ಸಾವರ್ಕರ್ 'ವೀರ'ರಾದದ್ದು ಹೇಗೆ? ವೀರ್‌ ವಿಶೇಷಣ ಮೊದಲು ಬಳಸಿದ್ದು ಯಾರು?

  • ಕ್ಷಮಾದಾನ ಕೋರಿ ಅನೇಕ ವರ್ಷ ಅರ್ಜಿ ಸಲ್ಲಿಸಿದ ಸಾವರ್ಕರ್
  • ಹಿಂದುತ್ವ ಸಿದ್ಧಾಂತದಿಂದ ಚಳವಳಿಯ ದಾರಿ ತಪ್ಪಿಸುವ ಪ್ರಯತ್ನ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ಆಡಳಿತಕ್ಕೆ ಬಂದ ನಂತರ ವಿನಾಯಕ್ ದಾಮೋದರ್ ಸಾವರ್ಕರ್ ಹೆಸರನ್ನು ಹೆಚ್ಚು ಮುನ್ನೆಲೆಗೆ ತರಲಾಯಿತು. ಜತೆಗೆ ‘ವೀರ್’ ಪದವನ್ನು ಹೆಚ್ಚು ಜನಪ್ರಿಯಗೊಳಿಸಲಾಗಿತ್ತು.

ಸಾವರ್ಕರ್ ಜೈಲಿನಿಂದ ಬಿಡುಗಡೆಯಾಗುವ ಮೊದಲು ಮತ್ತು ಹಿಂದುತ್ವ ಪ್ರತಿಪಾದಿಸುವ ಮುಂಚಿನ ದಿನಗಳಲ್ಲಿ ಭಾರತವನ್ನು ಬ್ರಿಟಿಷರ ದಾಸ್ಯದಿಂದ ವಿಮುಕ್ತಗೊಳಿಸಲು ಹೋರಾಡಿದರು. ಆದರೆ ಕ್ಷಮಾಪಣಾ ಪತ್ರ ನೀಡಿ ಜೈಲಿನಿಂದ ಹೊರಬಂದ ಸಾವರ್ಕರ್ ಯಾವುದೇ ಹೋರಾಟಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಬದಲಿಗೆ, ಸುಭಾಸ್ ಚಂದ್ರ ಬೋಸ್ ಅವರು ಭಾರತೀಯ ರಾಷ್ಟ್ರೀಯ ಸೇನೆ ಕಟ್ಟುತ್ತಿದ್ದ ಸಮಯದಲ್ಲಿ, ಸಾವರ್ಕರ್‌, ವಸಾಹತುಶಾಹಿ ಸರ್ಕಾರ ಸೇನೆ ಲಕ್ಷಾಂತರ ಭಾರತೀಯ ಸೈನಿಕರನ್ನು ನೇಮಕ ಮಾಡಿಕೊಳ್ಳಲು ಸಹಕರಿಸಿದರು. ದೇಶದ ಜನರೆಲ್ಲಾ ಧರ್ಮ- ಪಂಥದ ಬೇಧ ಬದಿಗಿಟ್ಟು ಒಂದಾಗಿ ಬ್ರಿಟಿಷರ ವಿರುದ್ಧ ಹೋರಾಡಬೇಕಾದ ಹೊತ್ತಿನಲ್ಲಿ ಹಿಂದುತ್ವದ ಸಿದ್ಧಾಂತ ಮುಂದಿಟ್ಟುಕೊಂಡು ದೇಶದ ಜನರನ್ನು ಧರ್ಮದ ಮೇಲೆ ಒಡೆಯುವ ಮೂಲಕ ಸ್ವಾತಂತ್ರ್ಯ ಚಳವಳಿ ಅತಂತ್ರಗೊಳಿಸಲು ಯತ್ನಿಸಿದರು. ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲೂ ಅವರ ಹೆಸರು ಇತ್ತು ಎಂದು ʼದ ವೈರ್ʼ ವರದಿ ಮಾಡಿದೆ.

