ಅಂತರ್ಜಾತಿ ವಿವಾಹ | ಹೈದರಾಬಾದ್ ಜನನಿಬಿಡ ಪ್ರದೇಶದಲ್ಲಿ ಯುವಕನ ಕೊಲೆ 

Hyderabad  Neeraj Panwar - Sanjana
  • ವರ್ಷದ ಹಿಂದೆ ವಿವಾಹವಾಗಿದ್ದ ನೀರಜ್ ಪನ್ವಾರ್ ಇರಿದು ಹತ್ಯೆ 
  • ಯುವತಿ ಕುಟುಂಬ ಸದಸ್ಯರ ಮೇಲೆ ಶಂಕೆ – ನಾಲ್ವರ ಬಂಧನ

ಅಂತರ್ಜಾತಿ ವಿವಾಹವಾದ ಯುವಕನೊಬ್ಬನನ್ನು (22 ವರ್ಷ) ಹೈದರಾಬಾದ್ ಮಾರುಕಟ್ಟೆಯಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. 

ನಗರದ ಜನನಿಬಿಡ ಬೇಗಂಬಜಾರ್ ಮಾರುಕಟ್ಟೆ ಮಧ್ಯೆ ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳು ನೀರಜ್ ಪನ್ವಾರ್‌ಗೆ ಚಾಕುವಿನಿಂದ ಇರಿದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. 

ಅಂತರ್‌ ಧರ್ಮೀಯ ಮದುವೆ ಹಿನ್ನೆಲೆಯಲ್ಲಿ 26ರ ವರ್ಷದ ದಲಿತ ಯುವಕ ನಾಗರಾಜು ಎಂಬಾತನನ್ನು ಇತ್ತೀಚೆಗೆ ಜನನಿಬಿಡ ರಸ್ತೆಯಲ್ಲಿ ಹತ್ಯೆಗೈದ ಕೆಲ ದಿನಗಳಲ್ಲೇ ಈ ಘಟನೆ ನಡೆದಿದೆ. ಮಾರುಕಟ್ಟೆಯ ಅಂಗಡಿಯೊಂದರ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಚಾಕು ಮತ್ತು ಕುಡುಗೋಲುಗಳಂಥ ಆಯುಧಗಳಿಂದ ದಾಳಿ ಮಾಡಿರುವುದು, ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾದ ದೃಶ್ಯಗಳು ಸೆರೆಯಾಗಿವೆ.

ಮೇ 20 (ಶುಕ್ರವಾರ)ರಂದು ಸಂಜೆ 7.30 ರ ವೇಳೆಗೆ ಬೇಗಂ ಬಜಾರ್ ಮೀನು ಮಾರುಕಟ್ಟೆ ಮಧ್ಯೆ ನೀರಜ್ ಪನ್ವಾರ್‌ ಮೇಲೆ ದಾಳಿ ನಡೆಸಿದ ನಾಲ್ವರು, ಇರಿದು ಕೊಂದಿದ್ದಾರೆ. ನೀರಜ್ ಪತ್ನಿಯ ಕುಟುಂಬದಿಂದ ಇವರ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಜಾತಿ ವಿಚಾರದಲ್ಲಿ ಈ ಹತ್ಯೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ದ್ವಿಚಕ್ರ ವಾಹನದಲ್ಲಿ ತಂದೆಯೊಂದಿಗೆ ಬಂದ ನೀರಜ್‌ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಚಾಕುವಿನಿಂದ ಇರಿದಿದ್ದಾರೆ. ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ನೀರಜ್ ಅಸುನೀಗಿದ್ದಾರೆ.

