ಭತ್ತ ಖರೀದಿಸಲು ಕೇಂದ್ರ ಸರ್ಕಾರ ನಿರಾಕರಣೆ: ರೈತರಿಗಾಗಿ ಮಹತ್ವದ ನಿರ್ಧಾರ ಕೈಗೊಂಡ ತೆಲಂಗಾಣ

  • ರಾಜ್ಯ ಸರ್ಕಾರದಿಂದಲೇ ಭತ್ತ ಖರೀದಿಸಲು ನಿರ್ಧಾರ ಘೋಷಿಸಿದ ತೆಲಂಗಾಣ ಸಿಎಂ ಚಂದ್ರಶೇಖರ್
  • ಪ್ರತಿ ಕ್ವಿಂಟಾಲ್ ಭತ್ತಕ್ಕೆ 1,960 ರೂಪಾಯಿ ನಿಗದಿಪಡಿಸಿದ ತೆಲಂಗಾಣ

ಭತ್ತ ಖರೀದಿ ಮಾಡುವ ವಿಚಾರಕ್ಕೆ ಸಂಬಂಧಿಸಿ ತೆಲಂಗಾಣ ಸರ್ಕಾರವು ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಪ್ರಸಕ್ತ ರಾಬಿ(ಯಾಸಂಗಿ) ಋತುವಿನಲ್ಲಿ ತೆಲಂಗಾಣ ರೈತರಿಂದ ಭತ್ತ ಖರೀದಿಸಲು ಕೇಂದ್ರ ಸರ್ಕಾರ ನಿರಾಕರಿಸಿದ್ದರಿಂದ ರಾಜ್ಯ ಸರ್ಕಾರ ಅದನ್ನು ಖರೀದಿಸಲು ನಿರ್ಧರಿಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ.

Eedina App

ತೆಲಂಗಾಣದ ಭತ್ತದ ಕಟಾವನ್ನು ಕೇಂದ್ರವೇ ಖರೀದಿಸಬೇಕು ಎಂದು ಆಗ್ರಹಿಸಿ ಏಪ್ರಿಲ್ 11ರ ಸೋಮವಾರ ದೆಹಲಿಯಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ನೇತೃತ್ವದಲ್ಲಿ ಧರಣಿ ನಡೆಸಿದ್ದರು. ಅಲ್ಲದೇ, 24 ಗಂಟೆಗಳೊಳಗೆ ಕೇಂದ್ರ ಸರ್ಕಾರವು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕೆಂದು ಗಡುವು ನೀಡಿದ್ದರು. ಆದರೆ ಕೇಂದ್ರ ಸರ್ಕಾರವು ತೆಲಂಗಾಣ ಸರ್ಕಾರದ ಗಡುವಿಗೆ ಸ್ಪಂದಿಸದಿರುವುದರಿಂದ ರಾಜ್ಯ ಸರ್ಕಾರ ರೈತರಿಂದ ಭತ್ತ ಖರೀದಿಸಲು ನಿರ್ಧರಿಸಿದೆ ಎಂದು ಮಂಗಳವಾರ ಮುಖ್ಯಮಂತ್ರಿ ಕೆಸಿಆರ್ ಹೇಳಿದ್ದಾರೆ.

ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಕೆಸಿಆರ್, ಪ್ರತಿ ಕ್ವಿಂಟಾಲ್ ಭತ್ತಕ್ಕೆ 1,960 ರೂಪಾಯಿ ನೀಡಲಿದೆ. ಮೂರ್ನಾಲ್ಕು ದಿನಗಳಲ್ಲಿ ರೈತರಿಂದ ಅಕ್ಕಿ ಖರೀದಿಸಲು ಪ್ರತೀ ಗ್ರಾಮಗಳಲ್ಲಿ ರಾಜ್ಯ ಸರ್ಕಾರವು ಭತ್ತ ಖರೀದಿ ಕೇಂದ್ರಗಳ ವ್ಯವಸ್ಥೆ ಮಾಡಲಿದೆ. ಖರೀದಿಸಿದ ಬಳಿಕ ಹಣವನ್ನು ತಕ್ಷಣವೇ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ತಮ್ಮ ಬೆಳೆಗಳ ಬಗ್ಗೆ ರೈತರು ಭಯಪಡಬೇಕಾಗಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.

AV Eye Hospital ad

ಇದನ್ನು ಓದಿದ್ದೀರಾ? ದಾನದ ಬದಲು ಧಾನ್ಯಕ್ಕೆ ಬೆಲೆ ಬೇಕು: ಮೈಸೂರಿನಲ್ಲಿ ಯೋಗೇಂದ್ರ ಯಾದವ್‌

ತೆಲಂಗಾಣದ ನಿಝಾಮಾಬಾದ್ ಜಿಲ್ಲೆಯಲ್ಲಿ ಏಪ್ರಿಲ್ 12ರಂದು ತೆಲಂಗಾಣದ ಭಾರತೀಯ ಜನತಾ ಪಕ್ಷದ ಸಂಸದ ಅರವಿಂದ್ ಧರ್ಮಪುರಿ ಅವರ ಮನೆಯ ಹೊರಗೆ ಭತ್ತ ಸುರಿದು ಕೇಂದ್ರದ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು. ಭತ್ತ ಖರೀದಿ ಮಾಡದೆ ಕೇಂದ್ರ ದ್ರೋಹ ಬಗೆದಿದೆ ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದರು.

"ಬಿಜೆಪಿ ಸಂಸದರು ದೆಹಲಿಯಲ್ಲಿ ಅಡಗಿಕೊಂಡಿದ್ದಾರೆ ಮತ್ತು ಭತ್ತ ಸಂಗ್ರಹಣೆ ವಿಷಯವನ್ನು ಇನ್ನೂ ಪರಿಗಣಿಸದೆ ನಮಗೆ ದ್ರೋಹ ಮಾಡಿದ್ದಾರೆ. ಕೇಂದ್ರವು ನಮ್ಮಿಂದ ಭತ್ತವನ್ನು ಖರೀದಿಸಬೇಕು" ಎಂದು ಒತ್ತಾಯಿಸಿದ್ದರು. ಈ ಮಧ್ಯೆ ತೆಲಂಗಾಣ ಬಿಜೆಪಿ ಘಟಕವು ರೈತರ ಪರ ನಿಲ್ಲದೆ, "ಭತ್ತ ಖರೀದಿಸುವುದು ಕೇಂದ್ರದ ಜವಾಬ್ದಾರಿಯಲ್ಲ. ರಾಜ್ಯದ ಹೊಣೆಗಾರಿಕೆ" ಎಂದು ತೆಲಂಗಾಣ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ತೆಲಂಗಾಣ ರೈತರು ಬೆಳೆದ ಭತ್ತವನ್ನು ಖರೀದಿಸಲು ಕೇಂದ್ರ ನಿರಾಕರಿಸಿದೆ. ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ರಾಜ್ಯದ ಆಡಳಿತಕ್ಕೆ ಅಗೌರವ ತೋರಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರಶೇಖರ್ ಟೀಕಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app