1906ರಲ್ಲಿ ಕಾನೂನು ಅಧ್ಯಯನಕ್ಕೆಂದು ಇಂಗ್ಲೆಂಡ್‌ಗೆ ಹೋದಾಗ ಸಾವರ್ಕರ್ ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಹೋರಾಟದ ಸಲುವಾಗಿ ಸಂಘಟಿಸಲು ʼಫ್ರೀ ಇಂಡಿಯಾ ಸೊಸೈಟಿʼ ಆರಂಭಿಸಿದರು.

ಕ್ರಾಂತಿಕಾರಿಯಾಗಿದ್ದ ಸಾವರ್ಕರ್, ಅಂದಿನ ನಾಸಿಕ್‌ನ ಕಲೆಕ್ಟರ್ ಎಎಮ್‌ಟಿ ಜಾಕ್ಸನ್ ಅವರ ಹತ್ಯೆಗೆ ಪಿಸ್ತೂಲು ಸರಬರಾಜು ಮಾಡಿದರು. ಈ ಆರೋಪ ಮೇರೆಗೆ 1909ರಲ್ಲಿ 50 ವರ್ಷಗಳ ಕಾಲ ಶಿಕ್ಷೆ ವಿಧಿಸಲಾಯಿತು. ಬ್ರಿಟಿಷ್ ಸರ್ಕಾರದ ಎದುರು ಸ್ವಾತಂತ್ರ್ಯ ಹೋರಾಟಕ್ಕೆ ಬೆಲೆ ತೆರಬೇಕಾದ ಸಂದರ್ಭ ಬಂದಾಗ, ಅವರೇ ತಮ್ಮ ಕ್ಷಮಾಪಣಾ ಪತ್ರದಲ್ಲಿ ಬರೆದುಕೊಂಡಂತೆ ಬ್ರಿಟಿಷ್‌ ಸರ್ಕಾರಕ್ಕೆ ನಿಷ್ಠೆಯ ವಕಾಲತುದಾರರಾಗಿ ಪರಿವರ್ತನೆಗೊಂಡರು.

ಬಿಡುಗಡೆಗಾಗಿ ಬೇಡಿದ ಸಾವರ್ಕರ್

ಕೇವಲ ಒಂದು ತಿಂಗಳ ಜೈಲು ಅನುಭವಿಸಿದ್ದ ಸಾವರ್ಕರ್ ಮೊದಲ ಕ್ಷಮಾದಾನ ಅರ್ಜಿ ಸಲ್ಲಿಸಿದರು. 1911ರಲ್ಲಿ ಬ್ರಿಟಿಷ್‌ ಸರ್ಕಾರ ಅರ್ಜಿಯನ್ನು ತಿರಸ್ಕರಿಸಿತು. ಪಟ್ಟು ಬಿಡದ ಸಾವರ್ಕರ್ 1913ರಲ್ಲಿ ಎರಡನೇ ಅರ್ಜಿ ಸಲ್ಲಿಸಿದರು. ಅರ್ಜಿಯಲ್ಲಿ ಇತರೆ ಹೋರಾಟಗಾರರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೂರಿದ್ದರು.

ಕ್ಷಮಾಪಣಾ ಪತ್ರದಲ್ಲಿ ಸಾವರ್ಕರ್, “1906-07ರಲ್ಲಿ ಭಾರತದ ಉಮೇದಿನ ಮತ್ತು ಹತಾಶ ಪರಿಸ್ಥಿತಿಯಿಂದಾಗಿ ಕ್ರಾಂತಿಕಾರಿಯಾಗಿ ದಾರಿ ತಪ್ಪಿದ್ದೇನೆ” ಎಂದು ಬರೆದುಕೊಂಡಿದ್ದರು. 1913ರ ನವೆಂಬರ್ 14ರಂದು ಆತ್ಮಸಾಕ್ಷಿಯ ಬದಲಾವಣೆಯ ಬಗ್ಗೆ ಬ್ರಿಟಿಷರಿಗೆ ಭರವಸೆ ನೀಡಿದ ಬಳಿಕ ಅವರನ್ನು ಶಿಕ್ಷೆಯಿಂದ ಮುಕ್ತಗೊಳಿಸಲಾಯಿತು.

