ತಂತ್ರಜ್ಞಾನ ಬಳಸಿ ಕೃಷಿ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಬೇಕು: ಪ್ರಧಾನಿ ಮೋದಿ

NITI Ayog Meeting
  • ಕೇಂದ್ರದ ತಾರತಮ್ಯ ನೀತಿ ಖಂಡಿಸಿ ಸಭೆಯಿಂದ ದೂರವುಳಿದ ಕೆಸಿಆರ್, ನಿತೀಶ್ ಕುಮಾರ್
  • ಕೋವಿಡ್ ಬಳಿಕ ನಡೆದ ನೀತಿ ಆಯೋಗದ ಮೊದಲ ಮುಖಾಮುಖಿ ಸಭೆಯಲ್ಲಿ 23 ರಾಜ್ಯದ ಸಿಎಂಗಳು ಭಾಗಿ

ಭಾರತವು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ, ಜಾಗತಿಕ ನಾಯಕನಾಗಲು ತಂತ್ರಜ್ಞಾನವನ್ನು ಬಳಸಿಕೊಂಡು ಆಧುನೀಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿಗಳಿಗೆ ಕರೆ ನೀಡಿದ್ದಾರೆ.

ದೇಶದಲ್ಲಿ ಕೋವಿಡ್ ಪ್ರಾರಂಭವಾದ ಬಳಿಕ ರವಿವಾರ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ ಮೊದಲ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

"ವೇಗದ ನಗರೀಕರಣವು ದೌರ್ಬಲ್ಯದ ಬದಲಿಗೆ ಭಾರತದ ಶಕ್ತಿಯಾಗಬಲ್ಲದು ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ತಂತ್ರಜ್ಞಾನವನ್ನು ಬಳಸಿಕೊಂಡಾಗ ಸುಲಭದ ಜೀವನ, ಪಾರದರ್ಶಕ ಸೇವೆ ವಿತರಣೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಾಧ್ಯ ಎಂದರು.

2023ರಲ್ಲಿ ಜಿ-20 ಶೃಂಗಸಭೆಯ ಭಾರತ ವಹಿಸಲಿರುವ ಅಧ್ಯಕ್ಷ ಸ್ಥಾನದ ಕುರಿತು ಪ್ರಸ್ತಾಪಿಸಿದ ಪ್ರಧಾನಿ ಮೋದಿ, "G-20 ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಒಂದು ಗುಂಪು. ಉಪಕ್ರಮದಿಂದ ಗರಿಷ್ಠ ಸಂಭವನೀಯ ಪ್ರಯೋಜನವನ್ನು ಪಡೆಯುವ ದೃಷ್ಟಿಯಿಂದ ಜಿ-20ಗಾಗಿಯೇ ಮೀಸಲಾಗಿರಿಸಿ ಉತ್ತಮ ತಂಡಗಳನ್ನು ಸ್ಥಾಪಿಸಿ" ಎಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ನೀಡಿದರು.

"ಕೊರೋನಾ ಸಂದರ್ಭದಲ್ಲಿ ಪ್ರತಿಯೊಂದು ರಾಜ್ಯವು ತನ್ನ ಶಕ್ತಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಿದೆ. ಇದರಿಂದಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಭಾರತವನ್ನು ಜಾಗತಿಕ ನಾಯಕನಾಗಿ ಕಾಣುವಂತಾಗಲು ಕಾರಣವಾಯಿತು” ಎಂದು ನರೇಂದ್ರ ಮೋದಿ ಹೇಳಿದರು.

ಖಾದ್ಯ ತೈಲ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಬೇಕು. ಆಡಳಿತ ಮಂಡಳಿಯು ಬೆಳೆ ವೈವಿಧ್ಯೀಕರಣ ಮತ್ತು ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಇತರ ಕೃಷಿ-ಸರಕುಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದು, ಶಾಲಾ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ, ಉನ್ನತ ಶಿಕ್ಷಣದಲ್ಲಿ ಎನ್‌ಇಪಿ ಅನುಷ್ಠಾನ ಮತ್ತು ನಗರ ಆಡಳಿತದ ನಾಲ್ಕು ಪ್ರಮುಖ ಕಾರ್ಯಸೂಚಿಗಳನ್ನು ಚರ್ಚಿಸಿತು.

ಕೋವಿಡ್ ಪ್ರಾರಂಭವಾದ ಬಳಿಕ ಇದು ನೀತಿ ಆಯೋಗದ ಆಡಳಿತ ಮಂಡಳಿಯ ಮೊದಲ ಭೌತಿಕ ಸಭೆಯಾಗಿತ್ತು, 2021ರ ಸಭೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗಿತ್ತು.

ಇಂದಿನ ಸಭೆಯಲ್ಲಿ 23 ಮುಖ್ಯಮಂತ್ರಿಗಳು, 3 ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಇಬ್ಬರು ಆಡಳಿತಾಧಿಕಾರಿಗಳು ಮತ್ತು ಕೇಂದ್ರ ಸಚಿವರು ಭಾಗವಹಿಸಿದ್ದರು. ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಗಳಿಗೆ ಅನುದಾನ ಒದಗಿಸುವಲ್ಲಿ ಕೇಂದ್ರದ ತಾರತಮ್ಯ ನೀತಿ ಖಂಡಿಸಿ ಸಭೆಯಿಂದ ದೂರವುಳಿದಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್