ಕೊರೊನಾ ಸಂದರ್ಭದಲ್ಲಿ ಲಿಂಕ್ಡ್‌ಇನ್‌ಗೆ ಸೇರಿದ 2.8 ಕೋಟಿ ಭಾರತೀಯರು

  • ಲಿಂಕ್ಡ್‌ಇನ್ ವೇದಿಕೆಯಲ್ಲಿ ಒಟ್ಟು 9.2 ಕೋಟಿ ಭಾರತೀಯ ಸದಸ್ಯರು
  • ಕೊರೊನಾ ಶುರುವಾದಾಗಿನಿಂದ ಸದಸ್ಯರಲ್ಲಿ ಶೇ. 44ರಷ್ಟು ಅಭಿವೃದ್ಧಿ

ಕಳೆದ ಎರಡು ವರ್ಷ ಕೊರೊನಾ ಸಂದರ್ಭದಲ್ಲೇ, ವೃತ್ತಿಪರ ಜಾಲ ವೇದಿಕೆಯಾದ 'ಲಿಂಕ್ಡ್‌ಇನ್‌'ಗೆ ಸುಮಾರು 2.8 ಕೋಟಿ ಭಾರತೀಯರು ಸೇರಿದ್ದಾರೆ.

ಜಾಗತಿಕವಾಗಿ ಈ ವೇದಿಕೆಯಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ದೇಶವಾಗಿ ಹೊರಹೊಮ್ಮಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಕೊರೊನಾ ಸಮಯದಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಜೀವನವು ಮಂಕಾಗಿದ್ದರಿಂದ ಅನೇಕರು 'ಲಿಂಕ್ಡ್‌ಇನ್‌'ನಲ್ಲಿ ತೊಡಗಿಸಿಕೊಂಡಿದ್ದು, ಸಂಸ್ಥೆಯ ವಿಕಸನಕ್ಕೆ ಕಾರಣವಾಗಿದೆ” ಎಂದು ಅವರು ಹೇಳಿದ್ದಾರೆ. 

"2020ರಲ್ಲಿ 6.4 ಕೋಟಿ ಸದಸ್ಯರನ್ನು ಹೊಂದಿದ್ದ ಲಿಂಕ್ಡ್‌ಇನ್ ಸಮುದಾಯವು, ಇಂದು ಭಾರತದಲ್ಲಿ 9.2 ಕೋಟಿ ಸದಸ್ಯರನ್ನು ಹೊಂದಿದೆ. ಕೊರೊನಾ ಪ್ರಾರಂಭವಾದಾಗಿನಿಂದ 'ಲಿಂಕ್ಡ್‌ಇನ್' ಸದಸ್ಯರಲ್ಲಿ ಶೇ. 44ರಷ್ಟು ಬೆಳವಣಿಗೆಯಾಗಿದೆ" ಎಂದು ಲಿಂಕ್ಡ್‌ಇನ್‌ನ ಭಾರತದ ವ್ಯವಸ್ಥಾಪಕ ಅಶುತೋಷ್ ಗುಪ್ತಾ ಅವರು ಹೇಳಿರುವುದರ ಬಗ್ಗೆ ‘ದಿ ಹಿಂದೂ’ ವರದಿ ಉಲ್ಲೇಖಸಿದೆ.

“ಅಮೆರಿಕ ನಂತರ ಲಿಂಕ್ಡ್‌ಇನ್ ಬಳಕೆದಾರರ ವಿಷಯದಲ್ಲಿ, ಕಂಪನಿಯ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿ ಭಾರತ ತನ್ನ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಕಂಪನಿಯ ಆದಾಯವು, ಹಣಕಾಸು ವರ್ಷವಾದ 2020 ರಿಂದ 2022ರವರೆಗೆ ಶೇ. 84ರಷ್ಟು ಅಭಿವೃದ್ದಿಯಾಗಿದೆ” ಎಂದು ಗುಪ್ತಾ ಅವರು ಹೇಳಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ಅಗ್ನಿವೀರರ ನೇಮಕಾತಿ ರ್‍ಯಾಲಿಯಲ್ಲಿ 60,000 ಅಭ್ಯರ್ಥಿಗಳ ನೋಂದಣಿ

“'ಲಿಂಕ್ಡ್‌ಇನ್' ವೇದಿಕೆ ಕೌಶಲ್ಯ ಆಧಾರಿತ ನೇಮಕಾತಿಯನ್ನು ಪ್ರೋತ್ಸಾಹಿಸುವುದರ ಮೇಲೆ ಗಮನ ಹರಿಸುತ್ತದೆ. ಸಾಂಪ್ರದಾಯಿಕವಾಗಿ, ನಾವು ಕೆಲವು ನಿರ್ದಿಷ್ಟ ಕಟ್ಟುಪಾಡುಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತೇವೆ. ಆದರೆ, ನನಗೆ ಈ ಕಾಲೇಜಿನಿಂದಲೇ ಬೇಕು, ಈ ಕೆಲಸವನ್ನೇ ಮಾಡಬೇಕು ಹಾಗೂ ಇಂತಹದೇ ಕೌಶಲ್ಯಗಳು ಇರಬೇಕು ಎಂದು ಒತ್ತು ನೀಡುವುದಿಲ್ಲ. ಕೋರ್ಸ್ ಮುಗಿಸಿದ ತಕ್ಷಣ ನಿಮ್ಮ ವೈಯಕ್ತಿಕ ವಿವರದಲ್ಲಿ 'ಲಿಂಕ್ಡ್‌ಇನ್‌'ನಲ್ಲಿ ಕಲಿತ ಕೌಶಲ್ಯದ ವಿವರಗಳನ್ನು ಸೇರಿಸಬಹುದು” ಎಂದು ಗುಪ್ತಾ ಅವರು ಹೇಳಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180