ಬಿರುಗಾಳಿ ಸಹಿತ ಮಳೆಗೆ 288 ಹೆಕ್ಟೇರ್‌ ಬಾಳೆ ತೋಟ ನಾಶ; ಪರಿಹಾರಕ್ಕೆ ಒತ್ತಾಯಿಸಿದ ರೈತರು

  • 288 ಹೆಕ್ಟೇರ್ ಪ್ರದೇಶದ ಬಾಳೆ ತೋಟವು ನೀರು ಪಾಲು
  • ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ರೈತರ ಆಗ್ರಹ

ಕಳೆದ ಗುರುವಾರ (ಮೇ 26) ಸುರಿದ ಬಿರುಗಾಳಿ ಮತ್ತು ಮಳೆಗೆ ತಮಿಳುನಾಡಿನ ಕಡಲೂರು ಸುತ್ತಲಿನ ಸುಮಾರು 288 ಹೆಕ್ಟೇರ್ ಪ್ರದೇಶದ ಬಾಳೆ ತೋಟವು ಪೂರ್ಣವಾಗಿ ನೀರು ಪಾಲಾಗಿದೆ. ಈ ನಷ್ಟಕ್ಕೆ ಕೂಡಲೇ ಪರಿಹಾರ ನೀಡಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ʻʻಕಡಲೂರಿನ ಸುತ್ತ ಸುಮಾರು ಆರು ಸಾವಿರ ಎಕರೆ ಪ್ರದೇಶದಲ್ಲಿ ಬಾಳೆ ಕೃಷಿ ಮಾಡಲಾಗಿತ್ತು. ಗುರುವಾರ ಬೆಂಬಿಡದೇ ಸುರಿದ ಗಾಳಿ ಮಳೆಗೆ ಅನ್ನವಳ್ಳಿ, ವೆಳ್ಳೈಕರೈ, ರಾಮಪುರಂ, ಕರಿಕಾಡು, ವೆಲ್ಲಪಾಕಂ, ಎಂ ಪುತ್ತೂರು, ಎಸ್ ಪುತ್ತೂರು, ಟಿ ಪುತ್ತುಪಾಳ್ಯಂ, ವಿಲಂಗಲ್ಪಟ್ಟು, ಕಡಲೂರು ಓಲ್ಡ್‌ ಟೌನ್‌ ಮತ್ತು ಸೇಡಪಕ್ಕಂ ಪ್ರದೇಶದ ಸುಮಾರು 600 ಎಕರೆ ಪ್ರದೇಶದ ಬಾಳೆ ತೋಟವು ನಾಶವಾಗಿದೆʼʼ ಎಂದು ಕಡಲೂರು ರೈತ ಸಂಘವು ತಿಳಿಸಿದೆ.

ʻʻಬಾಳೆ ತೋಟ ಮಾಡಲು ಪ್ರತಿ ಎಕರೆಗೆ ಒಂದೂವರೆಯಿಂದ ಎರಡು ಲಕ್ಷ ಹಣ ಖರ್ಚು ಮಾಡಲಾಗಿತ್ತು. ಇನ್ನೆರಡು ತಿಂಗಳಲ್ಲಿ ಬಾಳೆ ಕಟಾವಿಗೆ ಬರುತ್ತಿತ್ತು. ಆದರೆ ಕಳೆದ ಗುರುವಾರ ಬಂದೆರಗಿದ ಭಾರಿ ಬಿರುಗಾಳಿಗೆ ಬಾಳೆ ತೋಟ ಹಾನಿಗೀಡಾಗಿದೆʼʼ ಎಂದು ಕಟ್ಟುಪಾಳ್ಯಂನ ರೈತ ಚಿತ್ರಸೇನ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

Image

ಕಡಲೂರು ಜಿಲ್ಲಾಧಿಕಾರಿ ಕೆ ಬಾಲಸುಬ್ರಮಣ್ಯಂ ಅವರ ಆದೇಶದ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳ ತಂಡವು ಶನಿವಾರ ಹಾನಿಗೀಡಾದ ಬಾಳೆ ತೋಟವನ್ನು ಪರಿಶೀಲಿಸಿದೆ.

ಈ ಸುದ್ದಿ ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಾಪುರ ಪ್ರಾಂತ್ಯ | ನೆರಳ್, ಹಣ್, ಬೀಜ, ಸೌದಿ ಒಟ್ಟಿಗೆ ಬದ್ಕ್ ಕೊಡ್ತೆ ಇತ್ ಗೊಯ್ ಮರ

ʻʻಕಡಲೂರಿನಲ್ಲಿ ಸುಮಾರು 2,385 ಹೆಕ್ಟೇರ್‌ನಲ್ಲಿ ಬಾಳೆ ತೋಟ ಬೆಳೆಸಲಾಗಿತ್ತು. ಇದರಲ್ಲಿ 392 ಮಂದಿ ರೈತ ಕುಟುಂಬಗಳ ಸುಮಾರು 288 ಹೆಕ್ಟೇರ್ ತೋಟವು ಚಂಡಮಾರುತದಿಂದ ಹಾನಿಗೊಳಗಾಗಿದೆʼʼ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿರುವುದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ʻʻಕಂದಾಯ ಇಲಾಖೆ ಅಧಿಕಾರಿಗಳು ಜಿಲ್ಲೆಯಾದ್ಯಂತ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್