ಬರಿ ಬಾಯಿ ಮಾತಿನ ಸುಳ್ಳು, ಉತ್ತರ ಪ್ರದೇಶ ಮಾದರಿ; ಕಣ್ಣು ಬಿಟ್ಟು ನೋಡಬೇಕಿದೆ ಅಂಕಿ ಅಂಶ

ಬಡತನ, ವಲಸೆ, ನಿರುದ್ಯೋಗ, ಅಪರಾಧಗಳು, ಹದಗೆಟ್ಟ ಕಾನೂನು ವ್ಯವಸ್ಥೆಯನ್ನೆ ಹಾಸುಹೊದ್ದು ಮಲಗಿರುವ ಉತ್ತರ ಪ್ರದೇಶವನ್ನು ಮಾದರಿ ರಾಜ್ಯವನ್ನಾಗಿ ಯಾವ ನೆಲಗಟ್ಟಿನ ಮೇಲೆ ಬಿಂಬಿಸಲಾಗುತ್ತಿದೆ ಎನ್ನುವುದಕ್ಕೆ ಆಡಳಿತ ವರ್ಗವೇ ಉತ್ತರಿಸಬೇಕಿದೆ. 

ನರೇಂದ್ರ ಮೋದಿ ಪ್ರಧಾನಿಯಾಗುವ ತನಕ ಗುಜರಾತ್ ಮಾದರಿ ಪ್ರಸ್ತುತದಲ್ಲಿತ್ತು.  ನರೇಂದ್ರ ಮೋದಿಯವರ ಜಯದ ನೆರಳಲ್ಲಿ ಬಿಜೆಪಿ ಬೇರೆ ಬೇರೆ ರಾಜ್ಯಗಳಲ್ಲೂ ಅಧಿಕಾರ ಹಿಡಿಯಿತು. ಹಾಗೇ ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿದ ಯೋಗಿ ಆದಿತ್ಯನಾಥ ಉತ್ತರ ಪ್ರದೇಶ ಮಾದರಿಯನ್ನು ಚಾಲ್ತಿಗೆ ತಂದರು.  ಗುಜರಾತ್‌ ಮಾದರಿ ಮರೆಯಾಗಿ, ಉತ್ತರ ಪ್ರದೇಶ ಮಾದರಿ ಪ್ರತಿಪಾದನೆ ಹಿಗ್ಗಿತು.

ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಹೊತ್ತಿಗಂತೂ ದೇಶದಲ್ಲಿ ಅಭಿವೃದ್ಧಿ, ಪ್ರಗತಿ ಎಲ್ಲಕ್ಕೂ ಉತ್ತರ ಪ್ರದೇಶ ಮಾದರಿ ಎಂದೇ ಬಿಂಬಿಸಲಾಯಿತು.  ಕಳೆದ ಉತ್ತರ ಪ್ರದೇಶದ ವಿಧಾನಸಭೆಯಲ್ಲೂ ಮುಖ್ಯಮಂತ್ರಿ ಯೋಗಿ ಆದಿತ್‌ನಾಥ ಅವರು ಬಿಜೆಪಿಗೆ ಮತ ಚಲಾಯಿಸದಿದ್ದರೆ, ರಾಜ್ಯವು ತಮಿಳುನಾಡು, ಕೇರಳ ಹಾಗೂ ಜಮ್ಮು ಕಾಶ್ಮೀರವಾಗಲಿದೆ ಎಂದು ಹೇಳಿದ್ದರು. ಆ ಸಂದರ್ಭದಲ್ಲಿಯೇ ಅಂಕಿ ಅಂಶಗಳನ್ನು ಉಲ್ಲೇಖಿಸಿದ ಪಿಣರಾಯಿ ವಿಜಯನ್ ಅವರು ಬಿಜೆಪಿಗೆ ಟಾಂಗ್ ಕೊಟ್ಟಿದ್ದರು.

ಉತ್ತರ ಪ್ರದೇಶ ನಿಜಕ್ಕೂ ಮಾದರಿಯೇ?

