ಪಂಜಾಬ್ ವಿಶೇ‍ಷ ಅಧಿವೇಶನ ರದ್ದು | ಪ್ರಜಾಪ್ರಭುತ್ವ ನಾಶವಾಗಿದೆ ಎಂದ ಅರವಿಂದ್ ಕೇಜ್ರಿವಾಲ್

  • ನಾವು ಹೋರಾಟ ಮುಂದುವರೆಸುತ್ತೇವೆ ಎಂದ ಆಪ್
  • ರಾಜ್ಯಪಾಲರ ನಿರ್ಧಾರ ಅನುಮಾನಗಳಿಗೆ ದಾರಿ

ಪಂಜಾಬ್ ರಾಜ್ಯ ಸರ್ಕಾರದ ವಿಶೇ‍ಷ ಅಧಿವೇಶನದ ಬೇಡಿಕೆಯನ್ನು ತಿರಸ್ಕರಿಸಿರುವ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ವಿರುದ್ಧ ಆಮ್ ಆದ್ಮಿ ಪಕ್ಷ ಬುಧವಾರ ಟೀಕಾ ಪ್ರಹಾರ ನಡೆಸಿದೆ.

"ಪ್ರಜಾಪ್ರಭುತ್ವ ನಾಶವಾಗಿದೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜ್ಯಪಾಲರ ವಿರುದ್ಧ ಕಿಡಿಕಾರಿದ್ದಾರೆ.

ಸಚಿವ ಸಂಪುಟ ಕರೆದಿರುವ ವಿಶೇಷ ಅಧಿವೇಶನವನ್ನು ರಾಜ್ಯಪಾಲರು ರದ್ದು ಮಾಡಿರುವ ಕುರಿತು ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್ ಅವರು, "ಸಂಪುಟ ಕರೆದಿರುವ ಅಧಿವೇಶನವನ್ನು ರಾಜ್ಯಪಾಲರು ಹೇಗೆ ರದ್ದುಮಾಡಬಹುದು? ಪ್ರಜಾಪ್ರಭುತ್ವ ನಾಶವಾಯಿತು. ಎರಡು ದಿನಗಳ ಹಿಂದೆಯಷ್ಟೇ ರಾಜ್ಯಪಾಲರು ವಿಶೇ‍ಷ ಅಧಿವೇಶನಕ್ಕೆ ಅನುಮತಿ ನೀಡಿದ್ದರು. ಆಪರೇಷನ್ ಕಮಲ ವಿಫಲವಾಗುತ್ತಿದ್ದಂತೆ ಅನುಮತಿ ಹಿಂದಕ್ಕೆ ಪಡೆಯಿರಿ ಎಂದು ಮೇಲಿನಿಂದ ಕರೆ ಬಂದಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಸೆಪ್ಟೆಂಬರ್ 22ರಂದು ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರ ಬಹುಮತ ಸಾಬೀತು ಮಾಡಲು ವಿಶೇಷ ಅಧಿವೇಶನ ಕರೆದಿತ್ತು. ಆಗ ವಿಶೇಷ ಅಧಿವೇಶನಕ್ಕೆ ಅನುಮತಿ ನೀಡಿದ್ದ ರಾಜ್ಯಪಾಲರು, ಇದೀಗ ಆ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಶಾಸಕರನ್ನು ಖರೀದಿಸಲು ಮತ್ತು ಪಂಜಾಬ್‌ನಲ್ಲಿ ತನ್ನ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆಪ್‌ ಆರೋಪಿಸಿದ ಕೆಲವು ದಿನಗಳ ನಂತರ, ಮುಖ್ಯಮಂತ್ರಿ ಭಗವಂತ್ ಮಾನ್ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಘೋಷಿಸಿದ್ದರು.

ರಾಜ್ಯಪಾಲರ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ್ದ ಆಪ್ ನಾಯಕ ರಾಘವ್ ಚಡ್ಡಾ, "ಅಧಿವೇಶನದ ಆದೇಶ ಹಿಂಪಡೆಯುವ ರಾಜ್ಯಪಾಲರ ನಿರ್ಧಾರ ಅನುಮಾನ ಹುಟ್ಟುಹಾಕಿದೆ. ಸರ್ಕಾರ ವಿಧಾನಸಭೆಯನ್ನು ಎದುರಿಸುತ್ತೇನೆ ಎಂದಾಗ ಅದಕ್ಕೆ ವಿರೋಧವೇಕೆ? ಇದು ಸಮಂಜಸವಾದ ತಿಳುವಳಿಕೆಯನ್ನು ಮೀರಿದೆ" ಎಂದು ಟ್ವೀಟ್ ಮಾಡಿದ್ದರು.

ಈ ಸುದ್ದಿ ಓದಿದ್ದೀರಾ? ಎಎಪಿ ಕಾರ್ಯಕ್ರಮಗಳಿಗೆ ಬಿಜೆಪಿಯಿಂದ ಬೆದರಿಕೆ ಹಾಕಿ ಗೂಂಡಾಗಿರಿ ಪ್ರದರ್ಶನ; ಅರವಿಂದ ಕೇಜ್ರಿವಾಲ್ ಅರೋಪ

ಇದಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ಕಾಂಗ್ರೆಸ್ ನಾಯಕ ಸುಖಪಾಲ್ ಸಿಂಗ್ ಖೈರಾ, ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ ಅವರು, ರಾಜ್ಯಪಾಲರನ್ನು ಭೇಟಿಯಾಗಿ ಕೇವಲ ವಿಶ್ವಾಸ ನಿರ್ಣಯ ಮಂಡಿಸಲು ವಿಶೇಷ ಅಧಿವೇಶನ ಕರೆಯುವ ಅವಕಾಶವನ್ನು ಯಾವುದೇ ಕಾನೂನು ನೀಡಿಲ್ಲ ಎಂಬ ಬಗ್ಗೆ ಅವರ ಗಮನ ಸೆಳೆದಿದ್ದರು.

ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಪ್ರತಾಪ್ ಬಾಜ್ವಾ ವಿರುದ್ಧ ಟೀಕೆ ಮಾಡಿದ್ದ ಆಪ್‌, ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆಯೇ ಹೊರತು‌, ರಾಹುಲ್ ಗಾಂಧಿಯವರ ಮಾತಿನಂತಲ್ಲ ಎಂದು ಕಿಡಿಕಾರಿತ್ತು.

"70 ವರ್ಷಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟಾಗಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ಕೊಂದಿವೆ. ಚುನಾಯಿತ ಸರ್ಕಾರದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ರಾಜ್ಯಪಾಲರಿಗೆ ಇರಲಿಲ್ಲ. ಆಪ್‌ ಯಾವಾಗಲೂ ದಬ್ಬಾಳಿಕೆಯ ನೀತಿಗಳ ವಿರುದ್ಧ ಹೋರಾಡುತ್ತಿದೆ ಮತ್ತು ಹೋರಾಟವನ್ನು ಮುಂದುವರಿಸುತ್ತದೆ" ಎಂದು ಆಪ್‌ ಹೇಳಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180