ರೈತರ ವಿರುದ್ಧ ಹೋರಾಡಿ ಯಾರೂ ಗೆದ್ದಿಲ್ಲ; ಪಂಜಾಬ್ ಸಿಎಂಗೆ ಸಿಧು ಎಚ್ಚರಿಕೆ

  • ರೈತ ಹೋರಾಟ ಅನಗತ್ಯ ಎಂದು ಹೇಳಿದ್ದ ಮುಖ್ಯಮಂತ್ರಿ ಭಗವಂತ್ ಮಾನ್
  • ರೈತರ ಸಮಸ್ಯೆಗಳನ್ನು ಅಲಕ್ಷಿಸದಂತೆ ಆಪ್ ಸರ್ಕಾರವನ್ನು ಎಚ್ಚರಿಸಿದ ಸಿಧು

ರಾಜ್ಯಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿ ಹಿರಿಯ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಕಿಡಿಕಾರಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, ಆಮ್ ಆದ್ಮಿ ಪಾರ್ಟಿಯ ಐಟಿ ಸೆಲ್ ರೈತರ ಪ್ರತಿಭಟನೆಯ ಕುರಿತು ಅವಹೇಳನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪಂಜಾಬ್ ಜನಸಂಖ್ಯೆಯ ಶೇ.60ರಷ್ಟಿರುವ ರೈತರು, ರಾಜ್ಯದ ಆರ್ಥಿಕತೆಯ ಬೆನ್ನೆಲುಬು. ಅವರೊಂದಿಗೆ ಸಂಘರ್ಷಕ್ಕೆ ಇಳಿಯದಿರಿ ಎಂದು ಮುಖ್ಯಮಂತ್ರಿ ಮಾನ್ ಅವರಿಗೆ ಮನವಿ ಮಾಡಿದ್ದಾರೆ. "ರೈತರ ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಿ. ಇದರಿಂದ ಶೇ. 70ರಷ್ಟು ನಿಮ್ಮ ಸಮಸ್ಯೆಯೂ ಬಗೆಹರಿಯಲಿದೆ" ಎಂದು ಸಲಹೆ ನೀಡಿದ್ದಾರೆ.

"ರೈತರ ವಿರುದ್ಧ ಹೋರಾಟಕ್ಕಿಳಿದು ಈವರೆಗೆ ಯಾರೂ ಗೆದ್ದಿಲ್ಲ" ಎಂದೂ ಸಿಧು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ? ಮೊಹಾಲಿ ಗಡಿಯಲ್ಲಿ ಪಂಜಾಬ್ ರೈತರ ಪ್ರತಿಭಟನೆ | ಚಂಡೀಗಢ ಪ್ರವೇಶಕ್ಕೆ ತಡೆ

ರೈತ ಹೋರಾಟವನ್ನು ಅನಗತ್ಯ ಎಂದಿದ್ದ ಮುಖ್ಯಮಂತ್ರಿ ಮಾನ್

"ನೇರವಾಗಿ ಬೀಜ ಬಿತ್ತನೆಯಿಂದ ನೀರು ಉಳಿಯುತ್ತದೆ ಎಂದು ಯಾವ ವೈಜ್ಞಾನಿಕ ಅಧ್ಯಯನವು ಈವರೆಗೂ ಸಾಬೀತುಪಡಿಸಿಲ್ಲ. ಶೇ. 80ರಷ್ಟು ರೈತರಿಗೆ ನೇರಬಿತ್ತನೆ ಸಾಧ್ಯವಿಲ್ಲ. ಅಲ್ಲದೇ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇರುವುದನ್ನು ಎಎಪಿಯ ನಾಯಕರು ನೇರವಾಗಿ ಒಪ್ಪಿಕೊಳ್ಳಬೇಕು" ಎಂದು ಸಿಧು ಹೇಳಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಚಂಡೀಗಡ- ಮೊಹಾಲಿ ಗಡಿಯಲ್ಲಿ ಕೈಗೊಂಡಿದ್ದ ಪ್ರತಿಭಟನೆ ತಡೆಯಲೆತ್ನಿಸಿದರೂ ಅದು ಬುಧವಾರವೂ ಮುಂದುವರಿದಿದೆ. ರೈತರ ಹೋರಾಟವನ್ನು ಮುಖ್ಯಮಂತ್ರಿ ಮಾನ್‌, "ಅನಗತ್ಯ" ಎಂದಿದ್ದು, "ರೈತರು ಘೋಷಣೆ ಕೂಗುವುದನ್ನು ನಿಲ್ಲಿಸಿ, ಪಂಜಾಬ್‌ನಲ್ಲಿ ಕ್ಷೀಣಿಸುತ್ತಿರುವ ನೀರಿನ ಮಟ್ಟ ಪರಿಶೀಲಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು" ಎಂದು ಮನವಿ ಮಾಡಿದ್ದಾರೆ.

"ರೈತರನ್ನು ಭೇಟಿಯಾಗಲು ನಾನು ಸಿದ್ಧನಿದ್ದೇನೆ. ಆದರೆ 'ಮುರ್ದಾಬಾದ್' ಘೋಷಣೆ ಕೂಗುವುದು ಸರಿಯಲ್ಲ" ಎಂದು ಮಾನ್ ಹೇಳಿದ್ದಾರೆ. ಒಂದು ವರ್ಷದವರೆಗೆ ಸಹಕಾರ ನೀಡುವಂತೆ ರೈತರಲ್ಲಿ ಮನವಿ ಮಾಡಿದ ಮಾನ್, ರೈತರ ಬೆಳೆಗಳಿಗೆ ಆಗುವ ಎಲ್ಲಾ ನಷ್ಟವನ್ನು ಸರ್ಕಾರವೇ ಭರಿಸುತ್ತದೆ ಎಂದು ಭರವಸೆ ನೀಡಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್