ಒಬ್ಬ ವ್ಯಕ್ತಿ ಒಂದು ಹುದ್ದೆ | ದೆಹಲಿಗೆ ಗೆಹ್ಲೋಟ್, ಮುಖ್ಯಮಂತ್ರಿ ಸ್ಥಾನಕ್ಕೆ ಪೈಲಟ್; ರಾಹುಲ್‌ ಸಂದೇಶ ಸಾರುವುದೇನು?

  • ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಪೈಲಟ್
  • ತಾವು ಸ್ಪರ್ಧಿ ಎಂದು ಘೋಷಿಸಿದ ಅಶೋಕ್ ಗೆಹ್ಲೋಟ್

‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ಎನ್ನುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಗಾದಿ ಮತ್ತು ರಾಜಸ್ಥಾನ ಮುಖ್ಯಮಂತಿ ಹುದ್ದೆಗಳೆರಡನ್ನೂ ನಿಭಾಯಿಸುವ ಮಾತನಾಡಿದ್ದ ಪಕ್ಷದ ನಾಯಕ ಅಶೋಕ್ ಗೆಹ್ಲೋಟ್ ಅವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಜನತೆ ಮತ್ತು ಪಕ್ಷ ಅಪೇಕ್ಷಿಸಿದರೆ ಎರಡೂ ಜವಾಬ್ದಾರಿಗಳನ್ನು ನಿಭಾಯಿಸಲು ಸಿದ್ಧವೆಂದು ಕಳೆದ ವಾದ ಅಶೋಕ್ ಗೆಹ್ಲೋಟ್ ಹೇಳಿದ್ದರು. ಆದರೆ, ರಾಹುಲ್ ಗಾಂಧಿ ಅವರು ಕೇರಳದಲ್ಲಿ ಗುರುವಾರ ಮಾಧ್ಯಮಗಳಿಗೆ ಮಾತನಾಡಿ, ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮವಿರುವುದನ್ನು ನೆನಪಿಸಿದ್ದಾರೆ. ಈ ಮೂಲಕ ಗೆಹ್ಲೋಟ್ ಅವರ ಎರಡೂ ಹುದ್ದೆಗಳ ಕನಸಿಗೆ ತಣ್ಣೀರು ಎರಚಿದಂತಾಗಿದೆ.

Eedina App

ರಾಹುಲ್ ಗಾಂಧಿ ಅವರ ಈ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಗೆಹ್ಲೋಟ್ ಅವರು ಈ ತಿಂಗಳ ಕೊನೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಅಥವಾ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯ ಮತ ಎಣಿಕೆ ದಿನವಾದ ಅಕ್ಟೋಬರ್ 19ರಂದು ತಮ್ಮ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆಯೇ ಎಂಬುವುದನ್ನು ಕಾದು ನೋಡಬೇಕಿದೆ.

ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರಿಗೆ ರಾಜಸ್ಥಾನದ ಜವಾಬ್ದಾರಿ ನೀಡುವ ಕುರಿತು ರಾಹುಲ್ ಗಾಂಧಿ ಅವರಿಗೆ ಒಲವಿದೆ ಎನ್ನಲಾಗುತ್ತಿದೆ. ಆದರೆ ಹೆಚ್ಚಿನ ಶಾಸಕರ ಬೆಂಬಲವಿರುವ ಗೆಹ್ಲೋಟ್ ಅವರ ಅಭಿಪ್ರಾಯವನ್ನೂ ಪಕ್ಷ ಕಡೆಗಣಿಸುವಂತಿಲ್ಲ. ಹಾಗಾಗಿ, ಈ ಕುರಿತು ಚರ್ಚಿಸಲು ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಗುರುವಾರ ರಾತ್ರಿ ದೆಹಲಿಗೆ ತೆರಳುವ ನಿರೀಕ್ಷೆಯಿದೆ.