"ಸರ್ಕಾರವು ನನ್ನಿಂದ ಹೆಚ್ಚಿನ ಭದ್ರತೆಯನ್ನು ಬಯಸಿದರೆ, ನಾನು ಮತ್ತು ನನ್ನ ಸಹೋದರ ಸರ್ಕಾರವು ಸೂಚಿಸುವ ಒಂದು ನಿರ್ದಿಷ್ಟ ಮತ್ತು ಸಮಂಜಸವಾದ ಅವಧಿಗೆ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ ಎಂಬ ಪ್ರತಿಜ್ಞೆಯನ್ನು ನೀಡಲು ಸಂಪೂರ್ಣವಾಗಿ ಸಿದ್ಧರಿದ್ದೇವೆ" ಎಂದು ನಾಲ್ಕನೆಯ ಕ್ಷಮಾದಾನ ಅರ್ಜಿಯಲ್ಲಿ ಸಾವರ್ಕರ್ ಬರೆದುಕೊಂಡಿದ್ದರು.

ಈ ಸುದ್ದಿ ಓದಿದ್ದೀರಾ? "ಸಾವರ್ಕರರು ಹಿಂದುತ್ವ ಯೋಜನೆಯ ಸ್ಪಷ್ಟ ವ್ಯಾಖ್ಯಾನವನ್ನು ಎಂದಿಗೂ ನೀಡಿರಲಿಲ್ಲ"

ಅಂತಿಮವಾಗಿ, ಸೆಲ್ಯುಲಾರ್ ಜೈಲಿನಲ್ಲಿ ಹತ್ತು ವರ್ಷ ಕಳೆದ ನಂತರ ಅನೇಕ ಕ್ಷಮಾದಾನ ಅರ್ಜಿಗಳನ್ನು ಸ್ವೀಕರಿಸಿದ ಬ್ರಿಟಿಷ್ ಸರ್ಕಾರ, ಸಾವರ್ಕರ್ ಮತ್ತು ಅವರ ಸಹೋದರನ್ನು 1921ರಲ್ಲಿ ರತ್ನಗಿರಿಯ ಜೈಲಿಗೆ ಸ್ಥಳಾಂತರಿಸಿತು. ನಂತರ 1924ರಲ್ಲಿ ಅವರ ಚಲನವಲನಗಳ ಸಂಪೂರ್ಣ ಕಣ್ಗಾವಲಿನ ಷರತ್ತಿನ ಮೇಲೆ ಬಿಡುಗಡೆ ಮಾಡಿತು.

ಸ್ವಯಂ ಘೋಷಿತ ವೀರ

ಸಾವರ್ಕರ್ ಅವರ ಕ್ಷಮಾದಾನ ಪತ್ರ ಬ್ರಿಟಿಷರ ವಿರುದ್ಧ ಹೋರಾಡಲು ಬಳಸಿದ ಕುತಂತ್ರ ಎಂದು ಅನೇಕರು ಸಮರ್ಥಿಸಿಕೊಳ್ಳುತ್ತಾರೆ. ಕ್ಷಮಾಪಣೆ ಕೋರಿದ್ದ ವ್ಯಕ್ತಿ ‘ವೀರ್’ ಎಂಬ ವಿಶೇಷಣೆ ಪಡೆದ ಬಗ್ಗೆಯೂ ʼವೈರ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ʼಚಿತ್ರಗುಪ್ತʼ ಎಂಬ ಲೇಖಕ ಬರೆದ ʼಲೈಫ್ ಆಫ್ ಬ್ಯಾರಿಸ್ಟರ್ ಸಾವರ್ಕರ್ʼ ಎಂಬ ಪುಸ್ತಕವು 1926ರಲ್ಲಿ ಪ್ರಕಟವಾಗಿದೆ. ಇದು ಸಾವರ್ಕರ್ ಅವರ ಮೊದಲ ಜೀವನಚರಿತ್ರೆಯಾಗಿದ್ದು, ಸಾವರ್ಕರ್ ಅವರ ಧೈರ್ಯವನ್ನು ಈ ಪುಸ್ತಕದಲ್ಲಿ ವೈಭವೀಕರಿಸಲಾಗಿದೆ.

