
- ಜುಲೈನಲ್ಲಿ ನಡೆದಿದ್ದ ಘಟನೆ, ಅ. 4ರಂದು ದೂರು ದಾಖಲಿಸಿದ ಪೋಷಕರು
- ಈ ಘಟನೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಸೂಚಿಸಿದ ಮಹಿಳಾ ಆಯೋಗ
11 ವರ್ಷದ ಬಾಲಕಿಯ ಮೇಲೆ ಅದೇ ಶಾಲೆಯ ಇಬ್ಬರು ಹಿರಿಯ ವಿದ್ಯಾರ್ಥಿಗಳು ಶೌಚಾಲಯದಲ್ಲಿ ಅತ್ಯಾಚಾರವೆಸಗಿರುವ ಘಟನೆ ದೆಹಲಿಯ ಕೇಂದ್ರೀಯ ವಿದ್ಯಾಲಯದಲ್ಲಿ ಜುಲೈ ತಿಂಗಳಲ್ಲಿ ನಡೆದಿದೆ.
ಈ ಘಟನೆ ಕುರಿತು ಅಕ್ಟೋಬರ್ 4ರಂದು ಬಾಲಕಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ದೆಹಲಿ ಪೊಲೀಸರು ಮತ್ತು ಶಾಲೆಗೆ ನೋಟಿಸ್ ಕಳುಹಿಸಿದೆ. ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
“ಐಪಿಸಿಯ ಸಂಬಂಧಿತ ಸೆಕ್ಷನ್ಗಳು ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ” ಪೊಲೀಸ್ ಉಪ ಆಯುಕ್ತ ಅಮೃತಾ ಅವರು ವಿವರಿಸಿದ್ದಾರೆ.
ʻʻಬಾಲಕಿ ಅಥವಾ ಆಕೆಯ ಪೋಷಕರು ಘಟನೆಯ ಬಗ್ಗೆ ಶಾಲೆ ಮತ್ತು ಪ್ರಾಂಶುಪಾಲರಿಗೆ ವರದಿ ಮಾಡಿಲ್ಲʼʼ ಎಂದು ಕೇಂದ್ರೀಯ ವಿದ್ಯಾಲಯ ಸಂಘಟನೆಯ (ಕೆವಿಎಸ್) ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ಈ ಪ್ರಕರಣದ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದ ನಂತರ ಶಾಲಾ ವ್ಯವಸ್ಥಾಪಕ ಮಂಡಳಿಗೆ ಮಾಹಿತಿ ತಿಳಿಯಿತು. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ನಮ್ಮ ಶಾಲೆಯಿಂದ ಯಾವುದೇ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಿಲ್ಲ. ದೆಹಲಿ ಮಹಿಳಾ ಆಯೋಗವು ಈ ಕುರಿತು ವಿವರವಾದ ಪ್ರತಿಕ್ರಿಯೆಯನ್ನು ಕೇಳಿದೆ. ತನಿಖೆ ನಡೆಸಲು ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆʼʼ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಇರುವೆಯ ಕಿರುಕುಳಕ್ಕೊಳಗಾಗಿದ್ದ ಹಾವು ಸುರಕ್ಷಿತ: ವೈರಲ್ ವಿಡಿಯೋಗೆ ಪಿಲಿಕುಳ ನಿರ್ದೇಶಕರ ಸ್ಪಷ್ಟನೆ
“ಜುಲೈನಲ್ಲಿ, ಬಾಲಕಿಯು ಕೇಂದ್ರೀಯ ವಿದ್ಯಾಲಯದ ತನ್ನ ತರಗತಿಗೆ ಹೋಗುತ್ತಿದ್ದಾಗ ಅದೇ ಶಾಲೆಯ 11 ಮತ್ತು 12 ನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ಹುಡುಗರಿಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆಯಲಾಯಿತು. ಆ ನಂತರ ಬಾಲಕಿಯು ಅವರನ್ನು ಕ್ಷಮೆಯಾಚಿಸಿದ್ದಾಳೆ. ಆದರೆ, ಅವರಿಬ್ಬರು ಆಕೆಯನ್ನು ನಿಂದಿಸಲು ಪ್ರಾರಂಭಿಸಿದರು. ಶೌಚಾಲಯದ ಒಳಗೆ ಕರೆದೊಯ್ದು, ಒಳಗಿನಿಂದ ಬಾಗಿಲು ಹಾಕಿ ಅತ್ಯಾಚಾರ ಮಾಡಿದ್ದಾರೆ. ಘಟನೆಯ ಬಗ್ಗೆ ಶಿಕ್ಷಕಿಗೆ ತಿಳಿಸಿದಾಗ, ಹುಡುಗರನ್ನು ಹೊರಹಾಕಲಾಗಿದೆ ಎಂದು ತಿಳಿಸಲಾಯಿತು ಮತ್ತು ವಿಷಯವನ್ನು ಮುಚ್ಚಿಡಲಾಯಿತು ಎಂದು ಅವರು ಹೇಳಿದರು ಎಂದು ಬಾಲಕಿ ಆರೋಪಿಸಿದ್ದಾರೆʼʼ ಎಂದು ಮಹಿಳಾ ಆಯೋಗವು ತಿಳಿಸಿದೆ.
ʻʻದೆಹಲಿಯ ಶಾಲೆಯೊಂದರಲ್ಲಿ 11 ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಅತ್ಯಂತ ಗಂಭೀರವಾದ ಪ್ರಕರಣವನ್ನು ನಾವು ಸ್ವೀಕರಿಸಿದ್ದೇವೆ. ತನ್ನ ಶಾಲೆಯ ಶಿಕ್ಷಕರು ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ರಾಜಧಾನಿಯಲ್ಲಿ ಶಾಲೆಗಳೂ ಮಕ್ಕಳಿಗೆ ಅಸುರಕ್ಷಿತವಾಗಿರುವುದು ಅತ್ಯಂತ ದುರದೃಷ್ಟಕರ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಶಾಲೆಯ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆಯಾಗಬೇಕುʼʼ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಆಗ್ರಹಿಸಿದ್ದಾರೆ.