ನೀತಿ ಆಯೋಗದಿಂದ ಹಿಡಿದು ಕೇಂದ್ರದ ಇಲಾಖೆಗಳು, ಸರ್ಕಾರಿ ಸಂಸ್ಥೆಗಳ ದಾಖಲೆ-ಅಂಕಿ ಅಂಶಗಳನ್ನು ನೋಡಿದರೆ, ಉತ್ತರ ಪ್ರದೇಶದ ಮಾದರಿ ಎಂಬುದು ಕೇಳು ರಾಜಕೀಯ ಮಿಥ್ಯೆ ಎಂದೆನಿಸುತ್ತದೆ. ಪ್ರಗತಿ ಸೂಚಕ, ಅಭಿವೃದ್ಧಿಗೆ ಸೂಚಕ ಎನಿಸಬಹುದಾದ ವಲಯಗಳಲ್ಲಿ ಉತ್ತರ ಪ್ರದೇಶ ನಿಜಕ್ಕೂ ಏನು ಸಾಧನೆ ಮಾಡಿದೆ ಎಂಬುದನ್ನು ನೋಡಿದೆ ಮಾದರಿ ಎಂಬ ಪ್ರಚಾರ ಎಷ್ಟು ಸತ್ಯ ಎಂಬುದು ತಿಳಿಯುತ್ತದೆ.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಉದ್ಯೋಗ ಆದೇಶ ಪತ್ರಕ್ಕೆ ಆಗ್ರಹಿಸಿ ಅಭ್ಯರ್ಥಿಗಳಿಂದ 1068 ಕಿ.ಮೀ ಕಾಲ್ನಡಿಗೆ

ಮಾನವ ಅಭಿವೃದ್ದಿ

ಪಿಎಸಿ ಶಿಕ್ಷಣ ಮತ್ತು ಆರೋಗ್ಯ ಸೂಚಕಗಳು ಮತ್ತು ಶಿಶುಮರಣ ಪ್ರಮಾಣ, ಜಿಡಿಪಿ ಶೇಕಡವಾರು ಹಾಗೂ ಎಎಸ್‌ಇಆರ್ ಕಲಿಕೆಯ ಮಟ್ಟವನ್ನು ಗಣನೆಗೆ ತೆಗೆದುಕೊಂಡು ಸೂಚಿಸಲಾದ ಮಾನವ ಅಭಿವೃದ್ಧಿ ಶ್ರೇಯಾಂಕದಲ್ಲಿ, ದೊಡ್ಡ ರಾಜ್ಯಗಳ ಪೈಕಿ ಕೇರಳವು ಮೊದಲ ಸ್ಥಾನದಲ್ಲಿದ್ದರೆ, ಚಿಕ್ಕ ರಾಜ್ಯಗಳಲ್ಲಿ ಸಿಕ್ಕಿಂ ಉತ್ತಮವಾಗಿದೆ. ಪಂಜಾಬ್, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರ ಮೊದಲ ಐದು ಸ್ಥಾನದಲ್ಲಿವೆ. ಚಿಕ್ಕ ರಾಜ್ಯಗಳ ಪೈಕಿ ಮಣಿಪುರ ಮತ್ತು ಮಿಜೋರಾಂ ಮೊದಲ ಮೂರು ಸ್ಥಾನ ಗಳಿಸಿವೆ. 

ಮಾನವ ಅಭಿವೃದ್ದಿಯಲ್ಲಿ ಉತ್ತರ ಪ್ರದೇಶವು, 17 ದೊಡ್ಡ ರಾಜ್ಯಗಳ ಪೈಕಿ ಕೊನೆಯಿಂದ ಮೂರನೆಯ ಸ್ಥಾನ ಎಂದರೆ 15ನೇ ಸ್ಥಾನದಲ್ಲಿದೆ. 15ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಉತ್ತರ ಪ್ರದೇಶದ ಮುಂದೆ ಮೊದಲ ಕೇರಳ ಡಮ್ಮಿ ಎನ್ನುವ ಚರ್ಚೆಗಳು ಕಳೆದ ಪಂಚ ರಾಜ್ಯ ಚುನಾವಣೆಗಳಲ್ಲಿ ನಡೆದಿದ್ದು ದೊಡ್ಡ ವಿಪರ್ಯಾಸವೆನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಬಡತನ 