ಸಾವರ್ಕರ್ ಅವರ ಮರಣದ ಎರಡು ದಶಕಗಳ ನಂತರ ಈ ಪುಸ್ತಕದ ಎರಡನೇ ಆವೃತ್ತಿಯನ್ನು 1987ರಲ್ಲಿ ಸಾವರ್ಕರ್ ಅವರ ಬರಹಗಳ ಅಧಿಕೃತ ಪ್ರಕಾಶಕರಾದ ʼವೀರ್ ಸಾವರ್ಕರ್ʼ ಪ್ರಕಾಶನವು ಬಿಡುಗಡೆ ಮಾಡುತ್ತದೆ. ಆ ಪುಸ್ತಕದ ಮುನ್ನುಡಿಯಲ್ಲಿ ರವೀಂದ್ರ ರಾಮದಾಸ್ ಅವರು “ಚಿತ್ರಗುಪ್ತ ಬೇರೆ ಯಾರೂ ಅಲ್ಲ, ವೀರ್ ಸಾವರ್ಕರ್” ಎಂದು ಬಹಿರಂಗಪಡಿಸಿದ್ದಾರೆ.

ಈ ಆತ್ಮಚರಿತ್ರೆಯಲ್ಲಿ ಬೇರೆ ಲೇಖಕರು ಬರೆದ ಜೀವನಚರಿತ್ರೆಯಂತೆ ಸಾವರ್ಕರ್ ಅವರು ಓದುಗರಿಗೆ ನಂಬಿಕೆ ಹುಟ್ಟಿಸುತ್ತಾರೆ. ಜತೆಗೆ ತಮ್ಮನ್ನು ತಾವೇ ‘ವೀರ್’ ಎಂದು ಕರೆದುಕೊಂಡು ಸ್ವಯಂಘೋಷಿತ ನಾಯಕನಾಗಿ ಹೊರ ಹೊಮ್ಮುತ್ತಾರೆ.

ಹಿಂದುತ್ವ ಸಿದ್ಧಾಂತದಿಂದ ಸ್ವಾತಂತ್ರ್ಯ ಚಳವಳಿ ಹಾದಿತಪ್ಪಿಸುವ ಯತ್ನ

1920ರ ದಶಕದಲ್ಲಿ ಹಿಂದೂ- ಮುಸ್ಲಿಂ ಎನ್ನುವ ಎರಡು ಮತೀಯ ಚಿಂತನೆಗಳಿಂದ ಸ್ವಾತಂತ್ರ್ಯ ಚಳವಳಿಗೆ ಹಾನಿಯಾಗುತ್ತದೆ ಎಂಬುವುದು ಬ್ರಿಟಿಷ್‌ ಸರ್ಕಾರಕ್ಕೆ ಸ್ಪಷ್ಟವಾಗಿ ಗೊತ್ತಿತ್ತು. ಹಾಗಾಗಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂಬ ಷರತ್ತನ್ನು ಸಾವರ್ಕರ್ ಮೇಲೆ ವಿಧಿಸಿ ಬಿಡುಗಡೆ ಮಾಡಿದ್ದರೂ, ಬ್ರಿಟಿಷರು ರತ್ನಗಿರಿ ಮಹಾಸಭಾವನ್ನು ಸಂಘಟಿಸಲು ಸಾವರ್ಕರ್ ಅವರಿಗೆ ಅವಕಾಶ ಮಾಡಿಕೊಟ್ಟರು.

ಭ್ರಮನಿರಸನಗೊಂಡಿದ್ದ ಕಾಂಗ್ರೆಸಿಗ ಕೆ.ಬಿ. ಹೆಡಗೇವಾರ್ ಅವರನ್ನು ಭೇಟಿಯಾಗಲು ಸಾವರ್ಕರ್‍‌ಗೆ ಅವಕಾಶ ನೀಡಲಾಯಿತು. ಹಿಂದುತ್ವದ ಅವರ ಸಿದ್ಧಾಂತದಿಂದ ಪ್ರೇರಿತರಾಗಿ, ಹಿಂದೂ ರಾಷ್ಟ್ರವನ್ನು ರಚಿಸುವ ತಂತ್ರವನ್ನು ಅವರೊಂದಿಗೆ ಚರ್ಚಿಸಿದರು. ನಂತರ, ಹೆಡಗೇವಾರ್ ಸೆಪ್ಟೆಂಬರ್ 1925ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ ಎಸ್‌ ಎಸ್‌) ಸ್ಥಾಪಿಸಿದರು. 

