ಜಮ್ಮು-ಕಾಶ್ಮೀರ ಮತದಾರ ಪಟ್ಟಿ ಪರಿಷ್ಕರಣೆ | ಕೇವಲ 7 ಲಕ್ಷ ಹೊಸ ಮತದಾರರ ಸೇರ್ಪಡೆ

Accational Photo
  • ಪರಿಷ್ಕೃತ ಮತದಾರ ಪಟ್ಟಿಯಲ್ಲಿ ಶೇ 10ರಷ್ಟು ಮಾತ್ರ ಹೆಚ್ಚಳ
  • ಪ್ರತಿಪಕ್ಷಗಳ ಆತಂಕ, ಅಧಿಕಾರಿಗಳ ಲೆಕ್ಕಾಚಾರ ತಲೆಕೆಳಗು

ಜಮ್ಮು ಮತ್ತು ಕಾಶ್ಮೀರದ ಪರಿಷ್ಕೃತ ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಸುಮಾರು ಏಳು ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. 

ಮತದಾರರ ಪಟ್ಟಿ ಪರಿಷ್ಕಣೆಯ ವೇಳೆ ಸ್ಥಳೀಯರಲ್ಲದವರಿಗೂ ಹೆಸರು ನೋಂದಾಯಿಸಲು ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿತ್ತು. ಹಾಗೆ ಸ್ಥಳೀಯರಲ್ಲದ ಹೊರಗಿನವರಿಗೆ ಮತದಾನಕ್ಕೆ ಅವಕಾಶ ನೀಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ, ಕಣಿವೆ ರಾಜ್ಯದಲ್ಲಿ ರಾಜಕೀಯ ಪ್ರಾಬಲ್ಯ ಸಾಧಿಸಲು ಮುಂದಾಗಿದೆ ಎಂಬ ಗಂಭೀರ ಆರೋಪ ಪ್ರತಿಪಕ್ಷಗಳ ಕಡೆಯಿಂದ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಸ್ಥಳೀಯರಲ್ಲದವರಿಗೆ ಮತದಾನಕ್ಕೆ ಅವಕಾಶ ನೀಡುವ ಚುನಾವಣಾ ಆಯೋಗದ ನಿರ್ಧಾರ ವ್ಯಾಪಕ ಟೀಕೆ ಮತ್ತು ವಿರೋಧಕ್ಕೆ ಈಡಾಗಿತ್ತು.

ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಕೂಡ, ಸ್ಥಳೀಯರಲ್ಲದ ಹೊರಗಿನವರಿಗೆ ಮತದಾರರ ಪಟ್ಟಿಗೆ ಸೇರ್ಪಡೆಗೆ ಅವಕಾಶ ನೀಡಿರುವುದರಿಂದ ಈ ಬಾರಿ ಸುಮಾರು 20-25 ಲಕ್ಷ ಮತದಾರರು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದರು.

ಆದರೆ, ಇದೀಗ ರಾಜ್ಯದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೂರು ವರ್ಷಗಳ ಬಳಿಕ ನಡೆದ ಈ ಪರಿಷ್ಕರಣೆಯಲ್ಲಿ ಹೊಸದಾಗಿ ಶೇ.10 ರಷ್ಟು ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಅಂದರೆ, ಸುಮಾರು 7 ಲಕ್ಷ ಮತದಾರರು ಮಾತ್ರ ಹೊಸದಾಗಿ ಪಟ್ಟಿಗೆ ಸೇರಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಹಾಗಾಗಿ ಸ್ಥಳೀಯರಲ್ಲದ ಹೊರಗಿನವರಿಗೆ ಮತದಾರರ ಪಟ್ಟಿಗೆ ಸೇರ್ಪಡೆ ಅವಕಾಶ ನೀಡುವ ಮೂಲಕ ಬಿಜೆಪಿ ರಾಜಕೀಯ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿದೆ ಎಂಬ ಪ್ರತಿಪಕ್ಷಗಳ ವಾದಕ್ಕೆ ಹಿನ್ನಡೆಯಾದಂತಾಗಿದೆ ಎಂದು ಮಾಧ್ಯಮಗಳು ಹೇಳಿವೆ.

