ಸಾವರ್ಕರ್ ದ್ವಿರಾಷ್ಟ್ರದ ಸಿದ್ಧಾಂತ ಹುಟ್ಟುಹಾಕಿದರು, ಜಿನ್ನಾ ಪರಿಪೂರ್ಣಗೊಳಿಸಿದರು| ಬಿಜೆಪಿ ವಿಡಿಯೊಗೆ ಜೈರಾಮ್ ತಿರುಗೇಟು

  • ಕಳೆದ ವರ್ಷ ವಿಭಜನೆ ದಿನ ಘೋ‍ಷಿಸಿದ್ದ ಪ್ರಧಾನಿ ಮೋದಿ
  • ಬಿಜೆಪಿಗೆ ತಿರುಗೇಟು ಕೊಟ್ಟ ಕಾಂಗ್ರೆಸ್‌ ಸಂಸದ ಜೈರಾಮ್‌ ರಮೇಶ್‌

ಭಾರತೀಯ ಜನತಾ ಪಕ್ಷವು (ಬಿಜೆಪಿ) ಭಾರತದ ವಿಭಜನೆ ಕುರಿತಂತೆ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ದೂರಿರುವ ವಿಡಿಯೊಂದನ್ನು ಬಿಡುಗಡೆ ಮಾಡಿದೆ. ಪ್ರತಿಯಾಗಿ ಕಾಂಗ್ರೆಸ್‌ ನಾಯಕರು ತಿರುಗೇಟು ನೀಡಿದ್ದಾರೆ.

ಭಾರತದ ವಿಭಜನೆಯ ದಿನವಾದ ಭಾನುವಾರ (ಆಗಸ್ಟ್‌ 14) ಬಿಜೆಪಿಯು ಕಾಂಗ್ರೆಸ್‌ ಪಕ್ಷವನ್ನು ಗುರಿಯಾಗಿಸಿಕೊಂಡು ಘಟನೆಯ ಆವೃತ್ತಿ ಬಿಡುಗಡೆ ಮಾಡಿದೆ. ದಾಖಲೆಯಲ್ಲಿನ ದೃಶ್ಯಾವಳಿಗಳನ್ನು ಬಳಸಿ ಮತ್ತು ವಿಭಜನೆಯ ಕೆಲವು ನಾಟಕೀಯ ದೃಶ್ಯಗಳನ್ನು ಉಪಯೋಗಿಸಿಕೊಂಡು ಪ್ರಚೋದನಕಾರಿ ಸಂಗೀತದ ಜೊತೆಗೆ ದನಿಯನ್ನು ವಿಡಿಯೊದಲ್ಲಿ ಸೇರಿಸಲಾಗಿದೆ. ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಮ್‌ ಲೀಗ್‌ನ ಪಾಕಿಸ್ತಾನ ವಿಭಜನೆಗೆ ನೆಹರೂ ತಲೆಬಾಗಿದರು ಎಂದು ದೂಷಿಸಿರುವುದು ಏಳು ನಿಮಿಷಗಳ ವಿಡಿಯೊದಲ್ಲಿದೆ.  

"ಪ್ರಧಾನಿಯವರು ವಿಭಜನೆಯ  ದಿನವನ್ನು ಗುರುತಿಸುವ ಉದ್ದೇಶ, ಅತ್ಯಂತ ಆಘಾತಕಾರಿಯಾಗಿದೆ. ಐತಿಹಾಸಿಕ ಘಟನೆಗಳನ್ನು ತಮ್ಮ ರಾಜಕೀಯ ಕದನಗಳಿಗೆ ಸರಕಿನಂತೆ ಬಳಸಿಕೊಳ್ಳುತ್ತಿದೆ" ಎಂದು ಸಂಸದ ಜೈರಾಮ್ ರಮೇಶ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

"ಆಧುನಿಕ ದಿನದ ಸಾವರ್ಕರ್ ಮತ್ತು ಜಿನ್ನಾ ದೇಶವನ್ನು ವಿಭಜಿಸುವ ಪ್ರಯತ್ನಗಳನ್ನು ಮುಂದುವರೆಸುತ್ತಿದ್ದಾರೆ" ಎಂದು ಪ್ರಧಾನಿ ಮೋದಿಯನ್ನು ಪರೋಕ್ಷವಾಗಿ ಕುಟುಕಿದ್ದಾರೆ.

1947ರ ವಿಭಜನೆ ಸಮಯದ ಭಾರತೀಯರ ನೋವುಗಳು ಮತ್ತು ತ್ಯಾಗಗಳನ್ನು ದೇಶಕ್ಕೆ ನೆನಪಿಸಲು ಕಾರಣ ನೀಡಿ ಪ್ರತಿ ವರ್ಷ ಆಗಸ್ಟ್ 14 ಅನ್ನು ವಿಭಜನೆಯ ಭೀಕರ ನೆನಪಿನ ದಿನವಾಗಿ ನೆನಪಿಸಿಕೊಳ್ಳಲಾಗುವುದು ಎಂದು ಕಳೆದ ವರ್ಷ ಪ್ರಧಾನಿ ಮೋದಿ ಘೋಷಿಸಿದ್ದರು.

