- ಸೂಚಿಸಿದ ಚಿಹ್ನೆ ಬಳಸುವಂತೆ ಆದೇಶ ಹೊರಡಿಸಿದ ಆಯೋಗ
- ರಮೇಶ್ ಲಟ್ಕೆ ನಿಧನದ ನಂತರ ತೆರವಾಗಿದ್ದ ಸ್ಥಾನಕ್ಕೆ ಸ್ಪರ್ಧೆ
'ನೈಜ ಶಿವಸೇನೆ'ಯ ಜಟಾಪಟಿಯ ನಡುವೆ, ಬಿಲ್ಲು ಮತ್ತು ಬಾಣವಿರುವ ಚುನಾವಣಾ ಚಿಹ್ನೆಯನ್ನು ಬಳಸದಂತೆ ಚುನಾವಣಾ ಆಯೋಗವು ಶನಿವಾರ ಮಧ್ಯಂತರ ಆದೇಶ ಹೊರಡಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉದ್ದವ್ ಠಾಕ್ರೆ ಅವರ ಎರಡೂ ಬಣಗಳು ತಾವೇ ನೈಜ ಶಿವಸೇನೆ ಎಂದು ಹೇಳಿಕೊಳ್ಳುತ್ತಿದ್ದವು. ಈ ನಡುವೆ, ನವೆಂಬರ್ 3ರಂದು ಅಂಧೇರಿ (ಪೂರ್ವ) ವಿಧಾನಸಭಾ ಉಪ ಚುನಾವಣೆಗೂ ಮುನ್ನ ಆಯೋಗದ ಮಧ್ಯಂತರ ಆದೇಶ ಹೊರಬಿದ್ದಿದೆ. ಹೀಗಾಗಿ ಉಪಚುನಾವಣೆಯಲ್ಲಿ ಬಿಲ್ಲು ಮತ್ತು ಬಾಣವಿರುವ ಶಿವಸೇನೆಯ ಚಿಹ್ನೆಯನ್ನು ಬಳಸಲಾಗುವುದಿಲ್ಲ.
ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಬಣ ತಾವೇ ನಿಜವಾದ ಶಿವಸೇನೆ ತಮಗೆ ಬಿಲ್ಲು ಮತ್ತು ಬಾಣವಿರುವ ಚಿಹ್ನೆಯನ್ನು ಬಳಸಲು ಅನುಮತಿ ನೀಡುವಂತೆ ಆಯೋಗಕ್ಕೆ ಮನವಿ ಮಾಡಿದ್ದರು. ಚುನಾವಣಾ ಆಯೋಗದ ಮುಂದೆ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ತಡೆ ಹಿಡಿಯುವಂತೆ ಉದ್ದವ್ ಠಾಕ್ರೆ ಬಣ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ನ್ಯಾಯಾಲಯ ಠಾಕ್ರೆ ಬಣದ ಮನವಿ ತಿರಸ್ಕರಿಸಿದ ಕೆಲವು ದಿನಗಳ ಬಳಿಕ ಚುನಾವಣಾ ಆಯೋಗದ ಆದೇಶ ಹೊರಬಿದ್ದಿದೆ.
ಚುನಾವಣಾ ಆಯೋಗದ ನಿರ್ಧಾರವನ್ನು ಶಿಂಧೆ ಬಣವು "ಆಯೋಗದ ಆದೇಶ ವಾಸ್ತವಾಂಶ ಆಧರಿಸಿದೆ" ಎಂದು ಸ್ವಾಗತಿಸಿದರೆ, ಠಾಕ್ರೆ ಬಣ ಅಸಮಾಧಾನಗೊಂಡಿದೆ.
