ರಾಜಸ್ಥಾನ | ಇಂದ್ರ ಮೇಘವಾಲ್ ಹತ್ಯೆ ಖಂಡಿಸಿ ಪುರಸಭೆ 12 ಸದಸ್ಯರ ರಾಜೀನಾಮೆ

  • ಪುರಸಭೆಯ ಕಾಂಗ್ರೆಸ್ 25 ಸದಸ್ಯರ ಪೈಕಿ 12 ಮಂದಿ ರಾಜೀನಾಮೆ
  • ಶಾಸಕ ಪಾನ್ ಚಂದ್ ರಾಜೀನಾಮೆ ಬೆನ್ನಲ್ಲೆ ಬುಗಿಲೆದ್ದ ಆಕ್ರೋಶ

ಕುಡಿಯುವ ನೀರಿನ ಮಡಕೆ ಮುಟ್ಟಿದ ಕಾರಣಕ್ಕೆ ಶಿಕ್ಷಕನಿಂದ ಹಲ್ಲೆಗೊಳಗಾಗಿ ಜೀವ ಕಳೆದುಕೊಂಡ ಇಂದ್ರ ಮೇಘವಾಲ್ ಪ್ರಕರಣ ಖಂಡಿಸಿ ರಾಜಸ್ಥಾನದ ಬರಾನ್ ಪುರಸಭೆಯ 12 ಕಾಂಗ್ರೆಸ್‌ ಸದಸ್ಯರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಮಂಗಳವಾರ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ರಾಜಸ್ಥಾನದ ಬರನ್-ಅತ್ರು ವಿಧಾನಸಭಾ ಕ್ಷೇತ್ರದ ಶಾಸಕ ಪಾನ್ ಚಂದ್ ಮೇಘವಾಲ್ ಅವರು ಮಂಗಳವಾರ ಬೆಳಗ್ಗೆ ರಾಜೀನಾಮೆ ನೀಡಿದ್ದಾರೆ. ಏತನ್ಮಧ್ಯೆ, ಶಾಸಕರ ರಾಜೀನಾಮೆ ಬೆಂಬಲಿಸಿ ಬರಾನ್ ಪುರಸಭೆಯ 25 ಕಾಂಗ್ರೆಸ್ ಸದಸ್ಯರ ಪೈಕಿ 12 ಮಂದಿ, ದಲಿತರು ಮತ್ತು ವಂಚಿತ ವರ್ಗಗಳ ಮೇಲಿನ ದೌರ್ಜನ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಪುರಸಭೆ ವಾರ್ಡ್‌ ನಂ. 29ರ ಸದಸ್ಯ ಯೋಗೇಂದ್ರ ಮೆಹ್ತಾ ಮಾತನಾಡಿ, “ಶಾಸಕರನ್ನು ಬೆಂಬಲಿಸಿ ಹಾಗೂ ದಲಿತರ ರಕ್ಷಣೆ ಮಾಡುವಲ್ಲಿ ಸರ್ಕಾರದ ವೈಫಲ್ಯದ ವಿರುದ್ಧ ರಾಜೀನಾಮೆ ಪತ್ರ ಕಳುಹಿಸಿದ್ದೇವೆ” ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಿಂದೂಗಳಿಗೆ ಮೀಸಲಿಟ್ಟ ನೀರು ಕುಡಿಯಲು ನನ್ನ ತಂದೆಗೂ ನಿಷೇಧವಿತ್ತು: ಮಾಜಿ ಸ್ಪೀಕರ್ ಮೀರಾ ಕುಮಾರ್

ರೋಹಿತಾಶ್ವ ಸಕ್ಸೇನಾ, ರಾಜಾರಾಮ್ ಮೀನಾ, ರೇಖಾ ಮೀನಾ, ಲೀಲಾಧರ್ ನಗರ್, ಹರಿರಾಜ್ ಎರ್ವಾಲ್, ಪಿಯೂಷ್ ಸೋನಿ, ಊರ್ವಶಿ ಮೇಘವಾಲ್, ಯಶವಂತ್ ಯಾದವ್, ಅನ್ವರ್ ಅಲಿ, ಜ್ಯೋತಿ ಜಾತವ್ ಹಾಗೂ ಮಯಾಂಕ್ ಮಥೋಡಿಯಾ ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ಕಳುಹಿಸಿರುವುದಾಗಿ ತಿಳಿಸಿದ್ದಾರೆ.

ಬುಧವಾರ ಕೋಟಾ ವಿಭಾಗೀಯ ಆಯುಕ್ತರಿಗೆ ತಮ್ಮ ಎಲ್ಲ ಸದಸ್ಯರು ರಾಜೀನಾಮೆ ಪತ್ರಗಳನ್ನು ಸಲ್ಲಿಸುವುದಾಗಿ ಯೋಗೇಂದ್ರ ಮೆಹ್ತಾ ತಿಳಿಸಿದ್ದಾರೆ.

ಕೋಟಾದ ಇಟಾವಾ ನಾಗರಿಕ ಸಂಸ್ಥೆಯ ನಾಮನಿರ್ದೇಶಿತ ಸದಸ್ಯ ಸುರೇಶ್ ಮಹಾವರ್ ಕೂಡ ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗೆ ಕಳುಹಿಸಿದ್ದಾರೆ.

ಕುಡಿಯುವ ನೀರಿನ ಮಡಕೆ ಮುಟ್ಟಿದ ಎಂಬ ಕಾರಣಕ್ಕಾಗಿ ಖಾಸಗಿ ಶಾಲಾ ಶಿಕ್ಷಕನೊಬ್ಬ ಜುಲೈ 20ರಂದು ಒಂಬತ್ತು ವರ್ಷದ ಇಂದ್ರ ಮೇಘವಾಲ್‌ ಎನ್ನುವ ಪರಿಶಿಷ್ಟ ಜಾತಿಯ ಬಾಲಕನನ್ನು ಥಳಿಸಿದ್ದ. ತೀವ್ರ ಗಾಯಗೊಂಡ ಬಾಲಕ ಕಳೆದ ಶನಿವಾರ (ಆಗಸ್ಟ್ 13) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಆಘಾತಕಾರಿ ಘಟನೆ ದೇಶವ್ಯಾಪಿ ತೀವ್ರ ಆಕ್ರೋಶ ಹುಟ್ಟುಹಾಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್