ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ಭಾಗಿ ವಿಚಾರ; ಪೊಲೀಸರಿಂದ ಶಾಸಕ ರಾಜೇಂದ್ರ ಪಾಲ್‌ ವಿಚಾರಣೆ

Rajendra Pal Gautam
  • ಮತಾಂತರ ಕಾರ್ಯಕ್ರಮದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ 10,000 ಹಿಂದೂಗಳು 
  • ರಾಜೇಂದ್ರ ಪಾಲ್‌ ರಾಜೀನಾಮೆ ಅಂಗೀಕರಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌

ಕಳೆದ ವಾರ ದೆಹಲಿಯಲ್ಲಿ ನಡೆದ ಸಾಮೂಹಿಕ ಧಾರ್ಮಿಕ ಮತಾಂತರ ಕಾರ್ಯಕ್ರಮಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಮಂಗಳವಾರ (ಅ. 11) ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ರಾಜೇಂದ್ರ ಪಾಲ್ ಗೌತಮ್ ಅವರನ್ನು ವಿಚಾರಣೆ ನಡೆಸಿದ್ದಾರೆ.

“ಮತಾಂತರ ಕಾರ್ಯಕ್ರಮಕ್ಕೆ ಸಂಬಂಧಿಸಿ ದೆಹಲಿ ಪೊಲೀಸ್ ಅಧಿಕಾರಿಗಳ ಗುಂಪು ಸೋಮವಾರ ಸಂಜೆ ನನ್ನ ನಿವಾಸದಲ್ಲಿ ನನ್ನನ್ನು ಪ್ರಶ್ನಿಸಿದೆ. ನಾನು ಯಾವುದೇ ಅಪರಾಧ ಮಾಡಿಲ್ಲ ಎಂದು ಅವರಿಗೆ ಹೇಳಿದೆ. ಡಾ. ಬಿ ಆರ್ ಅಂಬೇಡ್ಕರ್ ಅವರು ತೆಗೆದುಕೊಂಡ 22 ವಚನಗಳನ್ನು ಪುನರಾವರ್ತಿಸಿದ್ದೇನೆ. ನಾನು ಮಾಡಿದ್ದು ಸಂವಿಧಾನದ ಒಳಗಿದೆ. ನಾನು ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ” ಎಂದು ಶಾಸಕ ರಾಜೇಂದ್ರ ಪಾಲ್‌ ಹೇಳಿದ್ದಾರೆ.

“ನನಗೆ ಬ್ರಹ್ಮ, ವಿಷ್ಣು ಮತ್ತು ಈಶ್ವರನಲ್ಲಿ ನಂಬಿಕೆ ಇಲ್ಲ. ಅವರನ್ನು ದೇವರೆಂದು ಪೂಜಿಸುವುದಿಲ್ಲ. ನನಗೆ ರಾಮನ ಮೇಲೆ ಅಥವಾ ಕೃಷ್ಣನ ಮೇಲೆ ನಂಬಿಕೆ ಇರುವುದಿಲ್ಲ, ಅವರನ್ನು ಪೂಜಿಸುವುದಿಲ್ಲ. ನಾನು ಗೌರಿ, ಗಣಪತಿ ಮತ್ತು ಇತರ ಹಿಂದೂ ದೇವರುಗಳಲ್ಲಿ ನಂಬಿಕೆಯನ್ನು ಹೊಂದಿಲ್ಲ ಮತ್ತು ನಾನು ಅವರನ್ನು ಪೂಜಿಸುವುದಿಲ್ಲ” ಎಂದು ರಾಜೇಂದ್ರ ಪಾಲ್‌ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡು ತೆಗೆದುಕೊಂಡ ಪ್ರಮಾಣವಚನದಲ್ಲಿ ಹೇಳಿದ್ದರು.

ಸಮಾಜ ಕಲ್ಯಾಣ ಸಚಿವ ಸ್ಥಾನಕ್ಕೆ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಸೋಮವಾರ (ಅ. 10) ಅಂಗೀಕರಿಸಿದ ಬಳಿಕ ದೆಹಲಿ ಪೊಲೀಸರು ರಾಜೇಂದ್ರ ಪಾಲ್ ಅವರನ್ನು ಮತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರ ಬಗ್ಗೆ ವಿಚಾರಣೆ ನಡೆಸಿದ್ದರು. ಬಳಿಕ ಮಂಗಳವಾರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರು.  

AV Eye Hospital ad

ಅಕ್ಟೋಬರ್ 5ರಂದು ರಾಣಿ ಝಾನ್ಸಿ ರಸ್ತೆಯಲ್ಲಿ ಸಾವಿರಾರು ಹಿಂದೂಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಘಟನೆಯ ಕುರಿತು ಸೀಮಾಪುರಿ ಶಾಸಕ ರಾಜೇದ್ರ ಪಾಲ್‌ ಅವರು ರಾಜಕೀಯ ಸಂಕಷ್ಟದಲ್ಲಿ ಸಿಲುಕಿದ್ದಾರೆ. ರಾಜೇಂದ್ರ ಪಾಲ್‌ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಹಿಂದೂ ದೇವತೆಗಳನ್ನು ಖಂಡಿಸಿ ಮಾತನಾಡಿದ್ದರು. ಬಳಿಕ ಈ ವಿಚಾರ ರಾಜಕೀಯ ರೂಪ ಪಡೆದುಕೊಂಡಿತ್ತು. 

