ಪ್ರಧಾನಿ ನಿವಾಸ ಘೇರಾವ್ | ರಾಹುಲ್ ಗಾಂಧಿ ಸೇರಿ ಕೆಲವು ಸಂಸದರ ಬಂಧನ

  • ಪ್ರತಿಭಟನೆಗೂ ಮುನ್ನ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ
  • ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೇವೆ ಎಂದ ಖರ್ಗೆ

ಬೆಲೆಯೇರಿಕೆ, ನಿರುದ್ಯೋಗ ಹಾಗೂ ಜಿಎಸ್‌ಟಿ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಶುಕ್ರವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆಯ ವೇಳೆ ರಾಹುಲ್‌ ಗಾಂಧಿ ಸೇರಿದಂತೆ ಕೆಲವು ನಾಯಕರನ್ನು ಬಂಧಿಸಲಾಗಿದೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರು ಮತ್ತು ಹಿರಿಯ ನಾಯಕರು ಪ್ರಧಾನಿ ನಿವಾಸದ ಘೇರಾವ್‌ನಲ್ಲಿ ಭಾಗವಹಿಸಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭಾ ಸಂಸದರು ಸಂಸತ್ತಿನಿಂದ 'ಚಲೋ ರಾಷ್ಟ್ರಪತಿ ಭವನ' ನಡೆಸಲಿದ್ದಾರೆ.

ದೆಹಲಿ ಪ್ರತಿಭಟನೆಯ ವೇಳೆ ರಾಹುಲ್ ಗಾಂಧಿ, ಶಶಿ ತರೂರ್ ಸೇರಿದಂತೆ ಹಲವು ಕಾಂಗ್ರೆಸ್ ಸಂಸದರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರ ಅವರು ರಸ್ತೆಯ ಮದ್ಯೆದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಅವರ ಮತ್ತು ಪೊಲೀಸರ ನಡುವೆ ಎಳೆದಾಟವಾಯಿತು. ನಂತರ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಲಾಯಿತು.

“ಹಣದುಬ್ಬರ ಮತ್ತು ಬೆಲೆಯೇರಿಕೆಯ ವಿಷಯ ಪ್ರಸ್ತಾಪಿಸಲು ಕಾಂಗ್ರೆಸ್ ಸಂಸದರು ಮತ್ತು ನಾನು ರಾಷ್ಟ್ರಪತಿ ಭವನದ ಕಡೆಗೆ ಮೆರವಣಿಗೆ ನಡೆಸುತ್ತಿದ್ದವು. ಪೊಲೀಸರು ನಮ್ಮನ್ನು ಮುಂದೆ ಹೋಗಲು ಬಿಡುತ್ತಿಲ್ಲ. ನಮ್ಮ ಕೆಲವು ಸಂಸದರನ್ನು ಥಳಿಸಿ ವಶಕ್ಕೆ ಪಡೆದಿದ್ದಾರೆ” ಎಂದು ರಾಹುಲ್ ಗಾಂಧಿ ದೆಹಲಿಯ ವಿಜಯ್‌ ಚೌಕ್‌ನಲ್ಲಿ ಹೇಳಿದ್ದಾರೆ.

"ಹಣದುಬ್ಬರ, ಬೆಲೆಯೇರಿಕೆ, ನಿರುದ್ಯೋಗ, ಜಿಎಸ್‌ಟಿ ದರ ಹೆಚ್ಚಳದ ವಿರುದ್ಧ ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ" ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ಪ್ರಜಾಪ್ರಭುತ್ವ ಅಸುನೀಗಿದೆ, ಸರ್ವಾಧಿಕಾರ ಚಾಲ್ತಿಯಲ್ಲಿದೆ: ರಾಹುಲ್ ಗಾಂಧಿ

ಪ್ರತಿಪಕ್ಷಗಳ ನಾಯಕರ ಮೇಲಿನ ಜಾರಿ ನಿರ್ದೇಶನಾಲಯದ ದಾಳಿ ಖಂಡಿಸಿ, ಕಾಂಗ್ರೆಸ್‌ ಸಂಸದರು ಸಂಸತ್ತಿನಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.

ಸಂಸದರ ಗದ್ದಲಗಳ ನಡುವೆ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು.

ಕಾಂಗ್ರೆಸ್ ಮೆರವಣಿಗೆಗೆ ಮುಂಚಿತವಾಗಿ ದೆಹಲಿಯ ಕೆಲವು ಭಾಗಗಳಲ್ಲಿ ಸಭೆ ಮತ್ತು ಪ್ರತಿಭಟನೆಗಳಿಗೆ ನಿಷೇಧಾಜ್ಞೆಗಳನ್ನು ವಿಧಿಸಲಾಗಿತ್ತು. ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ಗೆ ಅನುಮತಿ ನಿರಾಕರಿಸಿದ್ದಾರೆ.

ಪಂಜಾಬ್‌ನ ಕಾಂಗ್ರೆಸ್ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಕೂಡ ಹಣದುಬ್ಬರದ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

"ಹಣದುಬ್ಬರ ಹೆಚ್ಚುತ್ತಿದೆ. ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ. ನಾವು ಶ್ರೀಲಂಕಾದಂತಹ ಬಿಕ್ಕಟ್ಟಿನತ್ತ ದಾಪುಗಾಲಿಡುತ್ತಿದ್ದೇವೆ ಎಂದು ಭಯವಾಗಿತ್ತಿದೆ. ಸರ್ಕಾರವನ್ನು ನಿದ್ರೆಯಿಂದ ಎಬ್ಬಿಸುವ ಉದ್ದೇಶದಿಂದ ಧರಣಿ ನಡೆಸುತ್ತಿದ್ದೇವೆ" ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಎಎನ್‌ಐಗೆ ತಿಳಿಸಿದರು.

ಪ್ರತಿಭಟನೆಗೂ ಮುನ್ನ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿ, ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಟಿಪ್ಪಣಿ ಮಾಡಿದ್ದರು.

ನಿಮಗೆ ಏನು ಅನ್ನಿಸ್ತು?
4 ವೋಟ್