ಚುನಾವಣಾ ಆಯೋಗದ ಆದೇಶದಿಂದ ಕೋಪಗೊಂಡ ಆದಿತ್ಯ ಠಾಕ್ರೆ ಅವರು, "ದೇಶದ್ರೋಹಿಗಳು ಶಿವಸೇನೆಯ ಹೆಸರು ಮತ್ತು ಚಿಹ್ನೆಯನ್ನು ಘನೀಕರಿಸುವ ನೀಚ, ನಾಚಿಕೆಯಿಲ್ಲದ ಕೃತ್ಯ ಎಸಗಿದ್ದಾರೆ. ಮಹಾರಾಷ್ಟ್ರದ ಜನತೆ ಇದನ್ನು ಸಹಿಸುವುದಿಲ್ಲ. ನಾವು ಸತ್ಯದ ಪರವಾಗಿದ್ದೇವೆ! ಹೋರಾಡಿ ಗೆಲ್ಲುತ್ತೇವೆ! ಸತ್ಯಮೇವ ಜಯತೆ!" ಎಂದು ಟ್ವೀಟ್ ಮಾಡಿದ್ದಾರೆ.
खोकेवाल्या गद्दारांनी आज शिवसेना नाव आणि चिन्ह गोठवण्याचा नीच आणि निर्लज्ज प्रकार केला आहे. महाराष्ट्राची जनता हे सहन करणार नाही.
— Aaditya Thackeray (@AUThackeray) October 8, 2022
लढणार आणि जिंकणारच!
आम्ही सत्याच्या बाजूने!
सत्यमेव जयते! pic.twitter.com/MSBoLR9UT5
ವಿಧಾನಸಭೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ಆಯೋಗ ಮಧ್ಯಂತರ ಆದೇಶ ನೀಡಿದೆ. ಎರಡೂ ಬಣಗಳು ಶಿವಸೇನೆ ಚಿಹ್ನೆಗಾಗಿ ಹೋರಾಡುತ್ತಿವೆ. ದಾಖಲೆಯ ಪರೀಶಿಲನೆಗೆ ಸಮಯ ತೆಗೆದುಕೊಳ್ಳುವುದರಿಂದ ಆದೇಶ ಹೊರಬಿದ್ದಿದೆ.
"ಶಿವಸೇನೆಯ ಎರಡೂ ಬಣಗಳು ಬಿಲ್ಲು ಮತ್ತು ಬಾಣದ ಚಿಹ್ನೆಗಾಗಿ ಹಕ್ಕು ಸಾಧಿಸಿದರೆ, ಚಿಹ್ನೆಯನ್ನು ಯಾರಿಗೆ ನೀಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದನ್ನು ಹೇಗೆ ವ್ಯವಹರಿಬೇಕು" ಎಂಬ ವಿಷಯದ ಕುರಿತು ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ಚುನಾವಣಾ ಆಯೋಗದ ಮಾರ್ಗದರ್ಶನ ಕೇಳಿದ್ದಾರೆ.
ಉಪಚುನಾವಣೆಯ ತುರ್ತು ಪರಿಸ್ಥಿತಿ ಗಮನಿಸಿದ ಚುನಾವಣಾ ಆಯೋಗವು ಮುಂಬರುವ ಉಪಚುನಾವಣೆಯಲ್ಲಿ ಎರಡು ಬಣಗಳೂ ಸಹ ಶಿವಸೇನೆಯ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಬಳಸದಂತೆ ಹೇಳಿದೆ.
"ಆಯ್ಕೆ ಮಾಡಬಹುದಾದಂತಹ ಹೆಸರುಗಳಿಂದ ಎರಡೂ ಬಣಗಳು ಕರೆಯಲ್ಪಡುತ್ತವೆ, ಅವರು ಬಯಸಿದಲ್ಲಿ, ಅವರ ಮಾತೃ ಪಕ್ಷ 'ಶಿವಸೇನೆ' ಯೊಂದಿಗೆ ಸಂಪರ್ಕ ಹೊಂದಿರುತ್ತಾರೆ ಮತ್ತು ಎರಡೂ ಬಣಗಳಿಗೆ ವಿಭಿನ್ನ ಚಿಹ್ನೆಗಳನ್ನು ಸಹ ನೀಡಲಾಗುತ್ತದೆ. ಪ್ರಸ್ತುತ ಉಪ ಚುನಾವಣೆಯ ಉದ್ದೇಶಗಳಿಗಾಗಿ ಚುನಾವಣಾ ಆಯೋಗವು ಸೂಚಿಸಿದ ಉಚಿತ ಚಿಹ್ನೆಗಳ ಪಟ್ಟಿಯಿಂದ ಆರಿಸಿಕೊಳ್ಳಿ" ಎಂದು ಚುನಾವಣಾ ಆಯೋಗ ಹೇಳಿದೆ.