ಈ ಸುದ್ದಿ ಓದಿದ್ದೀರಾ?ಸಂಘ ಬಿಟ್ಟವರು ಬಿಚ್ಚಿಟ್ಟ ಸತ್ಯ| ಯಾವುದೇ ತಪ್ಪು ಮಾಡದೇ ಇರುವ ಹುಡುಗರ ಮೇಲೂ ಪ್ರಕರಣ

ವಿಭಜನೆಯಲ್ಲಿ ಸಾವರ್ಕರ್ ಮತ್ತು ಮುಸ್ಲಿಂ ಲೀಗ್ ಪಾತ್ರ

"ಪಾಕಿಸ್ತಾನ ವಿಭಜನೆ ಅಂಗೀಕರಿಸಿದಾಗ ಮುಸ್ಲಿಂ ಲೀಗ್ ಜೊತೆಗಿನ ಮೈತ್ರಿಕೂಟದಲ್ಲಿ
ಸಾವರ್ಕರ್ ಮತ್ತು ಹಿಂದೂ ಮಹಾಸಭಾ ಬ್ರಿಟಿಷರೊಂದಿಗೆ ಸಕ್ರಿಯವಾಗಿ ಸಹಕರಿಸಿದ್ದಾರೆಂದು ಅರ್ಥಮಾಡಿಕೊಳ್ಳಲು ಕಷ್ಟವಾಗುವುದಿಲ್ಲ. ಏಕೆಂದರೆ ಹಿಂದುತ್ವದ ಗುಂಪುಗಳು ಮುಸ್ಲಿಮರನ್ನು ತಮ್ಮ ಪ್ರಾಥಮಿಕ ಶತ್ರುಗಳಾಗಿ ಪರಿಗಣಿಸುತ್ತವೆಯೇ ಹೊರತು; ಬ್ರಿಟಿಷರನ್ನಲ್ಲ" ಎಂದು ವ್ಯಾಪಕವಾಗಿ ತಿಳಿದಿದೆ ಎಂದು ದ ವೈರ್‌ ವರದಿ ಉಲ್ಲೇಖಿಸಿದೆ.

ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಕಾಂಗ್ರೆಸ್ ನಾಯಕರನ್ನು ಬಂಧಿಸಿದಾಗ, ಸಾವರ್ಕರ್ ಅವರ ಅಧ್ಯಕ್ಷತೆಯಲ್ಲಿ ಹಿಂದೂ ಮಹಾಸಭಾ, ಸಿಂಧ್ ಮತ್ತು ಬಂಗಾಳದಲ್ಲಿ ಸರ್ಕಾರಗಳನ್ನು ನಡೆಸಲು ಮುಸ್ಲಿಂ ಲೀಗ್‌ನ ಮೈತ್ರಿಕೂಟದ ಭಾಗವಾಗಿತ್ತು.  

ಸ್ವಾತಂತ್ರ್ಯ ಹೋರಾಟದಲ್ಲಿ ಎರಡೂ ಪಕ್ಷಗಳು ಯಾವುದೇ ಕೊಡುಗೆ ನೀಡಲಿಲ್ಲ ಮತ್ತು ಎರಡೂ ಕೋಮುವಾದಿ ಪಕ್ಷಗಳಾಗಿದ್ದು, ಅವರ ಸಿದ್ಧಾಂತಗಳು ಸ್ವಾತಂತ್ರ್ಯದ ನಂತರ ಭಾರತವು ಅಖಂಡವಾಗಿ ಉಳಿಯುವ ನಿರೀಕ್ಷೆಗಳನ್ನು ವಿಫಲಗೊಳಿಸಿದವು ಎಂದು ʼದ ವೈರ್‌ʼ ಹೇಳಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್