ಮಾದರಿ ಎಂದು ಬಿಂಬಿಸಲಾಗುತ್ತಿರುವ ಉತ್ತರ ಪ್ರದೇಶವು ಮೂರನೆಯ ಬಡತನದ ರಾಜ್ಯ. ಸ್ಥಳೀಯ ಪ್ರಜೆಗಳ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗದ ರಾಜ್ಯವನ್ನು ಮಾದರಿ ಎಂದು ಬೆರಳು ಮಾಡಿ ತೋರಿಸುವುದು ಕಣ್ಣಿಗೆ ಪಟ್ಟಿಕಟ್ಟಿಕೊಂಡು ನಿರ್ಧರಿಸಲಾಗುತ್ತಿದೆ ಎಂಬ ಟೀಕೆ ಆಗಾಗ ಕೇಳಿ ಬಂದಿದೆ.

ನೀತಿ ಆಯೋಗದ 2022ರ ಸೂಚ್ಯಂಕದ ಪ್ರಕಾರ, ಬಿಹಾರದ ಶೇಕಡಾ  51.91ರಷ್ಟು ಜನಸಂಖ್ಯೆಯು ಬಡವರಾಗಿದ್ದರೆ, ಜಾರ್ಖಂಡ್‌ನಲ್ಲಿ ಶೇ. 42.16ರಷ್ಟು ಹಾಗೂ ಉತ್ತರ ಪ್ರದೇಶದಲ್ಲಿ  ಶೇ. 37.79ರಷ್ಟು ಜನತೆ ಬಡವರಾಗಿದ್ದಾರೆ. 

ಮಹಿಳೆಯರ ಕಿರುಕುಳ ಪ್ರಕರಣಗಳು

2021ರಲ್ಲಿ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶವು ಮಹಿಳೆಯರ ವಿರುದ್ಧದ ಅಪರಾಧಗಳಡಿ 15,828 ದೂರುಗಳು ದಾಖಲಾಗಿವೆ, ದೆಹಲಿಯಲ್ಲಿ 3,336, ಮಹಾರಾಷ್ಟ್ರದಲ್ಲಿ 1,504, ಹರಿಯಾಣದಲ್ಲಿ 1,460 ಮತ್ತು ಬಿಹಾರದಲ್ಲಿ 1,456 ದೂರುಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ತಿಳಿಸಿದೆ.

ಅಂಕಿಅಂಶಗಳ ಪ್ರಕಾರ, ಘನತೆಯಿಂದ ಬದುಕುವ ಹಕ್ಕು ಮತ್ತು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ ಹೆಚ್ಚಿನ ದೂರುಗಳು ಉತ್ತರ ಪ್ರದೇಶದಿಂದ ಬಂದಿವೆ. ದೇಶದ ಒಟ್ಟು ದೂರುಗಳ ಪೈಕಿ ಅರ್ಧದಷ್ಟು ದೂರುಗಳು ಉತ್ತರಪ್ರದೇಶದಲ್ಲಿಯೆ ದಾಖಲಾಗಿರುವುದು ಅಲ್ಲಿನ ಸ್ತ್ರೀಯರಿಗೆ ಯೋಗಿ ಆದಿತ್ಯನಾಥ ಸರ್ಕಾರ ಕೊಡುತ್ತಿರುವ ರಕ್ಷಣೆ ಸ್ಪಷ್ಟವಾಗಿ ಗೋಚರಿಸುತ್ತದೆ.  2020ಕ್ಕೆ ಹೋಲಿಸಿದರೆ ಮಹಿಳಾ ಕಿರುಕುಳ ಪ್ರಕರಣಗಳ ಸಂಖ್ಯೆ ಶೇಕಡಾ 46ರಷ್ಟು ಏರಿಕೆಯಾಗಿದೆ.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಕಿರಿಯ ಸಚಿವರಿಗೆ ಹಂಚಿಕೆಯಾಗದ ಜವಾಬ್ದಾರಿ; ಸಚಿವ ಸಂಪುಟದಲ್ಲಿ ಅಸಮಾಧಾನದ ಹೊಗೆ

ವಲಸೆ

ಕೋವಿಡ್‌ 19ರ ಲಾಕ್‌ಡೌನ್‌ ಸಂದಂರ್ಭದಲ್ಲಿ ತಮ್ಮ ಸ್ವತಃ ರಾಜ್ಯಗಳಿಂದ ವಲಸೆ ಹೋದವರು ಹಿಂದಿರುಗಿದ್ದರು. 1.23 ಕೋಟಿ ವಲಸೆ ಕಾರ್ಮಿಕರ ಪೈಕಿ ಶೇಕಡಾ 50 ರಷ್ಟು ಎಂದರೆ 61,34,943 ವಲಸಿಗರು ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಮೂರು ರಾಜ್ಯಗಳವರಾಗಿದ್ದಾರೆ.