ಆಯೋಗವು ಎರಡೂ ಗುಂಪುಗಳಿಗೆ "ಸೋಮವಾರ ಮಧ್ಯಾಹ್ನ 1 ಗಂಟೆಯೊಳಗೆ ಬಣಗಳ ಹೆಸರುಗಳನ್ನು ಗುರುತಿಸಬಹುದು" ಎಂದು ಕೇಳಿದೆ.
ಈ ಸುದ್ದಿ ಓದಿದ್ದೀರಾ? ಚುನಾವಣಾ ನೀತಿ ಸಂಹಿತೆಗೆ ರಾಜಕೀಯ ಬಣ್ಣ ಕೂಡದು ಎಂದ ಮಾಜಿ ಚುನಾವಣಾಯುಕ್ತ
"ಎರಡು ಬಣಗಳು ಆದ್ಯತೆಯ ಕ್ರಮದಲ್ಲಿ ಮೂರು ಆಯ್ಕೆಗಳನ್ನು ಚುನಾವಣಾ ಆಯೋಗಕ್ಕೆ ನೀಡಬೇಕು. ಅದರಲ್ಲಿ ಒಂದು ಹೆಸರು ಮತ್ತು ಚಿಹ್ನೆಯನ್ನು ಆಯೋಗ ಬಣಗಳಿಗೆ ಸೂಚಿಸುತ್ತದೆ" ಎಂದು ಆಯೋಗ ತನ್ನ ಆದೇಶದಲ್ಲಿ ಹೇಳಿದೆ.
ಮಹಾರಾಷ್ಟ್ರದಲ್ಲಿ ಉದ್ಧವ್ ಬಣ ಚುನಾವಣಾ ಆಯೋಗದ ನಿರ್ಧಾರವನ್ನು ಟೀಕಿಸಿದೆ.
“ಇದು ಪ್ರಜಾಪ್ರಭುತ್ವ. ಚುನಾವಣಾ ಆಯೋಗದ ನಿರ್ಧಾರ ಸಂವಿಧಾನದ ಮೇಲಿನ ದಾಳಿ. ಬಣಗಳ ಅಭಿಪ್ರಾಯ ಕೇಳದೆ ಮತ್ತು ಹಕ್ಕುಗಳ ಪರಿಶೀಲನೆ ಮಾಡದೆ ಆಯೋಗವು ನಾಲ್ಕು ಗಂಟೆಗಳ ಕಾಲಾವಧಿಯಲ್ಲಿ ಆದೇಶವನ್ನು ಅಂಗೀಕರಿಸಿದೆ. ದೂರಿಗೆ ಪ್ರತಿಕ್ರಿಯಿಸಿದವರ ಮಾತಿಗೆ ಕಿವಿಗೊಡದೆ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಠಾಕ್ರೆ ಬಣದ ಶಿವಸೇನೆ ಸಂಸದ ಅರವಿಂದ್ ಸಾವಂತ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ದೇಶದ ಸಂಪೂರ್ಣ ಒಕ್ಕೂಟ ವ್ಯವಸ್ಥೆ ನಾಶವಾಗುತ್ತಿದೆ. ಇದು ಆರಂಭವಷ್ಟೇ, ದೇಶದ ಎಲ್ಲ ರಾಜಕೀಯ ಪಕ್ಷಗಳಿಗೆ ಇದೊಂದು ಎಚ್ಚರಿಕೆಯ ಗಂಟೆ. ಇಂದು ಈ ರೀತಿ ಶಿವಸೇನೆಗೆ ಆಗಿರಬಹುದು, ನಾಳೆ ಎಲ್ಲ ಪಕ್ಷಗಳು ಇದರ ಒರಿಣಾಮ ಎದುರಿಸತ್ತವೆ" ಎಂದು ಶಿವಸೇನೆ ನಾಯಕಿ ಮನಿಶಾ ಕಾಯಂದೆ ಕಿಡಿಕಾರಿದ್ದಾರೆ.