ಈ ಸುದ್ದಿ ಓದಿದ್ದೀರಾ:? ತ್ರಿಪುರಾ | ಮಹಿಳೆಯಿಂದ ಪಾದ ತೊಳೆಸಿದ ಬಿಜೆಪಿ ಶಾಸಕಿ ; ವಿಡಿಯೋ ವೈರಲ್

ನೀರಜ್ ಪತ್ನಿ ಸಂಜನಾ "ಕೊಲೆಯಲ್ಲಿ ತನ್ನ ಸೋದರ ಸಂಬಂಧಿಯ ಪಾತ್ರದ ಶಂಕೆ ಇದೆ. ನೀರಜ್ ಮೇಲೆ ಹಲ್ಲೆ ನಡೆಸಿದವರಿಗೆ ಮರಣದಂಡನೆ ವಿಧಿಸಬೇಕು"  ಎಂದು ಮಾಧ್ಯಮಗಳೊಂದಿಗೆ ಅಲವತ್ತುಕೊಂಡಿದ್ದಾಳೆ. ನೀರಜ್ ತಂದೆ ಜಗದೀಶ್, ತಮಗೆ ಬೆದರಿಕೆ ಇದೆ ಎಂದು ಅಫ್ಜಲ್‌ಗುಂಜ್‌ ಪೊಲೀಸರನ್ನು ಈ ಹಿಂದೆಯೇ ಸಂಪರ್ಕಿಸಿದ್ದರೆಂಬ ಮಾಹಿತಿ ಇದೆ.

ನೀರಜ್ ಮಾರ್ವಾಡಿ ಸಮುದಾಯಕ್ಕೆ ಸೇರಿದ್ದು, ಪತ್ನಿ ಸಂಜನಾ ಯಾದವ ಸಮುದಾಯದವರು. ಮದುವೆಗೆ ಸಂಜನಾ ಪೋಷಕರ ವಿರೋಧವಿತ್ತು. 1 ವರ್ಷದ ಹಿಂದೆ ದೇವಸ್ಥಾನದಲ್ಲಿ ಈ ಜೋಡಿ ಮದುವೆಯಾಗಿದ್ದು, ದಂಪತಿಗೆ ಮೂರು ತಿಂಗಳ ಮಗು ಇದೆ.

ಕೊಲೆಯಲ್ಲಿ ಸಂಜನಾ ಕುಟುಂಬದವರು ಭಾಗಿಯಾದ ಬಗ್ಗೆ ಸಂತ್ರಸ್ತ ಕುಟುಂಬ ಶಂಕೆ ವ್ಯಕ್ತಪಡಿಸಿದ್ದು, ಇವರ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ಶಾಹಿನಾಯತ್‌ಗುಂಜ್ ಪೊಲೀಸ್ ಠಾಣೆ ಠಾಣಾಧಿಕಾರಿ ವೈ ಅಜಯ್ ಕುಮಾರ್ “ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಸಿಸಿ ದೃಶ್ಯಾವಳಿ- ವಾಹನದ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ಮುಂದುವರಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಜನನಿಬಿಡ ಪ್ರದೇಶದಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದು, ಹತ್ಯೆ ಖಂಡಿಸಿ ಶನಿವಾರ ವರ್ತಕರು ವಹಿವಾಟು ಬಂದ್‌ಗೆ ಕರೆ ನೀಡಿದ್ದರು. ಮೃತ ನೀರಜ್ ಕುಟುಂಬ ಸ್ನೇಹಿತರು ಮತ್ತು ಬೇಗಂ ಬಜಾರ್ ವರ್ತಕರ ಸಂಘದ ವ್ಯಾಪಾರಿಗಳು ಶಾಹಿನಾಯರತ್‌ಗುಂಜ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.  ಈ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.

ಸಹಾಯಕ ಪೊಲೀಸ್ ಕಮಿಷನರ್ ಆರ್ ಸತೀಶ್ ಕುಮಾರ್ ಮತ್ತು ಬಿಜೆಪಿ ಸ್ಥಳೀಯ ಶಾಸಕ ರಾಜಾ ಸಿಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬದೊಂದಿಗೆ ಮಾತನಾಡಿದರು. ಶಾಸಕ ರಾಜಾ ಸಿಂಗ್ ಘಟನೆಯನ್ನು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್