ರಾಜ್ಯಕ್ಕೆ ಹಿಂದಿರುಗಿದ ವಲಸೆ ಕಾರ್ಮಿಕರಲ್ಲಿ ಉತ್ತರ ಪ್ರದೇಶವು ಹೆಚ್ಚಿನ ಪಾಲು ಹೊಂದಿದೆ. ಒಟ್ಟು ವಲಸಿಗರ ಪೈಕಿ ಶೇಕಡಾ 26ರಷ್ಟು ಹಿಂದಿರುಗಿದ್ದರು, ನಂತರ ಬಿಹಾರ (ಶೇ 12), ಪಶ್ಚಿಮ ಬಂಗಾಳ, ರಾಜಸ್ಥಾನ (ಶೇ 11), ಒಡಿಶಾ (ಶೇ 7) ಹಾಗೂ ಮಧ್ಯಪ್ರದೇಶ (ಶೇ. 6) ವಲಸೆ ವಲಸಿಗರಿದ್ದರು.

ಜನಸಂಖ್ಯೆ ಮತ್ತು ಸಂಪತ್ತಿನ ಪಾಲು

ಜನಸಂಖ್ಯೆಗೆ ತಕ್ಕ ಹಾಗೆ ಸಂಪತ್ತಿನ ಪಾಲು ಇದೆಯೇ ಎನ್ನುವ ಶ್ರೇಯಾಂಕದಲ್ಲಿ ಲಕ್ಷದ್ವೀಪವು ಮೊದಲ ಸ್ಥಾನದಲ್ಲಿದ್ದರೆ, ಕ್ರಮವಾಗಿ ದೆಹಲಿ, ಕೇರಳ, ಚಂಡೀಗಡ ಇವೆ. ಕರ್ನಾಟಕ ರಾಜ್ಯವು 22 ಸ್ಥಾನದಲ್ಲಿದೆ. ಮಾದರಿ ಎಂದು ಬಿಂಬಿಸಲಾಗುತ್ತಿರುವ ಉತ್ತರ ಪ್ರದೇಶವು 37 ಪ್ರದೇಶಗಳ ಪಟ್ಟಿಯಲ್ಲಿ 30ನೇ ಸ್ಥಾನ ಪಡೆದುಕೊಂಡಿದೆ. ಬಿಹಾರ ಕೊನೆ ಸ್ಥಾನದಲ್ಲಿದೆ.

ಈ ಸುದ್ದಿ ಓದಿದ್ದೀರಾ? ಸುದ್ದಿ ವಿವರ | ಇಪ್ಪತ್ತು ವರ್ಷಗಳಲ್ಲೇ ಭಾರೀ ಕುಸಿತ ಕಂಡ ಗೋಧಿ ಇಳುವರಿ

ತಲಾ ನಿವ್ವಳ ರಾಜ್ಯದ ದೇಶೀಯ ಉತ್ಪನ್ನ 

2019-20ರ ಪ್ರಕಾರ, 31 ಶ್ರೇಯಾಂಕಗಳ ಪೈಕಿ, ತಲಾ ಆದಾಯ ₹450 ಸಮೀಪವಿರುವ ಗೋವಾ ಮೊದಲ ಸ್ಥಾನದಲ್ಲಿದ್ದರೆ, ₹380 ಹೊಂದಿರುವ ಸಿಕ್ಕಿಂ ದ್ವಿತೀಯ ಸ್ಥಾನದಲ್ಲಿದೆ. ₹360 ದೆಹಲಿ, ₹320 ಚಂಡೀಗಡ ಕ್ರಮವಾದ ಸ್ಥಾನದಲ್ಲಿವೆ. ₹210 ತಲಾ ಆದಾಯ ಇರುವ ಕೇರಳ ಒಂಬತ್ತನೇ ಸ್ಥಾನದಲ್ಲಿದ್ದರೆ. ಮಾದರಿ ಎಂದು ಹೇಳಲಾಗುವ ಉತ್ತರ ಪ್ರದೇಶ ₹60 ಸಮೀಪ 31ನೇ ಸ್ಥಾನದಲ್ಲಿದೆ, ಇದರೊಂದಿಗೆ ಕೊನೆಯ ಎರಡನೇ ಸ್ಥಾನವನ್ನು ಪಡೆದು ಕಳಪೆ ರಾಜ್ಯವಾಗಿರುವುದು ಅಂಕಿ ಅಂಶಗಳ ಮಾಹಿತಿಯಾಗಿದೆ.