ಅಂಧೇರಿ ಉಪಚುನಾವಣೆಯಲ್ಲಿ ತನ್ನ ಎಲ್ಲ ಶಕ್ತಿಯೊಂದಿಗೆ ಠಾಕ್ರೆ ಬಣ ಸ್ಪರ್ಧಿಸುತ್ತದೆ ಮತ್ತು ತನ್ನ ಅಭ್ಯರ್ಥಿಗೆ ಪರ್ಯಾಯ ಚಿಹ್ನೆ ಹುಡುಕುತ್ತದೆ ಎಂದು ಉದ್ಧವ್ ಬಣ ಹೇಳಿದೆ.
ಆಯೋಗದ ಆದೇಶವನ್ನು ಸ್ವೀಕರಿಸಿರುವ ಶಿಂಧೆ ಬಣದ ನಾಯಕ ಅನಿಲ್ ಪರಬ್ ಅವರು, "ನಾವು ಆದೇಶವನ್ನು ಸ್ವೀಕರಿಸಿದ್ದೇವೆ ಮತ್ತು ಅದರ ಪ್ರಕಾರ ಚುನಾವಣಾ ಆಯೋಗಕ್ಕೆ ಮೂರು ಹೆಸರು ಮತ್ತು ಚಿಹ್ನೆಗಳನ್ನು ನೀಡುತ್ತೇವೆ ಮತ್ತು ಅದನ್ನು ಬಳಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಇದು ಮಧ್ಯಂತರ ಆದೇಶ. ಚುನಾವಣಾ ಆಯೋಗಕ್ಕೆ ಯಾವ ಆಯ್ಕೆ ಸಲ್ಲಿಸಬೇಕು ಎಂಬುದನ್ನು ಪಕ್ಷದ ಮುಖ್ಯಸ್ಥರು ನಿರ್ಧರಿಸುತ್ತಾರೆ" ಎಂದಿದ್ದಾರೆ.
ಶಿಂಧೆ ಬಣಕ್ಕೆ ಸೇರಿದ ಸಚಿವ ದೀಪಕ್ ಕೇಸರ್ಕರ್ ಅವರು, “ನಿಯಮಗಳನ್ನು ಅನುಸರಿಸಿ ಚುನಾವಣಾ ಆಯೋಗವು ಈ ನಿರ್ಧಾರ ಕೈಗೊಂಡಿದೆ ಮತ್ತು ದೀರ್ಘಾವಧಿಯಲ್ಲಿ ನೈಜ ಶಿವಸೇನೆಯಾಗಿರುವ ಕಾರಣಕ್ಕೆ ನಮಗೆ ಬಿಲ್ಲು- ಬಾಣ ಚಿಹ್ನೆ ಸಿಗುವ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
ಎರಡೂ ಬಣಗಳು ತಮ್ಮ ಕ್ರಮವನ್ನು ನಿರ್ಧರಿಸಲು ಭಾನುವಾರ ಸಭೆ ನಡೆಸುತ್ತಿವೆ. ಅಂಧೇರಿ (ಪೂರ್ವ) ವಿಧಾನಸಭಾ ಕ್ಷೇತ್ರವು ಈ ವರ್ಷದ ಮೇನಲ್ಲಿ ಶಿವಸೇನಾ ಶಾಸಕ ರಮೇಶ್ ಲಟ್ಕೆ ಅವರ ನಿಧನದ ನಂತರ ತೆರವಾಗಿತ್ತು.
ಉದ್ಧವ್ ಬಣ ಲಟ್ಕೆ ಪತ್ನಿ ರುತುಜಾ ಅವರನ್ನು ಕಣಕ್ಕಿಳಿಸಿದೆ. ಅವರು ಬಿಜೆಪಿ ಅಭ್ಯರ್ಥಿ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮಾಜಿ ಕಾರ್ಪೊರೇಟರ್ ಮುರ್ಜಿ ಪಟೇಲ್ ವಿರುದ್ಧ ಸ್ಪರ್ಧಿಸಲಿದ್ದಾರೆ.