ರಾಜಸ್ಥಾನ | ಅತ್ಯಾಚಾರ ಎಸಗಿದವನ ಕೊಲೆಗೈದ ಅಪ್ರಾಪ್ತೆ

  • ಕೊಲೆ ಮಾಡಿದ ಪ್ರಕರಣದಲ್ಲಿ ಬಾಲಾಪರಾಧಿ ಕಾರಾಗೃಹ ಕಳುಹಿಸಲಾಗಿದೆ
  • ಆರೇಳು ತಿಂಗಳಿಂದ ಬಾಲಕಿಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ಮಾಡುತ್ತಿದ್ದನೆಂದು ಆರೋಪ

ನಿರಂತರ ಅತ್ಯಾಚಾರವೆಸಗಿದ ವ್ಯಕ್ತಿಯನ್ನು ಅಪ್ರಾಪ್ತೆಯೊಬ್ಬಳು ಕೊಲೆಗೈದ ಪ್ರಕರಣ ರಾಜಸ್ಥಾನದ ಅಲ್ವಾರ್‌ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಬಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ.

40 ವರ್ಷದ ವ್ಯಕ್ತಿಯಿಂದ ನಿರಂತರ ಅತ್ಯಾಚಾರ, ಹಿಂಸೆ ಅನುಭವಿಸಿದ 13 ವರ್ಷದ ಬಾಲಕಿ ಕುಡಿದ ಅಮಲಿನಲ್ಲಿದ್ದ ಆತನನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಳೆ.
ಆರೇಳು ತಿಂಗಳಿಂದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಗ್ರಾಮದ ಇತರ ಮೂವರೊಂದಿಗೆ ದೈಹಿಕಸಂಪರ್ಕ ಹೊಂದುವಂತೆ ಬಾಲಕಿಯನ್ನು ಒತ್ತಾಯಿಸುತ್ತಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಈತನಿಗೆ ವಿವಾಹವಾಗಿದ್ದು, 20 ವರ್ಷದ ಇಬ್ಬರು ಮಕ್ಕಳಿದ್ದರೆನ್ನಲಾಗಿದೆ. ಬಾಲಕಿ ಮೃತನ ಮನೆ ಸಮೀಪದಲ್ಲೇ ವಾಸಿಸುತ್ತಿದ್ದಳು.

ಆರಂಭದಲ್ಲಿ ಸಹಜ ಸಾವೆಂದು ಕುಟುಂಬದವರು ಭಾವಿಸಿದ್ದರು. ಕುತ್ತಿಗೆ ಮೇಲಿನ ಗುರುತುಗಳನ್ನು ನೋಡಿ ಮರಣೋತ್ತರ ಪರೀಕ್ಷೆಗೆ ಕಳಿಸಿದ ಬಳಿಕ ಸತ್ಯಾಂಶ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

“ಕೊಲೆಗೆ ಸಂಬಂಧಿಸಿದಂತೆ 10 ಜನರ ವಿಚಾರಣೆಗೆ ಒಳಪಡಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸ್ಥಳ ತಪಾಸಣೆ ಸಮಯದಲ್ಲಿ ತನಿಖಾಧಿಕಾರಿಗಳಿಗೆ ಬಟ್ಟೆ ತುಂಡು ಮತ್ತು ಕೆಲ ಸುಳಿವು ಸಿಕ್ಕಿದ್ದು, ಬಾಲಕಿ ಮೇಲೆ ಅನುಮಾನ ಬರಲು ಕಾರಣವಾಗಿದೆ.” ಎಂದು ಕೋಟ್ಕಾಸಿಮ್ ಭಿವಾಡಿ ಪೊಲೀಸ್ ಠಾಣೆಯ ಎಸ್ಎಚ್ಒ ಮಹಾವೀರ್ ಸಿಂಗ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ | ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಮೂವರು ಸೋದರಿಯರು

“ಬಾಲಕಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಕಳೆದ ಆರೇಳು ತಿಂಗಳಿಂದ ಮೃತ ವ್ಯಕ್ತಿ ಮತ್ತು ಆತನ ಸ್ನೇಹಿತರು ಬ್ಲಾಕ್‌ಮೇಲ್‌ ಮಾಡಿ ಅತ್ಯಾಚಾರ ಮಾಡುತ್ತಿದ್ದರೆಂಬ ವಿಷಯ ವಿವರಿಸಿದ ಬಾಲಕಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ.” ಎಂದು ಎಸ್ಎಚ್ಒ ಹೇಳಿದರು.

ಕಾಲ್‌ ರೆಕಾರ್ಡ್‌ ಬಹಿರಂಗಪಡಿಸುವ ಬೆದರಿಕೆ 

ಬಾಲಕಿ ಒಬ್ಬ ಹುಡುಗನೊಂದಿಗೆ ಮಾತನಾಡಲು 45 ವರ್ಷದ ವ್ಯಕ್ತಿಯ ಪೋನ್‌ನನ್ನು ಬಳಸಿದ್ದು, ಇಬ್ಬರ ನಡುವಿನ ಪೋನ್ ಸಂಭಾಷಣೆಯನ್ನು ವ್ಯಕ್ತಿಯು ಫೊನ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಲೀಕ್‌ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಬಾಲಕಿಯನ್ನು ಕೆಟ್ಟದಾಗಿ ಬಳಸಿಕೊಂಡಿದ್ದನು ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ.

ಪ್ರಕರಣದ ಹಿನ್ನೆಲೆ

"ಈ ಚಿತ್ರಹಿಂಸೆಗೆ ಅಂತ್ಯ ಹಾಡಲು ನಿರ್ಧರಿಸಿದ ಬಾಲಕಿ ಮೇ 17ರಂದು ರಾತ್ರಿ ತನ್ನನ್ನು ಭೇಟಿ ಮಾಡಲು ತಿಳಿಸಿದ ಸಮಯದಲ್ಲಿ ಮಧ್ಯ ರಾತ್ರಿ ಅವನ ಮನೆಗೆ ತೆರಳಿ ಕುಡಿದ ಅಮಲಿನಲ್ಲಿದ್ದವನ ಕತ್ತು ಹಿಸುಕಿ ಕೊಲೆಗೈಯ್ಯಲಾಗಿದೆ." ಎಂದು ಸಿಂಗ್ ಹೇಳಿದ್ದಾರೆ.

ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್‌ನಡಿ ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಫೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಆರೋಪಿಗಳನ್ನು ಬಂಧಿಸಬೇಕಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್