ಕಾರ್ಮಿಕರ ಭಾಗವಹಿಸುವಿಕೆಯ ದರ

2022ರಲ್ಲಿ ಕಾರ್ಮಿಕರ ಭಾಗವಹಿಸುವಿಕೆಯಲ್ಲಿ ಶೇಕಡಾ 33ರಷ್ಟಿರುವ ಉತ್ತರ ಪ್ರದೇಶವು 25 ಶ್ರೇಯಾಂಕಗಳ ಪೈಕಿ 24ನೇ ಸ್ಥಾನದಲ್ಲಿದೆ. ಈ ಮೂಲಕ ಕಾರ್ಮಿಕರನ್ನು ಭಾಗವಹಿಸುವಿಕೆಯಲ್ಲಿ ಸರ್ಕಾರದ ನಿರ್ಲಕ್ಷ್ಯವಿದೆ ಎನ್ನುತ್ತಾರೆ ರಾಜಕೀಯ ವಿಮರ್ಶಕರು. ಗೋವಾ ಮೊದಲ ಸ್ಥಾನದಲ್ಲಿ (61%), ಕ್ರಮವಾಗಿ ಅಸ್ಸಾಂ (59%), ತ್ರಿಪುರ (52%), ತೆಲಂಗಾಣ (49%), ಪಶ್ಚಿಮ ಬಂಗಾಳ (46%) ಸ್ಥಾನಗಳನ್ನು ಗಳಿಸಿಕೊಂಡಿವೆ.  ಜಮ್ಮು ಮತ್ತು ಕಾಶ್ಮೀರವು 12ನೇ ಶ್ರೇಯಾಂಕದಲ್ಲಿ

ಸಾಮಾಜಿಕ ರಕ್ಷಣೆ (2016)

ಸಾಮಾಜಿಕ ರಕ್ಷಣೆಗಾಗಿ, ಸಾರ್ವಜನಿಕ ವಿತರಣಾ ವ್ಯವಸ್ಥೆಗಳು, ವೃದ್ಧಾಪ್ಯ ಪಿಂಚಣಿಗಳು, ಅಪರಾಧಗಳ ಮೇಲಿನ ದತ್ತಾಂಶಗಳು ಹಾಗೂ  ಪ.ಜಾತಿ/ಪ.ಪಂಗಡಗಳ ಇತರ ಕ್ರಮಗಳ ಗಣನೆಗೆ ತೆಗೆದುಕೊಂಡ ಸಾಮಾಜಿಕ ರಕ್ಷಣೆಯ ಶ್ರೇಯಾಂಕದಲ್ಲಿ, ಮಿಝೋರಾಂ ಅಗ್ರಸ್ಥಾನದಲ್ಲಿದ್ದರೆ. ದೊಡ್ಡ ರಾಜ್ಯಗಳಲ್ಲಿ, ಕರ್ನಾಟಕವು ಎಲ್ಲಕ್ಕಿಂತ ಉತ್ತಮವಾಗಿದೆ, ನಂತರ ಪಶ್ಚಿಮ ಬಂಗಾಳ, ಕೇರಳ ಹಾಗೂ ಮಧ್ಯಪ್ರದೇಶ ಕ್ರಮವಾದ ಸ್ಥಾನಗಳನ್ನು ಪಡೆದುಕೊಂಡಿವೆ. ಉತ್ತರ ಪ್ರದೇಶವು ಏಳನೆಯ ಸ್ಥಾನದಲ್ಲಿದೆ. 

