ಖಾಸಗಿ ವಿವಿಗೆ ₹50 ಕೋಟಿಗೆ 116 ಎಕರೆ ಭೂಮಿ ಮಂಜೂರು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

  • ಸೆಸ್‌ಗೆ ಸರ್ಕಾರ ಮಾಡಿರುವ ಮಂಜೂರು ಆದೇಶ ವಜಾಗೊಳಿಸಿ
  • ಕೆಐಎಡಿಬಿಯು ರಿಯಲ್‌ ಎಸ್ಟೇಟ್‌ ಏಜೆಂಟ್‌ ರೀತಿ ವರ್ತಿಸುತ್ತಿದೆ

ಬೆಂಗಳೂರಿನ ದೇವನಹಳ್ಳಿ ಬಳಿ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸೇರಿದ ಭೂಮಿಯನ್ನು ಚಾಣಕ್ಯ ಖಾಸಗಿ ವಿಶ್ವವಿದ್ಯಾಲಯ ಆರಂಭಿಸಲು ₹50 ಕೋಟಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರಕ್ಕೆ (ಸೆಸ್‌) ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ವಕೀಲೆ ಸುಧಾ ಕಟ್ವಾ ಸಲ್ಲಿಸಿರುವ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಪ್ರತಿವಾದಿಗಳಾದ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೆಐಎಡಿಬಿ ಮುಖ್ಯ ಕಾರ್ಯಕಾರಿ ಅಧಿಕಾರಿ ಮತ್ತು ಕಾರ್ಯಕಾರಿ ಸದಸ್ಯ ಹಾಗೂ ಸೆಸ್‌ನ ಕಾರ್ಯದರ್ಶಿ ಅವರಿಗೆ ನೋಟಿಸ್‌ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ವಿಭಾಗೀಯ ಪೀಠ ನಿರ್ದೇಶಿಸಿದೆ. 

2021ರ ಏಪ್ರಿಲ್‌ 28ರಂದು ರಾಜ್ಯ ಸರ್ಕಾರ ಮಾಡಿದ್ದ ಆದೇಶ ಮತ್ತು 2021ರ ಜೂನ್‌ 24ರಂದು ಸೆಸ್‌ಗೆ 116.16 ಎಕರೆ ಭೂಮಿ ಮಂಜೂರು ಮಾಡಿ ಕೆಐಎಡಿಬಿ ಮಾಡಿರುವ ಆದೇಶಗಳನ್ನು ವಜಾ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಕೆಐಎಡಿಬಿ ಕಾಯಿದೆ 1966ರ ಅಡಿ ಕೆಐಎಡಿಬಿಯು 1,210 ಎಕರೆ ಜಮೀನನ್ನು ಹೈಟೆಕ್‌ ರಕ್ಷಣಾ ಮತ್ತು ಏರೋಸ್ಪೇಸ್‌ ಪಾರ್ಕ್‌ ಫೇಸ್‌-2 ಭಾಗವಾಗಿ ವಶಪಡಿಸಿಕೊಂಡಿತ್ತು. ಅಭಿವೃದ್ಧಿಪಡಿಸಿದ ಪ್ರದೇಶಕ್ಕೆ ಪ್ರತಿ ಎಕರೆಗೆ ₹2.98 ಕೋಟಿ, ಅಭಿವೃದ್ಧಿಪಡಿಸದ ಜಮೀನಿಗೆ ಪ್ರತಿ ಎಕರೆಗೆ ₹1.61 ಕೋಟಿ ನಿಗದಿಪಡಿಸಲಾಗಿತ್ತು. ರೈತರಿಂದ ಕೈಗಾರಿಕೆಯ ಉದ್ದೇಶಕ್ಕೆ ಭೂಮಿ ವಶಪಡಿಸಿಕೊಂಡ ಸರ್ಕಾರವು ಅದನ್ನು ಖಾಸಗಿ ವಿಶ್ವವಿದ್ಯಾಲಯಕ್ಕೆ ಹಂಚಿಕೆ ಮಾಡಿದೆ. ಸಾರ್ವಜನಿಕ ಉದ್ದೇಶಕ್ಕೆ ಎಂದು ಭೂಮಿ ವಶಪಡಿಸಿಕೊಂಡು ಅದನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸಲಾಗದು. ಕಾಯಿದೆ ಅಡಿ ಇರುವ ಶಾಸನಬದ್ಧ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕೆಐಎಡಿಬಿಯು ರಿಯಲ್‌ ಎಸ್ಟೇಟ್‌ ಏಜೆಂಟ್‌ ರೀತಿ ವರ್ತಿಸುತ್ತಿದೆ. ಹೀಗಾಗಿ, ಸೆಸ್‌ಗೆ ಮಂಜೂರು ಮಾಡಿರುವ ಆದೇಶವನ್ನು ವಜಾ ಮಾಡಬೇಕು ಎಂದು ಕೋರಲಾಗಿದೆ.

