50 ಶಾಸಕರಲ್ಲಿ ಒಬ್ಬ ಶಾಸಕ ಸೋತರೂ ರಾಜಕೀಯ ಸನ್ಯಾಸತ್ವ ತೆಗದುಕೊಳ್ಳುವೆ ಎಂದ ಶಿಂಧೆ

  • 50 ಬಂಡಾಯ ಶಾಸಕರ ಜೊತೆಗಿರುವೆ ಎಂದ ಶಿಂಧೆ
  • ಸದನದ ಭಾಷಣ ಕೇಳಿ ಅಭಿನಂದಿಸಿದ ಪ್ರಧಾನಿ ಮೋದಿ

ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಶಿವಸೇನೆಯ 50 ಶಾಸಕರ ಪೈಕಿ ಒಬ್ಬ ಶಾಸಕ ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತರೆ, ಶಾಶ್ವತವಾಗಿ ರಾಜಕೀಯ ತೊರೆಯುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶುಕ್ರವಾರ ಹೇಳಿದ್ದಾರೆ.

ಮುಂಬೈನಲ್ಲಿ 50 ಬಂಡಾಯ ಶಾಸಕರು ಸೇರಿ ಏಕನಾಥ ಶಿಂಧೆ ಅವರಿಗೆ ಸನ್ಮಾನ ಮಾಡಿದರು. ತಮ್ಮ ನಿರ್ಧಾರಕ್ಕೆ ಬೆಂಬಲ ಸೂಚಿಸಿ ಶಾಸಕರು ಆಪಾಯ ತೆಗೆದುಕೊಂಡರು ಎಂದ ಶಿಂಧೆ ಹೇಳಿದ್ದಾರೆ.

“ನನ್ನೊಂದಿಗೆ ಬಂದ ಶಾಸಕರ ಜವಾಬ್ದಾರಿ ಈಗ ನನ್ನದು. ಅವರ ಕ್ಷೇತ್ರಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಹಾಯ ಮಾಡುತ್ತೇನೆ ಮತ್ತು ಅವರಿಗಾಗಿ ನಾನು ಸಮಯ ನೀಡುತ್ತೇನೆ” ಎಂದು ಹೇಳಿದ್ದಾರೆ.

ಶಿವಸೇನೆಯ ಹಿಂದಿನ ಇತಿಹಾಸದ ಪ್ರಕಾರ, ಉದ್ಧವ್ ಠಾಕ್ರೆ ವಿರುದ್ಧ 50 ಶಾಸಕರು ಮುಂದಿನ ಚುನಾವಣೆಗಳಲ್ಲಿ ಸೋಲುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅವರಿಗೆ ಹೇಳಲು ಇಷ್ಟಪಡುವುದೇನೆಂದರೆ, 50 ಶಾಸಕರ ಪೈಕಿ ಒಬ್ಬ ಶಾಸಕ ಸೋತರೂ ನಾನು ಶಾಶ್ವತವಾಗಿ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ” ಎಂದು ಏಕನಾಥ ಶಿಂಧೆ ಹೇಳಿದರು.

“ಆರಂಭದಲ್ಲಿ ಕೆಲವೇ ಶಾಸಕರು ನಮ್ಮೊಂದಿಗಿದ್ದರು, ನಂತರ 50 ಶಾಸಕರು ಜೊತೆಗೂಡಿದರು. ನಮ್ಮ ವಿರುದ್ಧ ಕೆಲವರು ಸುಳ್ಳು ಸುದ್ದಿ ಹಬ್ಬಿಸಿ, ನನ್ನ ಮನೆಗೆ ಕಲ್ಲು ಎಸೆಯಲು ಸಹ ಕೇಳಿದರು. ಆದರೆ ಅವರ ಕೊಳಕು ಆಟವನ್ನು ಯಾರೂ ಸಹ ಬೆಂಬಲಿಸಲಿಲ್ಲ. ಜನರು ನಮ್ಮೊಂದಿಗಿದ್ದಾರೆ ಮತ್ತು ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ನಮ್ಮ ನಿರ್ಧಾರ ಸ್ವಾಗತಿಸಿದ್ದಾರೆ”  ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ? ಐದು ಲಕ್ಷ ದಂಡ ಪಾವತಿಸಿದರೆ ತಪ್ಪು ಒಪ್ಪಿಕೊಂಡಂತೆ ಎಂದ ದಾಂತೇವಾಡ ಹೋರಾಟಗಾರ

