ಉತ್ತರ ಪ್ರದೇಶ | ಬಲಿಷ್ಠ ಸಮುದಾಯದ ಬಾಲಕಿಯರಿಗಾಗಿ ದಲಿತ ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿದ ಶಿಕ್ಷಕರು

  • ಇಬ್ಬರು ದಲಿತ ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿದ ಶಿಕ್ಷಕರು
  • ಮೇಲಧಿಕಾರಿಗಳಿಗೆ ಸಮವಸ್ತ್ರದ ಫೋಟೋ ಕಳಿಸಲು ವಿಕೃತಿ

ಬಲಿಷ್ಠ ಜಾತಿಯ ಬಾಲಕಿಯರಿಗೆ ಸಮವಸ್ತ್ರ ಹಾಕಿಸುವ ಸಲುವಾಗಿ ಶಿಕ್ಷಕರು, ದಲಿತ ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿರುವ ಕ್ರೂರ ಘಟನೆ ಉತ್ತರ ಪ್ರದೇಶದ ಹಾಪುರ ಸರ್ಕಾರಿ ಶಾಲೆಯಲ್ಲಿ ಜುಲೈ 11ರಂದು ನಡೆದಿದೆ.

ವಿದ್ಯಾರ್ಥಿನಿಯರೆಲ್ಲರೂ ಸಮವಸ್ತ್ರ ಧರಿಸಿ ಶಾಲೆಗೆ ಬರುತ್ತಾರೆ ಎಂಬುದನ್ನು ಇಲಾಖೆಯ ಉನ್ನತ ಅಧಿಕಾರಿಗಳಿಗೆ ತೋರಿಸುವ ಸಲುವಾಗಿ, ಶಿಕ್ಷಕರು ದಲಿತ ವಿದ್ಯಾರ್ಥಿನಿಯರನ್ನು ಬೆತ್ತಲೆಗೊಳಿಸಿ ಅವರ ಸಮವಸ್ತ್ರವನ್ನು ಬಲಿಷ್ಠ ಸಮುದಾಯದ ಬಾಲಕಿಯರಿಗೆ ತೊಡಿಸಿ ಫೋಟೋ ತೆಗೆದಿದ್ದಾರೆ.

ಸಮವಸ್ತ್ರ ಕೊಡಲು ಒಪ್ಪದೇ ಇದ್ದಾಗ ಶಾಲೆಯಿಂದ ಹೊರಹಾಕುವ ಬೆದರಿಕೆ ಒಡ್ಡಿದ ಶಿಕ್ಷಕರು, ಬಾಲಕಿಯರಿಬ್ಬರನ್ನು ಒಂದು ಗಂಟೆಗಳ ಕಾಲ ಬೆತ್ತಲೆಯಾಗಿ ನಿಲ್ಲಿಸಿದ್ದಾರೆ. ನಾಲ್ಕನೇ ತರಗತಿ ಓದುತ್ತಿರುವ ಎಂಟು ಮತ್ತು ಒಂಬತ್ತು ವರ್ಷ ವಯಸ್ಸಿನ ದಲಿತ ಬಾಲಕಿಯರನ್ನು ಶಿಕ್ಷಕರಾದ ಸುನೀತಾ ಮತ್ತು ವಂದನಾ ಎಂಬವರು ವಿವಸ್ತ್ರಗೊಳಿಸಿದ್ದಾರೆ. ಆ ಸಮಯದಲ್ಲಿ ಇಬ್ಬರು ಮಕ್ಕಳು ತಮ್ಮ ಒಳಉಡುಪುಗಳನ್ನು ಧರಿಸದೆ ಇದ್ದುದರಿಂದ ಬೆತ್ತಲೆಯಾಗಿ ನಿಂತಿದ್ದರು ಎಂದು ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಸಂಪೂರ್ಣವಾಗಿ ಬೆತ್ತಲೆಯಾಗಿದ್ದ ಮಕ್ಕಳನ್ನು ಒಂದು ಗಂಟೆಯ ಕಾಲ ಹಾಗೆಯೇ ನಿಲ್ಲಿಸಿ ಕ್ರೌರ್ಯ ಮೆರೆದ ಶಿಕ್ಷಕರು ತರುವಾಯು ಸಮವಸ್ತ್ರವನ್ನು ಮರಳಿಸಿದ್ದಾರೆ. ಕುಟುಂಬ ಸದಸ್ಯರಿಗೆ ಈ ವಿಷಯ ತಿಳಿಸಿದರೆ ಶಾಲೆಯಿಂದ ಆ ಬಾಲಕಿಯರ ಹೆಸರು ತೆಗೆದು ಹಾಕುವುದಾಗಿ ಶಿಕ್ಷಕರು ಬೆದರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ಸಾಹಿತಿಗಳಿಗೆ ಮುಂದುವರೆದ ಜೀವ ಬೆದರಿಕೆ: ಬರಹಗಾರ್ತಿ ವಸುಂಧರಾ ಭೂಪತಿಗೆ ಮತ್ತೊಂದು ಪತ್ರ