ಕೆಐಎಡಿಬಿ ದಾಖಲೆಗಳ ಪ್ರಕಾರ ಸೆಸ್‌ಗೆ ಮಂಜೂರು ಮಾಡಿರುವ ಅಭಿವೃದ್ಧಿಪಡಿಸಿದ ಜಮೀನಿಗೆ ಪ್ರತಿ ಎಕರೆಗೆ ₹1.61 ಕೋಟಿ ಎಂದು ಹೇಳಲಾಗಿದೆ. ಈ ಲೆಕ್ಕಾಚಾರದ ಪ್ರಕಾರ ಸೆಸ್‌ಗೆ ಮಂಜೂರು ಮಾಡಿರುವ 116.16 ಎಕರೆ ಜಮೀನಿಗೆ ₹182 ಕೋಟಿ ಆಗಲಿದೆ. ಕೆಐಎಡಿಬಿಯು 2021ರ ಆಗಸ್ಟ್‌ 16ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಪ್ರತಿ ಎಕರೆಗೆ ₹2.98 ಕೋಟಿ ಎಂದು ಹೇಳಲಾಗಿದೆ. ಆದರೆ, ಸರ್ಕಾರ ಹೊರಡಿಸಿರುವ ಆಕ್ಷೇಪಾರ್ಹ ಆದೇಶದಲ್ಲಿ 116.16 ಎಕರೆ ಭೂಮಿಯನ್ನು ಕೇವಲ ₹50 ಕೋಟಿಗೆ ಮಂಜೂರು ಮಾಡಲು ನಿರ್ದೇಶಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹296 ಕೋಟಿ ನಷ್ಟವಾಗಲಿದೆ. ಸೆಸ್‌ಗೆ ಒಟ್ಟಾರೆಯಾಗಿ ಭೂಮಿ ಮಂಜೂರು ಮಾಡಿರುವುದರಿಂದ ಸರ್ಕಾರಕ್ಕೆ ₹137 ಕೋಟಿ ನಷ್ಟವಾಗಿದೆ. ಸಾರ್ವಜನಿಕ ಹಿತಾಸಕ್ತಿ ಬದಿಗೊತ್ತಿ ಸರ್ಕಾರ ಮತ್ತು ಕೆಐಎಡಿಬಿಯು ತಮ್ಮ ಇಚ್ಛೆಯಂತೆ ಸಾರ್ವಜನಿಕ ಉದ್ದೇಶಕ್ಕಾಗಿ ಇರುವ ಭೂಮಿಯನ್ನು ಖಾಸಗಿ ಸಂಸ್ಥೆಗೆ ವರ್ಗಾಯಿಸಲಾಗದು. ಇದು ವಿವೇಚನಾರಹಿತ, ಪ್ರಜಾಪ್ರಭುತ್ವ ವಿರೋಧಿ ಹಾಗೂ ಅಧಿಕಾರದ ದುರ್ಬಳಕೆಯಾಗಿದೆ. ಹೀಗಾಗಿ, ಸರ್ಕಾರದ ಆದೇಶವನ್ನು ವಜಾ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಕೆಐಎಡಿಬಿಯು ನಿಯಮಬದ್ಧ ಮತ್ತು ಪಾರದರ್ಶಕ ವಿಧಾನಗಳ ಮೂಲಕ ರೈತರಿಂದ ಜಮೀನು ವಶಪಡಿಸಿಕೊಂಡಿದೆ. ಕೆಐಎಡಿಬಿಯಿಂದ ಭೂಮಿ ಖರೀದಿಸಲು ಬಯಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಮೊದಲಿಗೆ ಸಮರ್ಥ ಪ್ರಾಧಿಕಾರಗಳಾದ ರಾಜ್ಯ ಉನ್ನತ ಮಟ್ಟದ ಪರಿಶೀಲನಾ ಸಮಿತಿ/ ರಾಜ್ಯ ಮಟ್ಟದ ಏಕಗವಾಕ್ಷಿ ಪರಿಶೀಲನಾ ಸಮಿತಿ/ಜಿಲ್ಲಾ ಮಟ್ಟದ ಸಮಿತಿಯ ಮುಂದೆ ತಮ್ಮ ಯೋಜನೆ ಒಪ್ಪಿಗೆಗೆ ಮನವಿ ಮಾಡಬೇಕು. ಕರ್ನಾಟಕ ಕೈಗಾರಿಕೆಗಳ (ಅನುಕೂಲ) ಕಾಯಿದೆ 2002ರ ಅಡಿ ಈ ಸಮಿತಿಗಳು ಪ್ರಸ್ತಾವನೆ ಒಪ್ಪಿದ ಬಳಿಕ ಮಾತ್ರ ಕೆಐಎಡಿಬಿಯು ಭೂಮಿ ಹಂಚಿಕೆ ಮಾಡಬಹುದು.