“ರಾಜೇಂದ್ರ ಪಾಲ್‌ ಅವರ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 91ರ ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗಿದೆ” ಎಂದು ಪೊಲೀಸ್ ಉಪ ಆಯುಕ್ತರಾದ (ಕೇಂದ್ರ) ಶ್ವೇತಾ ಚೌಹಾಣ್ ಹೇಳಿದ್ದಾರೆ.  

ಯಾವುದೇ ತನಿಖೆ, ವಿಚಾರಣೆ  ಇತರ ಪ್ರಕ್ರಿಯೆಗಳ ಉದ್ದೇಶಗಳಿಗಾಗಿ ಯಾವುದೇ ದಾಖಲೆ ಅಥವಾ ಇತರ ಸಂಬಂಧಿತ ಪುರಾವೆಗಳನ್ನು ಸಲ್ಲಿಸುವುದು ಅವಶ್ಯಕ ಅಥವಾ ಅಪೇಕ್ಷಣೀಯ ಎಂದು ಯಾವುದೇ ನ್ಯಾಯಾಲಯ ಅಥವಾ ಪೊಲೀಸ್ ಠಾಣೆಯ ಉಸ್ತುವಾರಿ ಹೊಂದಿರುವ ಯಾವುದೇ ಅಧಿಕಾರಿಯು ಪರಿಗಣಿಸಿದಾಗ ಸೆಕ್ಷನ್ 91 ಅನ್ನು ಬಳಸಲಾಗುತ್ತದೆ. 

ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಅವರು ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ರಾಜೇಂದ್ರ ಪಾಲ್‌ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. "ಎಎಪಿ ನಾಯಕ ರಾಜೇಂದ್ರ ಪಾಲ್‌ ಅವರು ಹಿಂದೂಗಳ ವಿರುದ್ಧ ಸಾಮಾನ್ಯ ಜನರನ್ನು ಪ್ರಚೋದಿಸುತ್ತಿದ್ದಾರೆ. ಗಲಭೆ, ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ" ಎಂದು ಆರೋಪಿಸಲಾಗಿದೆ.   

ರಾಜೇಂದ್ರ ಪಾಲ್‌ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅಂಗೀಕರಿಸಿದ್ದಾರೆ. ರಾಜೀನಾಮೆ ಪತ್ರವನ್ನು ಲೆಫ್ಟಿನೆಂಟ್ ಗವರ್ನರ್  ವಿನಯ್ ಕುಮಾರ್ ಸಕ್ಸೇನಾ ಅವರಿಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಮುಖ್ಯಮಂತ್ರಿ ಕಚೇರಿಯು ಅದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅನುಮೋದನೆಗಾಗಿ ಕಳುಹಿಸಿದೆ.

ಅಕ್ಟೋಬರ್ 5ರಂದು ರಾಣಿ ಝಾನ್ಸಿ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆದ ವಿಜಯ ದಶಮಿ ಕಾರ್ಯಕ್ರಮದಲ್ಲಿ ರಾಜೇಂದ್ರ ಪಾಲ್‌ ಅವರು ಭಾಗವಹಿಸಿದ್ದರು. ಅಲ್ಲಿ 10,000 ಹಿಂದೂಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. 

ಈ ಸುದ್ದಿ ಓದಿದ್ದೀರಾ? 2020ರ ದೆಹಲಿ ಗಲಭೆಯಲ್ಲಿ ಭಾಗಿಯಾಗಿದ್ದೆ ಎಂದು ಘೋಷಿಸಿದ ಬಿಜೆಪಿ ಶಾಸಕ ನಂದ ಕಿಶೋರ್‌ ವಿಡಿಯೋ ವೈರಲ್

ಎಎಪಿ ಮತಾಂತರವನ್ನು ಬೆಂಬಲಿಸುತ್ತಿದೆ ಎಂದು ಬಿಜೆಪಿ ಕಳೆದ ವಾರ ಆರೋಪಿಸಿತ್ತು. ರಾಜೇಂದ್ರ ಪಾಲ್‌ ಅವರು ಹಿಂದೂ ದೇವತೆಗಳನ್ನು ಅಗೌರವಿಸಿದ್ದಾರೆ ಎಂದು ಟೀಕಿಸಿತ್ತು. ಆಮ್ ಆದ್ಮಿ ಪಕ್ಷ ಅಥವಾ ದೆಹಲಿ ಸರ್ಕಾರವು ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app