ಬಿಜೆಪಿ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ, ಸಿರಿಲ್ ಜಾನ್ ರಾಡ್‌ಕ್ಲಿಫ್ ಅವರ ವಿಭಜನಾ ನಕ್ಷೆಯು ಪಂಜಾಬ್ ಮತ್ತು ಬಂಗಾಳವನ್ನು ಅರ್ಧದಷ್ಟು ವಿಭಜಿಸಿತ್ತು. ಭಾರತೀಯ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತಿಳಿದಿಲ್ಲದ ವ್ಯಕ್ತಿ ಕೇವಲ ವಾರಗಳಲ್ಲಿ ಭಾರತವನ್ನು ವಿಭಜಿಸಲು ಹೇಗೆ  ಅವಕಾಶ ನೀಡಲಾಯಿತು ಎಂದು ವಿಡಿಯೊದಲ್ಲಿ ಪ್ರಶ್ನಿಸಲಾಗಿದೆ.  ವಿಭಜನೆ ಭೀಕರತೆ ವಿವರಿಸುವಾಗ ವಿಡಿಯೊದಲ್ಲಿ ನೆಹರೂ ಅವರ ದೃಶ್ಯಗಳನ್ನು ಹೆಚ್ಚು ತೋರಿಸಲಾಗಿದೆ.  

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ| ಕುಡಿಯುವ ನೀರಿನ ಕೊಡ ಮುಟ್ಟಿದ್ದಕ್ಕೆ ಶಿಕ್ಷಕನಿಂದ ಹಲ್ಲೆ; ದಲಿತ ವಿದ್ಯಾರ್ಥಿ ಸಾವು

“ಭಾರತದ ಸಾಂಸ್ಕೃತಿಕ ಪರಂಪರೆ, ನಾಗರಿಕತೆ, ಮೌಲ್ಯಗಳು, ತೀರ್ಥಯಾತ್ರೆಗಳ ಬಗ್ಗೆ ತಿಳಿದಿಲ್ಲದವರು ಕೇವಲ ಮೂರು ವಾರಗಳಲ್ಲಿ, ಶತಮಾನಗಳಿಂದ ಒಟ್ಟಿಗೆ ವಾಸಿಸುವ ಜನರ ನಡುವೆ ಗಡಿ ಎಳೆದರು” ಎಂದು ಆರೋಪಿಸಲಾಗಿದೆ.

"ವಿಭಜಕ ಶಕ್ತಿಗಳ ವಿರುದ್ಧ ಹೋರಾಡುವ ಜವಾಬ್ದಾರಿ ಹೊತ್ತಿದ್ದವರು ಆ ಸಮಯದಲ್ಲಿ ಎಲ್ಲಿದ್ದರು?’’ ಎಂದು ಬಿಜೆಪಿ ವಿಡಿಯೊ ಸಮೇತ ಟ್ವೀಟ್ ಮಾಡಿ ಪ್ರಶ್ನಿಸಿದೆ.

ವಿಡಿಯೊಗೆ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್ ಅವರು, “ವಿಭಜನೆಯ ದುರಂತವನ್ನು ದ್ವೇಷ ಮತ್ತು ಪೂರ್ವಗ್ರಹ ಉತ್ತೇಜಿಸಲು ದುರಪಯೋಗ ಮಾಡಿಕೊಳ್ಳಬಾರದು” ಎಂದು ತಿರುಗೇಟು ನೀಡಿದ್ದಾರೆ.

"ಸತ್ಯವೆಂದರೆ ಸಾವರ್ಕರ್ ದ್ವಿರಾಷ್ಟ್ರದ ಸಿದ್ಧಾಂತವನ್ನು ಹುಟ್ಟುಹಾಕಿದರು, ಜಿನ್ನಾ ಅದನ್ನು ಪರಿಪೂರ್ಣಗೊಳಿಸಿದರು. ಸರ್ದಾರ್ ಪಟೇಲ್ ಅವರು  ವಿಭಜನೆಯನ್ನು ಒಪ್ಪಿಕೊಳ್ಳದಿದ್ದರೆ, ಭಾರತವು ಅನೇಕ ಭಾಗಗಳಾಗಿ ವಿಭಜನೆಯಾಗುತ್ತದೆ ಮತ್ತು ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಬರೆದಿದ್ದರು" ಎಂದು ಅವರು ಹೇಳಿದ್ದಾರೆ.

"ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಗಾಂಧಿ, ನೆಹರೂ, ಪಟೇಲ್ ಹಾಗೂ ರಾಷ್ಟ್ರವನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಅವಿರತರಾಗಿದ್ದ ಅನೇಕರ ತ್ಯಾಗವನ್ನು ಪರಂಪರೆಯನ್ನು ಎತ್ತಿ ಹಿಡಿಯುತ್ತದೆ. ದ್ವೇಷದ ರಾಜಕೀಯವನ್ನು ಕಾಂಗ್ರೆಸ್‌ ಸೋಲಿಸುವುದು" ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಬಿಜೆಪಿಯ ವಿಡಿಯೊದಲ್ಲಿ ವಿಭಜನೆಗೆ ಭಾರತೀಯ ಕಮ್ಯುನಿಸ್ಟರು ಕಾರಣ ಎಂದು ದೂಷಿಸಲಾಗಿದೆ, ಕಮ್ಯುನಿಸ್ಟ್‌ ನಾಯಕರು ಮುಸ್ಲಿಮ್ ಲೀಗ್ ಅನ್ನು ಬೆಂಬಲಿಸಿದರು. ಪ್ರತ್ಯೇಕ ಮುಸ್ಲಿಮ್‌ ರಾಷ್ಟ್ರದ ಬೇಡಿಕೆಯನ್ನು ಸಮರ್ಥಿಸಿಕೊಂಡರು ಎಂದಿರುವ ವಿಡಿಯೊ ಹೆಚ್ಚಿನ ಪ್ರಮಾಣದಲ್ಲಿ ನೆಹರೂ ಮತ್ತು ಜಿನ್ನಾ ಅವರ ದೃಶ್ಯಗಳಿಂದ ಕೂಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್