ಆದರೆ, ಯಾವುದೇ ಶಾಸನಬದ್ಧ ಸಮಿತಿಯ ಮುಂದೆ ಸೆಸ್‌ ಯೋಜನೆ ಮಂಜೂರಾತಿ ಕೋರಿಲ್ಲ. ಆದರೆ, ಸೆಸ್‌ ನೇರವಾಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಇದನ್ನು ಆಧರಿಸಿ ಮುಖ್ಯಮಂತ್ರಿ ಅವರು ವಿಶೇಷ ಸಭೆ ನಡೆಸಲು ಆದೇಶಿಸಿದ್ದಾರೆ. ಆದರೆ, ಸಮಿತಿಯ ಮುಂದಲ್ಲ. ಈ ಮೂಲಕ ಕರ್ನಾಟಕ ಕೈಗಾರಿಕೆಗಳ (ಸುಗಮ) ಕಾಯಿದೆ ಮತ್ತು ಕೆಐಎಡಿಬಿ ಕಾಯಿದೆ 1986 ಉಲ್ಲಂಘಿಸಿ ಸೆಸ್‌ಗೆ ಭೂಮಿ ಮಂಜೂರು ಮಾಡಲಾಗಿದೆ. ಪ್ರಭಾವ ಮತ್ತು ಅಧಿಕಾರ ಬಳಕೆಯ ಪರೋಕ್ಷ ಹಾದಿಯನ್ನು ಭೂಮಿ ಮಂಜೂರು ಮಾಡಿಸಿಕೊಳ್ಳಲು ಖಾಸಗಿ ವಿಶ್ವವಿದ್ಯಾಲಯವು ಬಳಕೆ ಮಾಡಿದೆ. ಇಲ್ಲಿ ಪಕ್ಷಪಾತ ಸ್ಪಷ್ಟವಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸರ್ಕಾರದ ಆದೇಶ ವಜಾ ಮಾಡಬೇಕು ಕೋರಲಾಗಿದೆ.