ಶಾಲೆಯ ಪ್ರತಿ ವಿದ್ಯಾರ್ಥಿನಿಯು ಸರ್ಕಾರಿ ಸಮವಸ್ತ್ರ ಹೊಂದಿದ್ದು, ಪ್ರತಿ ವಿದ್ಯಾರ್ಥಿನಿಯೂ ಆ ಸಮವಸ್ತ್ರವನ್ನು ಧರಿಸಿ ತರಗತಿಗೆ ಹಾಜರಾಗುತ್ತಾರೆ ಎಂಬುದನ್ನು ಸಾಬೀತುಪಡಿಸುವ ಚಿತ್ರಗಳನ್ನು ಅಧಿಕಾರಿಗಳಿಗೆ ಇ-ಮೇಲ್ ಮಾಡಬೇಕಿತ್ತು. ಹಾಗಾಗಿ ದಲಿತ ವಿದ್ಯಾರ್ಥಿನಿಯರನ್ನು ಬಳಸಿಕೊಂಡಿದ್ದ ಶಿಕ್ಷಕರು, ಈ ವಿಷಯವನ್ನು ಯಾರಿಗೂ ತಿಳಿಸದಂತೆ ಷರತ್ತು ವಿಧಿಸಿದ್ದಾರೆ. ಶಾಲೆಯಿಂದ ಮನೆಗೆ ಮರಳಿದ ಬಾಲಕಿಯರು ತಮ್ಮ ಕುಟುಂಬದ ಸದಸ್ಯರಿಗೆ ತಮಗಾದ ತೊಂದರೆಯ ಬಗ್ಗೆ ಹೇಳಿದ್ದಾರೆ. ಘಟನೆ ವಿವರ ತಿಳಿಯುತ್ತಿದ್ದಂತೆ ಕುಟುಂಬದ ಸದಸ್ಯರೆಲ್ಲರೂ ಸೇರಿ ಮೂಲ ಶಿಕ್ಷಣ ಅಧಿಕಾರಿ (ಬಿಎಸ್ಎ) ಬಳಿ ಪ್ರತಿಭಟನೆ ನಡೆಸಿದ್ದಾರೆ. ಪ್ರಸ್ತುತ ಇಬ್ಬರು ಶಿಕ್ಷಕರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡ ಶಿಕ್ಷಕರು ಗ್ರಾಮದಲ್ಲಿ ಪಂಚಾಯತ್ ಸಭೆ ಆಯೋಜಿಸಿದ್ದು, ಅವರ ಬಗ್ಗೆ ನೀಡಿರುವ ದೂರನ್ನು ಕೈಬಿಡುವಂತೆ ಬಲಿಷ್ಠ ಸಮುದಾಯದ ವಿದ್ಯಾರ್ಥಿನಿಯರ ಕುಟುಂಬದ ಮೂಲಕ ದಲಿತ ಬಾಲಕಿಯರ ಕುಟುಂಬಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ಶೋಷಿತ್ ಕ್ರಾಂತಿ ದಳದ ಅಧ್ಯಕ್ಷ ರವಿಕಾಂತ್ ಹೇಳಿರುವುದಾಗಿ 'ಹಿಂದೂಸ್ತಾನ್ ಟೈಮ್ಸ್' ವರದಿಯಲ್ಲಿ ಉಲ್ಲೇಖಿಸಲಾಗಿದೆ.

ʻʻಶಿಕ್ಷಕರ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದೂರು ದಾಖಲಿಸಿದ್ದೇನೆ. ನನ್ನ ಮಕ್ಕಳಿಗಾದ ಸಮಸ್ಯೆಯ ಬಗ್ಗೆ ಮಾತನಾಡದಂತೆ ಇರಲು ಗ್ರಾಮಸ್ಥರು ಒತ್ತಡ ಹೇರುತ್ತಿದ್ದಾರೆ. ಶಿಕ್ಷಕರ ವಿರುದ್ಧ ದೂರು ನೀಡಿದ್ದರೂ ಎಫ್‌ಐಆರ್‌ ದಾಖಲಾಗಿಲ್ಲʼʼ ಎಂದು ಸಂತ್ರಸ್ಥ ಬಾಲಕಿಯ ತಂದೆಯ ಅಭಿಪ್ರಾಯವನ್ನು 'ಟೈಮ್ಸ್‌ ಆಫ್‌ ಇಂಡಿಯಾ' ಪತ್ರಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎನ್‌ಸಿಎಸ್‌ಸಿ ಅಧ್ಯಕ್ಷ ವಿಜಯ್ ಸಂಪ್ಲಾ ವರದಿ ಕೇಳಿದ ಒಂದು ದಿನದ ನಂತರ ಮಹಿಳಾ ಪೊಲೀಸರು ಸೇರಿದಂತೆ ತಂಡವು ಬಾಲಕಿಯರ ಹೇಳಿಕೆ ದಾಖಲಿಸಿಕೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
3 ವೋಟ್