ತ್ರಿಪುರಾ: ಶಾಲಾ ಆವರಣದಲ್ಲಿ ರಾಜಕೀಯ ಕಾರ್ಯಕ್ರಮಗಳಿಗೆ ನಿಷೇಧ

ಶಾಲಾ ಅವಧಿಯಲ್ಲಿ ಅಥವಾ ನಂತರದಲ್ಲಿ ಶಾಲಾ ಆವರಣದಲ್ಲಿ ಯಾವುದೇ ರೀತಿಯ ರಾಜಕೀಯ ರ್ಯಾಲಿಗಳು ಮತ್ತು ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ತ್ರಿಪುರಾ ಸರ್ಕಾರ ಶನಿವಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಶಾಲಾ ಆವರಣದಲ್ಲಿ ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತಿರುವ ಮುಖ್ಯೋಪಾಧ್ಯಾಯರ ವಿರುದ್ಧ ಕೆಲವು ದೂರುಗಳು ಬಂದ ನಂತರ ರಾಜ್ಯ ಶಿಕ್ಷಣ ಇಲಾಖೆ ಈ ಆದೇಶ ಹೊರಡಿಸಿದೆ. ಶಿಕ್ಷಣ ಇಲಾಖೆಯು ಆವರಣದಲ್ಲಿ ಇಂತಹ ಯಾವುದೇ ರಾಜಕೀಯ ಕಾರ್ಯಕ್ರಮಗಳನ್ನು ನಡೆಸಲು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಆದೇಶಿಸಿದೆ. "ಆಟದ ಮೈದಾನ ಸೇರಿದಂತೆ ಯಾವುದೇ ಶಾಲಾಗೆ ಸಂಬಂಧಿಸಿದ ಯಾವುದೇ ಸಂಪನ್ಮೂಲಗಳನ್ನು ರಾಜಕೀಯ ಪಕ್ಷಗಳು ರಾಜಕೀಯ ಕಾರ್ಯಕ್ರಮಗಳು / ರ್ಯಾಲಿಗಳಿಗಾಗಿ ಬಳಸುವಂತಿಲ್ಲ. ರಜಾ ದಿನಗಳಲ್ಲಿ ಅಥವಾ ಶಾಲಾ ಸಮಯದ ನಂತರ ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ಕೆಲವು ಮುಖ್ಯೋಪಾಧ್ಯಾಯರು/ಟಿಐಸಿಗಳು ಅವಕಾಶ ನೀಡುತ್ತಿದ್ದಾರೆ. ಇದು ನಿಯಮದ ಉಲ್ಲಂಘನೆಯಾಗಿದೆ ಎಂದು ಇಲಾಖೆ ಹೇಳಿದೆ. ಕೋವಿಡ್-19 ಲಾಕ್ಡೌನ್ಗಳು ಈಗಾಗಲೇ ತರಗತಿ ಬೋಧನೆಯ ಮೇಲೆ ತೀವ್ರ ಪರಿಣಾಮ ಬೀರಿರುವುದರಿಂದ ಶಾಲಾ ಸಮಯದಲ್ಲಿ ದೈಹಿಕ ತರಗತಿಗಳಲ್ಲಿನ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತ್ರಿಪುರಾ ಸರ್ಕಾರ ಒತ್ತಿಹೇಳಿದೆ. "ಶಿಕ್ಷಣ-ಕಲಿಕಾ ಚಟುವಟಿಕೆಗಳನ್ನು ಗಂಭೀರವಾಗಿ ಅಡ್ಡಿಪಡಿಸುವ ಮತ್ತು ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸುವ ಇಂತಹ ಚಟುವಟಿಕೆಗಳಿಗೆ ಮುಖ್ಯೋಪಾಧ್ಯಾಯರು ಅವಕಾಶ ನೀಡುತ್ತಿರುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಈಗಾಗಲೇ ಮಾಡಿರುವ ಉಲ್ಲಂಘನೆಗಳಿಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಲ್ಲಾ ಮುಖ್ಯೋಪಾಧ್ಯಾಯರು /ಟಿಐಸಿಗಳಿಗೆ ತಿಳಿಸಬೇಕು ಎಂದೂ ಸರ್ಕಾರ ಹೇಳಿದೆ. ಈ ಮೂಲಕ, ಭವಿಷ್ಯದಲ್ಲಿ ನಿಯಮವನ್ನು ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಬೇಕು ಎಂದೂ ಆದೇಶದಲ್ಲಿ ಹೇಳಲಾಗಿದೆ. "ಯಾವುದೇ ಸಂಸ್ಥೆಯು ಅನುಮತಿ ಪಡೆಯದೆ ಶಾಲೆಯ ಆವರಣದಲ್ಲಿ ಕಾರ್ಯಕ್ರಮ/ರ್ಯಾಲಿಗಳನ್ನು ನಡೆಸಲು ಯೋಜಿಸುತ್ತಿದ್ದರೆ, ಆ ಬಗ್ಗೆ HM/TIC ಅವರು ಶಾಲೆಗಳ ಇನ್ಸ್ಪೆಕ್ಟರ್/ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ತಿಳಿಸಬೇಕು. ಅಂತಹ ಮಾಹಿತಿಯನ್ನು ಸ್ವೀಕರಿಸಿದ ನಂತರ, ಆ ಬಗ್ಗೆ ಶಿಕ್ಷಣಾಧಿಕಾರಿಗಳು ಸ್ಥಳೀಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಸರ್ಕಾರ ಹೇಳಿದೆ. “ಬಿಜೆಪಿ ಸರ್ಕಾರ ಈ ಆದೇಶವನ್ನು ಸ್ವಾರ್ಥ ಹಿತಾಸಕ್ತಿಯಿಂದಲೂ ಮಾಡಿದಂತಿದೆ. ಯಾವುದೇ ರಾಜಕೀಯ ಪಕ್ಷಗಳಿಗೆ ಜನರನ್ನು ತಲುಪಲು, ಜನರನ್ನು ಸೇರಿಸಿ ಕಾರ್ಯಕ್ರಮಗಳನ್ನು ನಡೆಸಲು ಸುಲಭಕ್ಕೆ ಸಿಗುವ ಸ್ಥಳ ಎಂದರೆ, ಶಾಲೆಗಳ ಆವರಣಗಳು. ಹೀಗಾಗಿ, ಬಿಜೆಪಿಗೆ ಈ ಆವರಣಗಳ ಹೊರತಾಗಿಯೂ ಜನರನ್ನು ತಲುಪಲು ವಾಟ್ಸಾಪ್, ಖಾಸಗೀ ಮೈದಾನಗಳು ಸೇರಿದಂತೆ ವಿವಿಧ ರೀತಿಯ ದಾರಿಗಳನ್ನು ಹುಡುಕಿಕೊಂಡಿದೆ. ಅಲ್ಲದೆ, ಶಾಲೆಗಳಲ್ಲಿ ಮಕ್ಕಳು ಆಗತಾನೇ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಆರಂಭಿಸಿರುತ್ತಾರೆ. ಬಿಜೆಪಿ ಪಕ್ಷವು ಶಿಕ್ಷಕರ ಮೂಲಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತನ್ನ ಧೋರಣೆ, ಮತಾಂದತೆಯವಾದವನ್ನು ತುಂಬುತ್ತಿದೆ. ಆದರೆ, ಬೇರೆ ಪಕ್ಷಗಳಿಗೆ ಈಗಲೂ ಸಾರ್ವಜನಿಕ ಮೈದಾನಗಳ ಮೇಲೆ ಅವಲಂಬಿತವಾಗಿವೆ ಮತ್ತು ಜನರನ್ನು ಹಾಗೂ ವಿದ್ಯಾರ್ಥಿಗಳನ್ನು ತಲುಪಲು ಬೇರಾವುದೇ ಮಾರ್ಗಗಳಿಲ್ಲ. ಅಂತಹ ಪಕ್ಷಗಳು ಜನರನ್ನು ತಲುಪದಂತೆ ತಡೆಯುವ ಹುನ್ನಾರದಿಂದ ಬಿಜೆಪಿ ಸರ್ಕಾರ ಈ ಆದೇಶವನ್ನು ಹೊರಡಿಸಿರುವಂತಿದೆ. ಶಾಲಾ ಆವರಣಗಳನ್ನು ರಾಜಕೀಯ ಕಾರ್ಯಕ್ರಮಕ್ಕಾಗಿ ಬಳಸಿಕೊಳ್ಳದಂತೆ ತಡೆಯುವುದು ಸರಿ, ಆದರೆ, ಅದಕ್ಕೆ ಪರ್ಯಾಯವಾಗಿ ಸುಲಭಕ್ಕೆ ಸಿಗುವಂತಹ ವ್ಯವಸ್ತೆಯನ್ನು ಸರ್ಕಾರ ಮಾಡಬೇಕು. ಇಲ್ಲವಾದರೆ ಇದು ಮತ್ತಷ್ಟು ಆಕ್ಷೇಪಾರ್ಹವಾಗುತ್ತದೆ” ಎಂದು ಸಾಮಾಜಿಕ ಕಾರ್ಯಕರ್ತ ಶಿವಸುಂದರ್ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್