ಪಾಕಿಸ್ತಾನ | ಜುಲೈ ತಿಂಗಳಲ್ಲಿ 108 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ವರದಿ

  • ಪಾಕಿಸ್ತಾನದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಳ
  • ಸುಸ್ಥಿರ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ನಡೆಸಿರುವ ಅಧ್ಯಯನ ವರದಿ ಬಹಿರಂಗ

ಕಳೆದ ಜುಲೈ ತಿಂಗಳಲ್ಲಿ ಪಾಕಿಸ್ತಾನಾದ್ಯಂತ 108 ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಸುಸ್ಥಿರ ಸಾಮಾಜಿಕ ಅಭಿವೃದ್ಧಿ ಸಂಸ್ಥೆ (ಎಸ್‌ಎಸ್‌ಡಿಒ) ಮತ್ತು ಸಂಶೋಧನೆ, ಅಭಿವೃದ್ಧಿ ಮತ್ತು ಸಂವಹನ ಕೇಂದ್ರ (ಸಿಆರ್‌ಡಿಸಿ) ನಡೆಸಿದ ಅಧ್ಯಯನ ವರದಿ ತಿಳಿಸಿದೆ.

ಒಂದು ತಿಂಗಳಲ್ಲಿ 133 ಮಹಿಳೆಯರ ಅಪಹರಣವಾಗಿದ್ದರೆ, ಸುಮಾರು 85ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳ ದಾಖಲಾಗಿವೆ. ಒಟ್ಟಾರೆಯಾಗಿ ದೇಶದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಏರಿಕೆಯಾಗಿರುವುದನ್ನು ಈ ವರದಿಯು ಬಹಿರಂಗ ಪಡಿಸಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಲೈಂಗಿಕ ಪ್ರಕರಣಗಳು ವರದಿಯಾಗಿವೆ. ಅಂದರೆ ಸುಮಾರು 77 ಪ್ರಕರಣಗಳು ಪಂಜಾಬ್‌ ಪ್ರಾಂತ್ಯದ್ದಾಗಿದ್ದರೆ, 34 ಪ್ರಕರಣಗಳು ಸಿಂಧ್‌ ಪ್ರಾಂತ್ಯದಲ್ಲಿ ನಡೆದಿವೆ. ಹಾಗೆಯೇ ಖೈಬರ್‌ ಪಖ್ತುಂಖ್ವಾದಲ್ಲಿ 16 ಪ್ರಕರಣಗಳು ಹಾಗೂ ಇಸ್ಲಾಮಾಬಾದ್‌ನಲ್ಲಿ ಆರು ಪ್ರಕರಣಗಳು ದಾಖಲಾಗಿರುವುದಾಗಿ ಡಾನ್‌ ಪತ್ರಿಕೆ ವರದಿ ಮಾಡಿದೆ.

ಈ ಸುದ್ದಿ ಓದಿದ್ದೀರಾ?: ಬಾಗಲಕೋಟೆ | ಕೌಟುಂಬಿಕ ಕಲಹ: ಮಹಿಳೆಯ ಸಹೋದರನಿಂದ ಯೋಧನ ಬರ್ಬರ ಹತ್ಯೆ

133 ಅಪಹರಣ ಪ್ರಕರಣಗಳಲ್ಲಿ 93 ಪ್ರಕರಣಗಳು ಪಂಜಾಬ್‌ ಪ್ರಾಂತ್ಯದಲ್ಲಿ ದಾಖಲಾಗಿವೆ. ಪಾಕಿಸ್ತಾನಿ ಮಹಿಳೆಯರ ಅಪಹರಣವು ದೇಶದ ಪ್ರಮುಖ ಅಪರಾಧಗಳಲ್ಲಿ ಒಂದಾಗಿದೆ. ಸಿಂಧ್ ಮತ್ತು ಇಸ್ಲಾಮಾಬಾದ್‌ನಲ್ಲಿ ಕ್ರಮವಾಗಿ 20 ಮತ್ತು 15 ಪ್ರಕರಣಗಳು ವರದಿಯಾಗಿವೆ.

ಕೌಂಟುಂಬಿಕ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದ್ದು, ಪಂಜಾಬ್‌ ಪಾಂತ್ಯದಲ್ಲಿ 58  ಪ್ರಕರಣಗಳು, ಖೈಬರ್‌ ಮತ್ತು ಸಿಂಧ್‌ ಪ್ರಾಂತ್ಯದಲ್ಲಿ ಕ್ರಮವಾಗಿ 17 ಮತ್ತು 15 ಪ್ರಕರಣಗಳು ವರದಿಯಾಗಿವೆ.

ಉಳಿದಂತೆ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿಯೂ ಪಂಜಾಬ್‌ ಪ್ರಾಂತ್ಯವು ಮುಂದಿದ್ದು, ಸುಮಾರು 42 ಪ್ರಕರಣಗಳು, ಕೆಪಿಯಲ್ಲಿ 32 ಮತ್ತು ಸಿಂಧ್‌ನಲ್ಲಿ 21 ಪ್ರಕರಣಗಳು ದಾಖಲಾಗಿವೆ. ಪಾಕಿಸ್ತಾನಾದ್ಯಂತ 82 ಮಕ್ಕಳನ್ನು ಅಪಹರಿಸಲಾಗಿದೆ. ಅವರಲ್ಲಿ 30 ಪಂಜಾಬ್‌ನಿಂದ, 27 ಕೆಪಿಯಿಂದ, 13 ಸಿಂಧ್‌ನಿಂದ, ಇಸ್ಲಾಮಾಬಾದ್‌ನಿಂದ ಎಂಟು ಹಾಗೂ ನಾಲ್ವರು ಮಕ್ಕಳನ್ನು ಬಲೂಚಿಸ್ತಾನದಿಂದ ಅಪಹರಿಸಲಾಗಿದೆ.

ಅತ್ಯಾಚಾರ, ಕೊಲೆ, ಆಸಿಡ್ ದಾಳಿ, ಕೌಟುಂಬಿಕ ಹಿಂಸಾಚಾರ ಮತ್ತು ಬಲವಂತದ ಮದುವೆ ಸೇರಿದಂತೆ ಮಹಿಳೆಯರು ಮತ್ತು ಹುಡುಗಿಯರ ಮೇಲಿನ ದೌರ್ಜನ್ಯಗಳು ಪಾಕಿಸ್ತಾನಾದ್ಯಂತ ಏರಿಕೆಯಾಗಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್