19 ವರ್ಷ ಜೈಲಿನಲ್ಲಿದ್ದ ವ್ಯಕ್ತಿಯ ಬಿಡುಗಡೆಗೆ ಆದೇಶಿಸಿದ ಸುಪ್ರೀಂ ಕೋರ್ಟ್

arrest
  • ಬಾಲಾಪರಾಧಿಯನ್ನು 3 ವರ್ಷಗಳ ನಂತರ ಬಂಧನದಲ್ಲಿಡಲು ಸಾಧ್ಯವಿಲ್ಲ
  • ವೈಯಕ್ತಿಕ ಬಾಂಡ್ ಆಧಾರದ ಮೇಲೆ ವ್ಯಕ್ತಿಗೆ ತಕ್ಷಣವೇ ಮಧ್ಯಂತರ ಜಾಮೀನು

ಅಪ್ರಾಪ್ತೆ ಮೇಲೆ ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ, ಸುಮಾರು 19 ವರ್ಷಗಳಿಂದ ಜೈಲಿನಲ್ಲಿದ್ದ ವ್ಯಕ್ತಿಯನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.  

"ಘಟನೆ ನಡೆದ ಸಮಯದಲ್ಲಿ ಆರೋಪಿಯು ಬಾಲಾಪರಾಧಿಯಾಗಿದ್ದ. ಹಾಗಾಗಿ, ಅಂದು ಜಾರಿಯಲ್ಲಿದ್ದ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ–2000ರ ನಿಬಂಧನೆಗಳ ಪ್ರಕಾರ ಬಾಲಾಪರಾಧಿಯನ್ನು 3 ವರ್ಷಗಳ ನಂತರ ಬಂಧನದಲ್ಲಿಡಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠವು ತಿಳಿಸಿತು.

ಆರೋಪಿಯು ಸುಮಾರು 18 ವರ್ಷ 9 ತಿಂಗಳ ಕಾಲ ಜೈಲಿನಲ್ಲಿದ್ದಿದ್ದಾಗಿ ಅರ್ಜಿದಾರರು ಹೇಳಿದ್ದಾರೆ. "ಪ್ರತಿವಾದಿ ಮತ್ತು ಸರ್ಕಾರದ ಪರವಾಗಿ ಹಾಜರಾಗಿರುವ ವಕೀಲರು ಪ್ರಕರಣವನ್ನು ಪರಿಶೀಲಿಸಲು ಸಮಯ ಕೋರಿದರು. ಆದರೆ, 2014ರಲ್ಲಿ ಬಾಲ ನ್ಯಾಯಮಂಡಳಿಯು ಅರ್ಜಿದಾರರನ್ನು ಬಾಲಾಪರಾಧಿ" ಎಂದು ಘೋಷಿಸಿದೆ. ಹೀಗಾಗಿ ವ್ಯಕ್ತಿಯನ್ನು ಬಂಧನದಲ್ಲಿರಿಸಲು ಸಾಧ್ಯವಿಲ್ಲ" ಎಂದು ಪೀಠ ಹೇಳಿತು.

ವೈಯಕ್ತಿಕ ಬಾಂಡ್ ಆಧಾರದ ಮೇಲೆ ವ್ಯಕ್ತಿಗೆ ತಕ್ಷಣವೇ ಮಧ್ಯಂತರ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯವು ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್‌ ಠಾಣೆಗೆ ಹಾಜರಾಗುವಂತೆ  ಸೂಚಿಸಿದೆ. 

ಐಪಿಸಿ ಸೆಕ್ಷನ್‌ 302 (ಕೊಲೆ) ಮತ್ತು 376 (ಅತ್ಯಾಚಾರ) ಅಡಿಯಲ್ಲಿ ವ್ಯಕ್ತಿಯನ್ನು ಅಪರಾಧಿಯೆಂದು ಪರಿಗಣಿಸಲಾಗಿದ್ದು, ಮರಣ ದಂಡನೆ ವಿಧಿಸಲಾಗಿತ್ತು. ನಂತರ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಕ್ಷಮಾದಾನ ಅರ್ಜಿಯಲ್ಲಿ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ. ವಿಚಾರಣೆ ನಡೆಯುತ್ತಿರುವಾಗ ಅಥವಾ ಕ್ಷಮಾದಾನಕ್ಕಾಗಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದಾಗ ಅರ್ಜಿದಾರ ತಾನು ಬಾಲಾಪರಾಧಿ ಎಂದು ಎಲ್ಲಿಯೂ ನಮೂದಿಸಿರಲಿಲ್ಲ. ಆದರೆ, ನಂತರದಲ್ಲಿ ಘಟನೆ ನಡೆದಾಗ ತಾನು ಅಪ್ರಾಪ್ತನಾಗಿದ್ದಾಗಿ ಅರ್ಜಿದಾರ ವಾದಿಸಿದ್ದ.

ಈ ಸುದ್ದಿ ಓದಿದ್ದೀರಾ?: ಜಹಾಂಗೀರ್‌ಪುರಿ ಹಿಂಸಾಚಾರ | ಮಾನವೀಯ ದೃಷ್ಟಿಯಿಂದ ಆರೋಪಿಗೆ ಜಾಮೀನು ಮಂಜೂರು

"ಅರ್ಜಿದಾರ ಬಾಲಾಪರಾಧಿ ಎಂದು ಉತ್ತರ ಪ್ರದೇಶದ ಆಗ್ರಾದ ಬಾಲಾಪರಾಧಿ ನ್ಯಾಯ ಮಂಡಳಿಯು 2014ರ ಫೆಬ್ರವರಿ 5ರ ತನ್ನ ಆದೇಶದಲ್ಲಿ ಘೋಷಿಸಿದೆ" ಎಂದು ಪೀಠವು ಇದೇ ವೇಳೆ ಹೇಳಿತು.

2003ರಲ್ಲಿ ನಡೆದಿದ್ದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಅಧೀನ ನ್ಯಾಯಾಲಯವು ವ್ಯಕ್ತಿಯನ್ನು ದೋಷಿ ಎಂದು ಘೋಷಿಸಿ, ಮರಣ ದಂಡನೆ ವಿಧಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್