರ ನಡೆಸಲು ಪ್ರಯತ್ನಿಸುತ್ತಿದೆ. ನಾವು ಈ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಜನರಿಂದ ಆಯ್ಕೆಯಾದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯ ಜವಾಬ್ದಾರಿಗಳನ್ನು ನಮ್ಮ ಸಂವಿಧಾನ ಸ್ಪಷ್ಟವಾಗಿ ನಿರೂಪಿಸಿದೆ. ಅದನ್ನು ಅನುಸರಿಸಿದರೆ ಯಾರಿಗೂ ತೊಂದರೆ ಇಲ್ಲ” ಎಂದು ಸ್ಟಾಲಿನ್ ಹೇಳಿದರು.
“ಡಿಎಂಕೆ ಆಡಳಿತವು 2021ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುನ್ನ ನೀಡಿದ್ದ ಚುನಾವಣಾ ಭರವಸೆಗಳಲ್ಲಿ ಶೇ. 70ಕ್ಕೂ ಹೆಚ್ಚನ್ನು ಈಡೇರಿಸಿದೆ. ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ, ಕೇಂದ್ರವು ಸರಿಯಾದ ಬೆಂಬಲ ನೀಡಿದ್ದರೆ, ಡಿಎಂಕೆ ಆಡಳಿತ ಹೆಚ್ಚಿನ ಕಲ್ಯಾಣ ಯೋಜನೆಗಳನ್ನು ಕೈಗೊಳ್ಳುತ್ತಿತ್ತು” ಎಂದರು.