“ಸೂರತ್ ಮತ್ತು ಗುವಾಹಟಿಯಲ್ಲಿ ಇದ್ದಷ್ಟು ದಿನ ನಿದ್ದೆ ಬಂದಿರಲಿಲ್ಲ. 1.00 ಗಂಟೆಗೆ ಮಲಗಿ 3.00ಗೆ ಎದ್ದೇಳುತ್ತಿದ್ದೆ. ಅದು ನನ್ನ ಜೀವನದ ಒಂದು ಉದ್ವಿಗ್ನ ಕ್ಷಣವಾಗಿತ್ತು. ನಾನು ನನ್ನ ಭವಿಷ್ಯದ ಬಗ್ಗೆ ಚಿಂತಿಸಲಿಲ್ಲ. ಆದರೆ ಉದ್ಧವ್ ಠಾಕ್ರೆ ಅವರನ್ನು ಬಿಟ್ಟು ನನ್ನೊಂದಿಗೆ ಸೇರಲು ಹೊರಟ 50 ಶಾಸಕರ ಭವಿಷ್ಯದ ಬಗ್ಗೆ ಕಾಳಜಿ ಇತ್ತು. ಅವರು ನನ್ನ ನಾಯಕತ್ವದಲ್ಲಿ ವಿಶ್ವಾಸ ತೋರಿಸಿದರು. ಈಗ ಎಲ್ಲ 50 ಶಾಸಕರು ತಾವೇ ಮಹಾರಾಷ್ಟ್ರದ ಮುಖ್ಯಮಂತ್ರಿ ಎಂದು ಭಾವಿಸಬೇಕು'' ಎಂದು ಬಂಡಾಯ ಶಾಸಕರನ್ನು ಉದ್ದೇಶಿಸಿ ಮಾತನಾಡಿದರು.

“ನಿಧಿಯನ್ನು ಕಾಂಗ್ರೆಸ್ ಮತ್ತು ಎನ್‌ಸಿಪಿಗೆ ಮಾತ್ರ ನೀಡಲಾಗಿತ್ತು. ಈಗ ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದೇನೆ, ನಮ್ಮ ಜನರಿಗೆ ಯಾರೂ ತೊಂದರೆ ಕೊಡುವುದಿಲ್ಲ. ನಾನು ಈ ಹಿಂದೆ ಒಂದಲ್ಲ ಐದು ಬಾರಿ ನಮ್ಮ ನಾಯಕತ್ವಕ್ಕೆ ದೂರು ನೀಡಿದ್ದರೂ ಅವರು ನಮ್ಮ ಮಾತನ್ನು ಕೇಳಲಿಲ್ಲ. ಆದ್ದರಿಂದ, ರಾಜ್ಯದ ಹಿತಾಸಕ್ತಿಗಾಗಿ ಈ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವದ ಅಜೆಂಡಾ ಮುಂದಕ್ಕೆ ಕೊಂಡೊಯ್ಯಲು ನಮಗೆ ಯಾವುದೇ ಆಯ್ಕೆಗಳಿರಲಿಲ್ಲ” ಎಂದು ಶಿಂಧೆ ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿದರು. "ನಾನು ನಿಮ್ಮ ಸದನದ ಭಾಷಣ ಕೇಳಿದ್ದೇನೆ ಮತ್ತು ನೀವು ಹೃದಯದಿಂದ ಮಾತನಾಡಿದ್ದರಿಂದ ಅದು ತುಂಬಾ ಇಷ್ಟವಾಯಿತು ಎಂದು ಪ್ರಧಾನಿ ನನಗೆ ಹೇಳಿದರು" ಎಂದು ಶಿಂಧೆ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app