"ಮತಪಟ್ಟಿಯ ವಿಶೇಷ ಪರಿಷ್ಕರಣೆ ವೇಳೆ ಅಂದಾಜು 20-25 ಲಕ್ಷ ಹೊಸ ಮತದಾರರು ಸೇರ್ಪಡೆಯಾಗುವ ನಿರೀಕ್ಷೆ ಇದೆ. ರಾಜ್ಯದ ಸಾಮಾನ್ಯ ನಿವಾಸಿಗಳಲ್ಲದ ಹೊರಗಿನವರಿಗೂ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗುವುದು. ಹಾಗಾಗಿ ಮತದಾರರ ಸಂಖ್ಯೆಯಲ್ಲಿ ದೊಡ್ಡ ಏರಿಕೆಯ ನಿರೀಕ್ಷೆ ಇದೆ" ಎಂದು ಜಮ್ಮು- ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿ ಕಳೆದ ಆಗಸ್ಟ್‌ನಲ್ಲಿ ಹೇಳಿದ್ದರು.

ಆ ಹಿನ್ನೆಲೆಯಲ್ಲಿ, ಹೊರಗಿನ ಮತದಾರರನ್ನು ಪಟ್ಟಿಗೆ ಸೇರಿಸುವ ಮೂಲಕ ಬಿಜೆಪಿಯ ಕೇಂದ್ರ ಸರ್ಕಾರವು ಚುನಾವಣಾ ಫಲಿತಾಂಶವನ್ನು ತನಗೆ ಬೇಕಾದಂತೆ ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು, ಪ್ರಾದೇಶಿಕ ಪಕ್ಷಗಳು ಆಪಾದಿಸಿದ್ದವು. ಆ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ಮತದಾರರ ಪಟ್ಟಿ ಪರಿಷ್ಕರಣೆಯ ವಿಷಯ ರಾಷ್ಟ್ರವ್ಯಾಪಿ ಚರ್ಚೆಯ ವಿಷಯವಾಗಿತ್ತು.

ಕಳೆದ 2019ರ ಮೇ ನಲ್ಲಿ ಲೋಕಸಭಾ ಚುನಾವಣೆಯ ಮೊದಲು, ರಾಜ್ಯದಲ್ಲಿ ಸುಮಾರು 76 ಲಕ್ಷ ನೋಂದಾಯಿತ ಮತದಾರರಿದ್ದರು. ಆ ಸಂಖ್ಯೆ ಈಗ 83 ಲಕ್ಷಕ್ಕೆ ಏರಿದೆ ಎಂದು ಪರಿಷ್ಕೃತ ಪಟ್ಟಿಯಿಂದ ತಿಳಿದು ಬಂದಿದೆ. ಶುಕ್ರವಾರ ಅಂತಿಮ ಪಟ್ಟಿ ಪ್ರಕಟವಾದ ನಂತರ ಆ ಸಂಖ್ಯೆಯಲ್ಲಿ ಸಣ್ಣ ಬದಲಾವಣೆಯಾದರೂ, ಅದು ದೊಡ್ಡ ಮಟ್ಟದ ಬದಲಾವಣೆಯನ್ನೇನೂ ಮಾಡಲಾರದು. ಹಾಗಾಗಿ ಭಾರೀ ಸಂಖ್ಯೆಯಲ್ಲಿ ಹೊರಗಿನವರು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬ ಆಯೋಗದ ನಿರೀಕ್ಷೆ ಮತ್ತು ಅದು ರಾಜಕೀಯ ಸಮೀಕರಣ ಬದಲಾಯಿಸಲಿದೆ ಎಂಬ ಪ್ರತಿಪಕ್ಷಗಳ ಆತಂಕ ಕೂಡ ಈಗ ಹುಸಿಯಾಗಿದೆ.

ಇನ್ನು ಈ ಮತದಾರರ ಪಟ್ಟಿ ಪರಿಷ್ಕರಣೆ ಕಣಿವೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಹಾದಿ ಸುಗಮಗೊಳಿಸಿದೆ. ಜಮ್ಮು-ಕಾಶ್ಮೀರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚುನಾಯಿತ ಸರ್ಕಾರ ಅಧಿಕಾರದಲ್ಲಿಲ್ಲ. 2014ರಲ್ಲಿ ಕೊನೆಯ ಬಾರಿಗೆ ಇಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು.