AV Eye Hospital ad

ಮೇ ತಿಂಗಳಲ್ಲಿ ನಡೆದ ಕಾಂಗ್ರೆಸ್‌ನ 'ಚಿಂತನಾ ಶಿಬಿರ'ದಲ್ಲಿ 'ಒಬ್ಬ ವ್ಯಕ್ತಿ ಒಂದು ಹುದ್ದೆ' ಎನ್ನುವ ನಿರ್ಧಾರವನ್ನು ಪಕ್ಷ ತೆಗೆದುಕೊಂಡಿತ್ತು. ಈ ಕುರಿತಂತೆ ಪತ್ರಕರ್ತರು ಕೇಳಲಾಗಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ಅವರು, “ಉದಯಪುರದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಪಕ್ಷ ಬದ್ಧವಾಗಿರುತ್ತದೆ. ಹಾಗಾಗಿ ಪಕ್ಷದ ನಾಯಕರು ಆ ಬದ್ಧತೆಯನ್ನು ಉಳಿಕೊಳ್ಳುವರು ಎಂದು ನಾನು ಭಾವಿಸುತ್ತೇನೆ” ಎಂದು ಹೇಳುವ ಮೂಲಕ ರಾಜಸ್ಥಾನ ಮುಖ್ಯಮಂತ್ರಿಯಾಗಿ ಮುಂದುವರಿಯುವ ಗೆಹ್ಲೋಟ್ ಅವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ರಾಹುಲ್ ಗಾಂಧಿ ಭೇಟಿ ಮಾಡಿದ ಸಚಿನ್ ಪೈಲಟ್

ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿರುವ ರಾಹುಲ್ ಗಾಂಧಿ ಅವರನ್ನು ಸಚಿನ್ ಪೈಲಟ್ ಬುಧವಾರ ಭೇಟಿ ಮಾಡಿದ್ದಾರೆ.

ಅಶೋಕ್ ಗೆಹ್ಲೋಟ್ ಅವರು ಎಐಸಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವ ಮೊದಲು ರಾಜೀನಾಮೆ ನೀಡಬೇಕು ಮತ್ತು ಸಚಿನ್ ಪೈಲಟ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಪೈಲಟ್ ಬಣ ಒತ್ತಾಯಿಸುತ್ತಿರುವುದಾಗಿ ವರದಿಯಾಗಿದೆ.

ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಮುಂದುವರಿದರೆ ಅಧ್ಯಕ್ಷರಾದ ಮೇಲೆ ತಮ್ಮ ಉತ್ತರಾಧಿಕಾರಿಯನ್ನು ನೇಮಿಸುವಲ್ಲಿ ದೊಡ್ಡ ಪಾತ್ರ ವಹಿಸಬಹುದು ಮತ್ತು ಅವರ ಮಾತಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಆ ಹಿನ್ನೆಲೆಯಲ್ಲಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕುವ ಮುನ್ನವೇ ರಾಜಸ್ಥಾನದಲ್ಲಿ ಅಧಿಕಾರ ಹಸ್ತಾಂತರವೂ ಆಗುವುದು ಅಗತ್ಯ ಎಂಬುದು ಸಚಿನ್‌ ಬಣದ ವಾದ.

ಈ ಸುದ್ದಿ ಓದಿದ್ದೀರಾ?:  ಒಂದು ನಿಮಿಷದ ಓದು | ಯಾರ ಪರವೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ ಸೋನಿಯಾ ಗಾಂಧಿ

“ಇದರ ನಡುವೆ ರಾಜಸ್ಥಾನ ಕಾಂಗ್ರೆಸ್ ಮುಂದಿನ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿದೆ. ಹಾಗಾಗಿ ಪಕ್ಷಕ್ಕೆ ಹಾನಿಯಾಗದಂತೆ ನಿರ್ಧಾರ ಕೈಗೊಳ್ಳುವಾಗ ಪ್ರತಿ ಶಾಸಕರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ” ಎಂದು ಗೆಹ್ಲೋಟ್ ಹೇಳಿದ್ದಾರೆ.

ಮುಂದಿನ ಚುನಾವಣೆವರೆಗೂ ಮುಖ್ಯಮಂತ್ರಿಯಾಗಿ ಮಂದುವರಿಯುತ್ತೀರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್ ಗೆಹ್ಲೋಟ್, “ಪಕ್ಷದ ಆಂತರಿಕ ಬೆಳವಣಿಗೆಯ ಮೇಲೆ ಮುಂದುವರಿಯಬೇಕೋ ಅಥವಾ ಬೇಡವೋ ಎನ್ನುವುದು ನಿರ್ಧಾರವಾಗುತ್ತದೆ. ಪಕ್ಷದೊಳಗಿರುವ ಎಲ್ಲರು ಒಗ್ಗಟ್ಟಾಗಿ ಮುನ್ನಡೆಯಬೇಕೆಂದು ನಾವು ಬಯಸುತ್ತೇವೆ. ಹಾಗಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುವುದು ಅವಶ್ಯಕ. ಅದರ ಆಧಾರದ ಮೇಲೆ ನಿರ್ಧರಿಸುತ್ತೇನೆ” ಎಂದು ಹೇಳಿದ್ದಾರೆ.