ನಕಲಿ ಎನ್‌ಕೌಂಟರ್ -ಅಪರಾಧಗಳು 

ಮಾರ್ಚ್ 2017 ರಿಂದ, ‘ಎನ್‌ಕೌಂಟರ್‌’ ಹೆಸರಿನಲ್ಲಿ 150 ಶಂಕಿತ ಕ್ರಿಮಿನಲ್‌ಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ.  3,427 ಇತರರು ಗುಂಡಿನ ಏಟಿಗೆ ಗಾಯಗೊಂಡಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತವೆ.  ದರೋಡೆಕೋರರ ಕಾಯ್ದೆಯಡಿ 44,759 ಜನರನ್ನು ಬಂಧಿಸಲಾಗಿದ್ದು. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ 630 ಪ್ರಕರಣಗಳನ್ನು ದಾಖಲಿಸಲಾಗಿದೆ.

ಯುಪಿಯ ತಲಾ ಅಪರಾಧ ಪ್ರಮಾಣ 7.4.ರಷ್ಟಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಈ ಅನುಪಾತವು ಉತ್ತರ ಪ್ರದೇಶದಲ್ಲಿ ಒಂಟಿಯಾಗಿ ಸಂಚರಿಸುವುದು ಅಪಾಯಕಾರಿ ಎನ್ನುವುದನ್ನು ತೋರಿಸುತ್ತದೆ. ಕ್ರಮವಾಗಿ 5.8 ರಷ್ಟು ಪ್ರಮಾಣ ಹೊಂದಿರುವ ಅರುಣಾಚಲ ಪ್ರದೇಶ, ಸ್ಥಾನ, ಜಾರ್ಖಂಡ (ಶೇ 5.3) ಮೇಘಲಾಯ (ಶೇ.5.1) ದೆಹಲಿ (ಶೇ.5) ಸ್ಥಾನದಲ್ಲಿವೆ.

ಕಳಪೆ ರಾಜ್ಯ ಎಂದ ವಿಶ್ವಸಂಸ್ಥೆ

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಮಾನವ ಅಭಿವೃದ್ಧಿ ಸೂಚ್ಯಂಕ ಪ್ರಕಾರ ಉತ್ತರ ಪ್ರದೇಶವು ಎರಡನೇ ಅತ್ಯಂತ ಕಳಪೆ ರಾಜ್ಯವಾಗಿದೆ. 

ಪೂರ್ವಾಂಚಲ್ ಎಂದೂ ಕರೆಯಲ್ಪಡುವ ಇದರ ಪೂರ್ವ ಪ್ರದೇಶವು ನಿರ್ದಿಷ್ಟವಾಗಿ ಅಭಿವೃದ್ಧಿ ಹೊಂದಿಲ್ಲ ಮತ್ತು ದೇಶದ ಬಡ ಜನರಿಗೆ ನೆಲೆಯಾಗಿದೆ. ಅದರ ಮೂರು ಜಿಲ್ಲೆಗಳಾದ ಶ್ರಾವಸ್ತಿ, ಬಹ್ರೈಚ್ ಹಾಗೂ ಬಲ್ರಾಮ್‌ಪುರ್, ಅವರ ಜನಸಂಖ್ಯೆಯ 69 ಪ್ರತಿಶತಕ್ಕಿಂತ ಹೆಚ್ಚು ಜನರು ಬಹುಆಯಾಮದ ಬಡವರು ಎಂದು ರಾಷ್ಟ್ರೀಯ ಸಂಸ್ಥೆ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ ಆಯೋಗ ತಿಳಿಸಿದೆ.

ಅಭಿವೃದ್ದಿ, ಬಡತನ, ವಲಸೆ, ನಿರುದ್ಯೋಗ, ಅಪರಾಧಗಳು, ಹದಗೆಟ್ಟ ಕಾನೂನು ವ್ಯವಸ್ಥೆಯನ್ನೆ ಹಾಸುಹೊದ್ದು ಮಲಗಿರುವ ಉತ್ತರ ಪ್ರದೇಶವನ್ನು ಮಾದರಿ ರಾಜ್ಯವನ್ನಾಗಿ ಯಾವ ನೆಲಗಟ್ಟಿನ ಮೇಲೆ ಬಿಂಬಿಸಲಾಗುತ್ತಿದೆ ಎನ್ನುವುದಕ್ಕೆ ಆಡಳಿತ ವರ್ಗವೇ ಉತ್ತರಿಸಬೇಕಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180