ಕಳೆದ ತಿಂಗಳು ಜಮ್ಮು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಪರಿಷ್ಕೃತ ಮತದಾರರ ಪಟ್ಟಿಯ ವಿವಾದಾತ್ಮಕ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಯಾವುದೇ ವಾಸ ದಾಖಲೆ ಪುರಾವೆಗಳಿಲ್ಲದಿದ್ದರೂ ಸ್ಥಳೀಯರಲ್ಲದವರನ್ನು ಮತದಾರರಾಗಿ ನೋಂದಾಯಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. 

ಹೊರಗಿನಿಂದ 25 ಲಕ್ಷ ಮತದಾರರು ಸೇರ್ಪಡೆಯಾಗುತ್ತಾರೆ ಎಂದು ಜನರನ್ನು ದಾರಿ ತಪ್ಪಿಸಲಾಗಿತ್ತು. ಕೇವಲ 6-7 ಲಕ್ಷ ಮತದಾರರು ಸೇರ್ಪಡೆಗೊಂಡಿದ್ದಾರೆ. ಅವರು ನಿಜವಾದ ಮತದಾರರಾಗಿದ್ದಾರೆ ಎಂದು ಜಮ್ಮು-ಕಾಶ್ಮೀರದ ಹಿರಿಯ ಬಿಜೆಪಿ ಮುಖಂಡ ಕವಿಂದರ್ ಗುಪ್ತಾ ಇದೀಗ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಗುಜರಾತ್ ಚುನಾವಣೆ | ಮೋದಿಯವರೇ, ರಾಜ್ಯದ ದುರಾಡಳಿತದ ಬಗ್ಗೆ ಮಾತಾಡಿ ಎಂದ ಮಲ್ಲಿಕಾರ್ಜುನ ಖರ್ಗೆ

ಚುನಾವಣಾ ಅಧಿಕಾರಿಗಳು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಪಟ್ಟಿಯ ಅಂತಿಮ ಪ್ರಕಟಣೆಗಾಗಿ ಕಾಯುವುದಾಗಿ ಪ್ರತಿಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಹೇಳಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಾಕಷ್ಟು ಆತಂಕಗಳಿವೆ ಎಂದು ಪಕ್ಷದ ಮುಖ್ಯ ವಕ್ತಾರ ತನ್ವಿರ್ ಸಾದಿಕ್ ಹೇಳಿದ್ದಾರೆ.

2019ರ ಆಗಸ್ಟ್‌ನಲ್ಲಿ ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಈ ಮೊದಲು ಜಮ್ಮು ಕಾಶ್ಮೀರದ ಭಾಗವಾಗಿದ್ದ  ಲಡಾಖನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಲಾಗಿದೆ.    

ಈ ನಡುವೆ ರಾಜ್ಯದ ಒಟ್ಟು 90 ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯ ವಿವಾದಕ್ಕೆ ಕಾರಣವಾಗಿದೆ. ಇಲ್ಲಿ ಜನಸಂಖ್ಯೆಯನ್ನು ಏಕೈಕ ಮಾನದಂಡವಾಗಿ ಪರಿಗಣಿಸದೇ ಇರುವ ಕಾರಣ ಸೀಟು ಹಂಚಿಕೆಯಲ್ಲಿ ವ್ಯತ್ಯಾಸಗಳಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಜಮ್ಮು-ಕಾಶ್ಮೀರದ ಬಹುಸಂಖ್ಯಾತ ಮುಸ್ಲಿಮರನ್ನು ಅನೇಕ ಕ್ಷೇತ್ರಗಳಲ್ಲಿ ರಾಜಕೀಯ ಅಲ್ಪಸಂಖ್ಯಾತರನ್ನಾಗಿ ಮಾಡಲು ಬಿಜೆಪಿ, ಕ್ಷೇತ್ರ ಪುನರ್‌ ವಿಂಗಡಣೆ, ಮತದಾರರ ಪಟ್ಟಿ ಪರಿಷ್ಕರಣೆಯಂತಹ ಕಾರ್ಯಗಳನ್ನು ಬಳಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180