ಸ್ಪರ್ಧಿ ಎಂದು ಘೋಷಿಸಿದ ಅಶೋಕ್ ಗೆಹ್ಲೋಟ್

ಗಾಂಧಿ ಕುಟುಂಬದಿಂದ ಯಾರೊಬ್ಬರೂ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬುವುದನ್ನು ದೃಢಪಡಿಸಿರುವ ಅಶೋಕ್ ಗೆಹ್ಲೋಟ್, ಗಾಂಧಿಯೇತರ ಅಧ್ಯಕ್ಷರಾಗಲು ತಾವು ಸಿದ್ಧವಿರುವುದಾಗಿ ಶುಕ್ರವಾರ ಘೋಷಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ʼಒಬ್ಬ ವ್ಯಕ್ತಿಗೆ ಒಂದು ಹುದ್ದೆʼ ನಿರ್ಧಾರಕ್ಕೆ ಸಂಬಂಧಿಸಿದಂತೆ ಅಶೋಕ್ ಗೆಹ್ಲೋಟ್ ಅವರು ರಾಜೀನಾಮೆ ನೀಡುವರೇ? ಅಥವಾ ಕಾಂಗ್ರೆಸ್‌ನ ಹೈಕಮಾಂಡ್ ನಾಯಕರ ಮನವೊಲಿಸಲು ಪ್ರಯತ್ನಿಸುವರೆ ಎನ್ನುವುದನ್ನು ಕಾಯ್ದು ನೋಡಬೇಕಿದೆ. ಇದರ ಜೊತೆಗೆ ಗೆಹ್ಲೋಟ್, ಸಚಿನ್ ಪೈಲಟ್ ಅವರನ್ನು ಹೊರತುಪಡಿಸಿ ಮೂರನೆಯವರೊಬ್ಬರನ್ನು ಮುಖ್ಯಮಂತ್ರಿ ಹುದ್ದೆಗೆ ಶಿಫಾರಸು ಮಾಡುವ ಸಾಧ್ಯತೆಗಳೂ ಇವೆ.

ಒಬ್ಬರಿಗೆ ಒಂದು ಹುದ್ದೆ ಎಂದು ರಾಹುಲ್ ಗಾಂಧಿ ಅವರು ಅಶೋಕ್ ಗೆಹ್ಲೋಟ್ ಅವರಿಗೆ ಸಂದೇಶ ಕೊಡುವುದರ ಜೊತೆಗೆ ಶಶಿ ತರೂರ್ ಅವರಿಗೂ ಸೂಚನೆ ನೀಡಿದ್ದಾರೆ. ಸಂಸದರಾಗಿರುವ ತರೂರ್ ಅವರಿಗೂ ಒಬ್ಬ ವ್ಯಕ್ತಿ ಒಂದು ಹುದ್ದೆ ನಿಯಮ ಅನ್ವಯವಾಗಲಿದ್ದು, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.

ಈ ನಡುವೆ ಗಾಂಧಿ ಕುಟುಂಬ ಸ್ಪರ್ಧಿಸುದಿಲ್ಲ ಎನ್ನುವುದು ದೃಢಪಟ್ಟ ಮೇಲೆ ಕಾಂಗ್ರೆಸ್‌ನ ಆಕಾಂಕ್ಷಿಗಳ ಪಟ್ಟಿ ಹಿಗ್ಗುತ್ತಲೇ ಇದೆ. ಅಧ್ಯಕ್ಷ ಚುನಾವಣೆ ಜೊತೆಗೆ ರಾಜಸ್ಥಾನ ರಾಜಕಾರಣದ ಕಡೆ ಎಲ್ಲರ ಕುತೂಹಲ ನೆಟ್ಟಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app