ಹಿಂದಿ ಹೇರಿಕೆ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ

  • ಸದನದಿಂದ ಸರ್ವಾನುಮತದಿಂದ ನಿರ್ಣಯ ಅಂಗೀಕಾರ
  • ಶಿಫಾರಸು ರಾಜ್ಯಗಳ ಹಿತಾಸಕ್ತಿಗೆ ವಿರುದ್ಧ ಎಂದ ಸರ್ಕಾರ

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಅಲ್ಲದೆ, ಸಂಸದೀಯ ಸಮಿತಿ ಮಾಡಿರುವ ಶಿಫಾರಸು ಜಾರಿಗೊಳಿಸದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರವು ಕೇಂದ್ರೀಯ ಸೇವೆಗಳಿಗೆ ನಡೆಸುವ ಪರೀಕ್ಷೆಗಳ ಮಾಧ್ಯಮವನ್ನು ಹಿಂದಿಯಲ್ಲಿ ಮಾಡಲು ಮತ್ತು ಐಐಟಿಗಳು ಮತ್ತು ಐಐಎಂಗಳು ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಕಡ್ಡಾಯ ಅಧ್ಯಯನ ಭಾಷೆಯನ್ನಾಗಿ ಮಾಡಲು ಸಂಸತ್ತಿನ ಅಧಿಕೃತ ಭಾಷಾ ಸಮಿತಿಯು ಶಿಫಾರಸ್ಸು ಮಾಡಿದೆ. ಈ ಕುರಿತು ಎಂ ಕೆ ಸ್ಟಾಲಿನ್ ನೇತೃತ್ವದ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಅಂಗೀಕರಿಸಿದೆ.

ಸೆಪ್ಟೆಂಬರ್ 9ರಂದು ರಾಷ್ಟ್ರಪತಿಗಳಿಗೆ ಸಲ್ಲಿಸಿದ ಶಿಫಾರಸು ತಮಿಳು ಸೇರಿದಂತೆ ರಾಜ್ಯ ಭಾಷೆಗಳ ವಿರುದ್ಧವಿದೆ ಮತ್ತು ಪ್ರಾದೇಶಿಕ ಭಾಷೆ ಮಾತನಾಡುವ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಎಂ ಕೆ ಸ್ಟಾಲಿನ್ ಅವರು ನಿರ್ಣಯ ಮಂಡಿಸಿದ್ದಾರೆ.

"ಈಗ ಮಂಡಿಸಿರುವ ಸಂಸದೀಯ ಸಮಿತಿಯ ಶಿಫಾರಸ್ಸು ದ್ವಿಭಾಷಾ ನೀತಿಯ ನಿರ್ಣಯಕ್ಕೆ ವಿರುದ್ಧವಾಗಿದೆ ಎಂದು ಸದನವು ಕಳವಳ ವ್ಯಕ್ತಪಡಿಸುತ್ತದೆ. ಸದನದಲ್ಲಿ ಪೆರಾರಿಗ್ನಾರ್ ಅಣ್ಣಾ ಅವರು ಮಂಡಿಸಿದ ಮತ್ತು ಅಂಗೀಕರಿಸಿದ ದ್ವಿಭಾಷಾ ನೀತಿಯ ನಿರ್ಣಯಕ್ಕೆ ವಿರುದ್ಧವಾಗಿದೆ" ನಿರ್ಣಯ ಹೇಳಿದೆ.

AV Eye Hospital ad

ಈ ಸುದ್ದಿ ಓದಿದ್ದೀರಾ? ಹಿಂದಿ ಹೇರಿಕೆಯಿಂದ ಭಾಷಾ ಸಮರವಾಗಲಿದೆ ಎಂದು ಎಚ್ಚರಿಸಿದ ಸ್ಟಾಲಿನ್

"ಆಗಿನ ಪ್ರಧಾನಿ ನೆಹರು ಅವರು ಹಿಂದಿಯೇತರ ರಾಜ್ಯಗಳಿಗೆ ನೀಡಿದ್ದ ಭರವಸೆಗೆ ವಿರುದ್ಧವಾಗಿ ಅಧಿಕೃತ ಭಾಷೆಯ ಮೇಲೆ 1968 ಮತ್ತು 1976ರಲ್ಲಿ ಅಂಗೀಕರಿಸಿದ ನಿರ್ಣಯಗಳಿಂದ ಅಧಿಕೃತ ಭಾಷೆಯಾಗಿ ಇಂಗ್ಲಿಷ್ ಬಳಕೆಯನ್ನು ಖಾತ್ರಿಪಡಿಸಲಾಗಿದೆ" ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಎಂ ಕೆ ಸ್ಟಾಲಿನ್ ಅವರ ಸರ್ಕಾರದ ನಿರ್ಣಯವನ್ನು ಸದನದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. "ರಾಜ್ಯದಲ್ಲಿ ತಮಿಳು ಮತ್ತು ಇಂಗ್ಲಿಷ್ ದ್ವಿಭಾಷಾ ನೀತಿಗೆ ತಮ್ಮ ಪಕ್ಷ ಒಲವು ತೋರಿದೆ" ಎಂದು ಎಐಎಡಿಎಂಕೆ ನಾಯಕ ಓ ಪನ್ನೀರಸೆಲ್ವಂ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app