ಈ ಸುದ್ದಿ ಓದಿದ್ದೀರಾ: ಆಪ್ತರ ಹೆಸರಿನಲ್ಲಿ ಅಮೃತ್‌ ಪೌಲ್‌ ಬೇನಾಮಿ ಆಸ್ತಿ ಸಂಪಾದನೆ ಆರೋಪ: ಸಿಐಡಿ ದಾಳಿ

ರಾಜ್ಯ ಸರ್ಕಾರಕ್ಕೆ ಸೇರಿರುವ ಬೆಂಗಳೂರಿನಲ್ಲಿರುವ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು (ಆರ್‌ಜಿಯುಎಚ್‌ಎಸ್‌) ಬಾಡಿಗೆ ಆಧಾರದಲ್ಲಿ ಖಾಸಗಿ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಹಂಪಿಯಲ್ಲಿರುವ ಕನ್ನಡ ವಿಶ್ವವಿದಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಹಣಕಾಸಿನ ಕೊರತೆಯಿಂದ ವೇತನ ಪಾವತಿಸಲಾಗಿಲ್ಲ. ಪರಿಸ್ಥಿತಿ ಹೀಗಿರುವಾಗ, ಸರ್ಕಾರದ ವಿಶ್ವವಿದ್ಯಾಲಯಗಳ ಅವಶ್ಯಕತೆಯನ್ನು ಮರೆಮಾಚಿ ಖಾಸಗಿ ಸಂಸ್ಥೆಗೆ ಅತ್ಯಂತ ನಿಕೃಷ್ಟ ಬೆಲೆಗೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಲಾಗದು. ಸದರಿ ಭೂಮಿಯನ್ನು ಹರಾಜಿನ ಮೂಲಕ ಭೋಗ್ಯ ಅಥವಾ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಸರ್ಕಾರವು ರಾಜ್ಯದ ಕಲ್ಯಾಣಕ್ಕೆ ಬಳಕೆ ಮಾಡಬಹುದಾಗಿದೆ. ಕೈಗಾರಿಕೆ ಸ್ಥಾಪಿಸಲು ಭೂಮಿ ಮಂಜೂರಾತಿಗೆ ಸಾಕಷ್ಟು ಬೇಡಿಕೆ ಇದ್ದು, ಕಂಪನಿಗಳು ಮನವಿ ಸಲ್ಲಿಸಿವೆ. ಈ ಅರ್ಜಿದಾರರನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಆಕ್ಷೇಪಿಸಲಾಗಿದೆ.

2021ರ ಅಕ್ಟೋಬರ್‌ 11ರಂದು ಚಾಣಕ್ಯ ವಿಶ್ವವಿದ್ಯಾಲಯ ಕಾಯಿದೆ ಜಾರಿಗೆ ಬಂದಿದ್ದು, ಆನಂತರ ಚಾಣಕ್ಯ ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಕೆಐಎಡಿಬಿ ಭೂಮಿ ಮಂಜೂರಾತಿಯನ್ನು ಈ ದೃಷ್ಟಿಕೋನದಿಂದ ನೋಡಬೇಕಿದೆ. ಖಾಸಗಿ ವಿಶ್ವವಿದ್ಯಾಲಯ ಆರಂಭಿಸಲು ಸರ್ಕಾರದ ಮಾರ್ಗಸೂಚಿಯ ಪ್ರಕಾರ 25 ಎಕರೆ ಭೂಮಿ ಸಾಕಾಗಿರುತ್ತದೆ. ಆದರೆ, ಸೆಸ್‌ಗೆ ಯಾವುದೇ ಶೈಕ್ಷಣಿಕ ಸಂಸ್ಥೆ ಮುನ್ನಡೆಸಿದ ಅನುಭವ ಇಲ್ಲದಿದ್ದರೂ 116 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಬೆಲೆಬಾಳುವ ಭೂಮಿಯನ್ನು ವಾಣಿಜ್ಯ ಮತ್ತು ರಿಯಲ್‌ ಎಸ್ಟೇಟ್‌ ಚಟುವಟಿಕೆಗಳಿಗೆ ಬಳಸುವ ಉದ್ದೇಶ ಹೊಂದಲಾಗಿದೆ. ಹೀಗಾಗಿ, ಸರ್ಕಾರದ ಆದೇಶ ವಜಾ ಮಾಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ವಕೀಲ ಎಸ್‌ ಉಮಾಪತಿ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್