ರಾಜಸ್ಥಾನ | ದಲಿತ ವಿರೋಧಿ ಮನಸ್ಥಿತಿ ಹತ್ತಿಕ್ಕಲು ಕಠಿಣ ಕ್ರಮ ಅಗತ್ಯ; ಸಚಿನ್ ಪೈಲಟ್

  • ತಮ್ಮದೇ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಆಸಮಾಧಾನ
  • ಮೃತ ದಲಿತ ಬಾಲಕನ ಮನೆಗೆ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

ದಲಿತರ ಬಗ್ಗೆ ವಿರೋಧಿ ಮನಸ್ಥಿತಿಯುಳ್ಳವರನ್ನು ಹತ್ತಿಕ್ಕಲು ಕಠಿಣ ಕ್ರಮದ ಅಗತ್ಯವಿದೆ ಎಂದು ರಾಜಸ್ಥಾನದ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಹೇಳಿದ್ದಾರೆ.

ರಾಜಸ್ಥಾನದ ಜಾಲೋರ್ನ ಜಿಲ್ಲೆಯ ಸುರಾನಾ ಗ್ರಾಮದ ಖಾಸಗಿ ಶಾಲೆಯಲ್ಲಿ ಮಡಕೆ ಮುಟ್ಟಿ ನೀರು ಕುಡಿದ ಕಾರಣವನ್ನು ನೆಪವಾಗಿರಿಸಿ ದಲಿತ ವಿದ್ಯಾರ್ಥಿಯನ್ನು ಶಿಕ್ಷಕನೋರ್ವ ಹಲ್ಲೆಗೈದು ಸಾವಿಗೀಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ಇಂಥ ಘಟನೆಗಳು ಬೇರೆ ರಾಜ್ಯಗಳಲ್ಲಿಯೂ ನಡೆಯುತ್ತವೆ ಎಂದಷ್ಟೇ ಹೇಳಿದರೆ ಸಾಕಾಗುವುದಿಲ್ಲ. ಆದಿವಾಸಿಗಳ, ದಲಿತರ ಮೇಲೆ ದೌರ್ಜನ್ಯ ಕೃತ್ಯಗಳು ನಡೆದಾಗ ಸಹಿಸಲು ಸಾಧ್ಯವೇ ಇಲ್ಲ” ಎಂದು ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದರು.

ಮೃತಪಟ್ಟ ದಲಿತ ಬಾಲಕ ಇಂದ್ರ ಮೇಘವಾಲ್‌ನ ಸುರಾನ ಗ್ರಾಮಕ್ಕೆ ಭೇಟಿ ನೀಡಿದ ಸಚಿನ್ ಪೈಲಟ್, ಬಾಲಕನ ಸಂಬಂಧಿಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

“ದಲಿತರ ಮೇಲೆ ದೌರ್ಜನ್ಯ ಎಸಗುವ ಮನಸ್ಥಿತಿಯನ್ನು ಹತ್ತಿಕ್ಕಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ದೌರ್ಜನ್ಯ ಎಸಗಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ನಂಬಿಕೆಯನ್ನು ದಲಿತರ ಮನಸ್ಸಿನಲ್ಲಿ ಮೂಡಿಸಬೇಕಿದೆ” ಅಭಿಪ್ರಾಯಪಟ್ಟರು.

“ಯಾರಿಗೆ ಆಗಲಿ ಇಂಥ ಅನ್ಯಾಯವಾದಾಗ ನಾವು ನ್ಯಾಯದ ಪರ ದನಿ ಎತ್ತಬೇಕು. ಈಗ ನಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ನಾವು ಜವಾಬ್ದಾರಿಯಿಂದ ವಿಮುಖರಾಗಬಾರದು” ಎಂದು ರಾಜಸ್ಥಾನ ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿದರು.

“ರಾಜಸ್ಥಾನದ ಜಾಲೋರ್ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರು ಮತ್ತು ಡಿಎಸ್ಪಿ ಅವರನ್ನು ಹುದ್ದೆಯಿಂದ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ಸಂತ್ರಸ್ತ ಬಾಲಕನ ಕುಟುಂಬದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಅವರ ಫೋನ್ ಕಿತ್ತುಕೊಂಡಿದ್ದರು ಎಂಬ ಆರೋಪವಿದೆ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಎಲ್ಲ ರಾಜ್ಯಗಳಲ್ಲೂ ದಲಿತ ದೌರ್ಜನ್ಯ ಪ್ರಕರಣ ನಡೆಯುತ್ತಿವೆ; ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

ಕುಡಿಯುವ ನೀರಿನ ಮಡಕೆ ಮುಟ್ಟಿದ್ದಕ್ಕೆ ಖಾಸಗಿ ಶಾಲಾ ಶಿಕ್ಷಕ, 9 ವರ್ಷದ ಪರಿಶಿಷ್ಟ ಜಾತಿಯ ಬಾಲಕ ಇಂದ್ರ ಮೇಘವಾಲ್ ಎಂಬವನನ್ನು ಥಳಿಸಿದ್ದರು. ಶಿಕ್ಷಕರ ದೌರ್ಜನ್ಯಕ್ಕೆ ತುತ್ತಾದ ಬಾಲಕ ಕಳೆದ ಶನಿವಾರ ಮೃತಪಟ್ಟಿದ್ದ.

ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದಲಿತ ಬಾಲಕನ ಸಾವು ಖಂಡಿಸಿ ರಾಜಸ್ಥಾನದ ಬಾರಾನ್ ನಗರಸಭೆಯ 12 ಮಂದಿ ಕಾಂಗ್ರೆಸ್ ಸದಸ್ಯರು ರಾಜೀನಾಮೆ ಸಲ್ಲಿಸಿದ್ದರು. ಅದೇ ಕ್ಷೇತ್ರದ ಕಾಂಗ್ರೆಸ್ ಶಾಸಕ ಪನಾ ಚಂದ್ ಮೇಘವಾಲ್ ರಾಜೀನಾಮೆ ನೀಡಿದ ಬೆನ್ನಲ್ಲೇ ನಗರಸಭೆ ಸದಸ್ಯರೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್