ತೆಲಂಗಾಣ | ಬಿ.ಎಲ್‌.ಸಂತೋಷ್‌ಗೆ ಮತ್ತೊಮ್ಮೆ ನೋಟಿಸ್ ನೀಡಲು ಎಸ್‌ಐಟಿಗೆ ಹೈಕೋರ್ಟ್‌ ಸೂಚನೆ

Telangana High Court
  • ನ.21ರ ಎಸ್‌ಐಟಿ ವಿಚಾರಣೆಗೆ ಹಾಜರಾಗದ ಬಿ.ಎಲ್‌.ಸಂತೋಷ್
  • ಶಾಸಕರ ಖರೀದಿ ಪ್ರಕರಣದ ವಿಚಾರಣೆ ನ.29ಕ್ಕೆ ಮುಂದೂಡಿಕೆ

ಭಾರತ ರಾಷ್ಟ್ರ ಸಮಿತಿಯ(ಬಿಆರ್‌ಎಸ್‌) ಶಾಸಕರನ್ನು ಖರೀದಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಬಿ.ಎಲ್‌. ಸಂತೋಷ್‌ ಅವರಿಗೆ ಸಿಆರ್‌ಪಿಸಿಯ ಸೆಕ್ಷನ್‌ 41ಎ ಅಡಿಯಲ್ಲಿ ಮತ್ತೊಮ್ಮೆ ನೋಟಿಸ್‌ ನೀಡುವಂತೆ ತೆಲಂಗಾಣ ಹೈಕೋರ್ಟ್‌ ಬುಧವಾರ (ನ.23) ಎಸ್‌ಐಟಿಗೆ ಸೂಚಿಸಿದೆ. 

ಬಿ.ಎಲ್‌.ಸಂತೋಷ್‌ ಬಂಧನದ ತಡೆಯಾಜ್ಞೆ ತೆರವುಗೊಳಿಸಬೇಕೆಂಬ ಅರ್ಜಿಯನ್ನು ನ್ಯಾಯಾಲಯ ಇದೇ ವೇಳೆ ವಜಾಗೊಳಿಸಿದೆ. 

ಬಿ.ಎಲ್ ಸಂತೋಷ್ ಅವರು ಉದ್ದೇಶಪೂರ್ವಕವಾಗಿ ವಿಚಾರಣೆಗೆ ಹಾಜರಾಗದೆ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಗಾಗಿ ತನ್ನ ಮುಂದೆ ಹಾಜರಾಗುವಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ನ.21ರಂದು  ಸಂತೋಷ್ ಹಾಗೂ ಇತರರಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

ಈ ಸುದ್ದಿ ಓದಿದ್ದೀರಾ? ಇಸ್ರೊ | ಯಶಸ್ವಿಯಾಗಿ ಗಗನಕ್ಕೆ ಚಿಮ್ಮಿದ ಬಹು ಸಾಮರ್ಥ್ಯದ ಆರ್‌ಎಚ್‌200 ರಾಕೆಟ್‌

“ಎಸ್ಐಟಿ ಮುಂದೆ ಹಾಜರಾಗುವಂತೆ ಸಂತೋಷ್ ಅವರಿಗೆ ನೋಟಿಸ್ ನೀಡಲಾಗಿತ್ತು. ಪೂರ್ವನಿರ್ಧರಿತವಾಗಿದ್ದ ಪ್ರವಾಸ ಕಾರ್ಯಕ್ರಮಗಳಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡುವಂತೆ ಕೇಳಿದ್ದರು” ಎಂದು ತೆಲಂಗಾಣದ ಅಡ್ವೊಕೇಟ್ ಜನರಲ್ ಬಿ.ಎಸ್.ಪ್ರಸಾದ್ ನ್ಯಾಯಾಲಯಕ್ಕೆ ತಿಳಿಸಿದರು. 

“ಎಸ್ಐಟಿ ಮುಂದೆ ಹಾಜರಾಗಲು ಸಂತೋಷ್ ಅವರಿಗೆ ನ್ಯಾಯಸಮ್ಮತವಾದ ಕಾಲಾವಕಾಶ ಒದಗಿಸಲಾಗುತ್ತದೆ. ಅದಕ್ಕಾಗಿ ಅವರಿಗೆ ಹೊಸದಾಗಿ ನೋಟಿಸ್ ಜಾರಿ ಮಾಡಿ” ಎಂದು ನ್ಯಾಯಮೂರ್ತಿ ಬಿ. ವಿಜಯಸೇನ್ ರೆಡ್ಡಿ ಅವರ ಏಕ ಸದಸ್ಯ ಪೀಠ ಸೂಚಿಸಿದೆ.  

ವಿಚಾರಣೆಯನ್ನು ನ.29ಕ್ಕೆ ಮುಂದೂಡಲಾಯಿತು. ಅಂದು ಶಾಸಕರ ಖರೀದಿ ಯತ್ನ ಪ್ರಕರಣದ ವರದಿಯನ್ನು ಎಸ್‌ಐಟಿ ಏಕ ಸದಸ್ಯ ಪೀಠಕ್ಕೆ ಸಲ್ಲಿಸಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app